ಉತ್ತರಕಾಶಿ ದುರಂತದಲ್ಲಿ 9 ಸೈನಿಕರು ಸೇರಿ 59 ಕ್ಕೂ ಹೆಚ್ಚು ಜನ ನಾಪತ್ತೆ – ಭರದಿಂದ ಸಾಗಿದ ರಕ್ಷಣಾ ಕಾರ್ಯಾಚರಣೆ

ಉತ್ತರಕಾಶಿ ದುರಂತದಲ್ಲಿ 9 ಸೈನಿಕರು ಸೇರಿ 59 ಕ್ಕೂ ಹೆಚ್ಚು ಜನ ನಾಪತ್ತೆ – ಭರದಿಂದ ಸಾಗಿದ ರಕ್ಷಣಾ ಕಾರ್ಯಾಚರಣೆ

ಉತ್ತರಕಾಶಿ ಜಿಲ್ಲೆಯ ಧರಾಲಿ ಪ್ರದೇಶದಲ್ಲಿ ಮಂಗಳವಾರ  ನಡೆದ ಮೇಘಸ್ಪೋಟದಲ್ಲಿ  ಒಂಬತ್ತು ಸೇನಾ ಸಿಬ್ಬಂದಿ ಸೇರಿದಂತೆ 59 ಕ್ಕೂ ಹೆಚ್ಚು ಮಂದಿ ಕಣ್ಮರೆಯಾಗಿದ್ದಾರೆ. ಭಾರತೀಯ ಸೇನೆ ಮತ್ತು ಪರಿಹಾರ ತಂಡಗಳಿಂದ ಬೃಹತ್ ಜಂಟಿ ರಕ್ಷಣಾ ಕಾರ್ಯಾಚರಣೆ ನಡೆಸಲಾಗಿದೆ.

ಆರಂಭದಲ್ಲಿ ಕಣ್ಮರೆಯಾಗಿದ್ದ 11 ಸೇನಾ ಸಿಬ್ಬಂದಿಗಳಲ್ಲಿ ಇಬ್ಬರು ಸುರಕ್ಷಿತವಾಗಿದ್ದು, ಈಗ ಚೇತರಿಸಿಕೊಳ್ಳುತ್ತಿದ್ದಾರೆ. ಇದುವರೆಗೆ 20 ನಾಗರಿಕರನ್ನು ಸಹ ರಕ್ಷಿಸಲಾಗಿದೆ. ಭರದಿಂದ ರಕ್ಷಣಾ ಕಾರ್ಯಾಚರಣೆ ಸಾಗಿದೆ. ಪ್ರತಿಕೂಲ ಹವಾಮಾನ ಮತ್ತು ಸಂಪರ್ಕ ಕಡಿತದ ಸವಾಲಿನ ನಡುವೆ ಸೇನೆಯ ಬದ್ಧತೆಯನ್ನು ಅವರು ಶ್ಲಾಘಿಸಿದ್ದಾರೆ.

ಮೊದಲ ಮೇಘಸ್ಫೋಟದಿಂದ ಧಾರಾಲಿ ಗ್ರಾಮದ ಕಡೆಗೆ ಮಣ್ಣು, ಗುಡ್ಡ ಕುಸಿತ, ಕೆಸರು ನೀರು ಹರಿಯುವುದರೊಂದಿಗೆ ಭಾರಿ ಆತಂಕ ಸೃಷ್ಟಿಯಾಯಿತು. ಜನರು ಭಯದಿಂದ ಕಿರುಚಾಡಿದರು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದರು. ಹರ್ಸಿಲ್ ಸೇನಾ ಶಿಬಿರದ ಮುಂಭಾಗದಲ್ಲಿರುವ ಹರ್ಸಿಲ್‌ನಲ್ಲಿರುವ ಸೇನಾ ಘಟಕದ ಬಳಿ ಮಂಗಳವಾರ ಸಂಜೆ ಎರಡನೇ ಮೇಘಸ್ಫೋಟ ಸಂಭವಿಸಿದೆ.

ಇದನ್ನೂ ಓದಿ: IND ಟೀಂನಿಂದ ಐವರು ಔಟ್? ಕರುಣ್, ಕಾಂಬೋಜ್‌ಗೆ ಕೈ ತಪ್ಪಿದ ಚಾನ್ಸ್?

ಮೇಘಸ್ಫೋಟದ ವಿಷಯ ತಿಳಿಯುತ್ತಿದ್ದಂತೆಯೇ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರು ಆಂಧ್ರಪ್ರದೇಶ ಪ್ರವಾಸ ಮೊಟಕುಗೊಳಿಸಿ, ಡೆಹ್ರಾಡೂನ್‌ನಲ್ಲಿರುವ ವಿಪತ್ತು ಕಾರ್ಯಾಚರಣೆ ಕೇಂದ್ರಕ್ಕೆ ಮಂಗಳವಾರ ಸಂಜೆ ಆಗಮಿಸಿದರು. ಅಲ್ಲಿ ಅವರು ಹರ್ಸಿಲ್ ಪ್ರದೇಶದಲ್ಲಿ ನಡೆಯುತ್ತಿರುವ ರಕ್ಷಣಾ ಕಾರ್ಯಾಚರಣೆಗಳ ಬಗ್ಗೆ ಮಾಹಿತಿ ಪಡೆದರು. ತುರ್ತು ಸೇವೆಗಳನ್ನು ಹೊರತುಪಡಿಸಿ ಪ್ರವಾಹ ಪೀಡಿತ ಪ್ರದೇಶದ ಎಲ್ಲಾ ಶಿಕ್ಷಣ ಮತ್ತು ಇತರ ಸಂಸ್ಥೆಗಳನ್ನು ಮುಚ್ಚುವಂತೆ ಮುಖ್ಯಮಂತ್ರಿಗಳು ಶಿಕ್ಷಣ ಇಲಾಖೆ ಮತ್ತು ಜಿಲ್ಲಾಧಿಕಾರಿಗಳಿಗೆ ಸೂಚಿಸಿದ್ದಾರೆ ಎಂದು ಮುಖ್ಯಮಂತ್ರಿಯ ಹೆಚ್ಚುವರಿ ಕಾರ್ಯದರ್ಶಿ ಬನ್ಶಿಧರ್ ತಿವಾರಿ ತಿಳಿಸಿದ್ದಾರೆ.

ಸ್ಥಳಾಂತರಗೊಂಡವರಿಗೆ ವಸತಿ, ಆಹಾರ ಮತ್ತು ಔಷಧಿಗಳ ವ್ಯವಸ್ಥೆಯನ್ನು ಕಲ್ಪಿಸುವಂತೆ ಹಾಗೂ ಸಂತ್ರಸ್ತರನ್ನು ಏರ್ ಲಿಫ್ಟ್ ಮಾಡುವಂತೆ ಅಧಿಕಾರಿಗಳಿಗೆ ಮುಖ್ಯಮಂತ್ರಿ ನಿರ್ದೇಶಿಸಿದ್ದಾರೆ. ಯಾರಾದರೂ ತಮ್ಮ ಕುಟುಂಬವನ್ನು ಕಳೆದುಕೊಂಡಿದ್ದರೆ, ಸರ್ಕಾರ ಅವರ ಜೊತೆ ನಿಂತಿದೆ.ಅವರ ಜೀವನೋಪಾಯದ ಸಂಪೂರ್ಣ ಜವಾಬ್ದಾರಿಯನ್ನು ಸರ್ಕಾರ ಹೊರುತ್ತದೆ ಎಂದು ಸಿಎಂ ಧಾಮಿ ಭರವಸೆ ನೀಡಿದ್ದಾರೆ.

 

Kishor KV