ದೀರ್ಘಕಾಲದ ಆಂದೋಲನಕ್ಕೆ ಸಜ್ಜಾಗಿ ಬಂದ್ರಾ ಅನ್ನದಾತರು? – 6 ತಿಂಗಳ ಪಡಿತರ, ಟ್ರಾಲಿಗಳಲ್ಲಿ ಡೀಸೆಲ್ ತಂದ ರೈತರು!
ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ರೈತ ಸಂಘಟನೆಗಳು ದೆಹಲಿ ಚಲೋಗೆ ಕರೆಕೊಟ್ಟಿವೆ. ಈ ದೆಹಲಿ ಪ್ರತಿಭಟನೆಗೆ ರೈತರಿಂದ ಅಭೂತಪೂರ್ವ ಬೆಂಬಲ ವ್ಯಕ್ತವಾಗುತ್ತಿದೆ. ವಿವಿಧ ರೈತ ಸಂಘಟನೆಗಳು ರಾಷ್ಟ್ರರಾಜಧಾನಿ ದೆಹಲಿಗೆ ತೆರಳುತ್ತಿದ್ದಾರೆ.
ಅನ್ನದಾತರು ಬೃಹತ್ ಪ್ರತಿಭಟನೆ ನಡೆಸಲಿದ್ದು, ಸಕಲ ಸಿದ್ಧತೆಗಳೊಂದಿಗೆ ದೆಹಲಿ ಗಡಿಗೆ ಜಮಾಯಿಸುತ್ತಿದ್ದಾರೆ. ಮೂಲಗಳ ಪ್ರಕಾರ ಕಳೆದ 2020ರಲ್ಲಿ ನಡೆದಿದ್ದ ಪ್ರತಿಭಟನೆಯಿಂದ ಸಾಕಷ್ಟು ಪಾಠ ಕಲಿತಿರುವ ರೈತರು ಇದೀಗ ಸಕಲ ಸಿದ್ಧತೆಗಳೊಂದಿಗೆ ದೆಹಲಿಗೆ ಪ್ರವೇಶ ಮಾಡುತ್ತಿದ್ದಾರೆ. ಈ ಬಾರಿ ರೈತರು ಕೇವಲ ಟ್ರಾಕ್ಟರ್ ಗಳ ಮೂಲಕ ಮಾತ್ರವಲ್ಲದೇ ಇತರೆ ವಾಹನಗಳ ಮೂಲಕವೂ ದೆಹಲಿಗೆ ಆಗಮಿಸುತ್ತಿದ್ದು, 6 ತಿಂಗಳ ರೇಷನ್, ಡೀಸೆಲ್, ಟ್ರಾಕ್ಟರ್ ಮಾತ್ರವಲ್ಲದೇ ಸೂಜಿಯಿಂದ ಹಿಡಿದು ಕಲ್ಲನ್ನೂ ಪುಡಿಗಟ್ಟಬಲ್ಲ ಬೃಹತ್ ಸುತ್ತಿಗೆಗಳು ಸೇರಿದಂತೆ ಸುಮಾರು 6 ತಿಂಗಳ ವರೆಗೂ ಬೇಕಾಗುವ ಎಲ್ಲ ವಸ್ತುಗಳೊಂದಿಗೆ ದೆಹಲಿಗೆ ಆಗಮಿಸಿದ್ದಾರೆ ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ: ದೆಹಲಿ ಚಲೋ – ಹರಿಯಾಣ ಗಡಿಯಲ್ಲಿ ರೈತರ ಮೇಲೆ ಅಶ್ರುವಾಯು ಪ್ರಯೋಗ, ಹಲವರ ಬಂಧನ
ಈ ಬಗ್ಗೆ ಪಂಜಾಬ್ ಮೂಲದ ರೈತರೊಬ್ಬರು ಮಾಧ್ಯಮಗಳೊಂದಿಗೆ ಮಾತನಾಡಿದ್ದಾರೆ. ಸೂಜಿಯಿಂದ ಸುತ್ತಿಗೆಯವರೆಗೆ, ಕಲ್ಲುಗಳನ್ನು ಒಡೆಯುವ ಉಪಕರಣಗಳು ಸೇರಿದಂತೆ ನಮ್ಮ ಟ್ರಾಲಿಗಳಲ್ಲಿ ಬೇಕಾದ ಎಲ್ಲ ವಸ್ತುಗಳನ್ನು ತೆಗೆದುಕೊಂಡಿದ್ದೇವೆ. ನಾವು ಆರು ತಿಂಗಳ ಪಡಿತರದೊಂದಿಗೆ ನಮ್ಮ ಊರಿನಿಂದ ಹೊರಟಿದ್ದೇವೆ. ಹರ್ಯಾಣದ ನಮ್ಮ ಸಹೋದರರಿಗೂ ಬೇಕಾದಷ್ಟು ಡೀಸೆಲ್ ನಮ್ಮಲ್ಲಿ ಇದೆ ಎಂದು ಹೇಳಿದ್ದಾರೆ
2020ರ ರೈತರ ಪ್ರತಿಭಟ ಭಾಗನೆಯಲ್ಲಿಯೂ ಭಾಗವಹಿಸಿದ್ದೆ ಎಂದು ಹೇಳಿದ ಅವರು, ತಮ್ಮ ಬೇಡಿಕೆಗಳು ಈಡೇರುವವರೆಗೂ ಈ ಬಾರಿ ಹಿಂದೆ ಸರಿಯುವುದಿಲ್ಲ. ಕಳೆದ ಬಾರಿ ನಾವು 13 ತಿಂಗಳುಗಳ ಕಾಲ ಪ್ರತಿಭಟನೆಯಿಂದ ಹಿಂದೆ ಸರಿದಿರಲಿಲ್ಲ. ಬೇಡಿಕೆಗಳನ್ನು ಈಡೇರಿಸಲಾಗುವುದು ಎಂದು ಭರವಸೆ ನೀಡಿದ ಹಿನ್ನೆಲೆಯಲ್ಲಿ ಹಿಂದೆ ಸರಿದಿದ್ದೆವು. ಆದರೆ ಸರ್ಕಾರವು ತನ್ನ ಭರವಸೆಯನ್ನು ಉಳಿಸಿಕೊಳ್ಳಲಿಲ್ಲ. ಈ ಬಾರಿ ನಮ್ಮ ಎಲ್ಲ ಬೇಡಿಕೆಗಳು ಈಡೇರಿದ ನಂತರವೇ ನಾವು ಅಲ್ಲಿಂದ ತೆರಳುತ್ತೇವೆ ಎಂದು ಅವರು ಪಂಜಾಬ್-ಹರ್ಯಾಣ ಗಡಿಯಿಂದ ದೆಹಲಿಯ ಕಡೆಗೆ ತೆರಳುತ್ತಾ ಅವರು ತಿಳಿಸಿದ್ದಾರೆ.