ದೆಹಲಿಯ ಅತೀ ದೊಡ್ಡ ಸಮೀಕ್ಷೆ- ಕೇಜ್ರಿವಾಲ್‌ಗೆ ಟಕ್ಕರ್ ಕೊಟ್ರಾ ಮೋದಿ?
ಯಾರಿಗೆ ಒಲಿಯುತ್ತೆ ಗದ್ದುಗೆ?

ದೆಹಲಿಯ ಅತೀ ದೊಡ್ಡ ಸಮೀಕ್ಷೆ- ಕೇಜ್ರಿವಾಲ್‌ಗೆ ಟಕ್ಕರ್ ಕೊಟ್ರಾ ಮೋದಿ?ಯಾರಿಗೆ ಒಲಿಯುತ್ತೆ ಗದ್ದುಗೆ?

ದೆಹಲಿ ಚುನಾವಣೆಯಲ್ಲಿ ಎಎಪಿ, ಬಿಜೆಪಿ, ಕಾಂಗ್ರೆಸ್ ನೇರ ಎದುರಾಳಿಗಳು. 2015, 2020ರಲ್ಲಿ ಗೆದ್ದ ಎಎಪಿ 3ನೇ ಬಾರಿಗೆ ಗೆಲ್ಲುವ ಮೂಲಕ ಹ್ಯಾಟ್ರಿಕ್ ಬಾರಿಸೋಕೆ ತುದಿಗಾಲಲ್ಲಿ ನಿಂತಿದೆ. ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ, ಕಾಂಗ್ರೆಸ್ ರಾಷ್ಟ್ರ ರಾಜಧಾನಿಯ ಅಧಿಕಾರ ಹಿಡಿಯೋ ತವಕದಲ್ಲಿವೆ.. ಹಾಗಿದ್ರೆ ಸಿವೋಟರ್ ನಡೆಸಿದ ಸಮೀಕ್ಷೆಯಲ್ಲಿ ಯಾವ ಪಕ್ಷ ಗೆಲುವಿನ ಹಾದಿಯಲ್ಲಿದೆ ಅನ್ನೋದನ್ನ ನೋಡೋಣ ಬನ್ನಿ..

ಮತ್ತೆ ಅಧಿಕಾರ ಹಿಡಿಯಲಿದೆ APP

ದೆಹಲಿ ವಿಧಾನಸಭೆ ಚುನಾವಣೆ ಕುರಿತು ಸಿ-ವೋಟರ್ ನಡೆಸಿದ ಸಮೀಕ್ಷೆಯ ಪ್ರಕಾರ ಎಎಪಿ ಪುನಃ ರಾಜ್ಯದಲ್ಲಿ ಅಧಿಕಾರ ಹಿಡಿಯಲಿದೆ. ಪಕ್ಷ ಶೇ 51ರಷ್ಟು ಮತಗಳನ್ನು ಪಡೆಯುವ ಮೂಲಕ ಕ್ಲೀನ್ ಸ್ವಿಪ್ ಮಾಡಲಿದೆ ಎಂದು ಸಮೀಕ್ಷೆ ಅಂದಾಜಿಸಿದೆ. ಈ ವರದಿಯಲ್ಲಿ ಜನ ಏನ್ ಹೇಳಿದ್ದಾರೆಂದ್ರೆ,  ರಾಜ್ಯದಲ್ಲಿ ಸರ್ಕಾರ ಬದಲಾಗಬಾರದು, ಎಎಪಿಯೇ ಅಧಿಕಾರ ಮುಂದುವರೆಸಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ. ನ್ಯೂಸ್ ತಕ್‌ಗೆ ನೀಡಿರುವ ಸಂದರ್ಶನದಲ್ಲಿ ಸಿ-ವೋಟರ್ ಸಂಸ್ಥಾಪಕ ಯಶವಂತ್ ದೇಶಮುಖ್ 2020ರಲ್ಲಿ 100ರಲ್ಲಿ 80 ಮಹಿಳೆಯರು ಎಎಪಿಗೆ ಮತ ನೀಡಿದ್ದರು. ಈ ಬಾರಿಯ ಚುನಾವಣೆಯಲ್ಲಿಯೂ ಅವರು ಪಕ್ಷವನ್ನು ಬೆಂಬಲಿಸುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ. ಪಕ್ಷಕ್ಕೆ ಮಹಿಳೆಯರ ಬೆಂಬಲ ಹೆಚ್ಚಾಗಿ ಸಿಗಲಿದೆ ಎಂದು ಅಂದಾಜಿಸಲಾಗಿದೆ ಎಂದು ತಿಳಿಸಿದ್ದಾರೆ.

2024ರ ಲೋಕಸಭೆ ಚುನಾವಣೆಯಲ್ಲಿ 100ರಲ್ಲಿ 65 ಮಹಿಳೆಯರು ಬಿಜೆಪಿಯನ್ನು ಬೆಂಬಲಿಸಿದ್ದರು. ಇವರು ಈ ಬಾರಿಯ ದೆಹಲಿ ಚುನಾವಣೆಯಲ್ಲಿಯೂ ಬಿಜೆಪಿಗೆ ಬೆಂಬಲ ಕೊಡುತ್ತಾರೆ. ಶೇ 25ರಷ್ಟು ಜನರು ತಮ್ಮ ಮತವನ್ನು ಬದಲಾವಣೆ ಮಾಡುವ ನಿರೀಕ್ಷೆ ಇದೆ ಎಂದು ಅಂದಾಜಿಸಲಾಗಿದೆ ಎಂದು ಹೇಳಿದ್ದಾರೆ. ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿಸಿದ್ದ ಮಹಿಳಾ ಮತದಾರರು ಈ ಬಾರಿ ಎಎಪಿಯನ್ನು ಬೆಂಬಲಿಸುವ ನಿರೀಕ್ಷೆ ಇದೆ. 10 ವರ್ಷದ ಆಡಳಿತದಲ್ಲಿ ವಿವಿಧ ಯೋಜನೆ ಜಾರಿಗೊಳಿಸುವಲ್ಲಿ ಎಎಪಿ ಉತ್ತಮ ಕೆಲಸ ಮಾಡಿದ್ದು, ಇದು ಚುನಾವಣೆಯಲ್ಲಿ ಸಹಾಯಕವಾಗಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.   ., ಪ್ರಣಾಳಿಕೆಯಲ್ಲಿ ಘೋಷಿಸಲಾದ ಗ್ಯಾರಂಟಿಗಳನ್ನು ಆಪ್ ಸರ್ಕಾರ ಸರಿಯಾಗಿ ತಲುಪಿಸುತ್ತಿರುವುದು ಇದಕ್ಕೆ ಪ್ರಮುಖ ಕಾರಣ.

ಇನ್ನೂ ದೆಹಲಿ ಚುನಾವಣೆ ಕುರಿತು ನ್ಯಾಷನಲ್ ಕಾನ್‌ಫೆಡರೇಷನ್ ಆಫ್ ದಲಿತ್, ಆದಿವಾಸಿ ಆರ್ಗನೈಜೇಶನ್ ನಡೆಸಿದ ಸಮೀಕ್ಷೆಯ ಫಲಿತಾಂಶವೂ ಹೊರ ಬಂದಿದೆ. ಎಎಪಿ 35, ಬಿಜೆಪಿ 28 ಮತ್ತು ಕಾಂಗ್ರೆಸ್ 7 ಸೀಟುಗಳಲ್ಲಿ ಜಯಗಳಿಸಲಿದೆ ಎಂದು ಅಂದಾಜಿಸಿದೆ.  ಈ ಸಮೀಕ್ಷೆಯಲ್ಲಿ 6,256 ಜನರು ಪಾಲ್ಗೊಂಡಿದ್ದು, 2,574 ಮಹಿಳೆಯರಿದ್ದರು. ಶೇ 44ರಷ್ಟು ದಲಿತರು ಎಎಪಿಗೆ ಶೇ 32ರಷ್ಟು ಜನರು ಬಿಜೆಪಿಗೆ, ಶೇ 21ರಷ್ಟು ಜನರು ಕಾಂಗ್ರೆಸ್‌ ಬೆಂಬಲಿಸಲಿದ್ದಾರೆ ಎಂದು ಅಂದಾಜಿಸಲಾಗಿದೆ. ಮುಖ್ಯವಾಗಿ ದಲಿತರು ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟಕ್ಕಿಂತ ಕಾಂಗ್ರೆಸ್ ನೇತೃತ್ವದ ಎನ್‌ಡಿಎ ಮೈತ್ರಿಕೂಟ ಬೆಂಬಲಿಸಲಿದ್ದಾರೆ ಎಂದು ಸಮೀಕ್ಷೆ ಹೇಳಿದೆ. ಬಹುತೇಕ, ಎಲ್ಲಾ ಸಮೀಕ್ಷೆಗಳು ಆಮ್ ಆದ್ಮಿ ಪಾರ್ಟಿ ಅಧಿಕಾರ ಉಳಿಸಿಕೊಳ್ಳುವುದು ನಿಶ್ಚಿತ ಎಂದಿವೆ. ಆದರೆ, ಬಿಜೆಪಿಯು ತನ್ನ ಶಕ್ತಿಯನ್ನು ರಾಷ್ಟ್ರ ರಾಜಧಾನಿಯಲ್ಲಿ ಗಣನೀಯವಾಗಿ ಹೆಚ್ಚಿಸಿಕೊಳ್ಳಲಿದೆ ಎನ್ನುವ ಸಮೀಕ್ಷಾ ವರದಿ ಬಂದಿದೆ.

ಕೇಜ್ರಿವಾಲ್‌ಗೆ ಅಣ್ಣ ಹಜಾರೆ ಟೀಕೆ

ಆಮ್ ಆದ್ಮಿ ಪಕ್ಷದ ರಾಷ್ಟ್ರೀಯ ಸಂಚಾಲಕ ಹಾಗೂ ದೆಹಲಿಯ ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ವಿರುದ್ಧದ ಭ್ರಷ್ಟಾಚಾರ ಆರೋಪದ ಕುರಿತು ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆ ಪ್ರತಿಕ್ರಿಯಿಸಿದ್ದಾರೆ.  ನನ್ನ ಸಲಹೆಗಳನ್ನು ಮರೆತು ಹಣದ ಹಿಂದೆ ಓಡುತ್ತಿದ್ದಾರೆ ಎಂದು ಹೇಳಿದ್ದಾರೆ. ಈಗ ಕೇಜ್ರಿವಾಲ್‌ಗೆ ಯಾವ ಸಲಹೆಯನ್ನು ನೀಡಲಿದ್ದೀರಿ ಎಂಬ ಪ್ರಶ್ನೆಗೆ ಹಜಾರೆ, “ಆರಂಭಿಕ ದಿನಗಳಲ್ಲಿ ನಾನು ಅವರಿಗೆ ನೀಡಿದ ಬೋಧನೆಗಳನ್ನು ಅವರಿಗೆ ನೆನಪಿಸಲು ಬಯಸುತ್ತೇನೆ” ಎಂದು ಹೇಳಿದ್ರು. ಅವರು ಸ್ವಯಂಸೇವಕರಾಗಿ ನನ್ನೊಂದಿಗಿದ್ದರು, ಜೀವನದಲ್ಲಿ ನಿಮ್ಮ ನಡವಳಿಕೆ ಮತ್ತು ದೃಷ್ಟಿಕೋನಗಳನ್ನು ಯಾವಾಗಲೂ ಸ್ವಚ್ಛವಾಗಿರಿಸಿಕೊಳ್ಳಿ ಎಂದು ನಾನು ಯಾವಾಗಲೂ ಅವರಿಗೆ ಹೇಳುತ್ತಿದ್ದೆ. ನಿಮ್ಮ ಜೀವನವನ್ನು ನಿರ್ಮಲವಾಗಿರಿಸಿಕೊಳ್ಳಿ ಮತ್ತು ತ್ಯಾಗ ಮಾಡುವುದನ್ನು ಕಲಿಯಿರಿ. ಯಾವಾಗಲೂ ಸತ್ಯದ ಹಾದಿಯಲ್ಲಿ ನಡೆಯಿರಿ. ಆದರೆ, ಅವರ ಮನಸ್ಸಿನಲ್ಲಿ ಹಣವಿತ್ತು,’’ ಎಂದು ಹೇಳಿದ್ದಾರೆ. ಈ ಮಾತು ಎಲ್ಲೋ ಒಂದ್ಕಡೆ ಕೇಜ್ರಿವಾಲ್‌ಗೆ ಎಫೆಕ್ಟ್ ಆಗುತ್ತಾ ಅನ್ನೋ ಬಗ್ಗೆ ಚರ್ಚೆ ಕೂಡ ಆಗುತ್ತಿದೆ. ಯಾಕಂದ್ರೆ ಕೇಜ್ರಿವಾಲ್ ಗುರುತಿಸಿಕೊಂಡಿದ್ದೇ ಅಣ್ಣ ಹಜಾರೆಯಿಂದ, ಈಗ ಅವರೇ ಆರೋಪ ಮಾಡ್ತಾ ಇರೋದು ಒಂದಿಷ್ಟು ವೋಟ್ ಮೇಲೆ ಎಫೆಕ್ಟ್ ಆಗಬಹುದು..

ಕಾಂಗ್ರೆಸ್‌ಗೆ ಮತ ಹಾಕದಂತೆ ಕೇಜ್ರಿವಾಲ್ ಎಚ್ಚರಿಕೆ 

ಇದರ ನಡುವೆ ಆಮ್‌ ಆದ್ಮಿ ಪಾರ್ಟಿಯು ಕಾಂಗ್ರೆಸ್‌ ಪಕ್ಷಕ್ಕೆ ಮತ ಹಾಕದಂತೆ ಎಚ್ಚರಿಕೆಯ ಸಂದೇಶವೊಂದನ್ನು ದೆಹಲಿಯ ಮತದಾರರಿಗೆ ಕೊಟ್ಟಿದೆ. ಇದು ಎಎಪಿ ಹಾಗೂ ಕಾಂಗ್ರೆಸ್‌ನ ನಡುವೆ ವಾಕ್ಸಮರಕ್ಕೆ ಕಾರಣವಾಗಿದೆ. ಎಎಪಿಯ ರಾಷ್ಟ್ರೀಯ ಸಂಚಾಲಕ ಹಾಗೂ ದೆಹಲಿಯ ಮಾಜಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್ ಅವರು ಪ್ರಧಾನಿ ನರೇಂದ್ರ ಮೋದಿಯಂತೆಯೇ ಕುತಂತ್ರಿ ಅಂತ ವಿರೋಧ ಪಕ್ಷದ ನಾಯಕ ರಾಹುಲ್‌ ಗಾಂಧಿ ವಾಗ್ದಾಳಿ ನಡೆಸಿದ್ದಾರೆ. ನೀವು ಕಾಂಗ್ರೆಸ್‌ಗೆ ಮತ ಚಲಾಯಿಸಿದರೆ ಅದರ ನೇರ ಲಾಭವಾಗುವುದು ಬಿಜೆಪಿಗೆ ಎಂದು ಅರವಿಂದ್‌ ಕೇಜ್ರಿವಾಲ್ ಅವರು ಹೇಳಿದ್ದಾರೆ.  ಈ ಚುನಾವಣೆಯಲ್ಲಿ ನೀವೇನಾದರೂ ಕಾಂಗ್ರೆಸ್‌ಗೆ ಮತಚಲಾಯಿಸಿದರೆ ಅದರ ನೇರ ಲಾಭ ಬಿಜೆಪಿಗೆ ಆಗಲಿದೆ ಅಂತ ಅರವಿಂದ್‌ ಕೇಜ್ರಿವಾಲ್ ಅವರು ಎಚ್ಚರಿಕೆ ಕೊಟ್ಟಿದ್ದಾರೆ. ಕಾಂಗ್ರೆಸ್ ಪಕ್ಷದ ಬೆಂಬಲಿಗರನ್ನು ಉದ್ದೇಶಿಸಿ ಮಾತನಾಡಿರುವ ಅವರು, ಆ ಹಳೆಯ ಪಕ್ಷಕ್ಕೆ ನೀವು ಮತ ಹಾಕಿದರೆ ಅದರ ಎಲ್ಲಾ ಲಾಭ ಬಿಜೆಪಿಗೆ ಸೇರಲಿದೆ. ದೆಹಲಿಯಲ್ಲಿ ಜಾರಿ ಮಾಡಲಾಗಿರುವ ವಿಶೇಷ ಕಲ್ಯಾಣ ಯೋಜನೆಗಳು ಮುಂದುವರಿಯಬೇಕು ಎನ್ನುವ ಆಸೆ ನಿಮಗೆ ಇದ್ದರೆ ನೀವು ತಪ್ಪದೆ ಎಎಪಿಗೇ ಮತ ಚಲಾಯಿಸಿ ಎಂದು ಅವರು ಹೇಳಿದ್ದಾರೆ.

 

ದೆಹಲಿಯಲ್ಲಿ ಕಾಂಗ್ರೆಸ್‌ಗೆ ಯಾವುದೇ ಉಳಿಗಾಲವಿಲ್ಲ. ಕಾಂಗ್ರೆಸ್‌ ಪಕ್ಷದ ಕಾರ್ಯಕರ್ತರು ಹಾಗೂ ಬೆಂಬಲಿಗರು ಕಾಂಗ್ರೆಸ್‌ ಗೆಲ್ಲಬೇಕು ಎಂದು ಪ್ರಯತ್ನಿಸುತ್ತಿದ್ದರೆ. ಕಾಂಗ್ರೆಸ್‌ ಪಕ್ಷದ ಮುಖಂಡರು ಹಾಗೂ ನಾಯಕರು ಕಾಂಗ್ರೆಸ್‌ ಸೋಲಬೇಕು ಅಂತ ಕೆಲಸ ಮಾಡುತ್ತಿದ್ದಾರೆ ಎಂದು ಅವರು ವ್ಯಂಗ್ಯವಾಡಿದ್ದಾರೆ. ಮುಂದುವರಿದು ದೆಹಲಿಯಲ್ಲಿ ಎಎಪಿ ಪಕ್ಷವನ್ನು ಸೋಲಿಸುವುದಕ್ಕೆ ಬೇಕಾದ ಎಲ್ಲಾ ಕೆಲಸಗಳನ್ನೂ ಕಾಂಗ್ರೆಸ್‌ ಮಾಡುತ್ತಿದೆ. ಇದಕ್ಕಾಗಿ ಕಾಂಗ್ರೆಸ್‌ ಪಕ್ಷವು ಬಿಜೆಪಿಯೊಂದಿಗೆ ಕೆಲಸ ಮಾಡುತ್ತಿದೆ ಎಂದು ಅವರು ದೂರಿದ್ದಾರೆ.

ಸೌಲಭ್ಯ ನಿಲ್ಲಲಿದೆ ಎಚ್ಚರಿಕೆ ಎಂದ ಎಎಪಿ

ಇನ್ನು ದೆಹಲಿಯಲ್ಲಿ ಎಎಪಿ ಪಕ್ಷವನ್ನು ಹೊರತುಪಡಿಸಿ ಕಾಂಗ್ರೆಸ್‌ ಇಲ್ಲವೇ ಬಿಜೆಪಿ ಯಾವುದೇ ಪಕ್ಷ ಅಧಿಕಾರಕ್ಕೆ ಬಂದರೂ ಸೌಲಭ್ಯಗಳು ನಿಲ್ಲಲಿವೆ ಎಂದು ಅರವಿಂದ್‌ ಕೇಜ್ರಿವಾಲ್ ಅವರು ಎಚ್ಚರಿಕೆ ಕೊಟ್ಟಿದ್ದಾರೆ. ಒಂದೊಮ್ಮೆ ನೀವು ಕಾಂಗ್ರೆಸ್‌ಗೆ ಮತ ಹಾಕಿದರೆ. ಅದರ ನೇರ ಲಾಭ ಬಿಜೆಪಿಗೆ ಆಗಲಿದೆ. ಮುಂದೆ ಬಿಜೆಪಿ ಅಧಿಕಾರಕ್ಕೆ ಬಂದರೆ ನಿಮಗೆ ಎಎಪಿ ಸರ್ಕಾರದಿಂದ ಸಿಗುತ್ತಿರುವ ಎಲ್ಲಾ ರೀತಿಯ ಸೌಲಭ್ಯಗಳನ್ನು ನಿಲ್ಲಿಸಲಾಗುತ್ತದೆ. ನೀವು ಪ್ರತಿ ತಿಂಗಳು ಕನಿಷ್ಠ ಮೊತ್ತವನ್ನೂ ಉಳಿಸುವುದಕ್ಕೂ ಸಾಧ್ಯವಿಲ್ಲ ಎಂದಿದ್ದಾರೆ.
ಮಲ್ಲಿಕಾರ್ಜುನ ಖರ್ಗೆ ಹೇಳಿಕೆಯಿಂದ ಕಾಂಗ್ರೆಸ್‌ಗೆ ಲಾಭವಾಗುತ್ತಾ?

ದೆಹಲಿ ಚುನಾವಣೆ ಹತ್ತಿರದಲ್ಲಿರುವಾಗಲೇ ಉತ್ತರ ಪ್ರದೇಶದ ಪ್ರಯಾಗ್ ರಾಜ್ ನಲ್ಲಿ ನಡೆಯುತ್ತಿರುವ ಮಹಾ ಕುಂಭಮೇಳದ ಕುರಿತಂತೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಹೇಳಿಕೆಗಳು ಟೀಕೆಗೆ ಒಳಗಾಗುತ್ತಿದೆ. ಬಿಜೆಪಿ ನಾಯಕರು ಸೇರಿದಂತೆ ಹಿಂದೂ ಪರ ಸಂಘಟನೆಗಳು ವಿರೋಧ ವ್ಯಕ್ತಪಡಿಸುತ್ತಿದ್ದು, ಈ ಹೇಳಿಕೆಯನ್ನು ದೆಹಲಿ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಅನ್ಯ ಧರ್ಮದವರನ್ನು ಮೆಚ್ಚಿಸುವ ಸಲುವಾಗಿ ಹೇಳಿದ್ರಾ ಎಂಬ ಪ್ರಶ್ನೆಗಳು  ವ್ಯಕ್ತವಾಗುತ್ತಿವೆ. ಇದ್ರಿಂದ ಕೆಲ ವೋಟ್‌ಗಳು ಕೈ ತಪ್ಪಿ ಹೋದ್ರೆ, ಇನ್ನೂ ಕೆಲ ವೋಟ್‌ಗಳು ಈ ಹೇಳಿಕೆಯಿಂದ ಬರುತ್ತೆ ಅನ್ನೋ ಚರ್ಚೆ ಕೂಡ ನಡೆಯುತ್ತಿದೆ.  ದೆಹಲಿ ಎಲೆಕ್ಷನ್‌ನತ್ತ ಎಲ್ಲರ ಚಿತ್ತ ನೆಟ್ಟಿದೆ.. ಆಪ್‌ ಈ ಬಾರಿಗೆ ಬಹುಮತ ಪಡೆದ್ರೆ ಹ್ಯಾಟ್ರಿಕ್ ಗೆಲುವು ಆಗುತ್ತೆ.. ಜೈಲಿಗೆ ಹೋಗಿ ಬಂದ ಮೇಲೆ ಇಮೇಜ್‌ ಸರಿಯಾಗುತ್ತೆ.. ಬಿಜೆಪಿ ಕೂಡ ರಾಷ್ಟ್ರ ರಾಜಧಾನಿಯಲ್ಲಿ ಸರ್ಕಾರ ರಚಿಸೋಕೆ ಕಾಯ್ತಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬಾರದೇ ಇದ್ರೂ ಒಂದಷ್ಟು ಸೀಟ್‌ಗಳನ್ನ ಪಡೆಯಬಹುದು ಅನ್ನೋ ಬಗ್ಗೆ ಕೂಡ ಚರ್ಚೆಯಾಗುತ್ತಿದೆ. ಫೆಬ್ರವರಿ 5ಕ್ಕೆ ಮತದಾರ 3 ಪಕ್ಷಗಳ ಭವಿಷ್ಯವನ್ನ ಬರೆಯಲಿದ್ದು, ಫೆಬ್ರವರಿ 8ಕ್ಕೆ ಯಾರು ದೆಹಲಿ ಗದ್ದುಗೆ ಹಿಡಿತಾರೆ ಅನ್ನೋದು ಗೊತ್ತಾಗಲಿದೆ.

Kishor KV

Leave a Reply

Your email address will not be published. Required fields are marked *