ದೇಶವನ್ನೇ ಬೆಚ್ಚಿ ಬೀಳಿಸಿದ್ದ ‘ಕ್ಯಾಪ್ಸುಲ್’ ಕೊನೆಗೂ ಪತ್ತೆ – ಹೇಗಿತ್ತು ಗೊತ್ತಾ 6 ದಿನಗಳ ಹುಡುಕಾಟ..!?

ದೇಶವನ್ನೇ ಬೆಚ್ಚಿ ಬೀಳಿಸಿದ್ದ ‘ಕ್ಯಾಪ್ಸುಲ್’ ಕೊನೆಗೂ ಪತ್ತೆ – ಹೇಗಿತ್ತು ಗೊತ್ತಾ 6 ದಿನಗಳ ಹುಡುಕಾಟ..!?

ಹೇಳೋದಿಕ್ಕೆ ಇದೊಂದು ನಾಣ್ಯಕ್ಕಿಂತಲೂ ಸಣ್ಣದಾದ ಕ್ಯಾಪ್ಸುಲ್. ಆದರೆ ಈ ಕಾಪ್ಸುಲ್​ಗಾಗಿ ಇಡೀ ದೇಶವೇ ಹುಡುಕಾಟ ನಡೆಸಿದೆ. ಕಳೆದು ಹೋದ ಕ್ಯಾಪ್ಸುಲ್ ಇನ್ನೇನು ಅನಾಹುತಕ್ಕೆ ಎಡೆ ಮಾಡಿಕೊಡುತ್ತೋ ಎಂದೂ ಆತಂಕದಲ್ಲಿದ್ದ ಜನ ಆರು ದಿನಗಳ ಬಳಿಕ ನಿಟ್ಟುಸಿರು ಬಿಟ್ಟಿದ್ದಾರೆ.

ಇದನ್ನೂ ಓದಿ : ‘ಪಠಾಣ್ ಸೋತಿದ್ದರೆ ಹೋಟೆಲ್​ನಲ್ಲಿ ಅಡುಗೆ ಮಾಡ್ತಿದ್ದೆ’ – ಶಾರುಖ್ ಖಾನ್ ಮಾಡಿದ್ದ ನಿರ್ಧಾರ ಏನು..?

ಹೌದು. ಆಸ್ಟ್ರೇಲಿಯಾ ದೇಶದಲ್ಲಿ ವಿಕಿರಣಶೀಲ ಮತ್ತು ಅಪಾಯಕಾರಿ ಕ್ಯಾಪ್ಸುಲ್ ಗಣಿ ಸೈಟ್ ನಿಂದ ಪರ್ತ್ ನಗರದ ಕಡೆ ಸಾಗಾಟ ಮಾಡುವ ವೇಳೆ ಟ್ರಕ್ ನಿಂದ ಬಿದ್ದು ಹೋಗಿತ್ತು. ಅಲ್ಲಿಯ ಅಗ್ನಿಶಾಮಕ ಮತ್ತು ತುರ್ತು ಸೇವೆ ಇಲಾಖೆಯ ಅಧಿಕಾರಿಗಳು ವಿಕಿರಣ ಪತ್ತೆ ಸಾಧನಗಳ ಸಹಾಯದೊಂದಿಗೆ ತೀವ್ರ ಶೋಧ ನಡೆಸಿದ್ದರು. ಆದರೆ ಟ್ರಕ್ ಸುಮಾರು 1,400 ಕಿಲೋಮೀಟರ್ಸ್ ನಷ್ಟು ದೂರ ಚಲಿಸಿದ ಕಾರಣ ವಿಕಿರಣಶೀಲ ಕಾಪ್ಸುಲ್ ಎಲ್ಲಿ ಕಳೆದುಹೋಗಿರಬಹುದು ಎನ್ನುವ ಬಗ್ಗೆ ಅಧಿಕಾರಿಗಳಿಗೆ ಖಚಿತ ಮಾಹಿತಿ ಇರಲಿಲ್ಲ. ನಿರಂತರ ಹುಡುಕಾಟದ ಬಳಿಕ ಕೊನೆಗೂ ಕಾಪ್ಸುಲ್ ಪತ್ತೆಯಾಗಿದೆ.

ಏನಿದು ವಿಕಿರಣಶೀಲ ಕ್ಯಾಪ್ಸುಲ್?

ವಿಕಿರಣಶೀಲ ಕಾಪ್ಸುಲ್ ಕಬ್ಬಿಣದ ಅದಿರಿನ ಸಾಂದ್ರತೆಯನ್ನ ಅಳೆಯುವ ಗೇಜ್ ನ ಒಂದು ಭಾಗವಾಗಿದೆ. ಇದು ಸೀಸಿಯಂ -137(Cesium-137) ನಿಂದ ಮಾಡಲ್ಪಟ್ಟಿದೆ ಮತ್ತು ಅಪಾಯಕಾರಿ ವಿಕಿರಣಗಳನ್ನ ಹೊರಸೂಸುವ ಐಸೋಟೋಪ್ ಇದಾಗಿದೆ. ಸೀಸಿಯಂ -137 ಮುಖ್ಯವಾಗಿ ನ್ಯೂಕ್ಲಿಯರ್ ರಿಯಾಕ್ಟರ್ ಮತ್ತು ಪರಮಾಣು ಶಸ್ತ್ರಾಸ್ತ್ರ ಪರೀಕ್ಷೆಯಲ್ಲಿನ ಪರಮಾಣು ವಿದಳನ (nuclear fission) ಪ್ರಕ್ರಿಯೆಯ ಉಪ ಉತ್ಪನ್ನಗಳಲ್ಲಿ ಒಂದಾಗಿದೆ.

ಆಸ್ಟ್ರೇಲಿಯಾದಲ್ಲಿ ಕಳೆದು ಹೋಗಿದ್ದ ಕಾಪ್ಸುಲ್ ಮಾರಣಾಂತಿಕವಾಗಿದ್ದು, ಅಪಾಯಕಾರಿ ವಿಕಿರಣಗಳನ್ನ ಹೊರಸೂಸುವ ಸಾಮರ್ಥ್ಯವನ್ನ ಹೊಂದಿದೆ. ಇದು ಗಾಮಾ ಮತ್ತು ಬೀಟಾ ಕಿರಣಗಳನ್ನ ಹೊರಸೂಸುತ್ತದೆ. ಇದರಿಂದಾಗಿ ಜನರಲ್ಲಿ ಚರ್ಮ ಸುಡುವಿಕೆ ಮತ್ತು ಕ್ಯಾನ್ಸರ್​ನಂಥ ಅಪಾಯವನ್ನು ಹೆಚ್ಚಿಸುತ್ತದೆ ಎಂದು ವಿಜ್ಞಾನಿಗಳು ಎಚ್ಚರಿಕೆ ನೀಡಿದ್ದರು. ಕ್ಯಾಪ್ಸುಲ್ ನಲ್ಲಿರುವ ವಿಕಿರಣಶೀಲ ವಸ್ತು 30 ವರ್ಷದ ಜೀವಿತಾವಧಿಯನ್ನ ಹೊಂದಿದ್ದು ಇದು ಮತ್ತಷ್ಟು ಭೀತಿಗೆ ಕಾರಣವಾಗಿತ್ತು.

ಪಶ್ಚಿಮ ಆಸ್ಟ್ರೇಲಿಯಾದ ಗಣಿಗಾರಿಕೆ ಸ್ಥಳದಿಂದ ಟ್ರಕ್‌ ಮೂಲಕ ಗೇಜ್ ಅನ್ನು ಸ್ಥಳಾಂತರಿಸಲಾಗಿತ್ತು. ಜನವರಿ 12 ರಂದು ರಿಯೊ ಟಿಂಟೊದ ಗುಡೈ-ಡಾರಿ ಕಬ್ಬಿಣದ ಅದಿರು ಗಣಿಯಿಂದ ಪಡೆದ ಪ್ಯಾಕೇಜ್‌ನ ಭಾಗವಾಗಿತ್ತು. ಜನವರಿ 16 ರಂದು ಮಲಗಾ ಪರ್ತ್ ಉಪನಗರಕ್ಕೆ ತಲುಪಿಸಲಾಗಿತ್ತು. ಆದರೆ ಜನವರಿ 25ರವರೆಗೆ ಗೇಜ್ ಓಪನ್ ಮಾಡಿರಲಿಲ್ಲ. ಬಳಿಕ ಗೇಜ್ ಓಪನ್ ಮಾಡಿದಾಗ ಕ್ಯಾಪ್ಸುಲ್ ಕಾಣೆಯಾಗಿರೋದು ಗೊತ್ತಾಗಿತ್ತು. ಅದೇ ದಿನ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಲಾಗಿತ್ತು. ಬಳಿಕ ಸತತ ಆರು ದಿನಗಳಿಂದ ಕ್ಯಾಪ್ಸುಲ್​ಗಾಗಿ ಹುಡುಕಾಟ ನಡೆಸಲಾಗುತ್ತಿತ್ತು. ಸದ್ಯ ಗಣಿಪ್ರದೇಶದಿಂದ ಕೆಲವೇ ದೂರದಲ್ಲಿ ಕ್ಯಾಪ್ಸುಲ್ ಪತ್ತೆಯಾಗಿದ್ದು, ಇಡೀ ಆಸ್ಟ್ರೇಲಿಯಾವೇ ನಿಟ್ಟುಸಿರು ಬಿಟ್ಟಿದೆ.

suddiyaana