ಕೆ.ಎಲ್ ರಾಹುಲ್ ಮತ್ತು ಅಥಿಯಾ ಮದುವೆಗೆ ಡೇಟ್ ಫಿಕ್ಸ್ – ಜನವರಿ 23ಕ್ಕೆ ಸೆಲೆಬ್ರಿಟಿ ಜೋಡಿಗಳ ಕಲ್ಯಾಣ
ಟೀಮ್ ಇಂಡಿಯಾ ಆಟಗಾರ ಕೆ.ಎಲ್ ರಾಹುಲ್ ಮತ್ತು ಬಾಲಿವುಡ್ ನಟ ಸುನಿಲ್ ಶೆಟ್ಟಿ ಮಗಳು ಅಥಿಯಾ ಶೆಟ್ಟಿ ಮದುವೆ ಡೇಟ್ ಕೊನೆಗೂ ಫಿಕ್ಸ್ ಆಗಿದೆ. ಇತ್ತೀಚಿನ ದಿನಗಳಲ್ಲಿ ಕೆ.ಎಲ್ ರಾಹುಲ್ ಮತ್ತು ಅಥಿಯಾ ಶೆಟ್ಟಿ ಮದುವೆ ವಿಚಾರವೇ ಸದ್ದು ಮಾಡ್ತಿತ್ತು. ಕೆ. ಎಲ್ ರಾಹುಲ್ ತಮ್ಮ ಬಹುಕಾಲದ ಗೆಳತಿ ಅಥಿಯಾ ಜೊತೆ ಜನವರಿಗೆ ಹಸೆಮಣೆಯೇರಲಿದ್ದಾರೆ.
ಇದನ್ನೂ ಓದಿ: ರೊನಾಲ್ಡೋ ಬೆಂಚಲ್ಲಿ ಕೂರಿಸಿದ ಪೋರ್ಚುಗಲ್ ಔಟ್- ಕೋಚ್‌ಗೆ ಫುಟ್ಬಾಲ್ ಪಾಠ ಹೇಳಿದ ವಿಶ್ವಶ್ರೇಷ್ಠ ಆಟಗಾರನ ಗರ್ಲ್‌ಫ್ರೆಂಡ್!
ಡಿಸೆಂಬರ್ ಅಂತ್ಯಕ್ಕೆ ಕೆ. ಎಲ್ ರಾಹುಲ್ ಮತ್ತು ಅಥಿಯಾ ಶೆಟ್ಟಿ ಮದುವೆ ಎಂದು ಹೇಳಲಾಗ್ತಿತ್ತು. ಕೊನೆಗೂ ಜನವರಿ 23ಕ್ಕೆ ಮದುವೆ ದಿನಾಂಕ ನಿಗದಿಪಡಿಸಲಾಗಿದೆ. ಸುನೀಲ್ ಶೆಟ್ಟಿ ಮತ್ತು ರಾಹುಲ್ ಕುಟುಂಬ ಮದುವೆ ದಿನಾಂಕವನ್ನು ಅಂತಿಮ ಗೊಳಿಸಿದ್ದಾರೆ. ಜನವರಿ 21ರಿಂದ ಮದುವೆ ಕಾರ್ಯಕ್ರಮಗಳು ಶುರುವಾಗಲಿದೆ. ಮೂರು ದಿನಗಳು ನಡೆಯುವ ಅದ್ದೂರಿ ಮದುವೆ ಸಮಾರಂಭದಲ್ಲಿ ಕುಟುಂಬದವರು, ಆಪ್ತರು ಮತ್ತು ಸ್ನೇಹಿತರು ಮಾತ್ರ ಭಾಗವಹಿಸಲಿದ್ದಾರೆ. ಮೆಹಂದಿ, ಹಳದಿ, ಸಂಗೀತ ಸಮಾರಂಭ ಸೇರಿದಂತೆ ಎಲ್ಲಾ ಶಾಸ್ತ್ರಗಳನ್ನು ಸಂಪ್ರದಾಯ ಬದ್ಧವಾಗಿ ನೆರವೇರಿಸಲು ಎರಡು ಕುಟುಂಬಗಳು ನಿರ್ಧರಿಸಿದೆ. ರಾಹುಲ್ ಮತ್ತು ಅಥಿಯಾ ಶೆಟ್ಟಿ ಮದುವೆ ಪಕ್ಕಾ ದಕ್ಷಿಣ ಭಾರತದ ಶೈಲಿಯಲ್ಲಿ ನಡೆಸಲು ನಿರ್ಧರಿಸಲಾಗಿದೆ ಎನ್ನಲಾಗ್ತಿದೆ. ಇನ್ನು ವಿಶೇಷ ಎಂದರೆ ಸುನಿಲ್ ಶೆಟ್ಟಿ ಅವರ ಖಂಡಾಲ ಬಂಗಲೆ ಜಹಾನ್‌ನಲ್ಲೇ ಮದುವೆ ನಡೆಯಲಿದೆ ಎಂಬ ಮಾಹಿತಿ ಹೊರಬಿದ್ದಿದೆ.
ಸದ್ಯದಲ್ಲೇ ಕೆ.ಎಲ್ ರಾಹುಲ್ ಮದುವೆಯಾಗುತ್ತಿದ್ದಾರೆ ಅನ್ನೋ ಸುದ್ದಿ ಹರಿದಾಡುತ್ತಲೇ ಇತ್ತು. ಇದಕ್ಕೆ ಸರಿಯಾಗಿ ಕ್ರಿಕೆಟಿಗ ರಾಹುಲ್ ಕೂಡಾ ಆಗಾಗ್ಗೆ ರಜೆ ಮೂಲಕ ವಿಶ್ರಾಂತಿಯಲ್ಲಿ ಇರುತ್ತಿದ್ದರು. ಕೆಲ ದಿನಗಳ ಹಿಂದೆ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಆಗಮಿಸಿದ ಕೆ.ಎಲ್ ರಾಹುಲ್ ವಿಶೇಷ ಪೂಜೆ ಕೂಡಾ ನೆರವೇರಿಸಿದ್ದರು.