ಕನ್ನಡ ಬೋರ್ಡ್ ಅಳವಡಿಕೆಗೆ ಇದ್ದ ಗಡುವು ಮತ್ತೆ ವಿಸ್ತರಣೆ – ಯಾವಾಗ ಕೊನೆ ದಿನ?

ಕನ್ನಡ ಬೋರ್ಡ್ ಅಳವಡಿಕೆಗೆ ಇದ್ದ ಗಡುವು ಮತ್ತೆ ವಿಸ್ತರಣೆ – ಯಾವಾಗ ಕೊನೆ ದಿನ?

ರಾಜ್ಯದ ವಾಣಿಜ್ಯ ಮಳಿಗೆಗಳ ಮುಂದೆ ಶೇ.60 ದೊಡ್ಡದಾದ ಕನ್ನಡ ನಾಮಫಲಕ ಅಳವಡಿಕೆಗೆ ನೀಡಿದ್ದ ಕಾಲವಕಾಶವನ್ನು ಮತ್ತೆ ವಿಸ್ತರಣೆ ಮಾಡಲಾಗಿದೆ. ಫೆ.28ರಿಂದ ಮಾ.14ರವರೆಗೆ ಬೋರ್ಡ್‌ಗಳ ಬದಲಾವಣೆಗೆ ಕಾಲಾವಕಾಶ ನೀಡಲಾಗಿದೆ.

ವಾಣಿಜ್ಯ ಮಳಿಗೆಗಳ ಬೋರ್ಡ್​ಗಳ ಬದಲಾವಣೆಗೆ ನೀಡಲಾಗಿದ್ದ ಗಡುವು ಬಧವಾರಕ್ಕೆ ಮುಕ್ತಾಯಗೊಂಡಿದೆ. ಈ ನಡುವೆ ಒಂದಷ್ಟು ವ್ಯಾಪಾರಸ್ತರು ಹಾಗೂ ಕಂಪನಿಗಳು ನಿಯಮಾನುಸಾರ ಬೋರ್ಡ್ ಅಳವಡಿಕೆಗೆ ಮತ್ತಷ್ಟು ಸಮಯಾವಕಾಶ ಕೇಳಿದ್ದರು. ಹೀಗಾಗಿ ಶೇ.60 ರಷ್ಟು ಕನ್ನಡದಲ್ಲಿ ನಾಮಫಲಕ ಅಳವಡಿಕೆಗೆ ಎರಡು ವಾರಗಳ ಕಾಲವಕಾಶ ನೀಡಲಾಗಿದೆ.

ಇದನ್ನೂ ಓದಿ: ಪಾಕಿಸ್ತಾನ ಜಿಂದಾಬಾದ್ ಜ್ವಾಲೆ ಹಚ್ಚಿದ್ಯಾರು?  -ವಿವಾದವನ್ನು ಮುಚ್ಚಿ ಹಾಕುತ್ತಿದ್ಯಾ ಸರ್ಕಾರ?

ಈ ಬಗ್ಗೆ ಉಪಮುಖ್ಯಮಂತ್ರಿ ಹಾಗೂ ನಗರಾಭಿವೃದ್ಧಿ ಸಚಿವ ಡಿ.ಕೆ. ಶಿವಕುಮಾರ್ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಟ್ವೀಟ್‌ ಮಾಡಿದ್ದಾರೆ.  ಬೆಂಗಳೂರಿನ ಎಲ್ಲಾ ಅಂಗಡಿ ಮುಂಗಟ್ಟುಗಳು, ವಾಣಿಜ್ಯ ಮಳಿಗೆಗಳು ಮೊದಲಾದಕಡೆ ಶೇ.60ರಷ್ಟು‌ ಕನ್ನಡ ನಾಮಫಲಕಗಳನ್ನು ಅಳವಡಿಸಲು ಹೆಚ್ಚಿನ ಸಮಯ ಬೇಕೆಂಬುದನ್ನು ಪರಿಗಣಿಸಿ, ಈಗಾಗಲೇ ನೀಡಲಾಗಿದ್ದ ಗಡುವನ್ನು 2 ವಾರಗಳ‌ ಕಾಲ ವಿಸ್ತರಿಸಲಾಗಿದೆ. ಕನ್ನಡ ನಾಡಿನಲ್ಲಿ ಕನ್ನಡವೇ ಸಾರ್ವಭೌಮ, ಹಾಗಾಗಿ ನಮ್ಮ ಹೃದಯದ ಭಾಷೆಯನ್ನು ಎತ್ತಿ‌ಹಿಡಿಯುವುದು ಅತಿ ಮುಖ್ಯ. 2 ವಾರಗಳ‌ ನಂತರ ಎಲ್ಲರೂ ಕಾನೂನು ಪಾಲನೆ ಮಾಡುತ್ತಾರೆ‌ ಎಂದು ನಿರೀಕ್ಷಿಸಿದ್ದೇನೆ ಎಂದು ಹೇಳಿದ್ದಾರೆ.

ಕನ್ನಡ ನಾಮಫಲಕ ಹಾಕದಿದ್ದರೆ ಅಂಗಡಿಗಳನ್ನು ಬಂದ್ ಮಾಡುತ್ತೇವೆ. ಈಗಾಗಲೇ ಶೇಕಡಾ 90ರಷ್ಟು ಕನ್ನಡ ನಾಮಫಲಕ ಹಾಕಲಾಗಿದೆ. ಇನ್ನು ಉಳಿದಿರುವುದು 3 ಸಾವಿರ ನಾಮಫಲಕ ಮಾತ್ರ​. ಮತ್ತಷ್ಟು ಸಮಯ ನೀಡುವಂತೆ ಅಂತಾರಾಷ್ಟ್ರೀಯ ಕಂಪನಿಗಳು, SBI, ಕೆನರಾ ಬ್ಯಾಂಕ್ ಮನವಿ ನೀಡಿವೆ. ಈ ಬಗ್ಗೆ ಇಂದು ಸಂಜೆ ತೀರ್ಮಾನ ಮಾಡುತ್ತೇವೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್​ ಹೇಳಿದ್ದರು.

ಡೆಡ್​ಲೈನ್ ಮುಕ್ತಾಯ ಹಿನ್ನೆಲೆ ಇಂದು ನಾಮಫಲಕ ಪರಿಶೀಲನೆ ನಡೆಸಲು ಮುಂದಾದ ಪಾಲಿಕೆ ಅಧಿಕಾರಿಗಳು, ಶೇಕಡಾ 60ರಷ್ಟು ಕನ್ನಡ ನಾಮಫಲಕ ಅಳವಡಿಸದಿದ್ದರೆ ಪರವಾನಗಿ ರದ್ದು ಮಾಡಿ ಬೀಗ ಜಡಿಯುವುದಾಗಿ ಬಿಬಿಎಂಪಿ ಆರೋಗ್ಯ ವಿಭಾಗದ ವಿಶೇಷ ಆಯುಕ್ತ ವಿಕಾಸ್ ಕಿಶೋರ್ ಅವರು ಈಗಾಗಲೇ ಆದೇಶ ಹೊರಡಿಸಿದ್ದಾರೆ.

Shwetha M