ಬೈ ಎಲೆಕ್ಷನ್‌ಗೆ ಬಿಜೆಪಿಯಿಂದ ಅಭ್ಯರ್ಥಿ ಘೋಷಣೆ – ಯಡಿಯೂರಪ್ಪ ಬಣಕ್ಕೆ ತೀವ್ರ ಮುಖಭಂಗ

ಬೈ ಎಲೆಕ್ಷನ್‌ಗೆ ಬಿಜೆಪಿಯಿಂದ ಅಭ್ಯರ್ಥಿ ಘೋಷಣೆ – ಯಡಿಯೂರಪ್ಪ ಬಣಕ್ಕೆ ತೀವ್ರ ಮುಖಭಂಗ

ಬಾಗಲಕೋಟೆ ಮತ್ತು ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಗೆ  ಯುಗಾದಿ ಹಬ್ಬದಂದೇ ಬಿಜೆಪಿ ತನ್ನ ಅಭ್ಯರ್ಥಿಗಳನ್ನು ಘೋಷಿಸಿದೆ. ಅದರಲ್ಲೂ ಮುಖ್ಯವಾಗಿ ದಾವಣಗೆರೆ ದಕ್ಷಿಣಕ್ಕೆ ಹೈಕಮಾಂಡ್ ಹೊಸ ಮುಖಕ್ಕೆ ಮಣೆ ಹಾಕಿದೆ. ಈ ಮೂಲಕ ಮಾಜಿ ಸಿಎಂ ಬಿಎಸ್​ ಯಡಿಯೂರಪ್ಪ ಬಣ ತೀವ್ರ ಮುಖಭಂಗವಾಗಿದೆ, ಇನ್ನು ಬಿಎಸ್​​ವೈ ಕುಟುಂಬದ ವಿರುದ್ಧವೇ ಸಿಡಿದೆದ್ದಿರುವ ಮಾಜಿ ಸಂಸದ ಮೇಲುಗೈ ಸಾಧಿಸಿದ್ದಾರೆ.

ದಾವಣಗೆರೆಯಲ್ಲಿ ಅಚ್ಚರಿಯ ಅಭ್ಯರ್ಥಿಯ ಘೋಷಣೆ ಮಾಡಲಾಗಿದೆ. ದಾವಣಗೆರೆ ದಕ್ಷಿಣದಿಂದ ಶ್ರೀನಿವಾಸ ಟಿ ದಾಸಕರಿಯಪ್ಪ  ಅವರಿಗೆ ಟಿಕೆಟ್ ನೀಡಲಾಗಿದೆ. ಈ ಮೂಲಕ ದಾವಣಗೆರೆ ರೆಬೆಲ್ ಬಣದ ಅಭ್ಯರ್ಥಿಗೆ ಮಣೆ ಹಾಕಿದ್ದು, ರಾಜ್ಯ ಬಿಜೆಪಿ ಘಟಕಕ್ಕೆ ಕೇಂದ್ರದ ನಾಯಕರು ಅಚ್ಚರಿಯನ್ನು ಮೂಡಿಸಿದ್ದಾರೆ. ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ವಿರೋಧಿ ಬಣದ ನಾಯಕನಿಗೆ ಟಿಕೆಟ್ ನೀಡಿರುವುದು ಭಾರೀ ಸಂಚಲನಕ್ಕೆ ಕಾರಣವಾಗಿದೆ. ಇನ್ನು ತಮ್ಮದೇ ಅಭ್ಯರ್ಥಿಗೆ ಟಿಕೆಟ್ ನೀಡಬೇಕೆಂದು ಬಿಎಸ್​​ವೈ ಬಣದ ನಾಯಕ ಎಂಪಿ ರೇಣುಕಾಚಾರ್ಯಗೆ ಮುಖಂಭಂಗವಾಗಿದೆ.

ಇದನ್ನೂ ಓದಿ: ರಾಯಚೂರಿನಲ್ಲಿ ಮಠದಲ್ಲಿಯೇ ಸ್ವಾಮೀಜಿ ಆತ್ಮಹತ್ಯೆ – ಭಕ್ತರ ಅನುಮಾನಕ್ಕೆ ಕಾರಣವೇನು?

ಬಾಗಲಕೋಟೆಯಲ್ಲಿ ಅಭ್ಯರ್ಥಿ ಆಯ್ಕೆಯ ವಿಚಾರದಲ್ಲಿ ಬಿಜೆಪಿಯಲ್ಲಿ ಅಷ್ಟೊಂದು ಗೊಂದಲವಿರಲಿಲ್ಲ. ಲಿಂಗಾಯತ ಸಮುದಾಯದ ಚರಂತಿಮಠ ಅವರಿಗೆ ಟಿಕೆಟ್ ಬಹುತೇಕ ಕನ್ಫರ್ಮ್ ಆಗಿತ್ತು. ಆದರೆ, ದಾವಣಗೆರೆಗೆ ಬಿಜೆಪಿಯ ಎರಡು ಬಣಗಳ ಪೈಪೋಟಿ ಜೋರಾಗಿತ್ತು ಮತ್ತು ಐವರು ಹೆಸರು ಕೇಳಿ ಬರುತ್ತಿತ್ತು.ಬಿಜಿ ಅಜಯ್ ಕುಮಾರ್, ರಾಜನಹಳ್ಳಿ ಶಿವಕುಮಾರ್, ಶ್ರೀನಿವಾಸ ದಾಸ ಕರಿಯಪ್ಪ, ದೇವರಮನೆ ಶಿವಕುಮಾರ್ ಮತ್ತು ಯಶ್ವಂತ್ ರಾವ್ ಜಾಧವ್ ಹೆಸರು ಕೇಳಿ ಬರುತ್ತಿತ್ತು. ಈ ಪೈಕಿ, ಯುವ ನಾಯಕ ಅಜಯ್ ಕುಮಾರ್ ಅವರಿಗೆ ಬಹುತೇಕ ಟಿಕೆಟ್ ಕನ್ಫರ್ಮ್ ಎಂದು ಹೇಳಲಾಗುತ್ತಿತ್ತು. ಆದ್ರೆ, ಕೊನೆ ಕ್ಷಣದಲ್ಲಿ ಹೈಕಮಾಂಡ್, ಈ ಕ್ಷೇತ್ರದಲ್ಲಿ ಪ್ರಬಲವಾಗಿರುವ ಲಿಂಗಾಯತ ಅಥವಾ ಮರಾಠ ಸಮುದಾಯದ ನಾಯಕರಿಗೆ ಟಿಕೆಟ್ ನೀಡುವ ಪದ್ಧತಿಯನ್ನು ಬದಿಗೊತ್ತಿ, ಇದೇ ಮೊದಲ ಬಾರಿಗೆ ಪರಿಶಿಷ್ಟ ಪಂಗಡದ (ST) ನಾಯಕ ಶ್ರೀನಿವಾಸ್ ಟಿ ದಾಸಕರಿಯಪ್ಪ ಅವರಿಗೆ ಟಿಕೆಟ್ ನೀಡಿದೆ. ಇದರೊಂದಿಗೆ ಅತಿ ಹೆಚ್ಚು ಕುತೂಹಲ ಕೆರಳಿಸಿದ್ದ ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಬಿಜೆಪಿ ಬಿಗ್ ಸರ್ಪ್ರೈಸ್ ನೀಡಿದೆ.

Kishor KV