ಚಿಕ್ಕಮಗಳೂರಿನ ಈ ಪ್ರದೇಶಗಳಿಗೆ ಪ್ರವಾಸಿಗರಿಗೆ ನಿರ್ಬಂಧ! – 4 ದಿನ ನಿಷೇಧ ಯಾಕೆ?  

ಚಿಕ್ಕಮಗಳೂರಿನ ಈ ಪ್ರದೇಶಗಳಿಗೆ ಪ್ರವಾಸಿಗರಿಗೆ ನಿರ್ಬಂಧ! – 4 ದಿನ ನಿಷೇಧ ಯಾಕೆ?  

ಕಾಫಿನಾಡಿನ ಸ್ವರ್ಗ ಎಂದೇ ಕರೆಸಿಕೊಳ್ಳುವ ಮುಳ್ಳಯ್ಯನಗಿರಿಗೆ ಹೋಗಲು ಪ್ಲ್ಯಾನ್ ಮಾಡಿಕೊಂಡವರಿಗೆ ಮಹತ್ವದ ಸುದ್ದಿಯೊಂದಿದೆ. ನಾಳೆಯಿಂದ ನಾಲ್ಕು ದಿನಗಳ ಕಾಲ ಮುಳ್ಳಯ್ಯನಗಿರಿಗೆ ಪ್ರವಾಸಿಗರಿಗೆ ನಿರ್ಬಂಧ ಹೇರಲಾಗಿದೆ.

ಇದನ್ನೂ ಓದಿ: 7 ಕೋಟಿ ದರೋಡೆ ಬೆನ್ನಲ್ಲೇ ಎಚ್ಚೆತ್ತುಕೊಂಡ ಪೊಲೀಸ್‌ ಇಲಾಖೆ – RBIಗೆ ಪತ್ರ ಬರೆದ ಪೊಲೀಸರು!

ಚಿಕ್ಕಮಗಳೂರಿನ ಮುಳ್ಳಯ್ಯನಗಿರಿಯ ದತ್ತಪೀಠದಲ್ಲಿ ನಾಳೆಯಿಂದ  ದತ್ತ ಜಯಂತಿ ಆಚರಿಸಲಾಗುತ್ತಿದೆ. ಈ ಹಿನ್ನಲೆ ಚಿಕ್ಕಮಗಳೂರು ಜಿಲ್ಲಾಡಳಿತದಿಂದ ಮುಂಜಾಗ್ರತಾ ಕ್ರಮವಾಗಿ ಹಲವು ನಿರ್ಬಂಧಗಳನ್ನು ವಿಧಿಸಲಾಗಿದೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಚಿಕ್ಕಮಗಳೂರು ಜಿಲ್ಲೆಯಾದ್ಯಂತ ಪೊಲೀಸ್ ಹೈ ಅಲರ್ಟ್ ಘೋಷಣೆ ಮಾಡಿದ್ದು, ಡಿ.5ರ ಬೆಳಗ್ಗೆ 10 ಗಂಟೆಯವರೆಗೂ ಚಂದ್ರದ್ರೋಣ ಪರ್ವತದ ಸಾಲಿನ ಮುಳ್ಳಯ್ಯನಗಿರಿ, ಸೀತಾಳಯ್ಯನಗಿರಿ, ದತ್ತಾತ್ರೇಯ ಪೀಠ, ಬಾಬಾಬುಡನ್ ಸ್ವಾಮಿ ದರ್ಗಾಗೆ ಪ್ರವಾಸಿಗರಿಗೆ ನಿರ್ಬಂಧ ವಿಧಿಸಲಾಗಿದೆ.

ಇನ್ನು ಡಿ.3ರಂದು ಬೃಹತ್ ಶೋಭಾಯಾತ್ರೆ ಹಮ್ಮಿಕೊಳ್ಳಲಾಗಿದೆ. ಈ ಹಿನ್ನೆಲೆ ಚಿಕ್ಕಮಗಳೂರು ನಗರದಲ್ಲಿ ನಡೆಯಲಿರುವ ವಾರದ ಸಂತೆಗೆ ನಿಷೇಧ ವಿಧಿಸಲಾಗಿದೆ. ಡಿ. 4ರಂದು ದತ್ತ ಪಾದುಕೆ ದರ್ಶನ ಹಿನ್ನೆಲೆ ಚಿಕ್ಕಮಗಳೂರು ನಗರ ಸೇರಿ ಜಿಲ್ಲೆಯ ಪ್ರಮುಖ ಪಟ್ಟಣಗಳು ಬಂದ್ ಆಗಲಿದ್ದು, ಅಂಗಡಿ ಮುಂಗಟ್ಟು ಬಂದ್ ಮಾಡುವಂತೆ ಜಿಲ್ಲಾಡಳಿತ ಸೂಚಿಸಿದೆ.

ಈ ಬಗ್ಗೆ ಜಿಲ್ಲಾಧಿಕಾರಿ ಮೀನಾ ನಾಗರಾಜ್ ಮಾಹಿತಿ ನೀಡಿದ್ದು, ದತ್ತ ಜಯಂತಿ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಬಂದೋಬಸ್ತ್​​ ಕಾರ್ಯಕ್ಕೆ ಪೊಲೀಸರ ಜೊತೆಗೆ 15ಕ್ಕೂ ಹೆಚ್ಚು ಡ್ರೋನ್​​ ಕ್ಯಾಮರಾಗಳನ್ನು ಬಳಸಿಕೊಳ್ಳಲಾಗುತ್ತಿದೆ. ವಿವಿಧ ಸ್ಥಳಗಳಲ್ಲಿ ಒಟ್ಟು 28 ಚೆಕ್​ಪೋಸ್ಟ್​​ಗಳನ್ನು ತೆರೆಯಲಾಗಿದ್ದು, ಹಗಲು, ರಾತ್ರಿ ಕಣ್ಗಾವಲು ಇರಲಿದೆ. ದೇಗುಲದ ಒಳಗೆ ಫೋಟೋಗಳನ್ನು ಕ್ಲಿಕ್ ಮಾಡುವುದು ಮತ್ತು ವೀಡಿಯೊಗಳನ್ನು ಚಿತ್ರೀಕರಣ ನಿಷೇಧಿಸಲಾಗಿದೆ. ಭಕ್ತಾದಿಗಳು ಪ್ಲಾಸ್ಟಿಕ್​​ ವಸ್ತುಗಳನ್ನು ಬಳಸದಂತೆ ಮತ್ತು ದಾರಿಯಲ್ಲಿ ಕಸ ಹಾಕದಂತೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ದತ್ತ ಜಯಂತಿ ದಿನ ಅಂದರೆ ಡಿ.4ರಂದು ಬೆಳಗ್ಗೆ 6 ಗಂಟೆಯಿಂದ ಭಕ್ತರನ್ನು ಪೀಠಕ್ಕೆ ಬಿಡಲಾಗುವುದು. ಮಧ್ಯಾಹ್ನ 2 ಗಂಟೆ ನಂತರ ಪೀಠಕ್ಕೆ ತೆರಳಲು ಅವಕಾಶ ಇರುವುದಿಲ್ಲ. ಸುಪ್ರೀಂ ಕೋರ್ಟ್‌ನ ನಿರ್ದೇಶನದಂತೆ ಉತ್ಸವಗಳನ್ನು ನಡೆಸಲಾಗುವುದು ಎಂದು ಈಗಾಗಲೇ  ತಿಳಿಸಿದ್ದಾರೆ.

Shwetha M