‘RSS ನವರು 21 ನೇ ಶತಮಾನದ ಕೌರವರು’ – ರಾಹುಲ್ ಗಾಂಧಿ ವಿರುದ್ಧ ಮತ್ತೊಂದು ಮಾನನಷ್ಟ ಮೊಕದ್ದಮೆ
ನವದೆಹಲಿ: ಮೋದಿ ಉಪನಾಮ ಹೇಳಿಕೆಗಾಗಿ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯಲ್ಲಿ ದೋಷಿ ಎಂದು ಸಾಬೀತಾದ ನಂತರ ರಾಹುಲ್ ಗಾಂಧಿಗೆ ಎರಡು ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ. ನ್ಯಾಯಾಲಯವು ಅವರಿಗೆ ಜಾಮೀನು ಮಂಜೂರು ಮಾಡಿದೆ. ಇದೀಗ ಮತ್ತೆ ರಾಗಾಗೆ ಕಾನೂನು ಸಂಕಷ್ಟ ಎದುರಾಗಿದೆ.
ಜನವರಿಯಲ್ಲಿ ನಡೆದ ಭಾರತ್ ಜೋಡೋ ಯಾತ್ರೆ ವೇಳೆ ರಾಹುಲ್ ಗಾಂಧಿ ಆರ್ ಎಸ್ ಎಸ್ ಅನ್ನು “ 21 ನೇ ಶತಮಾನದ ಕೌರವರು” ಅಂತಾ ಕರೆದಿದ್ದರು. ಅವರು(ಆರ್‌ಎಸ್‌ಎಸ್) ಈಗ ಖಾಕಿ ಹಾಫ್ ಪ್ಯಾಂಟ್ ಧರಿಸಿದ್ದಾರೆ. ಕೈಯಲ್ಲಿ ಲಾಠಿ ಹಿಡಿದು ಶಾಖಾಗಳಲ್ಲಿದ್ದಾರೆ. ಭಾರತದ 2-3 ಬಿಲಿಯನೇರ್‌ಗಳು ಕೌರವರ ಜೊತೆ ನಿಂತಿದ್ದಾರೆ ಎಂದು ಹೇಳಿದ್ದು, ಅವರ ವಿರುದ್ದ ಹರಿದ್ವಾರ ನ್ಯಾಯಾಲಯದಲ್ಲಿ ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ದಾಖಲಾಗಿದೆ.
ಇದನ್ನೂ ಓದಿ: ಸಂಸದ ಸ್ಥಾನದಿಂದ ರಾಹುಲ್ ಗಾಂಧಿ ಅನರ್ಹ – ವಯನಾಡು ಕ್ಷೇತ್ರದ ಉಪಚುನಾವಣೆ ಯಾವಾಗ?
ಆರ್‌ಎಸ್‌ಎಸ್ ಸ್ವಯಂಸೇವಕ ಎಂದು ಹೇಳಿರುವ ಕಮಲ್ ಭಡೋರಿಯಾ ಅವರ ಪರವಾಗಿ ದೂರು ಸಲ್ಲಿಸಿರುವುದಾಗಿ ವಕೀಲ ಅರುಣ್ ಭಡೋರಿಯಾ ಹೇಳಿದ್ದಾರೆ. ನ್ಯಾಯಾಲಯವು ಏಪ್ರಿಲ್ 12 ರಂದು ದೂರನ್ನು ಕೈಗೆತ್ತಿಕೊಳ್ಳಲಿದೆ ಎಂದು ಅವರು ಹೇಳಿದರು.
ನಾವು ಭಾರತೀಯ ದಂಡ ಸಂಹಿತೆಯ (IPC) 499 ಮತ್ತು 500 ಸೆಕ್ಷನ್‌ಗಳ ಅಡಿಯಲ್ಲಿ ದೂರು ದಾಖಲಿಸಿದ್ದೇವೆ. ಎರಡು ನಿಬಂಧನೆಗಳು ಕ್ರಿಮಿನಲ್ ಮಾನನಷ್ಟಕ್ಕೆ ಸಂಬಂಧಿಸಿವೆ ಮತ್ತು ಗರಿಷ್ಠ ಎರಡು ವರ್ಷಗಳ ಜೈಲು ಶಿಕ್ಷೆಯನ್ನು ಸೂಚಿಸುತ್ತವೆ. ಈ ದೂರು ಜನವರಿಯಲ್ಲಿ ಕುರುಕ್ಷೇತ್ರದಲ್ಲಿ ರಾಹುಲ್ ಗಾಂಧಿಯವರ ಹೇಳಿಕೆಗೆ ಸಂಬಂಧಿಸಿದೆ ಅಂತಾ ಅರುಣ್ ಹೇಳಿದ್ದಾರೆ.