ಅಹಂಕಾರ ದೊಡ್ಡ ವ್ಯಕ್ತಿಗಳನ್ನು ನೆಲಕ್ಕುರುಳಿಸಿದೆ – ಬಿಜೆಪಿಗೆ ಕೇಜ್ರಿವಾಲ್ ಟಾಂಗ್

ಅಹಂಕಾರ ದೊಡ್ಡ ವ್ಯಕ್ತಿಗಳನ್ನು ನೆಲಕ್ಕುರುಳಿಸಿದೆ – ಬಿಜೆಪಿಗೆ ಕೇಜ್ರಿವಾಲ್ ಟಾಂಗ್

ನವದೆಹಲಿ: ಎಂಸಿಡಿ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷ ಭರ್ಜರಿ ಗೆಲುವು ಸಾಧಿಸಿದೆ. ಗೆಲುವಿನ ಸಂಭ್ರಮದ ಬಳಿಕ ಮಾತನಾಡಿದ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ತಮಗೆ ಪ್ರಧಾನಿ ನರೇಂದ್ರ ಮೋದಿ ಅವರ ಆಶೀರ್ವಾದ ಮತ್ತು ಕೇಂದ್ರದ ಸಹಕಾರದ ಅಗತ್ಯವಿದೆ ಎಂದಿದ್ದಾರೆ.

“ನಮಗೆ ಕೇಂದ್ರ ಸರ್ಕಾರದ ಸಹಾಯ ಅಗತ್ಯವಿದೆ. ಜತೆಗೆ ಪ್ರಧಾನಿ ಮೋದಿ ಅವರ ಆಶೀರ್ವಾದ ಕೂಡ ಬೇಕು”. ಜನರು ರಚನಾತ್ಮಕ ರಾಜಕೀಯವನ್ನು ಬಯಸಿದ್ದಾರೆಯೇ ವಿನಾಃ, ನಕಾರಾತ್ಮಕತೆಯನ್ನಲ್ಲ ಎನ್ನುವುದು ಈ ಚುನಾವಣೆ ನೀಡಿದ ದೊಡ್ಡ ಸಂದೇಶ ಎಂದರು.

ಇದನ್ನೂ ಓದಿ: ದೆಹಲಿ ಪಾಲಿಕೆಯಲ್ಲಿ ಇನ್ನು ಆಪ್ ದರ್ಬಾರ್ – ಕಮಲ ಪಾಳಯಕ್ಕೆ ಭಾರಿ ಮುಖಭಂಗ

“ಎಲ್ಲ ಪಕ್ಷಗಳು ಮತ್ತು ಅಭ್ಯರ್ಥಿಗಳಿಗೆ ನಾನು ಮನವಿ ಮಾಡುತ್ತೇನೆ. ಈ ಹಂತದವರೆಗೂ ನಾವು ರಾಜಕೀಯದಲ್ಲಿ ತೊಡಗಿದ್ದೆವು. ಇನ್ನು ನಾವು ಜತೆಗೂಡಿ ಕೆಲಸ ಮಾಡಬೇಕು. ನಮಗೆ ಬಿಜೆಪಿ ಮತ್ತು ಕಾಂಗ್ರೆಸ್‌ನ ಸಹಕಾರ ಬೇಕು. ಜತೆಗೂಡಿ ನಾವು ದೆಹಲಿಯ ಸಮಸ್ಯೆಗಳನ್ನು ಬಗೆಹರಿಸಬಹುದು” ಎಂದು ಹೇಳಿದರು.

ನಾವು ಶಾಲೆಗಳ ಸಮಸ್ಯೆ ಬಗೆಹರಿಸಲು ಹಗಲು ರಾತ್ರಿ ಕೆಲಸ ಮಾಡಿದ್ದೆವು. ಆಸ್ಪತ್ರೆಗಳನ್ನು ಸರಿಪಡಿಸಲು ಹಗಲು ರಾತ್ರಿ ಶ್ರಮಿಸಿದ್ದೆವು. ಭ್ರಷ್ಟಾಚಾರವನ್ನು ಅಂತ್ಯಗೊಳಿಸಿ, ದಿಲ್ಲಿಯನ್ನು ಸ್ವಚ್ಛಗೊಳಿಸುವ ಹೊಣೆಗಾರಿಕೆಯನ್ನು ಮತದಾರರು ನಮಗೆ ನೀಡಿದ್ದಾರೆ” ತಮ್ಮನ್ನು ಗೆಲ್ಲಿಸಿದ ಮತದಾರರಿಗೆ ಕೃತಜ್ಞತೆ ತಿಳಿಸಿದರು.

“ಎಂದಿಗೂ ಅಹಂಕಾರಿಗಳಾಗಬೇಡಿ. ಅಹಂಕಾರವು ಅನೇಕ ದೊಡ್ಡ ವ್ಯಕ್ತಿಗಳನ್ನೂ ನೆಲಕ್ಕುರುಳಿಸಿದೆ. ಜನರು ನಿಮ್ಮ ದರ್ಪವನ್ನು ಕ್ಷಮಿಸಬಹುದು. ಆದರೆ ದೇವರು ಕ್ಷಮಿಸುವುದಿಲ್ಲ” ಎಂದು ಬಿಜೆಪಿಗೆ ಪರೋಕ್ಷವಾಗಿ ಟಾಂಗ್ ನೀಡಿದರು.

suddiyaana