ಇನ್ನೂ ತಣಿದಿಲ್ಲ ಯಮುನೆಯ ಮುನಿಸು – ಸುಪ್ರೀಂ ಕೋರ್ಟ್‌ ವರೆಗೂ ಬಂದ ಪ್ರವಾಹ ನೀರು

ಇನ್ನೂ ತಣಿದಿಲ್ಲ ಯಮುನೆಯ ಮುನಿಸು – ಸುಪ್ರೀಂ ಕೋರ್ಟ್‌ ವರೆಗೂ ಬಂದ ಪ್ರವಾಹ ನೀರು

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ವರುಣನ ಆರ್ಭಟ ನಿಂತಿದ್ದರೂ ಯುಮುನೆಯ ಮುನಿಸು ಇನ್ನೂ ತಣಿದಿಲ್ಲ. ಯುಮನಾ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು, ಪ್ರವಾಹ ಪರಿಸ್ಥಿತಿ ಮುಂದುವರಿದಿದೆ. ಯಮುನೆಯ ಅಬ್ಬರಕ್ಕೆ ದೆಹಲಿ ಅಕ್ಷರಶಃ ನಲುಗಿ ಹೋಗಿದೆ. ರಸ್ತೆಗಳು ನದಿಗಳಾಗಿ ಮಾರ್ಪಟ್ಟಿವೆ ಮತ್ತು ಮನೆಗಳು, ಆಸ್ಪತ್ರೆಗಳು, ಪಾರಂಪರಿಕ ಕಟ್ಟಡಗಳು, ಸ್ಮಶಾನಗಳು, ಆಶ್ರಯ ಮನೆಗಳಿಗೆ ನೀರು ನುಗ್ಗಿದ್ದು ಜನರು ತೀವ್ರ ತೊಂದರೆ ಅನುಭವಿಸುವಂತಾಗಿದೆ. ರಸ್ತೆಗಳು ಜಲಾವೃತಗೊಂಡು ವಾಹನಗಳು ಮುಳುಗಡೆಯಾಗಿವೆ. ಹೆದ್ದಾರಿಯಲ್ಲಿ ಕಿಲೋ ಮೀಟರ್ ದೂರದವರೆಗೂ ಟ್ರಾಪಿಕ್ ಜಾಮ್ ಉಂಟಾಗಿದ್ದು, ಸಂಚಾರದಲ್ಲಿ ತೀವ್ರ ಅಡಚಣೆ ಉಂಟಾಗಿದೆ. ಇದೀಗ ಪ್ರವಾಹದ ನೀರು ಸುಪ್ರೀಂ ಕೋರ್ಟ್‌ ಬಳಿಯೂ ಹರಿದು ಬಂದಿದೆ.

ಇದನ್ನೂ ಓದಿ: ಉತ್ತರಭಾರತದಲ್ಲಿ ಮುಂದುವರಿದ ವರುಣಾರ್ಭಣ – ಸಾವಿನ ಸಂಖ್ಯೆ 145ಕ್ಕೆ ಏರಿಕೆ

ದೆಹಲಿಯಲ್ಲಿ ಪ್ರವಾಹ ಪರಿಸ್ಥಿತಿ ಮುಂದುವರಿದಿರುವ ಹಿನ್ನೆಲೆ ಮುನ್ನೆಚ್ಚರಿಕಾ ಕ್ರಮವಾಗಿ ದೆಹಲಿಯ ಎಲ್ಲಾ ಮುನ್ಸಿಪಲ್ ಕಾರ್ಪೊರೇಷನ್ ಶಾಲೆಗಳಿಗೆ ಜುಲೈ 16 ರವರೆಗೆ ರಜೆ ಘೋಷಿಸಲಾಗಿದೆ.  ದೆಹಲಿ ವಿಪತ್ತು ನಿರ್ವಹಣಾ ಪ್ರಾಧಿಕಾರ ನೀಡಿದ ನಿರ್ದೇಶನಗಳಿಗೆ ಅನುಸಾರವಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಯಮುನಾ ನದಿಯಲ್ಲಿ ನೀರಿನ ಮಟ್ಟ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ದೆಹಲಿಯ ಎಲ್ಲಾ ಸರ್ಕಾರಿ ಮತ್ತು ಖಾಸಗಿ ಶಾಲೆಗಳನ್ನು ಜುಲೈ 16 ರವರೆಗೆ ಮುಚ್ಚಲಾಗುವುದು ಎಂದು ಶಿಕ್ಷಣ ನಿರ್ದೇಶನಾಲಯದ ಅಧಿಕಾರಿಗಳು ತಿಳಿಸಿದ್ದಾರೆ. ಭಾರೀ ಮಳೆ ದೃಷ್ಟಿಯಿಂದ ಕೆಂಪು ಕೋಟೆಗೆ ಜುಲೈ 14 ರವರೆಗೆ ಸಾರ್ವಜನಿಕರಿಗೆ ಪ್ರವೇಶವನ್ನು ನಿಷೇಧಿಸಲಾಗಿದೆ.

ಈ ಮಧ್ಯೆ ಯಮುನಾ ನದಿಯ ನೀರಿನ ಮಟ್ಟ ಸ್ಥಿರವಾಗಿದ್ದು, ಇಂದು ರಾತ್ರಿ ಕಡಿಮೆಯಾಗಲು ಪ್ರಾರಂಭಿಸುತ್ತದೆ ಎಂದು ಕೇಂದ್ರ ಜಲ ಆಯೋಗದ ಹಿರಿಯ ಅಧಿಕಾರಿ ತಿಳಿಸಿದ್ದಾರೆ. ಇನ್ನು ಫ್ರಾನ್ಸ್ ನಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರೊಂದಿಗೆ ಮಾತುಕತೆ ನಡೆಸಿದ್ದು, ಪರಿಸ್ಥಿತಿ ಕುರಿತು ಮಾಹಿತಿ ಪಡೆದುಕೊಂಡಿದ್ದಾರೆ.

suddiyaana