ಕೇಂದ್ರದ ನೋಟು ಅಮಾನ್ಯೀಕರಣ ನಿರ್ಧಾರವನ್ನು ಎತ್ತಿ ಹಿಡಿದ ಸುಪ್ರೀಂ ಕೋರ್ಟ್‌

ಕೇಂದ್ರದ ನೋಟು ಅಮಾನ್ಯೀಕರಣ ನಿರ್ಧಾರವನ್ನು ಎತ್ತಿ ಹಿಡಿದ ಸುಪ್ರೀಂ ಕೋರ್ಟ್‌

ನವದೆಹಲಿ: 500 ಮತ್ತು 1000 ರೂಪಾಯಿ ಮುಖಬೆಲೆ ನೋಟುಗಳನ್ನು ಅಮಾನ್ಯಗೊಳಿಸಿರುವ ಕೇಂದ್ರ ಸರ್ಕಾರದ ನಿರ್ಧಾರವನ್ನು ಸುಪ್ರೀಂ ಕೋರ್ಟ್‌ ಎತ್ತಿ ಹಿಡಿದಿದೆ. ನೋಟು ಅಮಾನ್ಯೀಕರಣ ನಿರ್ಧಾರ ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಅರ್ಜಿಗಳನ್ನು ಸುಪ್ರೀಂ ಕೋರ್ಟ್ ಸೋಮವಾರ ವಜಾಗೊಳಿಸಿದೆ.  ಕೇಂದ್ರದ ನೋಟು ಅಮಾನ್ಯೀಕರಣ ನೀತಿಯನ್ನು ದೃಢಪಡಿಸಿದ ಸುಪ್ರೀಂ ಕೋರ್ಟ್, ನಿರ್ಣಯ ಪ್ರಕ್ರಿಯೆಯಲ್ಲಿ ಯಾವುದೇ ದೋಷವಿಲ್ಲ ಎಂದು ಹೇಳಿದೆ.

ಇದನ್ನೂ ಓದಿ:  ಚೀನಾ ಸೇರಿದಂತೆ ಆರು ದೇಶಗಳಿಂದ ಬರುವ ಪ್ರಯಾಣಿಕರಿಗೆ ಕೋವಿಡ್ ಟೆಸ್ಟ್ ಕಡ್ಡಾಯ

ಪ್ರಧಾನ ಮಂತ್ರಿ ನರೇಂದ್ರ ಮೋದಿ ಸರ್ಕಾರ 2016 ರ ನವೆಂಬರ್‌ 8ರಂದು ರಾತ್ರಿ 8 ಗಂಟೆಗೆ ದೇಶವನ್ನುದ್ದೇಶಿ ತುರ್ತು ಭಾಷಣ ಮಾಡಿ, 500 ಮತ್ತು 1000 ರೂಪಾಯಿ ಮುಖಬೆಲೆಯ ನೋಟುಗಳನ್ನು ಅಮಾನ್ಯಗೊಳಿಸಿದ್ದರು. ಸರ್ಕಾರದ ನಿರ್ಧಾರವನ್ನು ಎತ್ತಿಹಿಡಿದ ಸುಪ್ರೀಂ ಕೋರ್ಟ್ ಈ ನಿರ್ಧಾರ ತಪ್ಪು ಎಂದು ಹೇಳಲು ಸಾಧ್ಯವಿಲ್ಲ ಎಂದಿದೆ. ಚಲಾವಣೆಯಲ್ಲಿದ್ದ ದೊಡ್ಡ ಮುಖಬೆಲೆಯ ನೋಟುಗಳನ್ನು ಅಮಾನ್ಯೀಕರಣ ಮಾಡುವ ಸರ್ಕಾರದ ನಿರ್ಧಾರವನ್ನು ತಳ್ಳಿಹಾಕಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಅಲ್ಲದೆ ನೋಟುಗಳ ವಿನಿಮಯಕ್ಕೆ ನೀಡಿದ 52 ದಿನಗಳ ಅವಧಿಯು ಅಸಮಂಜಸವಲ್ಲ ಎಂದಿರುವ ಸುಪ್ರೀಂಕೋರ್ಟ್‌, ಭಾರತೀಯ ರಿಸರ್ವ್ ಬ್ಯಾಂಕ್ ನೊಂದಿಗೆ ಸಮಾಲೋಚಿಸಿದ ನಂತರ ಕೇಂದ್ರ ಸರ್ಕಾರ ಕ್ರಮ ತೆಗೆದುಕೊಂಡಿತ್ತು ಮತ್ತು ಇದಕ್ಕೆ ಸಂಬಂಧಿಸಿದಂತೆ ಆರು ತಿಂಗಳ ಕಾಲ  ಕೇಂದ್ರ ಸರ್ಕಾರ ಮತ್ತು ಆರ್‌ಬಿಐ ನಡುವೆ ಸಮಾಲೋಚನೆ ನಡೆದಿದೆ ಎಂದು ಐವರು ಸದಸ್ಯರ ಸಾಂವಿಧಾನಿಕ ಪೀಠದ ನಾಲ್ವರು ನ್ಯಾಯಾಧೀಶರು ಹೇಳಿದರು. ನ್ಯಾಯಮೂರ್ತಿ ಬಿ.ವಿ.ನಾಗರತ್ನ ಅವರು ಭಿನ್ನಾಭಿಪ್ರಾಯದ ತೀರ್ಪು ನೀಡಿ, ನೋಟು ರದ್ದತಿಯನ್ನು ಸಂಸತ್ತಿನ ಕಾಯಿದೆಯ ಮೂಲಕ ಕಾರ್ಯಗತಗೊಳಿಸಬಹುದಿತ್ತು, ಇದು ಕೇವಲ ಸರ್ಕಾರ ಘೋಷಣೆಯ ಮೂಲಕ ಮಾಡಬಹುದಾದ ನಿರ್ಧಾರ ಅಲ್ಲ ಎಂದಿದ್ದಾರೆ.

ಸುಮಾರು 58 ಅರ್ಜಿಗಳು 1,000 ಮತ್ತು 500 ರೂ. ನೋಟುಗಳನ್ನು ನಿಷೇಧಿಸುವ ನವೆಂಬರ್ 2016 ರ ಕೇಂದ್ರದ ನಿರ್ಧಾರವನ್ನು ಪ್ರಶ್ನಿಸಿದ್ದವು. ದೇಶದ ಮಾಜಿ ಹಣಕಾಸು ಸಚಿವ ಪಿ.ಚಿದಂಬರಂ ಸೇರಿದಂತೆ ಹೆಸರಾಂತ ವಕೀಲರು ಈ ಕೇಸ್‌ನಲ್ಲಿ ಕೇಂದ್ರ ಸರ್ಕಾರದ ನಿರ್ಧಾರವನ್ನು ಪ್ರಶ್ನಿಸಿ, ವಾದ ಮಂಡಿಸಿದ್ದರು. ಸುಪ್ರೀಂ ಕೋರ್ಟ್‌, ಕೇಂದ್ರ ಸರ್ಕಾರದಿಂದ ನೋಟು ಅಮಾನ್ಯೀಕರಣ ಪ್ರಕ್ರಿಯೆಗೆ ಸಂಬಂಧಿಸಿದ ದಾಖಲೆಗಳನ್ನು ತರಿಸಿ, ಪರಿಶೀಲನೆ ನಡೆಸಿದ ನಂತರ ಈ ಮಹತ್ವದ ತೀರ್ಪು ನೀಡಿದೆ.

suddiyaana