ಇಬ್ಬರ ಸಾವಿಗೆ ಕಾರಣವಾದವಳು ಕೊನೆಗೂ ಅರೆಸ್ಟ್! – ಬೇರೊಬ್ಬನೊಂದಿಗೆ ಓಡಿಹೋಗಿದ್ದ ಮಹಿಳೆ ಸಿಕ್ಕಿಬಿದ್ದಿದ್ದು ಹೇಗೆ?

ಮದುವೆಯಾದ ಎರಡೇ ತಿಂಗಳಿಗೆ ಬಾಯ್‌ಫ್ರೆಂಡ್ ಜೊತೆ ಓಡಿ ಹೋಗಿ ಇಬ್ಬರ ಸಾವಿಗೆ ಕಾರಣವಾದಳು ಕೊನೆಗೂ ಅರೆಸ್ಟ್ ಆಗಿದ್ದಾಳೆ. ದಾವಣಗೆರೆ ಪೊಲೀಸರು ಸರಸ್ವತಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಇದನ್ನೂ ಓದಿ: ಇಂದು ಮಹಾರಾಷ್ಟ್ರ ಡಿಸಿಎಂ ಅಜಿತ್ ಪವಾರ್ ಅಂತ್ಯಕ್ರಿಯೆ – ಅಮಿತ್ ಶಾ, ದೇವೇಂದ್ರ ಫಡ್ನವೀಸ್‌ರಿಂದ ಅಂತಿಮ ನಮನ
ದಾವಣಗೆರೆಯ ಗುಮ್ಮನೂರು ಗ್ರಾಮದ ಹರೀಶ್ನನ್ನು ಮದುವೆಯಾಗಿದ್ದ ಸರಸ್ವತಿ ಮದುವೆಯಾದ ಎರಡೇ ತಿಂಗಳಿಗೆ ತನ್ನ ಪ್ರಿಯಕರನ ಜೊತೆ ಪರಾರಿಯಾಗಿದ್ದಳು. ಈ ಘಟನೆಯಿಂದ ತೀವ್ರವಾಗಿ ಮನನೊಂದಿದ್ದ ಪತಿ ಹರೀಶ್, ಜಮೀನಿನಲ್ಲಿ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿದ್ದ. ಅತ್ತ, ಇವರಿಬ್ಬರಿಗೂ ಮದುವೆ ಮಾಡಿಸಿದ್ದ ಸರಸ್ವತಿಯ ಸೋದರ ಮಾವ ಸಹ ಆತ್ಮಹತ್ಯೆಗೆ ಶರಣಾಗಿದ್ದರು. ಈ ಬೆನ್ನಲ್ಲೇ ದಾವಣಗೆರೆ ಗ್ರಾಮಾಂತರ ಠಾಣೆ ಮುಂದೆ ಹರೀಶ್ ಸಂಬಂಧಿಕರು ಜಮಾಯಿಸಿ, ಹರೀಶ್ ಸಾವಿಗೆ ಕಾರಣರಾದ ಆರೋಪಿಗಳಿಗೆ ಹರೀಶ್ ಡೆತ್ ನೋಟ್ನಲ್ಲಿ ಬರೆದಿರುವಂತೆ ಶಿಕ್ಷೆಯಾಗಬೇಕು ಎಂದು ಒತ್ತಾಯಿಸಿದ್ದಾರೆ. ಹಾಗೇ ಉಳಿದ ಆರೋಪಿಗಳನ್ನು ಬಂಧಿಸುವಂತೆ ಮೃತ ಹರೀಶ್ ಸಂಬಂಧಿಕರು ಒತ್ತಾಯಿಸಿದ್ದಾರೆ. ಇದೀಗ ಇಬ್ಬರ ಸಾವಿಗೆ ಕಾರಣವಾದ ಸರಸ್ವತಿಯನ್ನ ಪೊಲೀಸರು ಕೊನೆಗೂ ಅರೆಸ್ಟ್ ಮಾಡಿದ್ದಾರೆ.
ಹರೀಶ್ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಂತೆ ಸರಸ್ವತಿ ತಲೆಮರೆಸಿಕೊಂಡಿದ್ದಳು. ದಾವಣಗೆರೆಯ ಎಲೆಬೇತೂರಿನಲ್ಲಿ ಸಂಬಂಧಿಕರ ಮನೆಯಲ್ಲಿದ್ದ ಸರಸ್ವತಿಯನ್ನು ಬಂಧಿಸಿ ದಾವಣಗೆರೆ ಗ್ರಾಮಾಂತರ ಠಾಣೆಗೆ ಪೊಲೀಸರು ಕರೆತಂದಿದ್ದಾರೆ. ದಾವಣಗೆರೆ ಗ್ರಾಮಾಂತರ ಡಿವೈಎಸ್ಪಿ ಬಸವರಾಜ್ ನೇತೃತ್ವದಲ್ಲಿ ವಿಚಾರಣೆ ನಡೆಯುತ್ತಿದ್ದು, ಪ್ರಾಥಮಿಕ ವಿಚಾರಣೆ ನಂತರ ಮೆಡಿಕಲ್ ಚೆಕ್ ಅಪ್ ಮಾಡಿಸಿ ಬಳಿಕ ಆಕೆಯನ್ನು ಜಡ್ಜ್ ಮುಂದೆ ಪೊಲೀಸರು ಹಾಜರುಪಡಿಸಲಿದ್ದಾರೆ. ನಂತರ ಶಿವಮೊಗ್ಗ ಅಥವಾ ಚಿತ್ರದುರ್ಗ ಮಹಿಳಾ ಸೆಲ್ಗೆ ಕರೆದೊಯ್ಯುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
ಇನ್ನು ಸರಸ್ವತಿಯನ್ನು ಕಾರಿನಲ್ಲಿ ಕರೆದುಕೊಂಡು ಹೋಗಿದ್ದ ಪ್ರಿಯಕರ ಶಿವಕುಮಾರ್ ನಾಪತ್ತೆಯಾಗಿದ್ದಾನೆ. ಸರಸ್ವತಿ ಪ್ರಿಯಕರ ಶಿವಕುಮಾರ್ ಜೊತೆ ಸೋದರ ಮಾವ ಗಣೇಶ್, ಸರಸ್ವತಿ ಚಿಕ್ಕಮ್ಮ ಅಂಜಿನಮ್ಮ ನಾಪತ್ತೆಯಾಗಿದ್ದು, ನಾಪತ್ತೆಯಾಗಿರುವ ಶಿವಕುಮಾರಗಾಗಿ ದಾವಣಗೆರೆ ಪೊಲೀಸರು ಬಲೆ ಬೀಸಿದ್ದಾರೆ. ಪ್ರಿಯಕರ ಶಿವಕುಮಾರ್ ಮೇಲೆ ಎರಡು ಪ್ರತ್ಯೇಕ ಅಟ್ರಾಸಿಟಿ ಪ್ರಕರಣ ದಾಖಲಾಗಿದೆ. ಮೃತ ಹರೀಶ್ ತಂದೆ ಮಹಾರುದ್ರಪ್ಪ ಅವರ ಕಡೆಯಿಂದ ಒಂದು ಅಟ್ರಾಸಿಟಿ ಕೇಸ್, ಮೃತ ರುದ್ರೇಶ್ ಪತ್ನಿ ಪೂರ್ಣಿಮಾ ಅವರಿಂದ ಒಂದು ಅಟ್ರಾಸಿಟಿ ಕೇಸ್ ದಾಖಲಿಸಿಕೊಂಡಿರುವ ಪೊಲೀಸರು ಶಿವಕುಮಾರ್ ಪತ್ತೆಗೆ ಹುಡುಕಾಟ ಮುಂದುವರೆಸಿದ್ದಾರೆ.

ನೋಡಿರಿ

