ಸೌದಿಯಲ್ಲಿ ಬಸ್ ಅಪಘಾತದಲ್ಲಿ ಮೃತಪಟ್ಟ ಭಾರತೀಯ ಉಮ್ರಾ ಯಾತ್ರಿಕರಿಗೆ ಮೋದಿ ಸಂತಾಪ

ಸೌದಿಯಲ್ಲಿ ಬಸ್ ಅಪಘಾತದಲ್ಲಿ ಮೃತಪಟ್ಟ ಭಾರತೀಯ ಉಮ್ರಾ ಯಾತ್ರಿಕರಿಗೆ ಮೋದಿ ಸಂತಾಪ

ಸೌದಿ ಅರೇಬಿಯಾದ ಮದೀನಾದಲ್ಲಿ ನಡೆದ ಬಸ್ ಅಪಘಾತದಲ್ಲಿ ಮೃತಪಟ್ಟ ಭಾರತೀಯ ಉಮ್ರಾ ಯಾತ್ರಿಕರಿಗೆ ಪ್ರಧಾನಿ ನರೇಂದ್ರ ಮೋದಿ ಸಂತಾಪ ಸೂಚಿಸಿದ್ದಾರೆ. ಸಾಮಾಜಿಕ ಮಾಧ್ಯಮ ಎಕ್ಸ್​ನಲ್ಲಿ ಪೋಸ್ಟ್​ ಹಂಚಿಕೊಂಡಿರುವ ಪ್ರಧಾನಿ, “ಮದೀನಾದಲ್ಲಿ ನಡೆದ ಅಪಘಾತದಲ್ಲಿ ಭಾರತೀಯರು ಮೃತಪಟ್ಟಿರುವ ಸುದ್ದಿ ತಿಳಿದು ದುಃಖಿತನಾಗಿದ್ದೇನೆ. ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡ ಕುಟುಂಬಸ್ಥರಿಗೆ ನನ್ನ ಸಹಾನುಭೂತಿ ಇದೆ. ಗಾಯಗೊಂಡವರೆಲ್ಲರೂ ಶೀಘ್ರವಾಗಿ ಗುಣಮುಖರಾಗಲಿ ಎಂದು ನಾನು ಪ್ರಾರ್ಥಿಸುತ್ತೇನೆ” ಎಂದು ತಿಳಿಸಿದ್ದಾರೆ.

ರಿಯಾದ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಮತ್ತು ಜೆಡ್ಡಾದ ಕಾನ್ಸುಲೇಟ್ ಎಲ್ಲ ಸಹಾಯ ನೀಡುತ್ತಿದೆ. ಭಾರತೀಯ ಅಧಿಕಾರಿಗಳು ಸೌದಿ ಅರೇಬಿಯಾ ಅಧಿಕಾರಿಗಳೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿದ್ದಾರೆ ಎಂದು ಪ್ರಧಾನಿ ತಿಳಿಸಿದ್ದಾರೆ. ಮದೀನಾ-ಮೆಕ್ಕಾ ಹೆದ್ದಾರಿಯಲ್ಲಿ ನಡೆದ ಅಪಘಾತದಲ್ಲಿ ಭಾರತೀಯ ಯಾತ್ರಿಕರು ಪ್ರಾಣ ಕಳೆದುಕೊಂಡಿರುವ ಸುದ್ದಿ ಕೇಳಿ ಆಘಾತ ಮತ್ತು ತೀವ್ರ ದುಃಖ ಉಂಟಾಯಿತು. ದುಃಖಿತ ಕುಟುಂಬಗಳೊಂದಿಗೆ ನನ್ನ ಸಹಾನುಭೂತಿ ಇದೆ” ಎಂದು ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಎಕ್ಸ್ ಪೋಸ್ಟ್​ ಮಾಡಿದ್ದಾರೆ.

ಇದನ್ನೂ ಓದಿ: ಮಹೇಶ್ ಶೆಟ್ಟಿ ತಿಮರೋಡಿ ಗಡಿಪಾರು ಆದೇಶ ರದ್ದು – ಹೊಸದಾಗಿ ಪ್ರಕರಣ ಪರಿಗಣಿಸಲು ಹೈಕೋರ್ಟ್ ಆದೇಶ

ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ್, “ಸೌದಿ ಅರೇಬಿಯಾದ ಮದೀನಾದಲ್ಲಿ ನಡೆದ ದುರಂತದಿಂದ ತಮಗೆ ತೀವ್ರ ಆಘಾತವಾಗಿದೆ. ರಿಯಾದ್‌ನಲ್ಲಿರುವ ನಮ್ಮ ರಾಯಭಾರ ಕಚೇರಿ ಮತ್ತು ಜೆಡ್ಡಾದ ಕಾನ್ಸುಲೇಟ್ ಅಪಘಾತದಲ್ಲಿ ಹಾನಿಗೊಳಗಾದ ಭಾರತೀಯ ಪ್ರಜೆಗಳಿಗೆ ಮತ್ತು ಕುಟುಂಬಸ್ಥರಿಗೆ ಸಂಪೂರ್ಣ ಬೆಂಬಲವನ್ನು ನೀಡುತ್ತಿವೆ. ಮೃತರಿಗೆ ಸಂತಾಪ ಸೂಚಿಸುತ್ತೇನೆ” ಎಂದು ಎಕ್ಸ್​ ಪೋಸ್ಟ್​​​ನಲ್ಲಿ ತಿಳಿಸಿದ್ದಾರೆ.

40ಕ್ಕೂ ಹೆಚ್ಚು ಭಾರತೀಯರು ಸಾ*ವು 

 ಭಾರತೀಯ ಉಮ್ರಾ ಯಾತ್ರಿಕರನ್ನು ಕರೆದೊಯ್ಯುತ್ತಿದ್ದ ಪ್ರಯಾಣಿಕ ಬಸ್ ಮದೀನಾ ಬಳಿ ಡೀಸೆಲ್ ಟ್ಯಾಂಕರ್‌ಗೆ ಡಿಕ್ಕಿಯಾಗಿ 40ಕ್ಕೂ ಅಧಿಕ ಭಾರತೀಯರು ಸಾವನ್ನಪ್ಪಿದ್ದಾರೆ ಎಂದು ಶಂಕಿಸಲಾಗಿದೆ. ಮೃತರಲ್ಲಿ ಹೆಚ್ಚಿನವರು ಹೈದರಾಬಾದ್ ನಿವಾಸಿಗಳು ಎಂದು ವರದಿಯಾಗಿದೆ. ಈ ಪೈಕಿ 16 ಮಂದಿ ಇಲ್ಲಿನ ಮಲ್ಲೇಪಲ್ಲಿ ನಿವಾಸಿಗಳೆಂಬ ಮಾಹಿತಿ ದೊರೆತಿದೆ. ಭಾನುವಾರ ರಾತ್ರಿ 11 ಗಂಟೆಯ ಸುಮಾರಿಗೆ ಬಸ್ ಮಕ್ಕಾದಿಂದ ಮದೀನಾಗೆ ತೆರಳುತ್ತಿದ್ದಾಗ ಅಪಘಾತ ಸಂಭವಿಸಿದೆ.

Kishor KV