ಬೇಡಿಕೆ ಈಡೇರುವವರೆಗೂ ಆಹೋರಾತ್ರಿ ಪ್ರತಿಭಟನೆ – ಆಶಾ ಕಾರ್ಯಕರ್ತೆಯರ ನೋವಿಗೆ ಸರ್ಕಾರ ಸ್ಪಂದಿಸುತ್ತಾ?

ಬೇಡಿಕೆ ಈಡೇರುವವರೆಗೂ ಆಹೋರಾತ್ರಿ ಪ್ರತಿಭಟನೆ – ಆಶಾ ಕಾರ್ಯಕರ್ತೆಯರ ನೋವಿಗೆ ಸರ್ಕಾರ ಸ್ಪಂದಿಸುತ್ತಾ?

ಮಹಿಳೆಯರಿಗೆ ನಿಂತ ಜಾಗದಲ್ಲೇ, ಕೂತ ಜಾಗದಲ್ಲಿ ಮನೆ ಮಕ್ಕಳನ್ನು ಬಿಟ್ಟು ಆಹೋ ರಾತ್ರಿ ಪ್ರತಿಭಟನೆ ಮಾಡುವುದು ಸುಲಭದ ವಿಚಾರವಲ್ಲ. ಆದರೆ, ತುತ್ತು ಅನ್ನಕ್ಕಾಗಿ, ಮಕ್ಕಳ ಭವಿಷ್ಯಕ್ಕಾಗಿ, ಮನೆ ನಡೆಸುವುದಕ್ಕಾಗಿ ಈ ಮಹಿಳೆಯರಿಗೆ ಪ್ರತಿಭಟನೆ ನಡೆಸಬೇಕಾದ ಅನಿವಾರ್ಯತೆ ಎದುರಾಗಿದೆ. ಹೀಗಾಗಿ ಮಂಗಳವಾರದಿಂದ ಆಹೋರಾತ್ರಿ ಪ್ರತಿಭಟನೆ ಮಾಡುತ್ತಿದ್ದಾರೆ. ಭೂಮಿಯೇ ಹಾಸಿಗೆ, ಗಗನವೇ ಹೊದಿಕೆ ಎಂದುಕೊಂಡು ಅದೇ ಜಾಗದಲ್ಲಿ ನಿದ್ದೆ ಮಾಡುತ್ತಿದ್ದಾರೆ. ತಾಯಂದಿರ ಪ್ರತಿಭಟನೆಗೆ ಮಕ್ಕಳು ಕೂಡಾ ಪರದಾಡುತ್ತಿದ್ದಾರೆ. ಈ ಹೋರಾಟ ಅದೆಲ್ಲಿವರೆಗೆ ಅಂತಾ ಸರ್ಕಾರವೇ ಹೇಳಬೇಕಷ್ಟೇ.

ಇದನ್ನೂ ಓದಿ: 40 ಪರ್ಸೆಂಟ್ ಕಮೀಷನ್ ಆರೋಪದ ಬೆನ್ನಲ್ಲೇ ಸರ್ಕಾರ ಅಲರ್ಟ್ – ಗುತ್ತಿಗೆದಾರರ 600 ಕೋಟಿ ರೂ. ಬಿಡುಗಡೆ

ಮುಖ್ಯಮಂತ್ರಿಗಳು ಮಧ್ಯಪ್ರವೇಶ ಮಾಡಬೇಕು ಮತ್ತು ಎಲ್ಲಾ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಆಗ್ರಹಿಸಿ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಪ್ರತಿಭಟನೆ ಮುಂದುವರಿಸಿದ್ದಾರೆ. ಪ್ರತಿಭಟನೆ ನಡೆಸುತ್ತಿರುವ ಆಶಾ ಕಾರ್ಯಕರ್ತೆಯರನ್ನು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್  ಭೇಟಿ ಮಾಡಿ ಅಹವಾಲು ಆಲಿಸಿದರು. ಆಶಾ ಕಾರ್ಯಕರ್ತೆಯರ ಬ್ಯಾಂಕ್ ಖಾತೆಗಳಿಗೆ ಈಗಿರುವ 5,000 ರೂ.ಗೆ ಬದಲಾಗಿ 7,000 ರೂ. ವರ್ಗಾವಣೆ ಮಾಡಲು ಕ್ರಮಕೈಗೊಳ್ಳಲಾಗುವುದು. ಹೀಗಾಗಿ ಪ್ರತಿಭಟನೆ ಹಿಂಪಡೆಯಬೇಕು ಎಂದು ಅವರು ಮನವಿ ಮಾಡಿದ್ದಾರೆ. ಆದರೆ, ಪಟ್ಟು ಬಿಡದ ಆಶಾ ಕಾರ್ಯಕರ್ತೆಯರು ಮುಖ್ಯಮಂತ್ರಿಗಳು ಮಧ್ಯಸ್ಥಿಕೆ ವಹಿಸುವಂತೆ ಆಗ್ರಹಿಸಿ ಪ್ರತಿಭಟನೆ ಮುಂದುವರಿಸಲು ನಿರ್ಧರಿಸಿದ್ದಾರೆ.

ಆಶಾ ಕಾರ್ಯಕರ್ತೆಯರ ಬೇಡಿಕೆಗಳೇನು?

  •  ಶೇ 50 ರಷ್ಟು ಆಶಾ ಕಾರ್ಯಕರ್ತೆಯರಿಗೆ ಕೆಲಸಕ್ಕೆ ತಕ್ಕ ವೇತನ ಸಿಗುತ್ತಿಲ್ಲ
  • ರಿಪ್ರೊಡಕ್ಟಿವ್ ಆ್ಯಂಡ್ ಚೈಲ್ಡ್ ಹೆಲ್ತ್ (ಆರ್‌ಸಿಎಚ್) ಪೋರ್ಟಲ್ ಅನ್ನು ಪಾವತಿ ಪ್ರಕ್ರಿಯೆಯಿಂದ ಡಿಲಿಂಕ್ ಮಾಡಿ, 15,000 ರೂ. ನಿಗದಿತ ಗೌರವಧನವಾಗಿ ನೀಡಬೇಕು
  • ಆಶಾ ಕಾರ್ಯಕರ್ತೆಯರನ್ನು ಕಾರ್ಮಿಕರೆಂದು ಪರಿಗಣಿಸಿ ಕನಿಷ್ಠ ವೇತನ ನೀಡಬೇಕು
  • ಪಿಎಫ್, ಇಎಸ್ಐ, ಗ್ರಾಚ್ಯುಟಿ ಸೌಲಭ್ಯಗಳನ್ನು ನೀಡಬೇಕು
  •  ನಗರಗಳಲ್ಲಿ ಕೆಲಸ ಮಾಡುವ ಕಾರ್ಯಕರ್ತೆಯರಿಗೆ 2,000 ರೂ ಗೌರವಧನ ಹೆಚ್ಚಿಸುವುದು
  • ಆಶಾ ಕಾರ್ಯಕರ್ತೆಯರನ್ನು ಕಾರ್ಮಿಕರೆಂದು ಪರಿಗಣಿಸಿ ಕನಿಷ್ಠ ವೇತನ, ಪಿಎಫ್, ಇಎಸ್ಐ, ಗ್ರಾಚ್ಯುಟಿ ಸೌಲಭ್ಯಗಳನ್ನು ನೀಡಬೇಕು. ನಗರಗಳಲ್ಲಿ ಕೆಲಸ ಮಾಡುವ ಕಾರ್ಯಕರ್ತೆಯರಿಗೆ 2,000 ರೂ ಗೌರವಧನ ಹೆಚ್ಚಿಸುವುದು ಇತ್ಯಾದಿಗಳು ಅವರ ಇತರ ಬೇಡಿಕೆಗಳಾಗಿವೆ. ಹಲವು ಬೇಡಿಕೆಗಳನ್ನು ಮುಂದಿಟ್ಟುಕೊಂಡು ಸಾವಿರಾರು ಅಂಗನವಾಡಿ, ಆಶಾ ಕಾರ್ಯಕರ್ತೆಯರು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ.

ಅಸ್ತಿತ್ವದಲ್ಲಿರುವ 5,000 ರೂ. ಗೌರವಧನ ಮತ್ತು 2,000 ರೂ. ನಾನ್-ಎಂಸಿಟಿಎಸ್ ಒಟ್ಟಿಗೆ ಸೇರಿಸಿ 7 ಸಾವಿರ ರೂಪಾಯಿಯನ್ನು ನೇರವಾಗಿ ವರ್ಗಾವಣೆ ಮಾಡುವುದಾಗಿ ಸಚಿವರು ಭರವಸೆ ನೀಡಿದ್ದಾರೆ. ಆಶಾ ಕಾರ್ಯಕರ್ತೆಯರಿಗೆ ತಮ್ಮ ಚಟುವಟಿಕೆಗಳನ್ನು ಅಪ್ಲೋಡ್ ಮಾಡಲು ಮತ್ತು ಟ್ರ್ಯಾಕ್ ಮಾಡಲು ಸಹಾಯ ಮಾಡುವ ಸಾಫ್ಟ್ವೇರ್ ಅನ್ನು ಸರ್ಕಾರ ಅಭಿವೃದ್ಧಿಪಡಿಸುತ್ತಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ. ನೂತನ ಸಾಫ್ಟ್‌ವೇರ್ ಪಾವತಿ ವ್ಯವಸ್ಥೆಯನ್ನು ಹೆಚ್ಚು ಪಾರದರ್ಶಕಗೊಳಿಸುತ್ತದೆ ಎಂದು ಅವರು ಹೇಳಿದ್ದಾರೆ. ಅಲ್ಲದೆ, ಆಶಾ ಕಾರ್ಯಕರ್ತೆಯರಿಗೆ ನಿಗದಿತ ಗೌರವಧನವನ್ನು ಒದಗಿಸುವ ಬಗ್ಗೆ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸುವುದಾಗಿ ಭರವಸೆ ನೀಡಿದ್ದಾರೆ. ಆದರೆ, ಆರೋಗ್ಯ ಸಚಿವರ ಭರವಸೆಗಳು ಬೇಡಿಕೆಗಳನ್ನು ಪೂರ್ತಿಯಾಗಿ ಈಡೇರಿಸುವಂತಿಲ್ಲದ ಕಾರಣ ಕಾರ್ಯಕರ್ತೆಯರು ಪ್ರತಿಭಟನೆಯನ್ನು ಮುಂದುವರೆಸಲು ನಿರ್ಧರಿಸಿದ್ದಾರೆ.

Sulekha