“ನನ್ನ ಗಂಡನನ್ನು ಎಂಎಲ್ಎ ಮಾಡಮ್ಮ” – ದೇವರಿಗೆ ಮಹಿಳೆ ಡಿಮ್ಯಾಂಡ್!
ಅನೇಕರು ದೇವಾಲಯಕ್ಕೆ ಭೇಟಿ ನೀಡಿ ದೇವರ ಮುಂದೆ ತಮ್ಮ ಕಷ್ಟದ ದಿನಗಳು ಕೊನೆಗೊಳ್ಳಲಿ ಅಂತ ಪ್ರಾರ್ಥಿಸಿಕೊಳ್ಳುತ್ತಾರೆ. ಇನ್ನೂ ಕೆಲವರು ತಮ್ಮ ಬೇಡಿಕೆ ಈಡೇರಿಸಿಕೊಳ್ಳಲು ಹರಕೆಗಳನ್ನು ಹೊರುತ್ತಾರೆ. ಆದರೆ ಇತ್ತೀಚಿನ ದಿನಗಳಲ್ಲಿ ಭಕ್ತರು ತಮ್ಮ ಡಿಮ್ಯಾಂಡ್ ಗಳನ್ನು ಪತ್ರದ ಮೂಲಕ ದೇವರಿಗೆ ತಲುಪಿಸುತ್ತಾರೆ. ಕೆಲ ದಿನಗಳ ಹಿಂದೆ ಯುವತಿಯೊಬ್ಬಳು ‘ದೇವರೇ… ಮೂರ್ತಿಯೇ ನನ್ನನ್ನು ಮದುವೆಯಾಗಲಿ’ ಅಂತ ಪತ್ರ ಬರೆದಿದ್ದಳು. ಇದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಇದರ ಬೆನ್ನಲ್ಲೇ ಮಹಿಳೆಯೊಬ್ಬರು ತನ್ನ ಗಂಡ ಶಾಸಕ ಆಗಲಿ ಅಂತ ದೇವರಿಗೆ ಪತ್ರ ಬರೆದಿದ್ದಾರೆ.
ಇದನ್ನೂ ಓದಿ: 80 ವರ್ಷಗಳ ಬಳಿಕ ದೇಗುಲಕ್ಕೆ ಕಾಲಿಟ್ಟ ದಲಿತರು – ಅಸಮಾನತೆಗೆ ಕೊನೆಗೂ ಮುಕ್ತಿ
ಹೌದು, ಕೋಲಾರ ಜಿಲ್ಲೆಯ ಮಾಲೂರು ಪಟ್ಟಣದ ಗ್ರಾಮ ದೇವತೆಗೆ ಬಿಜೆಪಿ ಟಿಕೆಟ್ ಆಕಾಂಕ್ಷಿ ಹೂಡಿ ವಿಜಯ್ ಅವರ ಪತ್ನಿ ಶ್ವೇತಾ ದೇವರಿಗೆ ಹರಕೆ ಹೊತ್ತಿದ್ದಾರೆ. ಮಾರಿಕಾಂಬಾ ದೇವಿಗೆ ಭಕ್ತಿಯಿಂದ ಹರಕೆ ಹೊತ್ತರೆ ನೆರವೇರುತ್ತದೆ ಎನ್ನುವ ಪ್ರತೀತಿ ಇದೆ. ಈ ಕಾರಣಕ್ಕಾಗಿ ಶ್ವೇತಾ ಪತ್ರ ಮುಖೇನ ಹರಕೆ ಹೊತ್ತಿದ್ದಾರಂತೆ. ಇವರು ಪತ್ರ ಬರೆಯುತ್ತಿರುವ ಫೋಟೋಗಳು ಈಗ ವೈರಲ್ ಆಗುತ್ತಿದೆ.
ಶ್ವೇತಾ ಪತ್ರ ಬರೆದು ದೇವರಲ್ಲಿ ಹರಕೆ ಹೊತ್ತ ಬಳಿಕ ನೂರಾರು ಮಹಿಳೆಯರಿಗೆ ಅರಿಶಿನ – ಕುಂಕುಮ, ಸೀರೆ ನೀಡಿದ್ದಾರೆ. ಇಷ್ಟೇ ಅಲ್ಲದೇ ಸೊಣ್ಣಪ್ಪನಹಟ್ಟಿ ಗ್ರಾಮದಲ್ಲಿ ಬಯಲುಬಸವೇಶ್ವರ ಸ್ವಾಮಿಗೆ ಹರಕೆ ಹೊತ್ತಿದ್ದಾರೆ. ಈ ವೇಳೆ ಶ್ವೇತಾ ‘ಮಾಲೂರು ತಾಲೂಕಿನ ಜನರ ಸೇವೆ ಮಾಡುವ ಅವಕಾಶ ಕರುಣಿಸಿ’ ಅಂತ ಬಾಳೆಹಣ್ಣಿನ ಮೇಲೆ ಬರೆದು ತೇರಿನ ಮೇಲೆ ಎಸೆದಿದ್ದಾರೆ.
ಚುನಾವಣೆ ಹತ್ತಿರ ಬರುತ್ತಿದ್ದಂತೆ ರಾಜಕೀಯ ನಾಯಕರು, ಅವರ ಕುಟುಂಬಸ್ಥರು ಅಧಿಕಾರದ ಚುಕ್ಕಾಣಿ ಹಿಡಿಯಲು ನಾನಾ ರೀತಿಯ ಸರ್ಕಸ್ ಮಾಡುತ್ತಿರುತ್ತಾರೆ. ಕೆಲವರು ದೇವರ ಮೊರೆ ಹೋದರೆ, ಇನ್ನೂ ಕೆಲವರು ನೋಟಿನ ಆಮಿಷವೊಡ್ಡಿ ವೋಟು ಗಿಟ್ಟಿಸಿಕೊಳ್ಳುತ್ತಾರೆ.