ರಾಖಿ ಕಟ್ಟಲು ಅಣ್ಣ ಬೇಕೆಂದು ಮಗಳ ಹಠ.. ಗಂಡು ಮಗುವನ್ನೇ ಕಿಡ್ನ್ಯಾಪ್‌ ಮಾಡಿದ್ರು ಈ ಖತರ್ನಾಕ್‌ ದಂಪತಿ!

ರಾಖಿ ಕಟ್ಟಲು ಅಣ್ಣ ಬೇಕೆಂದು ಮಗಳ ಹಠ.. ಗಂಡು ಮಗುವನ್ನೇ ಕಿಡ್ನ್ಯಾಪ್‌ ಮಾಡಿದ್ರು ಈ ಖತರ್ನಾಕ್‌ ದಂಪತಿ!

ಅಣ್ಣ ತಂಗಿಯರ ಪ್ರೀತಿಯ ಪ್ರತೀಕವಾದ ರಕ್ಷಾಬಂಧನ ಹಬ್ಬಕ್ಕೆ ಕೆಲವೇ ದಿನಗಳು ಬಾಕಿ ಉಳಿದಿದೆ. ಈ ಹಬ್ಬದ ಸಂದರ್ಭದಲ್ಲಿ ಸಹೋದರಿ ತನ್ನ ಸಹೋದರನ ಕೈಗೆ ರಕ್ಷೆಯನ್ನು ಅಣ್ಣ ಆರೋಗ್ಯ ಆಯಸ್ಸಿಗಾಗಿ ದೇವರಲ್ಲಿ ಪಾರ್ಥನೆ ಮಾಡುತ್ತಾಳೆ. ಈ ವರ್ಷ ಆಗಸ್ಟ್‌ 30, 31 ರಂದು ರಕ್ಷಾ ಬಂಧನ ಹಬ್ಬ ಆಚರಿಸಲಾಗುತ್ತಿದೆ. ಈಗಾಗಲೇ ಪ್ರೀತಿಯ ಅಣ್ಣನಿಗೆ ರಾಖಿ ಕಟ್ಟಲು ತಂಗಿ ಎಲ್ಲಾ ಸಿದ್ದತೆಗಳನ್ನು ಮಾಡಿಕೊಳ್ಳುತ್ತಿದ್ದಾಳೆ. ಒಡಹುಟ್ಟಿದ ಅಣ್ಣ ಇಲ್ಲದವರು ಅಣ್ಣನ ಸ್ಥಾನ ತುಂಬಿದವರಿಗೆ ರಾಖಿ ಕಟ್ಟಿ ಸಂಭ್ರಮಿಸುತ್ತಾರೆ. ಆದರೆ ಇಲ್ಲೊಂದು ವಿಚಿತ್ರ ಘಟನೆ ನಡೆದಿದೆ. ರಾಖಿ ಕಟ್ಟಲು ಅಣ್ಣ ಬೇಕೆಂದು ಮಗಳು ಹಠ ಮಾಡಿದ್ದಕ್ಕೆ, ಹೆತ್ತವರು ಗಂಡು ಮಗುವನ್ನೇ ಕಿಡ್ನ್ಯಾಪ್‌ ಮಾಡಿದ್ದಾರೆ!

ಈ ವಿಚಿತ್ರ ಘಟನೆ ದೆಹಲಿಯ ಟ್ಯಾಗೋರ್ ಗಾರ್ಡನ್‍ನಲ್ಲಿ ನಡೆದಿದೆ. ಒಂದು ತಿಂಗಳ ಗಂಡು ಮಗುವನ್ನು ಅಪಹರಿಸಿದ ಆರೋಪದ ಮೇಲೆ ದಂಪತಿಯನ್ನು ಪೊಲೀಸರು ಬಂಧಿಸಿಸಿದ್ದಾರೆ. ಬಂಧಿತರನ್ನು ಟ್ಯಾಗೋರ್ ಗಾರ್ಡನ್‍ನ ರಘುಬೀರ್ ನಗರದ ನಿವಾಸಿಗಳಾದ ಸಂಜಯ್ ಗುಪ್ತಾ (41) ಮತ್ತು ಅನಿತಾ ಗುಪ್ತಾ (36) ಎಂದು ಗುರುತಿಸಲಾಗಿದೆ.

ಇದನ್ನೂ ಓದಿ: ರೆಸಾರ್ಟ್‌ ತೋರಿಸುತ್ತೇನೆ ಎಂದು ಮಹಿಳೆಯನ್ನು ಕರೆಸಿ ಮಾಡಬಾರದ್ದನ್ನು ಮಾಡಿಬಿಟ್ಟ ಪಾಪಿ!

ಏನಿದು ಘಟನೆ?

ಸಂಜಯ್ ಗುಪ್ತಾ ಹಾಗೂ ಅನಿತಾ ಗುಪ್ತಾ ದಂಪತಿಗೆ ಇಬ್ಬರು ಮಕ್ಕಳು. ಕಳೆದ ವರ್ಷ ಈ ದಂಪತಿಯ 17 ವರ್ಷದ ಮಗ ಸಾವನ್ನಪ್ಪಿದ್ದಾನೆ. ಇತ್ತ ಮುಂಬರುವ ರಕ್ಷಾ ಬಂಧನ ಹಬ್ಬದಂದು ರಾಖಿ ಕಟ್ಟಲು ಅಣ್ಣ ಬೇಕು ಎಂದು ಮಗಳು ಕೇಳಿದ್ದಾಳೆ. ಈ ಹಿನ್ನೆಲೆಯಲ್ಲಿ ಮಗಳ ಆಸೆಯನ್ನು ಈಡೇರಿಸುವ ಸಲುವಾಗಿ ದಂಪತಿ ಗಂದು ಕಳ್ಳತನ ಮಾಡಿ ಸಿಕ್ಕಿಬಿದ್ದಿದ್ದಾರೆ.

ದಂಪತಿ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದು ಹೇಗೆ?

ಗುರುವಾರ ಮುಂಜಾನೆ 4.34ರ ಸುಮಾರಿಗೆ ವಿಕಲಚೇತನ ಮಹಿಳೆಯೊಬ್ಬರ ಶಿಶುವನ್ನು ಅಪಹರಿಸಿದ ಬಗ್ಗೆ ಪೊಲೀಸರಿಗೆ ಮಾಹಿತಿ ಸಿಕ್ಕಿತ್ತು. ಛಟ್ಟಾ ರೈಲ್ ಚೌಕ್‍ನ ಫುಟ್‍ಪಾತ್‍ನಲ್ಲಿ ವಾಸಿಸುವ ದೂರುದಾರ ದಂಪತಿ, ಮುಂಜಾನೆ 3 ಗಂಟೆಯ ಸುಮಾರಿಗೆ ಎಚ್ಚರಗೊಂಡಾಗ ತಮ್ಮ ಮಗು ಕಾಣೆಯಾಗಿರುವುದು ಬೆಳಕಿಗೆ ಬಂದಿದೆ. ಮಗುವನ್ನು ಯಾರೋ ಅಪಹರಿಸಿದ್ದಾರೆ ಎಂದು ಶಂಕಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಘಟನೆ ಸಂಬಂಧ ಪೊಲೀಸರು ಸಮೀಪದ ಪ್ರದೇಶದ ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲಿಸಿದಾಗ, ಇಬ್ಬರು ಬೈಕ್‍ನಲ್ಲಿ ಆ ಪ್ರದೇಶದಲ್ಲಿ ತಿರುಗಾಡುತ್ತಿರುವುದು ಕಂಡುಬಂದಿದೆ. ಬೈಕ್ ಸಂಜಯ್ ಹೆಸರಿನಲ್ಲಿ ನೋಂದಾಯಿಸುರುವುದು ಬೆಳಕಿಗೆ ಬಂದಿದೆ. ಅಂತೆಯೇ ಟ್ಯಾಗೋರ್ ಗಾರ್ಡನ್‍ನ ರಘುಬೀರ್ ನಗರದಲ್ಲಿರುವ ಸಿ-ಬ್ಲಾಕ್‍ನಲ್ಲಿ ಆರೋಪಿ ದಂಪತಿ ಮತ್ತು ಅಪಹರಣಕ್ಕೊಳಗಾದ ಮಗುವನ್ನು ಪೊಲೀಸರು ಪತ್ತೆ ಹಚ್ಚಿರುವುದಾಗಿ ಉಪ ಪೊಲೀಸ್ ಆಯುಕ್ತ ಸಾಗರ್ ಸಿಂಗ್ ಕಲ್ಸಿ ಹೇಳಿದ್ದಾರೆ.

ಛಟ್ಟಾ ರೈಲ್ ಚೌಕ್ ಬಳಿ ತನ್ನ ತಾಯಿಯಿಂದ ಸ್ವಲ್ಪ ದೂರದಲ್ಲಿ ಮಲಗಿದ್ದ ಈ ಶಿಶುವನ್ನು ದಂಪತಿ ಕಂಡುಕೊಂಡು ಅಪಹರಿಸಿದ್ದಾರೆ. ವೃತ್ತಿಯಲ್ಲಿ ಟ್ಯಾಟೂ ಆರ್ಟಿಸ್ಟ್ ಆಗಿರುವ ಸಂಜಯ್ ಈ ಹಿಂದೆ ಮೂರು ಪ್ರಕರಣಗಳಲ್ಲಿ ಭಾಗಿಯಾಗಿದ್ದು, ಅನಿತಾ ಮೆಹಂದಿ ಕಲಾವಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇತ್ತ ಮಗುವಿನ ತಾಯಿ ಎರಡೂ ಕೈ ಮತ್ತು ಕಾಲುಗಳಿಗೆ ಅಂಗವಿಕಲರಾಗಿದ್ದಾರೆ ಮತ್ತು ಅವರ ತಂದೆ ಚಿಂದಿ ಆಯುವವರಾಗಿದ್ದಾರೆ. ಅವರು ನಿರಾಶ್ರಿತರಾಗಿದ್ದು, ಫುಟ್‍ಪಾತ್‍ನಲ್ಲಿ ವಾಸಿಸುತ್ತಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

suddiyaana