ಅನ್ನದಾತರ ದೆಹಲಿ ಚಲೋ ಚಳವಳಿ ಫೆ. 29 ರವರೆಗೆ ಸ್ಥಗಿತ – ರೈತರ ಸಾವಿನ ಸಂಖ್ಯೆ 4 ಕ್ಕೆ ಏರಿಕೆ

ಅನ್ನದಾತರ ದೆಹಲಿ ಚಲೋ ಚಳವಳಿ ಫೆ. 29 ರವರೆಗೆ ಸ್ಥಗಿತ – ರೈತರ ಸಾವಿನ ಸಂಖ್ಯೆ 4 ಕ್ಕೆ ಏರಿಕೆ

ಅನ್ನದಾತರ ಪ್ರತಿಭಟನೆ ದಿನದಿಂದ ದಿನಕ್ಕೆ ತೀವ್ರಗೊಳ್ಳುತ್ತಿದೆ. ಈ ಹೋರಾಟ ಹಿಂಸಾಚಾರಕ್ಕೂ ತಿರುಗಿದೆ. ಕೇಂದ್ರ ಸರ್ಕಾರದ ವಿರುದ್ಧ ರೈತರು ಆಕ್ರೋಶ ಹೊರ ಹಾಕುತ್ತಲೇ ಇದ್ದಾರೆ. ಇದೀಗ ದಿಲ್ಲಿ ಚಲೋ ಮೆರವಣಿಗೆಯನ್ನು ಫೆಬ್ರವರಿ 29 ರವರೆಗೆ ಸ್ಥಗಿತಗೊಳಿಸಲಾಗಿದೆ.  ಸಂಯುಕ್ತ ಕಿಸಾನ್ ಮೋರ್ಚಾ (ರಾಜಕೀಯೇತರ) ಮತ್ತು ಕಿಸಾನ್ ಮಜ್ದೂರ್ ಮೋರ್ಚಾ ತಮ್ಮ ಹೋರಾಟದ ಮುಂದಿನ ನಿರ್ಧಾರವನ್ನು ಕೈಗೊಳ್ಳಲಿದೆ ಎಂದು ವರದಿಯಾಗಿದೆ.

ಇದನ್ನೂ ಓದಿ: 3 ನೇ ವರ್ಷಕ್ಕೆ ಕಾಲಿಟ್ಟ ರಷ್ಯಾ – ಉಕ್ರೇನ್‌ ಯುದ್ಧ – ರಷ್ಯಾ ವಿರುದ್ಧ 500 ಹೊಸ ನಿರ್ಬಂಧಗಳನ್ನು ವಿಧಿಸಿದ ಅಮೆರಿಕ

ಕಿಸಾನ್ ಮಜ್ದೂರ್ ಸಂಘರ್ಷ ಸಮಿತಿಯ ಪ್ರಧಾನ ಕಾರ್ಯದರ್ಶಿ ಸರ್ವಾನ್ ಸಿಂಗ್ ಪಂಧೇರ್ ಅವರು ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ್ದಾರೆ.  ಭಾನುವಾರ ವಿಶ್ವ ವ್ಯಾಪಾರ ಸಂಘಟನೆ ಕುರಿತು ವಿಚಾರ ಸಂಕಿರಣಗಳು ನಡೆಯಲಿದ್ದು, ಇದರಲ್ಲಿ ಅನೇಕ ಸಮಾಜಪರ ಮತ್ತು ರೈತಪರ ಮುಖಂಡರು ಪಾಲ್ಗೊಳ್ಳಲಿದ್ದಾರೆ. ಸೋಮವಾರ ದೊಡ್ಡ ಕಾರ್ಪೊರೇಟ್‌ಗಳು ಮತ್ತು ಬಿಜೆಪಿ ನಾಯಕರ ಪ್ರತಿಕೃತಿ ದಹಿಸಲಾಗುವುದು. ಮರುದಿನ, ಎಸ್ ಕೆಎಂ(ರಾಜಕೀಯೇತರ) ಮತ್ತು ಕೆಎಂಎಂ ಮ್ಮದೇ ಆದ ಸಭೆಗಳನ್ನು ನಡೆಸುತ್ತವೆ. ಬುಧವಾರ ಜಂಟಿ ಸಭೆ ನಡೆಸಿ ಮುಂದಿನ ಕ್ರಿಯಾಯೋಜನೆಯನ್ನು ಗುರುವಾರ ಪ್ರಕಟಿಸಲಾಗುವುದು. ಅಲ್ಲಿಯವರೆಗೆ ನಾವು ನಮ್ಮ ಹೋರಾಟವನ್ನು ಸ್ಥಗಿತಗೊಳಿಸುತ್ತೇವೆ ಎಂದು ಹೇಳಿದ್ದಾರೆ.

ಇನ್ನು ಹರಿಯಾಣದಲ್ಲಿ ರೈತ ಮುಖಂಡರ ವಿರುದ್ಧದ ತಮ್ಮ ನಿಲುವಿನಲ್ಲಿ ಪೊಲೀಸರು ಮೃದು ಧೋರಣೆಗೆ ಬಂದಿದ್ದಾರೆ, ಅವರ ವಿರುದ್ಧ ಕಠಿಣ ರಾಷ್ಟ್ರೀಯ ಭದ್ರತಾ ಕಾಯ್ದೆ (NSA) ನ್ನು ಅನ್ವಯಿಸುವ ಪ್ರಸ್ತಾಪವನ್ನು ಕೈಬಿಟ್ಟಿರುವುದಾಗಿ ಹೇಳಿದರು. ಆದರೆ ಇತರ ಪ್ರತಿಭಟನಾಕಾರರನ್ನು ಸೇರಲು ಖಾನೌರಿ ಅಂತಾರಾಜ್ಯ ಗಡಿಗೆ ಹೋಗಲು ಬಯಸಿದ ರೈತರನ್ನು ಚದುರಿಸಲು ಹಿಸಾರ್‌ನಲ್ಲಿ ಅಶ್ರುವಾಯು ಬಳಸಿತು.

ರೈತರ ಸಾವಿನ ಸಂಖ್ಯೆ 4 ಕ್ಕೆ ಏರಿಕೆ

ಪಂಜಾಬ್-ಹರಿಯಾಣ ಗಡಿಯಲ್ಲಿರುವ ಖಾನೌರಿಯಲ್ಲಿ ‘ದೆಹಲಿ ಚಲೋ’ ಆಂದೋಲನದ ಭಾಗವಾಗಿದ್ದ 62 ವರ್ಷದ ಮತ್ತೊಬ್ಬ ರೈತರು ಶುಕ್ರವಾರ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ದರ್ಶನ್ ಸಿಂಗ್ ಅವರು ಬಟಿಂಡಾ ಜಿಲ್ಲೆಯ ಅಮರ್‌ಗಢ ಗ್ರಾಮದವರು ಎಂದು ಸರ್ವಾನ್ ಸಿಂಗ್ ಪಂಧೇರ್ ಹೇಳಿದ್ದಾರೆ. ಇದೇ ಆಂದೋಲನದ ಭಾಗವಾಗಿದ್ದ 72 ವರ್ಷದ ರೈತ ಈ ಹಿಂದೆ ಹೃದಯ ಸ್ತಂಭನದಿಂದ ಮೃತಪಟ್ಟಿದ್ದರು. ಶಂಭು ಗಡಿಯಲ್ಲಿ 63 ವರ್ಷದ ಮತ್ತೊಬ್ಬ ರೈತ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಮೊನ್ನೆ ಬುಧವಾರ, ಹರಿಯಾಣ ಪೊಲೀಸರು ಮತ್ತು ಪಂಜಾಬ್ ರೈತರ ನಡುವಿನ ಘರ್ಷಣೆಯಲ್ಲಿ ಬಟಿಂಡಾ ಮೂಲದ 21 ವರ್ಷದ ಶುಭಕರನ್ ಸಾವಿಗೀಡಾಗಿದ್ದರು. ಈ ಮೂಲಕ ಮೃತರ ಸಂಖ್ಯೆ 4ಕ್ಕೆ ಏರಿಕೆಯಾಗಿದೆ.

Shwetha M