ಸಾಲಕ್ಕೆ ಹೆದರಿ ದಂಪತಿ ಆತ್ಮಹತ್ಯೆ – ಹೆತ್ತವರ ಶವದ ಜೊತೆ 3 ದಿನ ಕಳೆದಿತ್ತು 6 ದಿನದ ಹಸುಗೂಸು!

ಸಾಲಕ್ಕೆ ಹೆದರಿ ದಂಪತಿ ಆತ್ಮಹತ್ಯೆ – ಹೆತ್ತವರ ಶವದ ಜೊತೆ 3 ದಿನ ಕಳೆದಿತ್ತು 6 ದಿನದ ಹಸುಗೂಸು!

ಹಾಲುಗಲ್ಲದ ಕಂದ. ಜಗತ್ತನ್ನ ಕಂಡು ಇನ್ನೂ ಒಂದು ವಾರ ಕೂಡ ತುಂಬಿರಲಿಲ್ಲ. ಹುಟ್ಟಿದ ಮೂರೇ ದಿನಕ್ಕೆ ಉಸಿರನ್ನೇ ನಿಲ್ಲಿಸುವಂಥ ಹಸಿವು ಕಾಡಿತ್ತು. ಅಮ್ಮನ ಎದೆಹಾಲಿನ ಅಮೃತಕ್ಕಾಗಿ ಮಲಗಿದ್ದಲ್ಲೇ ಚೀರುತ್ತಿತ್ತು. ಆದರೆ ಕರುಳಕುಡಿ ಪಕ್ಕದಲ್ಲೇ ಇದ್ದರೂ ಹೆತ್ತವಳಿಗೆ ಕಂದನ ಅಳು ಕೇಳುತ್ತಿರಲಿಲ್ಲ. ಅಪ್ಪನಿಗೆ ಮಗುವಿನ ವೇದನೆ ಅರ್ಥವಾಗುತ್ತಿರಲಿಲ್ಲ. ಯಾಕಂದ್ರೆ ಪುಟಾಣಿಯ ಪಕ್ಕದಲ್ಲೇ ಹೆತ್ತವರು ಚಿರನಿದ್ರೆಗೆ ಜಾರಿದ್ದರು.

ನಿಜಕ್ಕೂ ಇದಕ್ಕೆ ಮರುಕ ಪಡಬೇಕೋ. ನಿಟ್ಟುಸಿರು ಬಿಡಬೇಕೋ ಒಂದೂ ಅರ್ಥವಾಗಲ್ಲ. ಯಾಕಂದ್ರೆ ಗಂಡ ಹೆಂಡತಿ ಸಾವಿನ ಮನೆ ಸೇರಿದ್ರೆ ಹೆತ್ತವರ ಶವದ ಪಕ್ಕವೇ ಇದ್ದ 6 ದಿನಗಳ ಮಗು ಅನಾಥವಾಗಿತ್ತು. ಉತ್ತರಾಖಂಡ ರಾಜ್ಯದ ರಾಜಧಾನಿ ಡೆಹ್ರಾಡೂನ್‌ನಲ್ಲಿ ಇಂಥಾದ್ದೊಂದು ದಾರುಣ ಘಟನೆ ನಡೆದಿದೆ.  ಮೃತರನ್ನು ಉತ್ತರ ಪ್ರದೇಶದ ಸಹರನ್‌ಪುರದ ನಿವಾಸಿ ಕಾಶಿಫ್‌ ಎಂದು ಗುರ್ತಿಸಲಾಗಿದೆ. ಈತನ ಪತ್ನಿ ಆನಮ್ ಕೂಡಾ ಗಂಡನ ಜೊತೆ ಸಾವನ್ನಪ್ಪಿದ್ದಾಳೆ. ಈಕೆ ಜೂನ್ 8 ರಂದು ಗಂಡು ಮಗುವಿಗೆ ಜನ್ಮ ನೀಡಿದ್ದಳು ಎಂಬ ವಿಚಾರ ಪೊಲೀಸ್ ತನಿಖೆ ವೇಳೆ ತಿಳಿದು ಬಂದಿದೆ. ಕೇವಲ 4 ತಿಂಗಳ ಹಿಂದಷ್ಟೇ ಈ ದಂಪತಿ ಉತ್ತರಾಖಂಡ ರಾಜ್ಯದ ರಾಜಧಾನಿ ಡೆಹ್ರಾಡೂನ್‌ಗೆ ಬಂದಿದ್ದರು. ಬಾಡಿಗೆ ಮನೆಯೊಂದರಲ್ಲಿ ವಾಸವಾಗಿದ್ದರು.

ಇದನ್ನೂ ಓದಿ : ನದಿಯಲ್ಲಿ ಬೋಟ್‌ ಮುಳುಗಿ 103 ಮಂದಿ ಸಾವು – ಮದುವೆಯಿಂದ ಹಿಂತಿರುಗುತ್ತಿದ್ದ ವೇಳೆ ಘೋರ ದುರಂತ

ಇವರಿಬ್ಬರೂ ಗಂಡ ಹೆಂಡತಿಯಾಗಿದ್ದು, ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಅದಕ್ಕಿಂತ ಅಚ್ಚರಿಯ ವಿಷಯ ಎಂದರೆ ಕನಿಷ್ಠ 3 ದಿನಗಳ ಹಿಂದೆಯೇ ಗಂಡ ಹೆಂಡತಿ ಇಬ್ಬರೂ ಸಾವನ್ನಪ್ಪಿದ್ದು, ಕೇವಲ 6 ದಿನಗಳ ಹಿಂದಷ್ಟೇ ಹುಟ್ಟಿದ್ದ ನವಜಾತ ಶಿಶು ಮೂರು ದಿನಗಳ ಕಾಲ ಆಹಾರ ನೀರು ಇಲ್ಲದೆ ತಂದೆ – ತಾಯಿಗಳ ಶವದ ಮಧ್ಯದಲ್ಲಿ ಇದ್ದರೂ ಪವಾಡಸದೃಶವಾಗಿ ಬದುಕುಳಿದಿದೆ.

ದಂಪತಿ ವಾಸವಿದ್ದ ಮನೆಯಲ್ಲಿ ಸಹಿಸಲು ಅಸಾಧ್ಯವಾದ ವಾಸನೆ ಹರಡಿತ್ತು. ಇದರಿಂದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಈ ವೇಳೆ ಸ್ಥಳಕ್ಕೆ ಬಂದು ಪೊಲೀಸರು ಪರಿಶೀಲನೆ ನಡೆಸಿದಾಗ ದಂಪತಿ ಸಾವಿನ ವಿಷಯ ಗೊತ್ತಾಗಿದೆ. ಇಬ್ಬರ ದೇಹಗಳು ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿವೆ. ಹಾಗೇ ಶವಗಳ ಪಕ್ಕದಲ್ಲೇ 6 ದಿನಗಳ ಹಸುಗೂಸು ಪತ್ತೆಯಾಗಿದ್ದು, ಕೂಡಲೇ ಪೊಲೀಸರು ಡೂನ್ ಮೆಡಿಕಲ್ ಕಾಲೇಜು ಹಾಗೂ ಆಸ್ಪತ್ರೆಗೆ ದಾಖಲಿಸಿದ್ದಾರೆ. ಶಿಶುವಿನ ಆರೋಗ್ಯ ಪರಿಶೀಲಿಸಿದ ವೈದ್ಯರು, ಮಗು ಆರೋಗ್ಯವಂತವಾಗಿದ್ದು, ಕೇವಲ ನಿರ್ಜಲೀಕರಣಕ್ಕೆ ತುತ್ತಾಗಿದೆ ಎಂದು ತಿಳಿಸಿದ್ದಾರೆ.

ಇನ್ನು ದಂಪತಿ ಆತ್ಮಹತ್ಯೆಗೆ ಶರಣಾಗಿದ್ದೇಕೆ ಎಂದು ಪೊಲೀಸರಿಗೆ ಇನ್ನೂ ತಿಳಿದು ಬಂದಿಲ್ಲ. ಆದರೆ, ಇವರು ಒಂದು ವರ್ಷದ ಹಿಂದಷ್ಟೇ ಮದುವೆಯಾಗಿದ್ದರು ಎಂಬ ಮಾಹಿತಿ ಸಿಕ್ಕಿದೆ. ಮೃತ ವ್ಯಕ್ತಿ ಕ್ರೇನ್ ಆಪರೇಟರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ. ಈತನ ಪತ್ನಿ ಗೃಹಿಣಿಯಾಗಿದ್ದಳು. ಮೃತ ದಂಪತಿಯ ಮಗುವಿನ ಆರೋಗ್ಯದ ಕುರಿತಾಗಿ ಮಾಹಿತಿ ನೀಡಿರುವ ತಜ್ಞ ವೈದ್ಯರು, ಆಸ್ಪತ್ರೆಗೆ ಶಿಶುವನ್ನು ಕರೆತಂದಾಗ ಅದು ನಿರ್ಜಲೀಕರಣದ ಸಮಸ್ಯೆಯಿಂದ ಬಳಲುತ್ತಿತ್ತು. ಕೂಡಲೇ ನಾವು ಮಗುವಿಗೆ ದ್ರವ ಪದಾರ್ಥಗಳನ್ನು ನೀಡಿದೆವು. ಇದೀಗ ಮಗುವನ್ನು ಐಸಿಯುನಲ್ಲಿ ಇರಿಸಿ ನಿಗಾ ವಹಿಸಲಾಗಿದೆ. ಮಗು ಆರೋಗ್ಯವಂತವಾಗಿದೆ. ಬೇರೆ ಯಾವುದೇ ಆರೋಗ್ಯ ಸಮಸ್ಯೆಯೂ ಕಂಡು ಬಂದಿಲ್ಲ ಎಂದು ಮಾಹಿತಿ ನೀಡಿದ್ದಾರೆ.

ಮೂಲಗಳ ಪ್ರಕಾರ ಮೃತ ದಂಪತಿ ಸಾಕಷ್ಟು ಸಾಲ ಮಾಡಿಕೊಂಡಿದ್ದರು. ಇದೇ ಕಾರಣದಿಂದ ಆತ್ಮಹತ್ಯೆಗೆ ಶರಣಾಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಆದರೆ, ಈ ದಂಪತಿಯ ಆತ್ಮಹತ್ಯೆಗೆ ನಿಖರ ಕಾರಣ ಇನ್ನೂ ತಿಳಿದು ಬಂದಿಲ್ಲ. ಹೀಗಾಗಿ, ಪೊಲೀಸರು ಮೃತರ ತವರಾದ ಉತ್ತರ ಪ್ರದೇಶ ರಾಜ್ಯಕ್ಕೆ ತೆರಳಿ ತನಿಖೆ ಮುಂದುವರೆಸಲು ನಿರ್ಧರಿಸಿದ್ದಾರೆ.

 

suddiyaana