CBI ಕಗ್ಗಂಟು.. ಡಿಕೆಶಿ ಮುಂದಿವೆ ಸಾಲು ಸಾಲು ಸವಾಲು – ಡಿಸಿಎಂಗೆ ಅಕ್ರಮ ಆಸ್ತಿಯೇ ಉರುಳು?

CBI ಕಗ್ಗಂಟು.. ಡಿಕೆಶಿ ಮುಂದಿವೆ ಸಾಲು ಸಾಲು ಸವಾಲು – ಡಿಸಿಎಂಗೆ ಅಕ್ರಮ ಆಸ್ತಿಯೇ ಉರುಳು?

ಕರ್ನಾಟಕ ಕಾಂಗ್ರೆಸ್ ನ ಟ್ರಬಲ್ ಶೂಟರ್ ಅಂತಾನೇ ಕರೆಸಿಕೊಳ್ಳುವ ಡಿಸಿಎಂ ಡಿ.ಕೆ ಶಿವಕುಮಾರ್ ಗೆ ಹೈಕೋರ್ಟ್ ಬಿಗ್ ರಿಲೀಫ್ ನೀಡಿದೆ. ಪ್ರಕರಣದ ತನಿಖೆಯನ್ನ ಸಿಬಿಐಗೆ ವಹಿಸಿ ಹಿಂದಿನ ಸರ್ಕಾರ ನೀಡಿದ್ದ ಅನುಮತಿಯನ್ನ ಈಗಿನ ರಾಜ್ಯ ಸರ್ಕಾರ ಹಿಂಪಡೆದಿರುವ ನಿರ್ಧಾರವನ್ನ ಹೈಕೋರ್ಟ್ ಎತ್ತಿ ಹಿಡಿದಿದೆ. ಇದೇ ವೇಳೆ ಡಿಸಿಎಂ ಡಿ.ಕೆ.ಶಿವಕುಮಾರ್ ಹೈಕೋರ್ಟ್ ನಲ್ಲಿ ವಿಚಾರಣೆಗೆ ಬಾಕಿ ಇದ್ದ ತಮ್ಮ ಮೇಲ್ಮನವಿಯನ್ನು ಕೂಡ ಹಿಂಪಡೆದಿದ್ದಾರೆ. ಈ ಮೂಲಕ ಕೆಪಿಸಿಸಿ ಅಧ್ಯಕ್ಷರು ಬೀಸೋ ದೊಣ್ಣೆಯಿಂದ ತಪ್ಪಿಸಿಕೊಂಡಿದ್ದಾರೆ. ಅಕ್ರಮ ಆಸ್ತಿ ಗಳಿಕೆ ಉರುಳಿನಲ್ಲಿ ಸಿಲುಕಿರುವ ಡಿಕೆಶಿಯನ್ನ ಪಾರು ಮಾಡಲು ಸಿಎಂ ಸಿದ್ದರಾಮಯ್ಯ ಆದಿಯಾಗಿ ಇಡೀ ಸಚಿವ ಸಂಪುಟ ನಿಂತಿದೆ. ಆದ್ರೆ ರಾಜ್ಯ ಸರ್ಕಾರದ ಈ ನಡೆ ವಿಪಕ್ಷಗಳ ಕೆಂಗಣ್ಣಿಗೆ ಗುರಿಯಾಗಿದೆ.

ಡಿಸಿಎಂ ಡಿ.ಕೆ ಶಿವಕುಮಾರ್ ವಿರುದ್ಧದ ಸಿಬಿಐ ತನಿಖೆಗೆ ರಾಜ್ಯ ಸರ್ಕಾರ ಎಳ್ಳು ನೀರು ಬಿಟ್ಟಿತ್ತು. ಡಿ.ಕೆ ಶಿವಕುಮಾರ್ ವಿರುದ್ಧದ ಪ್ರಕರಣವನ್ನ ಹಿಂಪಡೆಯುವ ಬಗ್ಗೆ ಗೃಹ ಇಲಾಖೆ ಸಚಿವ ಸಂಪುಟಕ್ಕೆ ಪ್ರಸ್ತಾವನೆ ಸಲ್ಲಿಸಿ ಒಪ್ಪಿಗೆ ಪಡೆದುಕೊಂಡಿತ್ತು. ಪ್ರಸ್ತಾವನೆಯಲ್ಲಿ ಪ್ರಕರಣವನ್ನ ಸಿಬಿಐನಿಂದ ಹಿಂಪಡೆದು ರಾಜ್ಯ ಪೊಲೀಸ್ ಇಲಾಖೆಗೋ ಅಥವಾ ಲೋಕಾಯುಕ್ತ ಪೊಲೀಸ್ ತನಿಖೆಗೆ ಹಸ್ತಾಂತರಿಸಲು ಅನುಮೋದನೆ ನೀಡುವಂತೆ ಪ್ರಸ್ತಾವನೆ ಸಲ್ಲಿಸಿತ್ತು. ಇದಕ್ಕೆ ಕ್ಯಾಬಿನೆಟ್ ಮಿನಿಸ್ಟರ್ಸ್ ಕೂಡ ಒಮ್ಮತದಿಂದ ಓಕೆ ಅಂದಿದ್ರು. ಆದ್ರೆ ಇದು ವಿಪಕ್ಷ ನಾಯಕರ ಕಣ್ಣು ಕೆಂಪಾಗುವಂತೆ ಮಾಡಿದೆ. ರಾಜ್ಯ ಸರ್ಕಾರ ಡಿ.ಕೆ ಶಿವಕುಮಾರ್ ರನ್ನ ರಕ್ಷಣೆ ಮಾಡ್ತಿದೆ ಎಂದು ವಾಗ್ದಾಳಿ ನಡೆಸುತ್ತಿದ್ದಾರೆ. ಸಚಿವ ಸಂಪುಟದ ತೀರ್ಮಾನವನ್ನು ಪ್ರಶ್ನಿಸಿ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೈಕೋರ್ಟ್‍ನಲ್ಲಿ ಮಧ್ಯಂತರ ಅರ್ಜಿ ಸಲ್ಲಿಸಿದ್ರು. ಈ ಎಲ್ಲಾ ಬೆಳವಣಿಗೆಗಳ ನಡುವೆಯೂ ಹೈಕೋರ್ಟ್ ಡಿ.ಕೆ ಶಿವಕುಮಾರ್ ನಿಟ್ಟುಸಿರು ಬಿಡುವಂತೆ ಆದೇಶ ನೀಡಿದೆ.

ಇದನ್ನೂ ಓದಿ : ಅಮ್ಮಂದಿರ ಆಲೆಮನೆ ಆಪರೇಷನ್ – ಹೆಣ್ಣು ಭ್ರೂಣ ಕೊಂದವರ ಲೆಕ್ಕವೇನಿತ್ತು?

ಡಿ.ಕೆ.ಶಿವಕುಮಾರ್‌ ವಿರುದ್ಧದ ಸಿಬಿಐ ತನಿಖೆ ಆದೇಶ ಹಿಂಪಡೆದ ರಾಜ್ಯ ಸರ್ಕಾರದ ನಿರ್ಧಾರವನ್ನು ಹೈಕೋರ್ಟ್‌ ಎತ್ತಿ ಹಿಡಿದಿದೆ. ಆ ಮೂಲಕ ಡಿಕೆಶಿಗೆ ಮತ್ತೊಮ್ಮೆ ಬಿಗ್‌ ರಿಲೀಫ್‌ ಸಿಕ್ಕಿದೆ. ಡಿಸಿಎಂ ಡಿ.ಕೆ.ಶಿವಕುಮಾರ್‌ ಅಕ್ರಮ ಆಸ್ತಿ ಗಳಿಕೆ ಆರೋಪ ಪ್ರಕರಣ ವಿಚಾರಣೆಯನ್ನು ಬುಧವಾರ ಹೈಕೋರ್ಟ್‌ ಸಿಜೆ ನೇತೃತ್ವದ ವಿಭಾಗೀಯ ಪೀಠ ನಡೆಸಿತು. ರಾಜ್ಯ ಸರ್ಕಾರದ ಆದೇಶವನ್ನು ಇದುವರೆಗೂ ಯಾರೂ ಪ್ರಶ್ನೆ ಮಾಡಿಲ್ಲ. ಹೀಗಾಗಿ ಸಿಬಿಐ ಪರ ವಕೀಲರ ವಾದ ಪರಿಗಣಿಸಲು ಸಾಧ್ಯವಿಲ್ಲ. ಅರ್ಜಿದಾರರ ಮನವಿ ಹಿಂಪಡೆಯಲಾಗಿದೆ ಎಂದು ಕೋರ್ಟ್‌ ತಿಳಿಸಿದೆ. ಅರ್ಜಿದಾರರಿಗೆ ಮೇಲ್ಮನವಿ ಹಿಂಪಡೆದುಕೊಳ್ಳುವ ಅವಕಾಶವಿದೆ ಎಂದ ನ್ಯಾಯಾಲಯ ಪಂಜಾಬ್ ಸರ್ಕಾರ ವರ್ಸಸ್ ಗುರುದೇವ್ ಪ್ರಕರಣವನ್ನು ತನ್ನ ಆದೇಶದಲ್ಲಿ ಉಲ್ಲೇಖಿಸಿದೆ. ಪ್ರಕರಣದ ಅರ್ಹತೆ ಬಗ್ಗೆ ಯಾವುದೇ ತೀರ್ಮಾನ ನೀಡುತ್ತಿಲ್ಲ ಎಂದು ಹೇಳಿರುವ ನ್ಯಾಯಾಲಯ, ಕ್ಯಾಬಿನೆಟ್ ನಿರ್ಧಾರವನ್ನು ಪ್ರಶ್ನಿಸಿ ಯಾರು ಬೇಕಾದರೂ ಪ್ರಶ್ನೆ ಮಾಡಬಹುದು. ಸಿಬಿಐ ಆದ್ರೂ ಚಾಲೆಂಜ್ ಮಾಡಬಹುದು ಅಥವಾ ಸಾರ್ವಜನಿಕರು ಬೇಕಾದ್ರೂ ರಿಟ್ ಅರ್ಜಿ ಸಲ್ಲಿಕೆ ಮಾಡಬಹುದು. ಆಗ ಹೈಕೋರ್ಟ್ ಅರ್ಜಿಯನ್ನು ಪರಿಗಣಿಸಿ ಮುಂದುವರೆಯಬೇಕಾ ಬೇಡವಾ ಅಂತ ನಿರ್ಧಾರ ಮಾಡುತ್ತೆ ಎಂದು ನ್ಯಾಯಾಲಯ ತಿಳಿಸಿದೆ. ಬುಧವಾರ ನಡೆದ ವಿಚಾರಣೆಯಲ್ಲಿ ಸರ್ಕಾರದ ಪರ ಕಪಿಲ್ ಸಿಬಲ್, ಡಿಕೆ ಶಿವಕುಮಾರ್ ಪರ ಅಭಿಷೇಕ್ ಮನು ಸಿಂಘ್ವಿ, ಸಿಬಿಐ ಪರ ಪ್ರಸನ್ನ ಕುಮಾರ್ ಮತ್ತು ಬಸನಗೌಡ ಪಾಟೀಲ್ ಯತ್ನಾಳ್ ಪರ ವೆಂಕಟೇಶ್ ದಳವಾಯಿ ವಾದ ಮಂಡಿಸಿದರು. ಅಷ್ಟಕ್ಕೂ ರಾಜ್ಯ ಸಚಿವ ಸಂಪುಟ ನವೆಂಬರ್ 23ರಂದು ತೆಗೆದುಕೊಂಡಿದ್ದ ನಿರ್ಧಾರ ಏನು ಅನ್ನೋದನ್ನ ನಾವಿಲ್ಲಿ ತಿಳಿದುಕೊಳ್ಳಬೇಕಾಗುತ್ತೆ.

ಡಿಸಿಎಂ ಡಿ.ಕೆ ಶಿವಕುಮಾರ್ ಅನುಪಸ್ಥಿತಿಯಲ್ಲಿ ನವೆಂಬರ್ 23ರಂದು ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಸಚಿವ ಸಂಪುಟ ಸಭೆ ನಡೆದಿತ್ತು. ಸಭೆಯಲ್ಲಿ ಡಿಕೆಶಿ ವಿರುದ್ಧದ ಆದಾಯ ಮೀರಿ ಆಸ್ತಿ ಪ್ರಕರಣದ ತನಿಖೆಯನ್ನು ಸಿಬಿಐಗೆ ವರ್ಗಾಯಿಸಲು ಬಿ.ಎಸ್ ಯಡಿಯೂರಪ್ಪ ಸರ್ಕಾರ ನೀಡಿದ್ದ ಅನುಮತಿಯನ್ನು ಹಿಂಪಡೆಯಲು ನಿರ್ಧರಿಸಲಾಗಿತ್ತು. ಹಿಂದಿನ ಸರ್ಕಾರ ವಿಧಾನಸಭೆ ಸ್ಪೀಕರ್ ಅನುಮತಿಯನ್ನು ಪಡೆಯದೇ ಸಿಬಿಐ ತನಿಖೆಗೆ ಅನುಮತಿ ನೀಡಿದೆ. ಕೇವಲ ಮುಖ್ಯಮಂತ್ರಿಗಳ ಮೌಖಿಕ ಆದೇಶದ ಮೇರೆಗೆ ಈ ಪ್ರಕರಣವನ್ನು ಸಿಬಿಐಗೆ ವಹಿಸಲಾಗಿತ್ತು. ಸಿಬಿಐಗೆ ವಹಿಸಿದ್ದು ಏಕೆ ಎಂಬುದಕ್ಕೆ ಸೂಕ್ತ ಕಾರಣ ಮತ್ತು ಅನಿವಾರ್ಯತೆಯನ್ನು ಸಹ ಸರ್ಕಾರ ತಿಳಿಸಿರಲಿಲ್ಲ. ಆದ್ದರಿಂದ ಇದೊಂದು ಕಾನೂನುಬಾಹಿರ ಕ್ರಮ ಎಂದು ಈಗಿನ ಸರ್ಕಾರ ಪರಿಗಣಿಸಿದ್ದು, ಈಗಿನ ಅಡ್ವೋಕೆಟ್ ಜನರಲ್ ಅವರ ಅಭಿಪ್ರಾಯ ಪಡೆದು ಹಿಂದಕ್ಕೆ ಪಡೆಯಲಾಗಿದೆ ಎಂದು ಕಾನೂನು ಸಚಿವ ಹೆಚ್.ಕೆ ಪಾಟೀಲ್ ಸಮರ್ಥಿಸಿಕೊಂಡಿದ್ದರು. ಸಿಬಿಐ ತನಿಖೆಯನ್ನು ಹಿಂಪಡೆದ ನಂತರ ಈ ಪ್ರಕರಣವನ್ನು ಲೋಕಾಯುಕ್ತ, ಭ್ರಷ್ಟಾಚಾರ ನಿಗ್ರಹ ದಳ ಅಥವಾ ರಾಜ್ಯ ಪೊಲೀಸರಿಂದ ತನಿಖೆ ನಡೆಸಲು ತೀರ್ಮಾನಿಸಲಾಗಿತ್ತು.

ರಾಜ್ಯದಲ್ಲಿ ಈ ಹಿಂದೆ ಅಧಿಕಾರದಲ್ಲಿದ್ದ ಬಿಜೆಪಿ ಸರ್ಕಾರ, ಡಿಕೆಶಿ ವಿರುದ್ಧದ ಅಕ್ರಮ ಆಸ್ತಿ ಪ್ರಕರಣದಲ್ಲಿ ಸಿಬಿಐ ತನಿಖೆಯಾಗಬೇಕು ಎಂದು ಕೇಂದ್ರ ಸರ್ಕಾರಕ್ಕೆ ಅನುಮತಿ ನೀಡಿತ್ತು. ಅದರ ವಿರುದ್ಧ ಡಿ.ಕೆ. ಶಿವಕುಮಾರ್ ಈಗಾಗಲೇ ನ್ಯಾಯಾಲಯದ ಮೊರೆ ಹೋಗಿದ್ದರು. ಆದ್ರೆ ಅದು ಇತ್ಯರ್ಥವಾಗುವ ಮೊದಲೇ ರಾಜ್ಯ ಸರ್ಕಾರ ಈ ರೀತಿಯ ನಿರ್ಧಾರ ಕೈಗೊಂಡಿರುವುದು ಸಾಕಷ್ಟು ಚರ್ಚೆಗಳನ್ನ ಹುಟ್ಟು ಹಾಕಿತ್ತು. ರಾಜ್ಯ ಸರ್ಕಾರದ ನಡೆಗೆ ವಿಪಕ್ಷ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದರು. ರಾಜ್ಯ ಸಚಿವ ಸಂಪುಟದ ತೀರ್ಮಾನವನ್ನು ಪ್ರಶ್ನಿಸಿ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಹೈಕೋರ್ಟ್‍ನಲ್ಲಿ ಮಧ್ಯಂತರ ಅರ್ಜಿ ಸಲ್ಲಿಸಿದ್ದರು.ಆದ್ರೆ ಬಿಜೆಪಿ, ಜೆಡಿಎಸ್ ನಾಯಕರ ವಾಗ್ದಾಳಿಗೆ ಜಗ್ಗದ ಡಿಕೆಶಿ ಮಾತ್ರ ಯಾರಿಗೆ ಯಾವ ರೀತಿ ಉತ್ತರ ಕೊಡಬೇಕೋ ಕೊಡುತ್ತೇನೆ ಎಂದು ಹೇಳುವ ಮೂಲಕ ಸೈಲೆಂಟಾಗೇ ತಿರುಗೇಟು ನೀಡಿದ್ದರು. ಅಷ್ಟಕ್ಕೂ ಡಿಕೆಶಿಗೆ ಪದೇಪದೆ ಕಂಟಕವಾಗುತ್ತಿರೋ ಈ ಪ್ರಕರಣದ ಬಗ್ಗೆ 2017ರಿಂದಲೂ ಹಗ್ಗಾಜಗ್ಗಾಟ ನಡೆಯುತ್ತಲೇ ಇದೆ. ಆದಾಯ ತೆರಿಗೆ ಇಲಾಖೆಯು 2017 ರಲ್ಲಿ ಶಿವಕುಮಾರ್ ಅವರ ನಿವಾಸದ ಮೇಲೆ ರೇಡ್ ಮಾಡಿತ್ತು. ದಾಳಿ 8 ಕೋಟಿಗೂ ಅಧಿಕ ನಗದು ಸೇರಿದಂತೆ ಅಪಾರ ಪ್ರಮಾಣದ ಆಸ್ತಿ ದಾಖಲೆಗಳು ಪತ್ತೆಯಾಗಿದ್ದವು. ಅದರ ಆಧಾರದ ಮೇಲೆ ಜಾರಿ ನಿರ್ದೇಶನಾಲಯ ತನ್ನ ತನಿಖೆಯನ್ನು ಪ್ರಾರಂಭಿಸಿತ್ತು.

ಆದಾಯ ಮೀರಿ ಆಸ್ತಿ ಗಳಿಸಿದ ಆರೋಪಕ್ಕೆ ಸಂಬಂಧಿಸಿದಂತೆ ಡಿ.ಕೆ. ಶಿವಕುಮಾರ್ ವಿರುದ್ಧ ಸಿಬಿಐ ಪ್ರಕರಣ ದಾಖಲಿಸಿತ್ತು. ಭ್ರಷ್ಟಾಚಾರ ನಿಗ್ರಹ ಕಾಯ್ದೆ-1988ರ ವಿವಿಧ ಕಲಂಗಳ ಅಡಿಯಲ್ಲಿ 2020ರ ಅಕ್ಟೋಬರ್  3ರಂದು ಸಿಬಿಐ ಕೇಸ್ ದಾಖಲಿಸಿತ್ತು. ಸಿಬಿಐ ದಾಖಲಿಸಿರುವ ಎಫ್‌ ಐಆರ್ ಕಾನೂನು ಬಾಹಿರವಾಗಿದ್ದು, ತನಿಖೆ ರದ್ದುಪಡಿಸಬೇಕು ಎಂದು ಕೋರಿ‌ ಡಿ.ಕೆ ಶಿವಕುಮಾರ್, 2022ರ ಜುಲೈನಲ್ಲಿ ಹೈಕೋರ್ಟ್‌ಗೆ ರಿಟ್‌ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ್ದ ನ್ಯಾಯಪೀಠ, 2023ರ ಫೆಬ್ರವರಿ 10ರಂದು ತನಿಖೆಗೆ ಮಧ್ಯಂತರ ತಡೆ ನೀಡಿತ್ತು.‌ ಈ ತಡೆ ಆದೇಶವನ್ನು ಈ ತನಕ ವಿಸ್ತರಿಸಿಕೊಂಡು ಬರಲಾಗಿತ್ತು. ವಿಚಾರಣೆಯನ್ನು 2023ರ ಜುಲೈ 31ರಂದು ಪೂರ್ಣಗೊಳಿಸಿದ್ದ ನ್ಯಾಯಪೀಠ ತೀರ್ಪು ಕಾಯ್ದಿರಿಸಿತ್ತು. ಪ್ರಕರಣವನ್ನು ಸಿಬಿಐ ತನಿಖೆಗೆ ಹಸ್ತಾಂತರಿಸಿದ್ದ ರಾಜ್ಯ ಸರ್ಕಾರದ ಆದೇಶ ರದ್ದುಪಡಿಸಬೇಕು ಎಂದು ಕೋರಿ‌‌ ಡಿ.ಕೆ.ಶಿವಕುಮಾರ್‌ ಸಲ್ಲಿಸಿದ್ದ ಮತ್ತೊಂದು ಅರ್ಜಿಯನ್ನು ನಾಲ್ಕು ತಿಂಗಳ ಹಿಂದಷ್ಟೇ ನ್ಯಾಯಮೂರ್ತಿ ಕೆ.ನಟರಾಜನ್ ಅವರಿದ್ದ ಏಕಸದಸ್ಯ ನ್ಯಾಯಪೀಠ ವಜಾಗೊಳಿಸಿತ್ತು.

2013 ರಿಂದ 18ರ ಅವಧಿಯಲ್ಲಿ ಅಂದ್ರೆ ಜಸ್ಟ್ ಐದೇ ವರ್ಷಗಳಲ್ಲಿ ಶಿವಕುಮಾರ್ ಆಸ್ತಿ ಶೇಕಡಾ 380ರಷ್ಟು ಏರಿಕೆಯಾಗಿದೆ ಎಂದು ಸಿಬಿಐ ತನ್ನ ಎಫ್‌ ಐಆರ್‌ನಲ್ಲಿ ಉಲ್ಲೇಖಿಸಿದೆ. ಡಿಕೆ ಶಿವಕುಮಾರ್ ಅವರು ಚುನಾವಣಾ ಉದ್ದೇಶಕ್ಕಾಗಿ 2013ರ ಏಪ್ರಿಲ್ 13ರಂದು ಸಲ್ಲಿಸಿದ್ದ ಅಫಿಡವಿಟ್ ಪ್ರಕಾರ ತಮ್ಮ ಆಸ್ತಿ 33.92 ಕೋಟಿ ಎಂದು ಘೋಷಿಸಿಕೊಂಡಿದ್ದಾರೆ. ಆದರೆ ಇದು ಏಪ್ರಿಲ್ 30, 2018ರ ವೇಳೆಗೆ 162.53 ಕೋಟಿಗೆ ಏರಿಕೆಯಾಗಿದೆ. ಐದು ವರ್ಷಗಳಲ್ಲಿ ನಿವ್ವಳ ಹೆಚ್ಚಳವು ₹128.6 ಕೋಟಿಯಾಗಿದೆ. ಗೊತ್ತಿರುವ ಆದಾಯದ ಮೂಲಗಳಿಗಿಂತ ಹೆಚ್ಚಿದ ಆದಾಯ 74.93 ಕೋಟಿ ಎಂದು ಎಫ್‌ಐಆರ್ ಸಿಬಿಐ ಉಲ್ಲೇಖಿಸಿತ್ತು. ಇದೇ ಕಾರಣಕ್ಕೆ ಬಿಜೆಪಿ ಸರ್ಕಾರ ಪ್ರಕರಣದ ತನಿಖೆಯನ್ನ ಕೇಂದ್ರದ ತನಿಖಾ ಸಂಸ್ಥೆಗೆ ವಹಿಸಲು ಅನುಮತಿ ನೀಡಿತ್ತು.   ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಆದಾಯ ಮೀರಿ ಆಸ್ತಿ ಗಳಿಕೆ ಪ್ರಕರಣವನ್ನು ಸಿಬಿಐಗೆ ವಹಿಸಿ ಆದೇಶ ನೀಡಿದ್ದರು. 2019 ರ ಸೆಪ್ಟೆಂಬರ್ 25 ರಂದು ದೆಹಲಿ ವಿಶೇಷ ಪೊಲೀಸ್ ಎಸ್ಟಾಬ್ಲಿಷ್‌ಮೆಂಟ್ ಕಾಯ್ದೆ 1946 ಅಡಿ ಸೆಕ್ಷನ್ 6ರ ಅನ್ವಯ ತನಿಖೆ ಕೈಗೊಳ್ಳಲು ಸಿಬಿಐಗೆ ವಹಿಸಿ ಆದೇಶಿಸಿದ್ದರು. ಸರ್ಕಾರದ ಈ ಆದೇಶವನ್ನು ಪ್ರಶ್ನಿಸಿದ್ದ ಡಿ.ಕೆ.ಶಿವಕುಮಾ‌ರ್ ಅವರು 2020ರಲ್ಲಿ ಕರ್ನಾಟಕ ಹೈ ಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದರು. ನ್ಯಾಯಾಲಯ ಈ ಅರ್ಜಿಯನ್ನು 2023ರ ಅಕ್ಟೋಬರ್ ಅಕ್ಟೋಬರ್ 18 ರಂದು ವಜಾಗೊಳಿಸಿತ್ತು.  ಆದಾಯ ಮೀರಿ ಆಸ್ತಿ ಗಳಿಸಿದ ಆರೋಪಕ್ಕೆ ಸಂಬಂಧಿಸಿದಂತೆ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವಿರುದ್ಧ ಸಿಬಿಐ ದಾಖಲಿಸಿರುವ ಎಫ್‌ಐಆರ್ ರದ್ದುಪಡಿಸಲು ನಿರಾಕರಿಸಿದ ಹೈಕೋರ್ಟ್‌, ತನಿಖೆ ಮುಂದುವರಿಸಲು ಅನುಮತಿ ನೀಡಿತ್ತು. ಈ ತೀರ್ಪು ಸ್ವೀಕರಿಸಿದ ಮೂರು ತಿಂಗಳ ಒಳಗೆ ಸಿಬಿಐ ವಿಚಾರಣಾ ನ್ಯಾಯಾಲಯಕ್ಕೆ ಅಂತಿಮ ವರದಿ ಸಲ್ಲಿಸಬೇಕು. ತನಿಖಾಧಿಕಾರಿ ದೋಷಾರೋಪ ಪಟ್ಟಿ ಸಲ್ಲಿಸಿದರೆ ಆರೋಪ ಮುಕ್ತಿ ಕೋರಿ ಅಥವಾ ಆರೋಪ ಪಟ್ಟಿಯನ್ನು ವಜಾಗೊಳಿಸುವಂತೆ ಕೋರುವ ಸ್ವಾತಂತ್ರ್ಯ ಡಿ.ಕೆ.ಶಿವಕುಮಾರ್ ಗೆ ಇರಲಿದೆ ಎಂದು ನ್ಯಾಯಪೀಠ ಹೇಳಿತ್ತು. ಸಿಬಿಐ ತನ್ನ ತನಿಖೆಯನ್ನು ಬಹುತೇಕ ಸಮಾಪ್ತಿಯ ಹಂತಕ್ಕೆ ತಂದು ನಿಲ್ಲಿಸಿದೆ. ಹೀಗಾಗಿ, ಅರ್ಜಿದಾರರು ಎಫ್‌ ಐಆರ್‌ ರದ್ದುಪಡಿಸುವಂತೆ ಕೋರುವಲ್ಲಿ ವಿಳಂಬವಾಗಿದೆ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿತ್ತು. ತನಿಖೆಯ ಈ ಹಂತದಲ್ಲಿ ನ್ಯಾಯಾಲಯ ಎಫ್ ಐಆರ್‌ ರದ್ದು ಕೋರಿದ ಮನವಿಯನ್ನು ಪುರಸ್ಕರಿಸಲು ಆಗದು. ಅಂತಿಮ ವರದಿ ಸಲ್ಲಿಸುವ ಮೊದಲೇ ಇಂತಹ ಮನವಿಯನ್ನು ಮಾನ್ಯ ಮಾಡಿದರೆ ಅದು ಮತ್ತೊಂದು ಮಿನಿ ವಿಚಾರಣೆಯೇ ಆಗಿಬಿಡುತ್ತದೆ. ಒಂದು ವೇಳೆ ಸಿಬಿಐ ತನಿಖೆ ವಿಳಂಬವಾಗುತ್ತಿದೆ ಎನ್ನಿಸಿದರೆ ಅರ್ಜಿದಾರರು ಅದಕ್ಕೆ ಕಾಲಮಿತಿ ಕೋರಿಕೆ ಸಲ್ಲಿಸಬಹುದು ಎಂದು ತಿಳಿಸಿತ್ತು.

ಸದ್ಯ ರಾಜ್ಯ ರಾಜಕೀಯದಲ್ಲಿ ಪವರ್ ಫುಲ್ ಲೀಡರ್ ಆಗಿ ಬೆಳೆದಿರುವ ಡಿಕೆಶಿ ಸಿಎಂ ಕುರ್ಚಿ ಮೇಲೂ ಕಣ್ಣಿಟ್ಟಿದ್ದಾರೆ. ಆದ್ರೆ ಡಿಕೆಶಿ ಒಂದು ಹೆಜ್ಜೆ ಮುಂದಿಟ್ಟಂತೆಲ್ಲಾ ಅಕ್ರಮ ಆಸ್ತಿ ಉರುಳು ಅವ್ರನ್ನ ಮತ್ತೆ ಮತ್ತೆ ಹಿಂದಕ್ಕೆ ಎಳೆಯುತ್ತಿದೆ. 2023 ರ ವಿಧಾನಸಭಾ ಚುನಾವಣೆಯಲ್ಲಿ ಅವರೇ ಘೋಷಿಸಿಕೊಂಡಿರುವಂತೆ ಅವರ ಕುಟುಂಬದ ಆಸ್ತಿ 1,414 ಕೋಟಿ ರೂಪಾಯಿ ಇದೆ. ಆದ್ರೆ 2018 ರಲ್ಲಿ ನೀಡಿದ ಮಾಹಿತಿಯ ಪ್ರಕಾರ 840 ಕೋಟಿ ರೂಪಾಯಿ ಆಸ್ತಿ ಹೊಂದಿದ್ದರು. ಹೀಗೆ ವರ್ಷದಿಂದ ವರ್ಷಕ್ಕೆ ಅವ್ರ ಸಂಪತ್ತು ದುಪ್ಪಟ್ಟಾಗುತ್ತಿದ್ದು ಸಂಪತ್ತೇ ಅವರ ಕನಸಿಗೆ ಸವಾಲ್ ಆಗುತ್ತಿದೆ. ಸದ್ಯಕ್ಕೆ ಹೈಕೋರ್ಟ್ ಕೊಟ್ಟಿರೋ ಆದೇಶ ತಾತ್ಕಾಲಿಕ ರಿಲೀಫ್ ಮಾತ್ರವೇ ಆಗಿದ್ದು ಮುಂದಿನ ದಿನಗಳಲ್ಲಿ ಕಂಟಕವಂತೂ ತಪ್ಪಿದ್ದಲ್ಲ.

Shantha Kumari