RRನಲ್ಲಿ ಮುಳುಗಿದ ‘ಸೂರ್ಯ’ – ಡೆಲ್ಲಿಯಲ್ಲಿ ಕನ್ನಡಿಗ K.L ದರ್ಬಾರ್
ಧಮ್ ಬಿಟ್ಟ ಪರಾಗ್ಗೆ ಮುಖಭಂಗ!

RRನಲ್ಲಿ ಮುಳುಗಿದ ‘ಸೂರ್ಯ’ –  ಡೆಲ್ಲಿಯಲ್ಲಿ ಕನ್ನಡಿಗ K.L ದರ್ಬಾರ್ಧಮ್ ಬಿಟ್ಟ ಪರಾಗ್ಗೆ ಮುಖಭಂಗ!

 

ಕನ್ನಡಿಗ  ಕೆಎಲ್ ರಾಹುಲ್‌ ಐಪಿಎಲ್‌ನಲ್ಲಿ ಮಿಂಚುತ್ತಿದ್ದಾರೆ. ತನ್ನನ್ನ ಟ್ರೋಲ್ ಮಾಡಿದವರಿಗೆ, ಸ್ಲೋ ಬ್ಯಾಟರ್ ಅಂದೊರಿಗೆ ಕನ್ನಡಿಗ ಕೆಎಲ್ ಬೆಂಕಿ ಬ್ಯಾಟಿಂಗ್ ಮೂಲಕ ಖಡಕ್ ಉತ್ತರ ಕೊಟ್ಟಿದ್ದಾರೆ.. ಪಂಜಾಬ್‌ ವಿರುದ್ಧ 150 ರನ್ ಹೊಡೆದು ಮಿಂಚಿದ್ದ ಕೆಎಲ್ ನಿನ್ನೆ ರಾಜಸ್ಥಾನ್ ರಾಯಲ್ಸ್ ವಿರುದ್ಧ ಕೂಡ ಭರ್ಜರಿ ಬ್ಯಾಟಿಂಗ್ ಮಾಡಿ ಡೆಲ್ಲಿ ಗೆಲುವಿಗೆ ಕಾರಣವಾಗಿದ್ದಾರೆ.

ಕರ್ನಾಟಕದ ಸ್ಟಾರ್ ಆಟಗಾರ ಕೆಎಲ್ ರಾಹುಲ್ ಹಾಗೂ ಪಾತುಮ್ ನಿಸ್ಸಂಕಾ ಅವರ ಜವಾಬ್ದಾರಿಯುತ ಆಟದ ನೆರವಿನಿಂದ  ಡೆಲ್ಲಿ ಕ್ಯಾಪಿಟಲ್ಸ್ ತಂಡ 7 ವಿಕೆಟ್‌ಗಳಿಂದ ರಾಜಸ್ಥಾನ್ ರಾಯಲ್ಸ್ ತಂಡವನ್ನು ಮಣಿಸಿ, ಇತಿಹಾಸ ನಿರ್ಮಿಸಿತು. ಈ ಗೆಲುವಿನ ಮೂಲಕ ಡೆಲ್ಲಿ ಇತಿಹಾಸದಲ್ಲೇ ಅತಿ ಹೆಚ್ಚು ರನ್‌ಗಳ ಚೇಸ್ ಮಾಡಿ ಅಬ್ಬರಿಸಿತು. ಆರ್‌ಆರ್‌ ನೀಡಿದ 226 ರನ್‌ಗಳ ಗುರಿಯನ್ನು ಹಿಂಬಾಲಿಸಿದ ಡೆಲ್ಲಿ ಕ್ಯಾಪಿಟಲ್ಸ್‌ ತಂಡದ ಆರಂಭ ಭರ್ಜರಿಯಾಗಿತ್ತು. ಆರಂಭಿಕರಾದ ಪಾತುಮ್ ಹಾಗೂ ಕನ್ನಡಿಗ ಕೆಎಲ್ ರಾಹುಲ್ ಜೋಡಿ ಅಬ್ಬರಿಸಿತು. ಈ ಜೋಡಿ ಪವರ್ ಪ್ಲೇನಲ್ಲಿ ಕಮಾಲ್ ಪ್ರದರ್ಶನ ನೀಡಿತು. ಪತುಮ್, ರಾಹುಲ್‌ ಜೋಡಿ ರನ್‌ ರೇಟ್‌ ಒತ್ತಡ ತಂಡದ ಮೇಲೆ ಬೀಳದಂತೆ ನೋಡಿಕೊಂಡಿತು. ಈ ಜೋಡಿ ಪವರ್‌ ಪ್ಲೇನಲ್ಲಿ 70 ರನ್‌ ಸೇರಿಸಿತು.
ಮೊದಲ ವಿಕೆಟ್‌ಗೆ ಪತುಮ್ ನಿಸ್ಸಂಕಾ ಹಾಗೂ ರಾಹುಲ್ ಜೊತೆಗೂಡಿ 57 ಎಸೆತಗಳಲ್ಲಿ 110 ರನ್‌ ಸೇರಿಸಿತು. ಈ ವೇಳೆ ಪತುಮ್ ನಿಸ್ಸಂಕಾ 33 ಎಸೆತಗಳಲ್ಲಿ 6 ಬೌಂಡರಿ, 3 ಸಿಕ್ಸರ್ ಸಹಾಯದಿಂದ 62 ರನ್ ಸೇರಿಸಿ ಮಿಂಚಿದರು.  ನಂತ್ರ ಕೆಎಲ್ ರಾಹುಲ್ ಹಾಗೂ ನಿತೀಶ್ ರಾಣಾ ಜೋಡಿ ಆರ್ಭಟಿಸಿತು.  ಈ ಜೋಡಿ 30 ಎಸೆತಗಳಲ್ಲಿ 61 ರನ್‌ ಸೇರಿಸಿತು. ಈ ಹಂತದಲ್ಲಿ ನಿತೀಶ್ ರಾಣಾ 33 ರನ್‌ ಸಿಡಿಸಿದರು. ಕೆಎಲ್ ರಾಹುಲ್‌ 40 ಎಸೆತಗಳಲ್ಲಿ 6 ಬೌಂಡರಿ, 5 ಸಿಕ್ಸರ್ ಸಹಾಯದಿಂದ 75 ರನ್ ಬಾರಿಸಿ, ಜೋಫ್ರಾ ಆರ್ಚರ್‌ಗೆ ವಿಕೆಟ್‌ ಒಪ್ಪಿಸಿದರು.

ರೆಕಾರ್ಡ್ ಬ್ರೇಕ್ ಮಾಡಿದ ಕೆ.ಎಲ್‌ ರಾಹುಲ್

ಈ ಪಂದ್ಯದ ಮೂಲಕ IPL ಇತಿಹಾಸದಲ್ಲಿ ಧೋನಿ ಅವರ 5,528 ರನ್‌ಗಳನ್ನು ಹಿಂದಿಕ್ಕಿ ಐದನೇ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಎಂಬ ಹೆಗ್ಗಳಿಕೆಗೆ ಕೆ.ಎಲ್‌ ರಾಹುಲ್‌ ಪಾತ್ರರಾಗಿದ್ದಾರೆ. IPLನಲ್ಲಿ ಸುಮಾರು 152 ಪಂದ್ಯಗಳು ಮತ್ತು 143 ಇನ್ನಿಂಗ್ಸ್‌ಗಳಲ್ಲಿ ಆರು ಶತಕಗಳು ಮತ್ತು 42 ಅರ್ಧಶತಕಗಳ ಜೊತೆಗೆ ಬರೋಬ್ಬರಿ 5,579 ರನ್‌ಗಳನ್ನು ಗಳಿಸುವ ಮೂಲಕ 138.37 ರ ಸ್ಟ್ರೈಕ್ ರೇಟ್‌ನಲ್ಲಿ 46.88 ಸರಾಸರಿಯನ್ನು ಹೊಂದಿದ್ದಾರೆ.ನಂತ್ರ ಮಾತನಾಡಿದ ಕೆ.ಎಲ್‌ ರಾಹುಲ್‌ ತಮ್ಮ ವೈಯಕ್ತಿಕ ಸಾಧನೆಗಿಂತ ಹೆಚ್ಚಾಗಿ ತಂಡ ಒಟ್ಟಾಗಿ ಸೇರಿ ಸಾಧಿಸಬೇಕಿರುವ ಗುರಿ ಮುಖ್ಯ ಎಂದಿದ್ರು. ಚೆನ್ನೈ ತಂಡದ ಮೂಲಕ ಧೋನಿ ಹೇಗೆ 5 ಟ್ರೋಫಿಗಳನ್ನು ಗಳಿಸೋದ್ರೋ ಹಾಗೇ ನನೂ ಕೂಡ ಅಷ್ಟೇ ಟ್ರೋಪಿ ಗೆದ್ದರೇ ನನಗೆ  ಖುಷಿ ನೀಡಲಿದೆ ಎಂದಿದ್ದಾರೆ

 ಕೆ.ಎಲ್ ರಾಹುಲ್‌ಗೆ ಆರೆಂಜ್ ಕ್ಯಾಪ್ 

40 ಎಸೆತಗಳಲ್ಲಿ 75 ರನ್ ಗಳಿಸಿದ ಕೆ.ಎಲ್ ರಾಹುಲ್ ತಮ್ಮ ಈ ಬ್ಯಾಟಿಂಗ್‌ ಪ್ರದರ್ಶನದಿಂದ ಆರೆಂಜ್‌ ಕ್ಯಾಪ್‌ ತಮ್ಮದಾಗಿಸಿಕೊಂಡರು. ಈ ಸೀಸನ್‌ನಲ್ಲಿ  ಕೆಎಲ್‌ 433ರನ್‌ ಗಳಿಸಿದ್ದಾರೆ. ಅಭಿಷೇಕ್‌ ಶರ್ಮ 425  ರನ್‌ಗಳಿಸಿ  ಈ ರೇಸ್‌ನಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ.

ಕಳಪೆ ಫಾರ್ಮ್‌ ಮತ್ತು ಇ-ಸಿಗರೇಟ್‌ ಸೇದಿ ಹಲವು ಟೀಕೆಗಳನ್ನು ಎದುರಿಸಿದ್ದ ರಿಯಾನ್‌ ಪರಾಗ್‌ಗೆ ಈ ಸೋಲು ಮುಖಭಂಗಕ್ಕೆ ಕಾರಣವಾಗಿದೆ. ಆದ್ರ ಈ ಪಂದ್ಯದಲ್ಲಿ ರಿಯಾನ್ ಪರಾಗ್   90 ರನ್‌ ಬಾರಿಸಿದ್ರೂ ಕೂಡ ಈ ಪಂದ್ಯ ಗೆಲ್ಲೋಕೆ ಆಗಿಲ್ಲ. ಈ ಬಗ್ಗೆ ಮಾತನಾಡಿದ ಪರಾಗ್‌ ನನ್ನ ಬಗ್ಗೆ ಮಾತನಾಡುವ ಟೀಕಾಕಾರರಿಗೆ ಉತ್ತರಿಸುವ ಅಗತ್ಯವಿಲ್ಲ ಎಂದು ಹೇಳಿದರು. ಜತೆಗೆ ಬೌಲಿಂಗ್‌ ವೈಫಲ್ಯ ಸೋಲಿಗೆ ಕಾರಣವಾಯಿತು ಎಂದರು.

ಈ ಪಂದ್ಯದಲ್ಲಿ ವೈಭವ್ ಸೂರ್ಯವಂಶಿ ಅಬ್ಬರಿಸಲಿಲ್ಲ. 2 ಬಾಲ್‌ಗೆ 4 ರನ್‌ಗಳಿಸಿದ ಸೂರ್ಯವಂಶಿ ಜೇಮಿಸನ್‌ಗೆ ವಿಕೆಟ್ ಒಪ್ಪಿಸಿದ್ರು. ವೈಭವ್ ವಿಕೆಟ್ ತೆಗೆದ ಬಳಿಕ ಜೇಮಿಸನ್ ಸಂಭ್ರಮಾಚರಣೆ ನಡೆಸಿದರು. ವೈಭವ್ ಮುಂದೆ ಚಪ್ಪಾಳೆ ತಟ್ಟುತ್ತಾ ಆಕ್ರೋಶಭರಿತವಾಗಿ ಅಗಲವಾದ ಕಣ್ಣುಗಳಿಂದ ತೋರಿಸಿದರು. ಜೇಮಿಸನ್​ ಅವರ ನಡೆಗೆ ವೈಭವ್ ಸೂರ್ಯವಂಶಿ ಯಾವುದೇ ಪ್ರತಿಕ್ರಿಯೆ ನೀಡದೆ ನಿರಾಶೆಯಿಂದ ಪೆವಿಲಿಯನ್​ನತ್ತಾ ಹೆಜ್ಜೆ ಹಾಕಿದರು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಜೇಮಿಸನ್​ ನಡೆಯನ್ನ ಕ್ರಿಕೆಟ್ ಅಭಿಮಾನಿಗಳು ಟೀಕಿಸುತ್ತಿದ್ದಾರೆ. ನಿಮ್ಮ ಅರ್ಧದಷ್ಟು ವಯಸ್ಸಿನ ಹುಡುಗ ವಿಕೆಟ್ ಪಡೆದು ಈ ರೀತಿ ವರ್ತಿಸುತ್ತಿದ್ದೀರಾ ಎಂದು ಕಿಡಿ ಕಾರಿದ್ದಾರೆ.

Kishor KV