50 ದಿನ ಪೂರೈಸಿದ ‘ಡೇರ್ ಡೆವಿಲ್ ಮುಸ್ತಾಫಾ’ – ಚಿತ್ರತಂಡದಿಂದ ಬಿರಿಯಾನಿ, ಪುಳಿಯೊಗರೆ ಪಾರ್ಟಿ

50 ದಿನ ಪೂರೈಸಿದ ‘ಡೇರ್ ಡೆವಿಲ್ ಮುಸ್ತಾಫಾ’ – ಚಿತ್ರತಂಡದಿಂದ ಬಿರಿಯಾನಿ, ಪುಳಿಯೊಗರೆ ಪಾರ್ಟಿ

ಸ್ಯಾಂಡಲ್‌ವುಡ್‌ನಲ್ಲಿ ‘ಡೇರ್ ಡೆವಿಲ್ ಮುಸ್ತಾಫಾ’ನ ಹವಾ ಮುಂದುವರೆದಿದೆ. ಯಶಸ್ವಿ 50 ದಿನ ಪೂರೈಸಿದ ಡೇರ್ ಡೆವಿಲ್ ಮುಸ್ತಾಫಾನ ಬಳಗ ಖುಷಿಯಲ್ಲಿ ತೇಲಾಡುತ್ತಿದೆ. ಬಿರಿಯಾನಿ, ಪುಳಿಯೊಗರೆ ಪಾರ್ಟಿ ಮಾಡುವ ಮೂಲಕ ಚಿತ್ರತಂಡ ಸಂಭ್ರಮಿಸಿದೆ. ಒಳ್ಳೆಯ ಸಿನಿಮಾಗಳು ಬಂದಾಗ ಜನರು ಖಂಡಿತವಾಗಿಯೂ ಬೆಂಬಲ ನೀಡುತ್ತಾರೆ ಎಂಬ ನಂಬಿಕೆ ಗಾಂಧಿನಗರದಲ್ಲಿದೆ. ಈ ಸಿನಿಮಾದ ವಿಚಾರದಲ್ಲೂ ಈ ಮಾತು ನಿಜವಾಗಿದೆ.

ಇದನ್ನೂ ಓದಿ: ಸ್ಯಾಂಡಲ್‌ವುಡ್‌ನಲ್ಲಿ ‘ಡೇರ್‌ಡೆವಿಲ್ ಮುಸ್ತಾಫಾ’ ಹವಾ – ತೆರಿಗೆ ವಿನಾಯಿತಿ ನೀಡಿ ಆದೇಶ ಹೊರಡಿಸಿದ ಸಿಎಂ ಸಿದ್ದರಾಮಯ್ಯ

ಪೂರ್ಣಚಂದ್ರ ತೇಜಸ್ವಿಯವರ ಕಥೆಯಾಧಾರಿತ ಡೇರ್ ಡೆವಿಲ್ ಮುಸ್ತಾಫಾ ಭರ್ಜರಿಯಾಗಿ ಐವತ್ತು ದಿನ ಪೂರೈಸಿದೆ. ಅಮೆಜಾನ್ ಪ್ರೈಮ್ ಒಟಿಟಿಯಲ್ಲಿಯೂ ಭರಪೂರ ಮೆಚ್ಚುಗೆ ಪಡೆಯುತ್ತಿದೆ. ಬೆಂಗಳೂರಿನ ಚಾಮರಾಜಪೇಟೆಯ ಕಲಾವಿದರ ಸಂಘದಲ್ಲಿ ಐವತ್ತು ದಿನದ ಸಂಭ್ರಮಾಚರಣೆ ನಡೆದಿದೆ. ಈ ವೇಳೆ ಬಿರಿಯಾನಿ ಪುಳಿಯೊಗರೆ ಪಾರ್ಟಿ ಮಾಡಿ ಇಡೀ ಡೇರ್ ಡೆವಿಲ್ ಮುಸ್ತಾಫ್ ಬಳಗ ಸಂಭ್ರಮಿಸಿದೆ. ಡೇರ್ ಡೆವಿಲ್ ಮುಸ್ತಾಫಾ ಸಿನಿಮಾವನ್ನು ತಮ್ಮದೇ ಡಾಲಿ ಪಿಕ್ಚರ್ಸ್ ನಡಿ ಪ್ರೆಸೆಂಟ್ ಮಾಡಿರುವ ಧನಂಜಯ್ ಈ ಸಂಭ್ರಮದಲ್ಲಿ ಪಾಲ್ಗೊಂಡಿದ್ದರು. ಈ ಸಂದರ್ಭದಲ್ಲಿ ಮಾತನಾಡಿದ, ನಾನು ಡೇರ್ ಡೆವಿಲ್ ಮುಸ್ತಾಫಾ ಸಿನಿಮಾದ ಭಾಗವಾಗಿರುವುದು ನನಗೆ ಖುಷಿ. ಡೇರ್ ಡೆವಿಲ್ ಮುಸ್ತಾಫಾ ಮಾಸ್ ಸಿನಿಮಾ ಅಂತಾನೇ ಕರೆಯುತ್ತೇನೆ. ಥಿಯೇಟರ್ ನಲ್ಲಿ‌ ಕುಳಿತು ನೋಡಿ ಸೆಲೆಬ್ರೇಟ್ ಮಾಡುವ ಸಿನಿಮಾ. ಹಳೆ ಬೇರು ಹೊಸ ಚಿಗರು ಕೂಡಿರಲು ಮರ ಸೊಬಗು ಎನ್ನುವಂತೆ ಹಿರಿಯರು ಹಾಗೂ ಕಿರಿಯರು ಎಲ್ಲರೂ ಇಟ್ಟುಕೊಂಡು ಸಿನಿಮಾವನ್ನು ಅದ್ಭುತವಾಗಿ ಕಟ್ಟಿಕೊಡಲಾಗಿದೆ ಎಂದರು.

ಇದು ಪೂರ್ಣಚಂದ್ರ ತೇಜಸ್ವಿ ಅಭಿಮಾನಿಗಳೇ ನಿರ್ಮಾಣ ಮಾಡಿರುವ ಸಿನಿಮಾ. ಅನಂತ ಶಾಂತಯ್ಯ ಜೊತೆಗೂಡಿ ಚಿತ್ರಕಥೆ ಬರೆದಿರುವ ಶಶಾಂಕ್ ಸೋಗಾಲ್  ಅವರು ಈ ಸಿನಿಮಾ ನಿರ್ದೇಶನ ಮಾಡಿದ್ದಾರೆ. ರಾಹುಲ್ ರಾಯ್ ಛಾಯಾಗ್ರಹಣ, ಶಶಾಂಕ್ ಸೋಗಾಲ್, ಸಂಪತ್ ಸಿರಿಮನೆ, ಡಾಲಿ ಧನಂಜಯ್ ಸಾಹಿತ್ಯದ ಹಾಡುಗಳಿಗೆ ನವನೀತ್ ಶ್ಯಾಮ್ ಸಂಗೀತವಿದೆ. ಶಿಶಿರ್ ಬೈಕಾಡಿ, ಆದಿತ್ಯ ಅಶ್ರೀ, ಅಭಯ್, ಸುಪ್ರೀತ್ ಭಾರದ್ವಾಜ್, ಆಶಿತ್, ಶ್ರೀವತ್ಸ, ಪ್ರೇರಣಾ, ಎಂ.ಎಸ್. ಉಮೇಶ್, ಮಂಡ್ಯ ರಮೇಶ್, ಮೈಸೂರ್ ಆನಂದ್, ಸುಂದರ್ ವೀಣಾ, ನಾಗಭೂಷಣ್, ಪೂರ್ಣಚಂದ್ರ ಮೈಸೂರು ಸೇರಿ ಅನೇಕ ಕಲಾವಿದರು ಸಿನಿಮಾದ ಭಾಗವಾಗಿದ್ದಾರೆ.

suddiyaana