ರಣಭೀಕರ ಮಳೆಗೆ ಕಂಗೆಟ್ಟ ಹಿಮಾಚಲ ಪ್ರದೇಶ – ಸಾವಿನ ಸಂಖ್ಯೆ 74ಕ್ಕೇರಿಕೆ, 10 ಸಾವಿರ ಕೋಟಿ ರೂಪಾಯಿ ನಷ್ಟ

ರಣಭೀಕರ ಮಳೆಗೆ ಕಂಗೆಟ್ಟ ಹಿಮಾಚಲ ಪ್ರದೇಶ – ಸಾವಿನ ಸಂಖ್ಯೆ 74ಕ್ಕೇರಿಕೆ, 10 ಸಾವಿರ ಕೋಟಿ ರೂಪಾಯಿ ನಷ್ಟ

ಹಿಮಾಚಲ ಪ್ರದೇಶ ರಣಭೀಕರ ಮಳೆಗೆ ನಲುಗಿ ಹೋಗಿದೆ. ಸಾವಿನ ಸಂಖ್ಯೆ ದಿನದಿಂದ ದಿನಕ್ಕೆ ಏರುತ್ತಿರುವ ಆತಂಕ ಒಂದು ಕಡೆಯಾದರೆ, ಮತ್ತೊಂದು ಕಡೆ ವಾಸಿಸಲು ಸೂರಿಲ್ಲದೆ ಸಂತ್ರಸ್ತರ ಕಣ್ಣೀರಿಗೆ ಕೊನೆಯೇ ಇಲ್ಲದಂತಾಗಿದೆ. ತಮ್ಮವರನ್ನು ಕಳೆದುಕೊಂಡಿರುವ ನೋವು. ಇರಲು ಮನೆಯಿಲ್ಲದ ನೋವು, ಮುಂದೇನು ಎಂದು ದಾರಿಕಾಣದೆ ಜನ ಕಂಗಾಲಾಗಿದ್ದಾರೆ. ಹಿಮಾಚಲ ಪ್ರದೇಶದಲ್ಲಿ ಸುರಿಯುತ್ತಿರುವ ರಣಭೀಕರ ಮಳೆಯಿಂದಾಗಿ ಸಾವಿನ ಸಂಖ್ಯೆ 74ಕ್ಕೆ ಏರಿಕೆಯಾಗಿದ್ದು, ಸುಮಾರು 10 ಸಾವಿರ ಕೋಟಿ ನಷ್ಟವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ: ಹಿಮಾಚಲ ಪ್ರದೇಶದಲ್ಲಿ ಮಳೆಯ ರೌದ್ರ ನರ್ತನಕ್ಕೆ 71 ಬಲಿ – 7.5 ಸಾವಿರ ಕೋಟಿ ರೂ. ನಷ್ಟ!

ಸಮ್ಮರ್ ಹಿಲ್‌ನಲ್ಲಿರುವ ಶಿವ ದೇವಾಲಯದಲ್ಲಿ ಭೂಕುಸಿತ ಹಾಗೂ ಶಿಮ್ಲಾದಲ್ಲಿ ಸಂಭವಿಸಿದ ಮೂರು ಭೂಕುಸಿತಗಳಲ್ಲಿ 21 ಮಂದಿ ಸಾವನ್ನಪ್ಪಿದ್ದಾರೆ. ಜೂನ್ 24 ರಂದು ಆರಂಭವಾದ ಮುಂಗಾರು ಮಳೆಯಿಂದಾಗಿ ರಾಜ್ಯದಲ್ಲಿ ಒಟ್ಟು 217 ಜನರು ಮಳೆ ಸಂಬಂಧಿತ ಘಟನೆಗಳಲ್ಲಿ ಸಾವನ್ನಪ್ಪಿದ್ದಾರೆ. ಮುಂಗಾರು ಆರಂಭವಾದ 55 ದಿನಗಳಲ್ಲಿ ರಾಜ್ಯದಲ್ಲಿ 113 ಕಡೆ ಭೂಕುಸಿತ ಉಂಟಾಗಿದ್ದು ಲೋಕೋಪಯೋಗಿ ಇಲಾಖೆಗೆ 2,491 ಕೋಟಿ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ 1,000 ಕೋಟಿ ನಷ್ಟವಾಗಿದೆ. ಅಲ್ಲದೇ ನಿರಂತರ ಮಳೆಯಿಂದ ರಾಜ್ಯದಲ್ಲಿ ತೀವ್ರ ಹಾನಿಯುಂಟಾಗಿದ್ದು, ಒಟ್ಟು ರಾಜ್ಯಾದ್ಯಂತ 10 ಸಾವಿರ ಕೋಟಿಯಷ್ಟು ಸಂಪತ್ತು ಹಾನಿಯಾಗಿದೆ ಎಂದು ತಿಳಿದುಬಂದಿದೆ. ಹಿಮಾಚಲ ಪ್ರದೇಶದಲ್ಲಿ ಇನ್ನೂ ಮೂರು ದಿನ ಭಾರೀ ಮಳೆಯಾಗಲಿದೆ. ಶಿಮ್ಲಾ, ಸೋಲನ್, ಮಂಡಿ, ಚಂಬಾ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮಳೆಯಾಗಲಿದೆ. ಕೆಲವು ಸ್ಥಳಗಳಲ್ಲಿ ಗುಡುಗು ಸಹಿತ ಸಾಧಾರಣ ಮಳೆಯಾಗುವ ಸಾಧ್ಯತೆಗಳಿವೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ರಣಭೀಕರ ಮಳೆ ರಾಜ್ಯದ ಆರ್ಥಿಕತೆಯ ಮೇಲೆ ಭಾರೀ ಪರಿಣಾಮ ಬೀರಿದೆ. ಮಳೆಯಿಂದಾಗಿ ಪ್ರವಾಸೋದ್ಯಮ ಹಾಗೂ ಸೇಬು ವ್ಯಾಪಾರದ ಮೇಲೂ ಪರಿಣಾಮ ಬೀರಲಿದೆ. ಶುಕ್ರವಾರ ಪ್ರವಾಹ ಪೀಡಿತ ಪ್ರದೇಶಗಳಿಗೆ ಹಿಮಾಚಲ ಪ್ರದೇಶ ಸಿಎಂ ಸುಖ್ವೀರ್ ಸಿಂಗ್ ಸುಕು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

suddiyaana