ಕೊಹ್ಲಿ ಪವರ್, RCB ಟಾಪರ್ ತವರಿನ ಸೋಲಿಗೆ ಬಡ್ಡಿ ಸಮೇತ ವಸೂಲಿ
ಸೇಡಿನ ಸಮರದಲ್ಲಿ DC ಗಿರಗಿರ

ಕೊಹ್ಲಿ ಪವರ್,  RCB ಟಾಪರ್  ತವರಿನ ಸೋಲಿಗೆ ಬಡ್ಡಿ ಸಮೇತ ವಸೂಲಿಸೇಡಿನ ಸಮರದಲ್ಲಿ DC ಗಿರಗಿರ

2025ರ ಐಪಿಎಲ್ ಕಪ್ ಆರ್‌ಸಿಬಿ ತಂಡಕ್ಕೆ ಅನ್ನೋದು ದೇವರೇ ಫಿಕ್ಸ್ ಮಾಡಿದ್ದಾನೆ ಅಂತಾ ಕಾಣುತ್ತೆ.  ಯಾಕಂದ್ರೆ ಆರ್‌ಸಿಬಿ ತಂಡ ಭರ್ಜರಿಯಾಗಿ ಸಾಲು ಸಾಲು ಗೆಲುವು ಕಂಡು ಮುನುಗ್ಗುತ್ತಿದೆ. ಅದರಲ್ಲೂ ಬೆಂಗಳೂರಿಗೆ ಬಂದು ಕೊಬ್ಬು ತೋರಿಸಿ ಅಹಂಕಾರ ಮೆರೆದ ತಂಡಗಳ ಹೆಡಮುರಿ ಕಟ್ಟುತ್ತಿದ್ದಾರೆ ಆರ್‌ಸಿಬಿ ಬಾಯ್ಸ್. ಡೆಲ್ಲಿನ ಗಿಲ್ಲಿ ಮಾಡಿ, ಊರಾಚೆ ಬಿಸಾಡಿದ್ದಾರೆ ಆರ್‌ಸಿಬಿ ಆಟಗಾರರು. ಅದ್ರಲ್ಲೂ ನಿನ್ನೆಯ ಮ್ಯಾಚ್‌ ಮಾತ್ರ ಸೂಪರ್ ಆಗಿತ್ತು.. ನೋಡೋಕೆ ಸಖತ್ ಇಂಟ್ರೆಸ್ಟಂಗ್ ಜೊತೆ ಸಖತ್ ಕಿಕ್ ಕೊಡ್ತಾ ಇತ್ತು.

ಆರ್‌ಸಿಬಿಗೆ ಇರೋ ಕ್ರೇಜ್ ಜಗತ್ತಿನ ಯಾವ ತಂಡಕ್ಕೂ ಇಲ್ಲ ಅನ್ಸುತ್ತೆ. ಕೋಟಿ ಕೋಟಿ ಅಭಿಮಾನಿಗಳು ಆರ್‌ಸಿಬಿಯನ್ನ ಹೃದಯದಲ್ಲಿಟ್ಟುಕೊಂಡು ಆರಾಧನೆ ಮಾಡ್ತಾರೆ.. ಕನ್ನಡಿಗರನ್ನ ಆರ್‌ಸಿಬಿ ದೇವರು ಕೊಟ್ಟ ವರ ಅಂತಾಳೆ ಹೇಳಬಹುದು. ಈ ವರ್ಷ ಆರ್‌ಸಿಬಿ ಖದರ್ ಫುಲ್ ಚೇಂಜ್ ಆಗಿದೆ.. ಆರಂಭದಲ್ಲೇ ಜಯದ ಕೇಕೆ ಹಾಕುತ್ತಾ ಮುನ್ನುಗ್ಗುತ್ತಿದೆ. ಅದ್ರಲ್ಲೂ ನಿನ್ನೆಯ ಪಂದ್ಯದಲ್ಲಿ ಡೆಲ್ಲಿನ ಗಿಲ್ಲಿ ಮಾಡಿದ್ದ ಆರ್‌ಸಿಬಿ ಆಟಗಾರರು ಚಿನ್ನಿದಾಂಡು ಆಡಿದ್ರು. ತವರಿನ ಸೇಲಿನ ಸೇಡನ್ನ ಆರ್‌ಸಿಬಿ ಬಡ್ಡಿ ಸಮೇತ ತೀರಿಸಿದೆ..

ಆರ್‌ಸಿಬಿ ತಂಡ ಟಾಸ್ ಗೆದ್ದರೂ ದೆಹಲಿ ವಿರುದ್ಧ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡು ಪಕ್ಕಾ ಪ್ಲಾನ್ ಮಾಡಿ ಅಖಾಡಕ್ಕೆ ಎಂಟ್ರಿ ಕೊಟ್ಟಿತ್ತು. 20 ಓವರ್ ಆಡಿದ ದೆಹಲಿ ತಂಡದ ಆಟಗಾರರು, 162 ರನ್ ಬಾರಿಸಲು ತಿಣುಕಾಡಿದರು. ಕೆಎಲ್ ರಾಹುಲ್ 41 ರನ್ ಗಳಿಸಿದ್ದು ಬಿಟ್ಟರೆ ದೆಹಲಿ ತಂಡದ ಬೇರೆ ಯಾವುದೇ ಆಟಗಾರ ಕೂಡ ಆಡಲಿಲ್ಲ. ಆರ್‌ಸಿಬಿ ಭರ್ಜರಿ ಬೌಲಿಂಗ್ ದಾಳಿಗೆ ದೆಹಲಿ ತಂಡ ಉಡೀಸ್ ಆಗಿತ್ತು.  ಹೀಗೆ, 163 ರನ್ ಗುರಿಯನ್ನ ಬೆನ್ನುಹತ್ತಿದ್ದ ಆರ್‌ಸಿಬಿ ತಂಡ ಆರಂಭದಲ್ಲೇ ಭಾರಿ ದೊಡ್ಡ ಆಘಾತವನ್ನೇ ಎದುರಿಸಿತ್ತು. ಆಮೇಲೆ ಆರ್‌ಸಿಬಿ ನೋಡುಗರಿಗೆ ಸಖತ್ ಕಿಕ್ ಕೊಡ್ತು.

 ಆರ್‌ಸಿಬಿ ಎದುರು ಗಿಲ್ಲಿಯಾದ ಡೆಲ್ಲಿ 

163 ರನ್ ಸುಲಭದ ಗುರಿಯನ್ನು ಆರಾಮಾಗಿ ಬಾರಿಸಲು ಆರ್‌ಸಿಬಿ ತಂಡ ಎಂಟ್ರಿಯನ್ನ ಕೊಟ್ಟಿತ್ತು. ಆದರೆ, 20 ರನ್‌ಗೆ ದಿಢೀರ್ 2 ವಿಕೆಟ್ ಕಳೆದುಕೊಂಡು ಪರದಾಡುವ ಪರಿಸ್ಥಿತಿ ಆರ್‌ಸಿಬಿಗೆ ಎದುರಾಗಿತ್ತು. ಆರಂಭಿಕ ಯುವ ಬ್ಯಾಟರ್ ಕೇವಲ 6 ಎಸೆತಗಳಲ್ಲಿ 12 ರನ್ ಗಳಿಸಿ ಔಟಾದರು. ನಂತರ ಇಂಪ್ಯಾಕ್ಟ್ ಆಟಗಾರ ದೇವದತ್ ಪಡಿಕ್ಕಲ್ ಖಾತೆ ತೆರೆಯದೆ ಬಂದ ದಾರಿಗೆ ಸುಂಕವಿಲ್ಲದಂತೆ ಹಿಂತಿರುಗಿದರು.  ಕೊನೆಗೆ ಆರ್‌ಸಿಬಿ ತಂಡದ ನಾಯಕ ರಜತ್ ಪಾಟಿದಾರ್ ಕೂಡ ಕೇವಲ 6 ರನ್ ಗಳಿಸಿ ಔಟ್ ಆಗಿ ಪೆವಿಲಿಯನ್ ಸೇರಿದರು. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಈ ಹಂತದಲ್ಲಿ 26 ರನ್‌ಗಳಿಗೆ ಪ್ರಮುಖ ಮೂರು ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿತ್ತು. ಈ ಸಂದರ್ಭದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಪಂದ್ಯದ ಮೇಲೆ ಹಿಡಿತ ಸಾಧಿಸಿತು. ಆದರೆ, ಬೆಂಗಳೂರು ತಂಡದ ಪರ ಇಲ್ಲಿಂದ ವಿರಾಟ್ ಕೊಹ್ಲಿ ಮತ್ತು ಕೃನಾಲ್ ಪಾಂಡ್ಯ ಇನ್ನಿಂಗ್ಸ್ ಜವಾಬ್ದಾರಿ ವಹಿಸಿಕೊಂಡರು. ಬೆಂಗಳೂರು ತಂಡದ ಇನ್ನಿಂಗ್ಸ್‌ ಅನ್ನು ಇಬ್ಬರು ತಾಳ್ಮೆಯುವ ಬ್ಯಾಟಿಂಗ್ ಮಾಡುವ ಮೂಲಕ ಮುನ್ನಡೆಸಿದರು.

ವಿರಾಟ್-ಕೃನಾಲ್ ಜೊತೆಯಾಟ

ವಿರಾಟ್ ಕೊಹ್ಲಿ ಮತ್ತು ಕೃನಾಲ್ ಪಾಂಡ್ಯ ಜೋಡಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಎಲ್ಲಾ ಲೆಕ್ಕಚಾರವನ್ನು ಉಲ್ಟಾ ಮಾಡಿದರು. ಅರುಣ್ ಜೇಟ್ಲಿ ಮೈದಾನದಲ್ಲಿ ವಿರಾಟ್ ಕೊಹ್ಲಿ ಮತ್ತು ಕೃನಾಲ್ ಪಾಂಡ್ಯ ಜೋಡಿ ಡೆಲ್ಲಿ ಬೌಲರ್ಸ್‌ಗೆ ಬೆವರಿಳಿಸಿತು. ಈ ವೇಳೆ ವಿರಾಟ್ ಕೊಹ್ಲಿ 45 ಎಸೆತಗಳಲ್ಲಿ ತಮ್ಮ ಅರ್ಧಶತಕವನ್ನು ಪೂರೈಸಿದರು. ಆರಂಭದಲ್ಲಿ ನಿಧಾನಗತಿಯಲ್ಲಿ ರನ್ ಗಳಿಸಿದರೂ ಒಮ್ಮೆ ಸೆಟ್ ಆಗುತ್ತಿದ್ದಂತೆ ಕೃನಾಲ್ ಪಾಂಡ್ಯ ಬಿರುಸಾಗಿ ಆಡಲು ಆರಂಭಿಸಿದರು. ಮತ್ತೊಂದು ಕಡೆ ವಿರಾಟ್ ಕೊಹ್ಲಿ ನಿಧಾನವಾಗಿ ರನ್ ಕದಿಯುತ್ತಾ ಕೃನಾಲ್ ಪಾಂಡ್ಯಗೆ ಧೈರ್ಯ ತುಂಬಿದರು.  ಆದರೆ 18ನೇ ಓವರ್‍‌ನಲ್ಲಿ ಕೊಹ್ಲಿ ದೊಡ್ಡ ಹೊಡೆತಕ್ಕೆ ಮುಂದಾಗಿ ಕ್ಯಾಚ್ ಔಟಾದರು. ವಿರಾಟ್ ಕೊಹ್ಲಿ 47 ಎಸೆತಗಳಲ್ಲಿ 51 ರನ್‌ಗಳಿಸಿ ಗೆಲುವಿಗೆ ಕೊಡುಗೆ ನೀಡಿದರು. ಕೃನಾಲ್ ಪಾಂಡ್ಯ ಕೊನೆವರೆಗೆ ಕ್ರೀಸ್‌ನಲ್ಲಿ ತಂಡದ ಗೆಲುವಿಗೆ ಹೋರಾಡಿದರು. ಅವರು 47 ಎಸೆತಗಳಲ್ಲಿ 73 ರನ್ ಗಳಿಸಿ ಅಜೇಯರಾಗುಳಿದರು. ವಿರಾಟ್ ಕೊಹ್ಲಿ ವಿಕೆಟ್ ಕಳೆದುಕೊಂಡ ಬಳಿಕ ಬಂದ ಟಿಮ್ ಡೇವಿಡ್ 5 ಎಸೆತಗಳಲ್ಲಿ 19 ರನ್ ಗಳಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು. ಇದರೊಂದಿಗೆ ವಿರಾಟ್ ಕೊಹ್ಲಿ ಮತ್ತ ಕೃನಾಲ್ ಪಾಂಡ್ಯ ಜೋಡಿ ಡೆಲ್ಲಿ ಗೆಲುವನ್ನು ಕಸಿದುಕೊಂಡರು.   18.3 ಓವರ್‌ಗೆ 165 ರನ್ ಚಚ್ಚಿದ ಆರ್‌ಸಿಬಿ 6 ವಿಕೆಟ್ ಅಂತರದಲ್ಲಿ ಗೆದ್ದು ಬೀಗಿತ್ತು. ಈ ಮೂಲಕ ಡೆಲ್ಲಿನ ಗಿಲ್ಲಿ ಮಾಡಿ, ಊರಾಚೆ ಬಿಸಾಡಿದರು ಆರ್‌ಸಿಬಿ ಆಟಗಾರರು. ಆರ್​ಸಿಬಿ,  ಡೆಲ್ಲಿ ವಿರುದ್ಧ ತನ್ನ ಹಳೆಯ ಸೋಲಿಗೆ ಸೇಡು ತೀರಿಸಿಕೊಂಡಿದಲ್ಲದೆ, ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನವನ್ನು ಪಡೆದುಕೊಂಡಿತು. ಆರ್​ಸಿಬಿ ಈಗ 10 ಪಂದ್ಯಗಳಿಂದ 14 ಅಂಕಗಳನ್ನು ಗಳಿಸಿದ್ದು, ಪ್ಲೇಆಫ್ ಅರ್ಹತೆಗೆ ಬಹಳ ಹತ್ತಿರದಲ್ಲಿದೆ. ನಿನ್ನೆಯ ಪಂದ್ಯ ಆರ್‌ಸಿಬಿ ಫ್ಯಾನ್ಸ್‌ಗೆ ಒಂದು ರೀತಿಯ ಹಬ್ಬದೂಟವನ್ನೇ ನೀಡ್ತು.

Kishor KV