ರಣಜಿಯಲ್ಲಿ ದೀಪಕ್ ಹೂಡಾ ರನ್ ಮಳೆ – ರಾಜಸ್ಥಾನ್ ಪರ ಭರ್ಜರಿ ದ್ವಿಶತಕ

ರಣಜಿ ಟೂರ್ನಿಯಲ್ಲಿ ಈ ಬಾರಿ ರನ್ ಮಳೆ ಸುರಿಯುತ್ತಿದೆ. ಈ ಬಾರಿ ರಾಜಸ್ಥಾನ್ ಪರ ಹೊಸ ಇನಿಂಗ್ಸ್ ಆರಂಭಿಸಿರುವ ದೀಪಕ್ ಹೂಡಾ ಭರ್ಜರಿ ದ್ವಿಶತಕ ಸಿಡಿಸಿದ್ದಾರೆ. ಈ ಡಬಲ್ ಸೆಂಚುರಿಯೊಂದಿಗೆ ಮುಂಬೈ ವಿರುದ್ಧ ರಾಜಸ್ಥಾನ್ ತಂಡವು ಬೃಹತ್ ರನ್ಗಳ ಮುನ್ನಡೆ ಪಡೆದುಕೊಂಡಿದೆ.
ಇದನ್ನೂ ಓದಿ: ಸೋತ ಮೇಲೆ BCCIಗೆ ಬುದ್ಧಿ ಬಂತಾ? – ಬೆಂಚ್ ಕಾದವರಿಂದ್ಲೇ ಗೆದ್ದ ಭಾರತ
ಜೈಪುರದ ಸವಾಯಿ ಮಾನ್ಸಿಂಗ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ರಣಜಿ ಟೂರ್ನಿಯ ಗ್ರೂಪ್-ಡಿ ಪಂದ್ಯದಲ್ಲಿ ದೀಪಕ್ ಹೂಡಾ ಭರ್ಜರಿ ದ್ವಿಶತಕ ಬಾರಿಸಿದ್ದಾರೆ. ಈ ಮೂಲಕ ದೀಪಕ್ ಹೂಡಾ ಕ್ರಿಕೆಟ್ ಲೋಕ ತನ್ನತ್ತ ತಿರುಗಿ ನೋಡುವಂತೆ ಮಾಡಿದ್ದಾರೆ. ದೀಪಕ್ ಹೂಡಾ, 335 ಎಸೆತಗಳಲ್ಲಿ 22 ಫೋರ್ ಹಾಗೂ 2 ಸಿಕ್ಸರ್ಗಳೊಂದಿಗೆ 248 ರನ್ ಬಾರಿಸಿ ಅಬ್ಬರಿಸಿದ್ದಾರೆ.
ಮುಂಬೈ ವಿರುದ್ಧದ ಈ ಪಂದ್ಯದಲ್ಲಿ ಟಾಸ್ ಗೆದ್ದ ರಾಜಸ್ಥಾನ್ ತಂಡದ ನಾಯಕ ಮಹಿಪಾಲ್ ಲೋಮ್ರರ್ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ಮುಂಬೈ ತಂಡವು ಮೊದಲ ಇನಿಂಗ್ಸ್ನಲ್ಲಿ 254 ರನ್ಗಳಿಸಿ ಆಲೌಟ್ ಆಯಿತು. ಇದಕ್ಕುತ್ತರವಾಗಿ ಮೊದಲ ಇನಿಂಗ್ಸ್ ಆರಂಭಿಸಿದ ರಾಜಸ್ಥಾನ್ ತಂಡಕ್ಕೆ ಆರಂಭಿಕ ದಾಂಡಿಗ ಸಚಿನ್ ಯಾದವ್ (92) ಉತ್ತಮ ಆರಂಭ ಒದಗಿಸಿದ್ದರು. ಇನ್ನು ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಮಹಿಪಾಲ್ ಲೋಮ್ರರ್ 41 ರನ್ಗಳ ಕೊಡುಗೆ ನೀಡಿದರು. ಆ ಬಳಿಕ ಕಣಕ್ಕಿಳಿದ ದೀಪಕ್ ಹೂಡಾ ಆಕರ್ಷಕ ಬ್ಯಾಟಿಂಗ್ನೊಂದಿಗೆ ಗಮನ ಸೆಳೆದರು. ಆರಂಭದಲ್ಲಿ ರಕ್ಷಣಾತ್ಮಕ ಆಟಕ್ಕೆ ಒತ್ತು ನೀಡಿದ್ದ ಹೂಡಾ ಕ್ರೀಸ್ನಲ್ಲಿ ನೆಲೆಯೂರುತ್ತಿದ್ದಂತೆ ಬಿರುಸಿನ ಬ್ಯಾಟಿಂಗ್ಗೆ ಮುಂದಾದರು. ಈ ಮೂಲಕ ಶತಕ ಪೂರೈಸಿದರು. ಸೆಂಚುರಿ ಬಳಿಕ ಕೂಡ ಜವಾಬ್ದಾರಿಯುತ ಬ್ಯಾಟಿಂಗ್ ಮುಂದುವರೆಸಿದ ದೀಪಕ್ ಹೂಡಾ 335 ಎಸೆತಗಳಲ್ಲಿ 22 ಫೋರ್ ಹಾಗೂ 2 ಸಿಕ್ಸರ್ಗಳೊಂದಿಗೆ 248 ರನ್ ಬಾರಿಸಿದರು. ದೀಪಕ್ ಹೂಡಾ ಅವರ ಈ ದ್ವಿಶತಕದ ನೆರವಿನೊಂದಿಗೆ ರಾಜಸ್ಥಾನ್ ತಂಡವು 6 ವಿಕೆಟ್ ಕಳೆದುಕೊಂಡು 617 ರನ್ಗಳಿಸಿ ಡಿಕ್ಲೇರ್ ಘೋಷಿಸಿತು.
ಮೊದಲ ಇನಿಂಗ್ಸ್ನಲ್ಲಿನ 363 ರನ್ಗಳ ಹಿನ್ನಡೆಯೊಂದಿಗೆ ದ್ವಿತೀಯ ಇನಿಂಗ್ಸ್ ಆರಂಭಿಸಿರುವ ಮುಂಬೈ ತಂಡಕ್ಕೆ ಯಶಸ್ವಿ ಜೈಸ್ವಾಲ್ ಹಾಗೂ ಮುಶೀರ್ ಖಾನ್ ಭರ್ಜರಿ ಆರಂಭ ಒದಗಿಸಿದ್ದಾರೆ. 56 ಎಸೆತಗಳನ್ನು ಎದುರಿಸಿರುವ ಯಶಸ್ವಿ ಜೈಸ್ವಾಲ್ 8 ಫೋರ್ಗಳೊಂದಿಗೆ 56 ರನ್ ಬಾರಿಸಿದರೆ, ಮುಶೀರ್ 32 ರನ್ಗಳಿಸಿ ಉತ್ತಮ ಸಾಥ್ ನೀಡಿದ್ದಾರೆ. ಈ ಮೂಲಕ ಮುಂಬೈ ತಂಡವು 3ನೇ ದಿನದಾಟದ ಅಂತ್ಯಕ್ಕೆ ವಿಕೆಟ್ ನಷ್ಟವಿಲ್ಲದೆ 89 ರನ್ ಕಲೆಹಾಕಿದೆ. ಸದ್ಯ ಮುಂಬೈ ತಂಡವು 274 ರನ್ಗಳ ಹಿನ್ನಡೆ ಹೊಂದಿದ್ದು, ನಾಲ್ಕನೇ ದಿನದಾಟದಲ್ಲಿ ಆಲೌಟ್ ಆಗದೇ ಪಂದ್ಯವನ್ನು ಡ್ರಾನತ್ತ ಕೊಂಡೊಯ್ಯುವ ಇರಾದೆಯಲ್ಲಿದ್ದಾರೆ. ಅತ್ತ ಕೊನೆಯ ದಿನದಾಟದೊಳಗೆ ಮುಂಬೈ ತಂಡವನ್ನು ಆಲೌಟ್ ಮಾಡಿದರೆ ಮಾತ್ರ ರಾಜಸ್ಥಾನ್ ತಂಡ ಗೆಲುವು ಸಾಧಿಸಬಹುದು.

ನೋಡಿರಿ

