ಚಳಿಗೆ ಉತ್ತರ ಭಾರತ ತತ್ತರ – ಹೇಗಿದೆ ಇಂದು ದೆಹಲಿಯ ಪರಿಸ್ಥಿತಿ?
ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿ ಸೇರಿದಂತೆ ಉತ್ತರ ಭಾರತದಾದ್ಯಂತ ಶೀತಗಾಳಿ, ಚಳಿ ಮುಂದುವರೆದಿದೆ. ದೆಹಲಿಯ ಸಫ್ದರ್‍ಜಂಗ್ ನಲ್ಲಿ ಅತ್ಯಂತ ಕನಿಷ್ಠ 6.4 ಡಿಗ್ರಿ ಸೆಲ್ಸಿಯಸ್, ಪಲಮ್ ನಲ್ಲಿ ಮಂಗಳವಾರ 7.5 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ.
ವಿಪರೀತ ಶೀತಗಾಳಿ, ಚಳಿಯಿಂದಾಗಿ ಮನೆಯಿಂದ ಹೊರಬರಲಾರದ ಸ್ಥಿತಿ ನಿರ್ಮಾಣವಾಗಿದೆ. ಅಲ್ಲದೇ ಅಲ್ಲಿನ ಜನರು ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ. ತೀವ್ರ ಚಳಿಯಿಂದ ಹೃದ್ರೋಗದಿಂದ ಬಳಲುತ್ತಿರುವ ರೋಗಿಗಳು ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ. ಹೃದಯಾಘಾತದಿಂದ ಜನ ಸಾಯುವ ಪರಿಸ್ಥಿತಿ ನಿರ್ಮಾಣವಾಗಿದೆ.
ಇದನ್ನೂ ಓದಿ: ಸುದ್ದಿ ವಾಹಿನಿಗಳಿಗೆ ವಾರ್ನಿಂಗ್ ಕೊಟ್ಟ ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯ
ಕಾನ್ಪುರದ ಹೃದ್ರೋಗ ಸಂಸ್ಥೆಯೊಂದು ಈ ಬಗ್ಗೆ ಅಂಕಿಅಂಶಗಳನ್ನು ಬಿಡುಗಡೆ ಮಾಡಿದೆ. ನಗರದಲ್ಲಿ ಹೃದ್ರೋಗಿಗಳು ನಿರಂತರವಾಗಿ ಸಾಯುತ್ತಿರುವ ವಿಚಾರವನ್ನೇ ಹೇಳುತ್ತಿವೆ. ನಿತ್ಯ 600ಕ್ಕೂ ಹೆಚ್ಚು ರೋಗಿಗಳು ಒಪಿಡಿಗೆ ಬರುತ್ತಿದ್ದಾರೆ. ಹೃದ್ರೋಗ ಸಂಸ್ಥೆಯಲ್ಲಿ 500ಕ್ಕೂ ಹೆಚ್ಚು ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದಾರೆ. ಕಳೆದ ಒಂದು ವಾರದಲ್ಲಿ ಹೃದಯಾಘಾತದಿಂದ 108 ಮಂದಿ ಸಾವನ್ನಪ್ಪಿದ್ದಾರೆ ಎಂದು ಅಂಕಿ ಅಂಶದಲ್ಲಿ ಉಲ್ಲೇಖವಾಗಿದೆ.
ಗ್ರಾಮೀಣ ಪ್ರದೇಶಗಳು ಮತ್ತು ಇತರ ಸಿಎಚ್‌ಸಿ ಆಸ್ಪತ್ರೆಗಳು ಮತ್ತು ಸರ್ಕಾರಿ ಆಸ್ಪತ್ರೆಗಳ ಅಂಕಿಅಂಶಗಳನ್ನು ಇದರಲ್ಲಿ ಸೇರಿಸಲಾಗಿಲ್ಲ. ವೈದ್ಯರ ಪ್ರಕಾರ, ಬಿಪಿ ರೋಗಿಗಳು ಮತ್ತು ವಯಸ್ಸಾದವರು ಚಳಿಗಾಲದಲ್ಲಿ ಹೆಚ್ಚಿನ ಸಮಸ್ಯೆಗಳನ್ನು ಎದುರಿಸುತ್ತಾರೆ. ಇಂತಹ ಪರಿಸ್ಥಿತಿಯಲ್ಲಿ ಕಾನ್ಪುರದ ಹೃದ್ರೋಗ ಸಂಸ್ಥೆ ಕಂಟ್ರೋಲ್ ರೂಂ ಆರಂಭಿಸಿದ್ದು, ಸಹಾಯವಾಣಿ ಸಂಖ್ಯೆ ನೀಡುವ ಮೂಲಕ ಜನರ ಜೀವ ಉಳಿಸಲು ದಾರಿ ಮಾಡಿಕೊಟ್ಟಿದೆ.
ದಟ್ಟ ಮಂಜು, ಪ್ರತಿಕೂಲ ಹವಾಮಾನದಿಂದಾಗಿ ಮಂಗಳವಾರ ಬೆಳಗ್ಗೆ ದೆಹಲಿ ವಿಮಾನ ನಿಲ್ದಾಣದಿಂದ 40 ವಿಮಾನಗಳ ಹಾರಾಟ ವಿಳಂಬವಾಗಿದೆ. ಸುಮಾರು 50 ಸ್ವದೇಶಿ ವಿಮಾನಗಳ ನಿರ್ಗಮನ ದೆಹಲಿ ವಿಮಾನ ನಿಲ್ದಾಣದಿಂದ ತಡವಾಗಿದೆ. ಅದೇ ರೀತಿ 18 ಸ್ವದೇಶಿ ವಿಮಾನಗಳ ಆಗಮನ ದೆಹಲಿ ವಿಮಾನ ನಿಲ್ದಾಣದಲ್ಲಿ ವಿಳಂಬವಾಗಿದೆ. ಬೆಳಗ್ಗೆ 7 ಗಂಟೆಯವರೆಗೆ ವಿಮಾನಗಳನ್ನು ಬೇರೆಡೆಗೆ ತಿರುಗಿಸಲು ಕೂಡ ಸಾಧ್ಯವಾಗಿಲ್ಲ ಎಂದು ಮೂಲಗಳು ತಿಳಿಸಿವೆ.
ಉತ್ತರ ಭಾರತದಲ್ಲಿ ಮಂಗಳವಾರ ಹಲವು ರೈಲುಗಳ ಸಂಚಾರ ದಟ್ಟ ಮಂಜು, ಹವಾಮಾನದಲ್ಲಿ ಮುಸುಕು ಕವಿದಿದ್ದರಿಂದ ವ್ಯತ್ಯಯವಾಗಿದೆ. ರೈಲುಗಳ ಸಂಚಾರ ತಡವಾಗಿ ಆರಂಭವಾಗುತ್ತಿದೆ.