ಲಾಲ್ಬಾಗ್ ಮಾವು, ಹಲಸಿನ ಮೇಳಕ್ಕೆ ದಿನಾಂಕ ಫಿಕ್ಸ್! – ಯಾವಾಗಿನಿಂದ ಆರಂಭ?
ಹಣ್ಣುಗಳ ರಾಜನೆಂದೇ ಕರೆಯಲ್ಪಡುವ ಮಾವಿನ ಹಣ್ಣನ್ನು ಅನೇಕರು ಇಷ್ಟ ಪಡುತ್ತಾರೆ. ಬೇಸಿಗೆ ಕಾಲದಲ್ಲಿ ಹೆಚ್ಚಾಗಿ ಸಿಗುವ ಈ ಹಣ್ಣು ಎಂದರೆ ಸಾಕು ಎಲ್ಲರ ಬಾಯಲ್ಲಿ ನೀರು ಬರುತ್ತದೆ. ಹಳ್ಳಿಗಳಲ್ಲಿ ಬಗೆ ಬಗೆಯ ಮಾವುಗಳು ಲಭ್ಯವಿರುತ್ತದೆ. ಆದ್ರೆ ಸಿಟಿಗಳಲ್ಲಿ ಒಳ್ಳೆಯ ತಳಿಯ ಮಾವು ಹುಡುಕಲು ಪರದಾಡಬೇಕಾಗುತ್ತದೆ. ಇದೀಗ ಬೆಂಗಳೂರಿನ ಮಾವು ಪ್ರಿಯರಿಗೆ ಗುಡ್ನ್ಯೂಸ್ ಇದೆ. ಸಿಲಿಕಾನ್ ಸಿಟಿ ಜನರು ಬಹಳ ಕಾತುರದಿಂದ ಕಾಯುತ್ತಿದ್ದ ಲಾಲ್ಬಾಗ್ ಮಾವಿನ ಮೇಳಕ್ಕೆ ದಿನಾಂಕ ನಿಗದಿಯಾಗಿದೆ.
ಇದನ್ನೂ ಓದಿ: ಸ್ಕಾಟ್ಲೆಂಡ್ ಜೆರ್ಸಿ ಮೇಲೆ ಕನ್ನಡ ಡಿಂಡಿಮ – ನಂದಿನಿ ಲೋಗೋ ನೋಡಿ ಸಿಎಂ ಸಿದ್ದು ಸಂತಸ
ಮೇ 24 ರಿಂದ ಜೂನ್ 10 ರವರೆಗೂ ಮಾವು ಹಾಗೂ ಹಲಸಿನ ಮೇಳ ಮಾಡುವುದಕ್ಕೆ ಮಾವು ಅಭಿವೃದ್ಧಿ ನಿಗಮ ಹಾಗೂ ಲಾಲ್ ಬಾಗ್ ತೋಟಗಾರಿಕೆ ಇಲಾಖೆ ನಿರ್ಧರಿಸಿದೆ. ಈ ಮಾವಿನ ಮೇಳಕ್ಕೆ ಕೋಲಾರ, ಶ್ರೀನಿವಾಸಪುರ, ಚಿಂತಾಮಣಿ, ಬೆಂಗಳೂರು ಗ್ರಾಮಾಂತರ, ಹಾವೇರಿ, ಧಾರವಾಡ ಸೇರಿದಂತೆ ನಾನಾ ಜಿಲ್ಲೆಗಳ ಮಾವು ಬೆಳೆಗಾರರು ಮೇಳದಲ್ಲಿ ಭಾಗವಹಿಸಲಿದ್ದಾರೆ. ಮೇಳದಲ್ಲಿ ವಾಣಿಜ್ಯ, ಪಾರಂಪರಿಕ ಮಾವಿನ ತಳಿಗಳು, ಜೊತೆಗೆ ಉಪ್ಪಿನಕಾಯಿಗೆ ಬಳಸುವ ಆಮ್ಲೆಟ್, ಮಿಡಿ ಮಾವು ಪ್ರದರ್ಶನ ಮತ್ತು ಮಾರಾಟ ವ್ಯವಸ್ಥೆ ಇರಲಿದೆ.
ಇನ್ನು ಐಐಎಚ್ಆರ್, ಜಿಕೆವಿಕೆ ಮತ್ತಿತರ ಸಂಸ್ಥೆಗಳು ಅಭಿವೃದ್ಧಿಪಡಿಸಿದ ಹಲಸಿನ ತಳಿಗಳು, ರೈತರು ಬೆಳೆದ ನಾನಾ ತಳಿಯ ಹಲಸಿನ ಹಣ್ಣನ್ನು ಮಾರಾಟ ಮಾಡಲಾಗುತ್ತೆ. ಈ ವರ್ಷದ ಮೇಳದಲ್ಲಿ ಬಾದಾಮಿ, ರಸಪುರಿ, ಸೇಂಧೂರ, ಮಲಗೋವ, ನೀಲಂ, ಮಲ್ಲಿಕಾ, ಆಮ್ರಪಾಲಿ, ಬಂಗನಪಲ್ಲಿ, ತೋತಾಪುರಿ, ಸಕ್ಕರೆಗುತ್ತಿ ಸೇರಿದಂತೆ ನಾನಾ ತಳಿಯ ಹಣ್ಣುಗಳು ಇರಲಿವೆ. ಇನ್ನು ಪ್ರತಿವರ್ಷ ಮಾವಿನ ಸೀಸನ್ನಲ್ಲಿ ರಾಜ್ಯದಲ್ಲಿ ಸುಮಾರು 15 ಲಕ್ಷ ಟನ್ ಮಾವು ಉತ್ಪಾದನೆಯಾಗಬೇಕಿತ್ತು. ಆದರೆ, ಮಳೆಯಿಲ್ಲದ ಪರಿಣಾಮ ಹಾಗೂ ಅಧಿಕ ತಾಪಮಾನದಿಂದಾಗಿ ಕೇವಲ 4-5 ಲಕ್ಷ ಟನ್ನಷ್ಟು ಮಾವಿನ ಫಸಲು ಕಡಿಮೆ ಬಂದಿದೆ. ಹೀಗಾಗಿ ಈ ಬಾರಿ ಮೇಳದಲ್ಲಿ ದರ ಕೊಂಚ ಹೆಚ್ಚೇ ಇರಲಿದೆ.