ಸರ್ಕಾರದಿಂದ ಬೇಡಿಕೆ ಈಡೇರಿಕೆಗೆ ನಿರ್ಧಾರ – ಮುಷ್ಕರಕ್ಕೆ ಒಂದು ದಿನ ಮೊದಲೇ ಸಿಕ್ತು ಜಯ!
ಅತ್ತ ಕೆಪಿಟಿಸಿಎಲ್ ಮತ್ತು ಎಲ್ಲಾ ಎಸ್ಕಾಂಗಳ ನೌಕರರು ಮುಷ್ಕರಕ್ಕೆ ಕರೆ ನೀಡುತ್ತಿದ್ದಂತೆ ಇತ್ತ ರಾಜ್ಯಸರ್ಕಾರ ವೇತನ ಪರಿಷ್ಕರಣೆ ಮಾಡಿದೆ. 2022ರ ಏಪ್ರಿಲ್‌ನಿಂದಲೇ ಅನ್ವಯವಾಗುವಂತೆ, ಈಗಿರುವ ವೇತನದ ಮೇಲೆ ಶೇ 20ರಷ್ಟು ಹೆಚ್ಚಳ ಮಾಡಲು ನಿರ್ಧರಿಸಿದೆ. ವೇತನ ಹೆಚ್ಚಿಸುವಂತೆ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ (KPTCL) ನೌಕರರ ಸಂಘ ನೀಡಿದ ಗಡುವು ಇಂದಿಗೆ ಅಂತ್ಯವಾಗಿದೆ. ಈಗ ರಾಜ್ಯ ಸರ್ಕಾರ ಕೆಪಿಟಿಸಿಎಲ್ ಮತ್ತು ಎಲ್ಲಾ ಎಸ್ಕಾಂಗಳ (ESCOM) ನೌಕರರ ವೇತನ ಪರಿಷ್ಕರಣೆ ಮಾಡಿದೆ.
ಇದನ್ನೂ ಓದಿ: ಮಾರ್ಚ್ 16ರಿಂದ ರಾಜ್ಯದ ಎಲ್ಲಾ ವಿದ್ಯುತ್ ಉತ್ಪಾದನಾ ಘಟಕಗಳಲ್ಲಿ ಕೆಲಸ ಸ್ಥಗಿತ – ಬೇಡಿಕೆ ಈಡೇರಿಸದಿದ್ದರೆ ಮುಷ್ಕರ ನಿಶ್ಚಿತ
ಸರ್ಕಾರ ತಮ್ಮ ಬೇಡಿಕೆ ಈಡೇರಿಸುತ್ತಿದ್ದಂತೆ ಕೆಪಿಟಿಸಿಎಲ್ ನೌಕರರು ಮಾರ್ಚ್ 16ಕ್ಕೆ ಕರೆ ನೀಡಿದ ಮುಷ್ಕರನ್ನು ವಾಪಸ್ ಪಡೆದಿದ್ದಾರೆ. ವೇತನ ಹೆಚ್ಚಿಸುವಂತೆ KPTCL ನೌಕರರು ರಾಜ್ಯ ಸರ್ಕಾರಕ್ಕೆ ನೀಡಿದ 14 ದಿನಗಳ ಗಡುವು ನೀಡಿತ್ತು. ಅಲ್ಲದೆ ನಾಳೆ (ಮಾ.16) ರಿಂದ ರಾಜ್ಯಾದ್ಯಂತ ಅನಿರ್ದಿಷ್ಟಾವಧಿ ಪ್ರತಿಭಟನೆ ಮಾಡಲು ಕೆಪಿಟಿಸಿಎಲ್ ನೌಕರರ ಸಂಘ ಕರೆ ಕೊಟ್ಟಿತ್ತು. ಎಲ್ಲಾ ಎಸ್ಕಾಂಗಳು ನೌಕರರು ಕರ್ತವ್ಯಕ್ಕೆ ಗೈರಾಗಿ ಮುಷ್ಕರ ನಡೆಸಲು ನಿರ್ಧರಿಸಿದ್ದರು. ಮುಷ್ಕರಕ್ಕೆ ಕರೆ ನೀಡಿದ ಬೆನ್ನಲ್ಲೇ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಮಮಿತ (KPTCL) ಮತ್ತು ಎಲ್ಲಾ ಎಸ್ಕಾಂಗಳ ನೌಕರರ ವೇತನ ಹೆಚ್ಚಳ ಮಾಡಿ ಇಂಧನ ಸಚಿವ ಸುನಿಲ್ ಕುಮಾರ್ (Sunil Kumar) ಆದೇಶ ಪ್ರಕಟಿಸಿದ್ದಾರೆ.
ಒಂದು ದಿನ ಕೆಪಿಟಿಸಿಎಲ್ ನೌಕರರು ಕೆಲಸ ನಿಲ್ಲಿಸಿದರೆ 1 ಸಾವಿರ ಕೋಟಿ ರೂ. ನಷ್ಟ ಸಂಭವಿಸುವ ಸಾಧ್ಯತೆಯಿದೆ. ಒಂದು ದಿನ ವಿದ್ಯುತ್ ಉತ್ಪಾದನೆ ನಿಂತರೆ ಒಂದು ವಾರ ರಾಜ್ಯಕ್ಕೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗುತ್ತದೆ. ಈ ಅವ್ಯವಸ್ಥೆ ಸರಿಪಡಿಸಲು 10 ರಿಂದ 15 ದಿನಗಳು ಬೇಕಾಗುತ್ತದೆ.