ಬ್ರಿಜ್ ಭೂಷಣ್ ಶರಣ್ ಸಿಂಗ್ ಬಂಧಿಸಲು ಡೆಡ್‌ಲೈನ್ – ಇಲ್ಲದಿದ್ದರೆ ಮಹತ್ವದ ತೀರ್ಮಾನ ಕೈಗೊಳ್ಳುವುದಾಗಿ ಕುಸ್ತಿಪಟುಗಳ ಎಚ್ಚರಿಕೆ

ಬ್ರಿಜ್ ಭೂಷಣ್ ಶರಣ್ ಸಿಂಗ್ ಬಂಧಿಸಲು ಡೆಡ್‌ಲೈನ್ – ಇಲ್ಲದಿದ್ದರೆ ಮಹತ್ವದ ತೀರ್ಮಾನ ಕೈಗೊಳ್ಳುವುದಾಗಿ ಕುಸ್ತಿಪಟುಗಳ ಎಚ್ಚರಿಕೆ

ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆಸುತ್ತಿರುವ ಕುಸ್ತಿಪಟುಗಳು ಕುಸ್ತಿ ಫೆಡರೇಷನ್ ಅಧ್ಯಕ್ಷ, ಬಿಜೆಪಿ ಸಂಸದ ಬ್ರಿಜ್ ಭೂಷಣ್ ಶರಣ್ ಸಿಂಗ್‌ ರನ್ನು ಬಂಧಿಸುವಂತೆ ಗಡುವು ನೀಡಿದ್ದಾರೆ. ಮೇ 21ರ ಒಳಗೆ ಬಂಧಿಸುವಂತೆ ಗಡುವು ನೀಡಿದ್ದಾರೆ. ವಿನೇಶ್ ಫೋಗಟ್ , ಬಜರಂಗ್ ಪೂನಿಯಾ  ಹಾಗೂ ಸಾಕ್ಷಿ ಮಲಿಕ್ ಸೇರಿ 31 ಸದಸ್ಯರನ್ನೊಳಗೊಂಡ ಕುಸ್ತಿಪಟುಗಳ ಸಮಿತಿ ಮೇ 21ರ ಒಳಗೆ ಬಂಧಿಸದಿದ್ದರೆ ಮಹತ್ವದ ತೀರ್ಮಾನ ಕೈಗೊಳ್ಳುವುದಾಗಿ ಎಚ್ಚರಿಸಿದೆ.

ಇದನ್ನೂ ಓದಿ: ಜೈಲಿನ ಆವರಣದಲ್ಲೇ ಗ್ಯಾಂಗ್ ಸ್ಟರ್ ಹತ್ಯೆ ಕೇಸ್ – ಮೂಕ ಪ್ರೇಕ್ಷಕರಾಗಿದ್ದ 7 ಪೊಲೀಸ್ ಸಿಬ್ಬಂದಿ ಸಸ್ಪೆಂಡ್!

ಭಾರತೀಯ ಕಿಸಾನ್ ಯೂನಿಯನ್ ವಕ್ತಾರ ರಾಕೇಶ್ ಟಿಕಾಯತ್, ಖಾಪ್ ಮಹಮ್ 24 ಮುಖ್ಯಸ್ಥ ಮೆಹರ್ ಸಿಂಗ್ ಮತ್ತು ಸಂಕ್ಯುತ್ ಕಿಸಾನ್‌ ಮೋರ್ಚಾದ ಬಲದೇವ್ ಸಿಂಗ್ ಸಿರ್ಸಾ ಅವರೂ ಸಹ ಕುಸ್ತಿಪಟುಗಳ ಬೆಂಬಲಕ್ಕೆ ನಿಂತಿದ್ದು, ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ. ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿದ ನಂತರ CRPC ಸೆಕ್ಷನ್ 161 ಹಾಗೂ 164 ಅಡಿಯಲ್ಲಿ ಸಂತ್ರಸ್ತರ ಹೇಳಿಕೆಗಳನ್ನ ದಾಖಲಿಸಲಾಗಿದೆ. ಆದ್ರೆ ಈವರೆಗೆ ಬಂಧಿಸುವ ಯಾವುದೇ ಕ್ರಮವನ್ನು ಕೈಗೊಂಡಿಲ್ಲ ಮೇ 21ರ ಒಳಗೆ ಬ್ರಿಜ್ ಭೂಷಣ್‌ನನ್ನು ಬಂಧಿಸದಿದ್ದರೆ ಪ್ರತಿಭಟನೆ ಇನ್ನೂ ದೊಡ್ಡದಾಗಲಿದೆ ಎಂದು ವಿನೇಶ್ ಫೋಗಟ್ ಎಚ್ಚರಿಕೆ ನೀಡಿದ್ದಾರೆ.

ಈ ಕುರಿತು ಮಾತನಾಡಿರುವ ರಾಕೇಶ್ ಟಿಕಾಯತ್, ಇದು ರಾಜಕೀಯ ಪ್ರತಿಭಟನೆಯಲ್ಲ. ಆದ್ರೆ ಕೆಲವು ರಾಜಕಾರಣಿಗಳೂ ಕುಸ್ತಿಪಟುಗಳ ಬೆಂಬಲಕ್ಕೆ ನಿಂತಿದ್ದಾರೆ. ರೈತರು ಹೋರಾಟ ಮಾಡಿದಂತೆ ಕುಸ್ತಿಪಟುಗಳೂ ತಮ್ಮ ಹೋರಾಟ ಮುಂದುವರಿಸಲಿದ್ದಾರೆ. ಸರ್ಕಾರ ತಾಳ್ಮೆ ಪರೀಕ್ಷಿಸಬಾರದು ಎಂದೂ ಹೇಳಿದ್ದಾರೆ. ದೆಹಲಿಯ ಜಂತರ್ ಮಂತರ್ನಲ್ಲಿ ಪ್ರತಿಭಟನೆ ನಡೆಸುತ್ತಿರುವ ಕುಸ್ತಿಪಟುಗಳ ಮೇಲೆ ಕುಡಿದ ಅಮಲಿನಲ್ಲಿದ್ದ ಪೊಲೀಸರು ಬುಧವಾರ ರಾತ್ರಿ ಹಲ್ಲೆ ನಡೆಸಿರುವುದಾಗಿ ಕುಸ್ತಿಪಟುಗಳು ಆರೋಪಿಸಿದ್ದರು. ಪ್ರತಿಭಟನಾ ಸ್ಥಳಕ್ಕೆ ಹಾಸಿಗೆಗಳನ್ನು ತರಲು ಹೋಗಿದ್ದಾಗ ಪೊಲೀಸರು ಹಲ್ಲೆ ನಡೆಸಿರುವುದಾಗಿ ದೂರಿದ್ದರು. ಕೆಲವು ಕುಸ್ತಿಪಟುಗಳ ತಲೆಗೆ ಹೊಡೆತ ಬಿದ್ದಿದ್ದು, ಇಬ್ಬರಿಗೆ ಗಾಯಗಳಾಗಿವೆ. ಒಬ್ಬರು ಪ್ರಜ್ಞೆ ಕಳೆದುಕೊಂಡು ಕುಸಿದು ಬಿದ್ದಿದ್ದು, ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಪ್ರತಿಭಟನೆ ಬಳಿಕ ನೋವನುಭವಿಸಿದ ಕುಸ್ತಿಪಟುಗಳು ಪ್ರಶಸ್ತಿಗಳನ್ನು ಹಿಂದಿರುಗಿಸುವುದಾಗಿ ಹೇಳಿದ್ದರು. ಈ ಬೆನ್ನಲ್ಲೇ ಕುಸ್ತಿಪಟುಗಳು ಮೇ 21ರ ಒಳಗೆ ಬಂಧಿಸುವಂತೆ ಗಡುವು ನೀಡಿದ್ದಾರೆ.

suddiyaana