ಚೀತಾಗಳಿಗೆ ಕಂಟಕವಾಯ್ತು ರೇಡಿಯೋ ಕಾಲರ್‌! – ಮತ್ತೊಂದು ಚೀತಾ ಕತ್ತಿನಲ್ಲಿ ತೀವ್ರ ಗಾಯಗಳು ಪತ್ತೆ

ಚೀತಾಗಳಿಗೆ ಕಂಟಕವಾಯ್ತು ರೇಡಿಯೋ ಕಾಲರ್‌! – ಮತ್ತೊಂದು ಚೀತಾ ಕತ್ತಿನಲ್ಲಿ ತೀವ್ರ ಗಾಯಗಳು ಪತ್ತೆ

ಭೋಪಾಲ್: ಮಧ್ಯಪ್ರದೇಶದ ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ ವಾಸಿಸುವ 2 ಚೀತಾಗಳ ಕುತ್ತಿಗೆಯಲ್ಲಿ ಆಳವಾದ ಗಾಯಗಳು ಪತ್ತೆಯಾಗಿತ್ತು. ಇದೀಗ ಮತ್ತೊಂದು ಚೀತಾದ ಕುತ್ತಿಗೆಯಲ್ಲಿ ಗಂಭೀರವಾದ ಗಾಯ ಪತ್ತೆಯಾಗಿದೆ. ಚೀತಾಗಳ ಕುತ್ತಿಗೆಗೆ ಅಳವಡಿಸಲಾಗಿದ್ದ ರೇಡಿಯೋ ಕಾಲರ್‌ನಿಂದಲೇ ಚೀತಾಗಳಿಗೆ ಗಾಯಗಳಾಗಿವೆ ಎಂದು ವೈದ್ಯಕೀಯ ಪರೀಕ್ಷೆಯಲ್ಲಿ ತಿಳಿದುಬಂದಿದೆ ಎನ್ನಲಾಗುತ್ತಿದೆ.

ಚೀತಾಗಳನ್ನು ಕಾಡಿಗೆ ಬಿಡು ಸಂದರ್ಭದಲ್ಲಿ ಅವುಗಳ ಕುತ್ತಿಗೆಗೆ ರೇಡಿಯೋ ಕಾಲರ್‌ ಅಳವಡಿಸಲಾಗಿತ್ತು. ಈ ರೇಡಿಯೋ ಕಾಲರ್‌ನ ಸುತ್ತಲೂ ತೀವ್ರವಾದ ಗಾಯಗಳು ಕಂಡುಬಂದಿತ್ತು. ಇದೀಗ ರೇಡಿಯೋ ಕಾಲರ್‌ನಿಂದಾಗಿ ಮತ್ತೊಂದು ಚೀತಾಗೆ ತೀವ್ರ ಗಾಯಗಳಾಗಿರುವುದು ವೈದ್ಯಕೀಯ ಪರೀಕ್ಷೆಯಲ್ಲಿ ತಿಳಿದುಬಂದಿದ್ದು, ಇದು ಅಧಿಕಾರಿಗಳ ತೀವ್ರ ಕಳವಳಕ್ಕೆ ಕಾರಣವಾಗಿದೆ.

ಇದನ್ನೂ ಓದಿ: ಮೂರೇ ದಿನದ ಅಂತರದಲ್ಲಿ ಮತ್ತೊಂದು ಚೀತಾ ಸಾವು.. ಮೃತಪಟ್ಟ ಚೀತಾಗಳ ಸಂಖ್ಯೆ 8ಕ್ಕೆ ಏರಿಕೆ  

ಇತ್ತೀಚೆಗೆ ತೇಜಸ್ ಹಾಗೂ ಸೂರಜ್ ಎಂಬ ಚೀತಾಗಳ ಸಾವಿನ ಬಳಿಕ ವೈದ್ಯರ ತಂಡ ಪವನ್ ಎಂಬ ಚೀತಾವನ್ನು ಪ್ರಜ್ಞಾಹೀನಗೊಳಿಸಿ, ಅದನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ್ದಾರೆ. ಈ ವೇಳೆ ಅದರ ಕುತ್ತಿಗೆಗೆ ಜೋಡಿಸಲಾಗಿದ್ದ ರೇಡಿಯೋ ಕಾಲರ್‌ನ ಸುತ್ತ ನಂಜು ಹಾಗೂ ತೀವ್ರವಾದ ಗಾಯ ಕಂಡುಬಂದಿದೆ. ತಕ್ಷಣವೇ ಅದರ ರೇಡಿಯೋ ಕಾಲರ್ ಅನ್ನು ತೆಗೆದುಹಾಕಲಾಗಿದ್ದು, ಸೋಂಕನ್ನು ಗುಣಪಡಿಸಲು ಚಿಕಿತ್ಸೆ ಪ್ರಾರಂಭಿಸಿದ್ದಾರೆ.

ಪ್ರಸ್ತುತ ಕುನೋ ರಾಷ್ಟ್ರೀಯ ಉದ್ಯಾನದಲ್ಲಿ 4 ವೈದ್ಯರು ಕಾರ್ಯನಿರ್ವಹಿಸುತ್ತಿದ್ದಾರೆ. ಆದರೂ ಪರಿಸ್ಥಿತಿಯ ತೀವ್ರತೆಯನ್ನು ಗುರುತಿಸಿ ಚಿಕಿತ್ಸೆಯಲ್ಲಿ ಇನ್ನಷ್ಟು ಸಹಾಯ ಮಾಡಲು ಗ್ವಾಲಿಯರ್ ಹಾಗೂ ಭೋಪಾಲ್‌ನಿಂದ ಹೆಚ್ಚುವರಿ ನಾಲ್ವರು ವೈದ್ಯರನ್ನು ಕರೆಸಲಾಗಿದೆ. 8 ವೈದ್ಯರ ತಂಡ ಚೀತಾಗಳನ್ನು ಶಾಂತಗೊಳಿಸಲು ಹಾಗೂ ಅಗತ್ಯ ಔಷಧಿಗಳನ್ನು ನೀಡಲು ಜಂಟಿಯಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸದ್ಯ ರೇಡಿಯೋ ಕಾಲರ್‌ಗಳಿಲ್ಲದಿದ್ದರೂ ಚೀತಾಗಳ ಚಲನವಲನಗಳ ಬಗ್ಗೆ ಗಮನಹರಿಸಲು ಡ್ರೋನ್ ಕ್ಯಾಮೆರಾಗಳ ಬಳಕೆ ಸಹಾಯವಾಗಲಿದೆ. ಭಾರತದಲ್ಲಿ ಚೀತಾಗಳ ಸಂತತಿಯನ್ನು ಮರುಸ್ಥಾಪಿಸುವ ಉದ್ದೇಶದಿಂದ ಕಳೆದ ವರ್ಷ ನಮೀಬಿಯಾ ಹಾಗೂ ದಕ್ಷಿಣ ಆಫ್ರಿಕಾದಿಂದ ಒಟ್ಟು 20 ಚೀತಾಗಳನ್ನು ತರಿಸಲಾಯಿತು. ಆದರೆ ಕಳೆದ 5 ತಿಂಗಳಿನಿಂದ ಅವುಗಳಲ್ಲಿ ಒಟ್ಟು 8 ಚೀತಾಗಳು ಸಾವನ್ನಪ್ಪಿವೆ.

suddiyaana