ಬಾಗಿಲು ಬಡಿತಿದ್ದಾರೆ ಪಡಿಕ್ಕಲ್ – ಇನ್ನಾದ್ರೂ ಓಪನ್ ಮಾಡುತ್ತಾ BCCI?
KL ನಂತ್ರ ಸಿಗುತ್ತಾ ಪರ್ಮನೆಂಟ್ ಚಾನ್ಸ್?

ದೇವದತ್ ಪಡಿಕ್ಕಲ್. ಕ್ರಿಕೆಟ್ ಲೋಕದಲ್ಲಿ ಒಂಥರಾ ಎಲೆ ಮರೆಯ ಕಾಯಿ ಇದ್ದಂತೆ. ಡೊಮೆಸ್ಟಿಕ್ ಕ್ರಿಕೆಟ್ನಲ್ಲಿ ರನ್ ಮಳೆ ಸುರಿಸಿದ್ರೂ ಟೀಂ ಇಂಡಿಯಾದಲ್ಲಿ ಅವಕಾಶ ಸಿಕ್ಕಿದ್ದು ಕಡಿಮೆಯೇ. ಈಗ ವಿಜಯ್ ಹಜಾರೆ ಟ್ರೋಫಿ ಟೂರ್ನಿಯಲ್ಲಂತೂ ಪಡಿಕ್ಕಲ್ ಪರಾಕ್ರಮ ಪೀಕ್ನಲ್ಲಿದೆ. ಸೆಂಚುರಿಗಳ ಸುನಾಮಿ ಎಬ್ಬಿಸಿದ್ದಾರೆ. ಎದುರಾಳಿ ಬೌಲರ್ಗಳ ಬೆವರಿಳಿಸಿದ್ದಾರೆ.
ಇದನ್ನೂ ಓದಿ : ಮಯಾಂಕ್ & ದೇವದತ್ ಪಡಿಕ್ಕಲ್ ಶತಕ – ಕರ್ನಾಟಕದ ಪರ ಸಿಡಿಲಬ್ಬರದ ಆಟ
ಡೊಮೆಸ್ಟಿಕ್ ಕ್ರಿಕೆಟ್ನಲ್ಲಿ ಪ್ರತಿಷ್ಠಿತ ಟೂರ್ನಿಯಾಗಿರೋ ವಿಜಯ್ ಹಜಾರೆ ಟ್ರೋಫಿ ಪಂದ್ಯಾವಳಿಯಲ್ಲಿ ದೇಶೀಯ ಮತ್ತು ಟೀಂ ಇಂಡಿಯಾದ ಆಟಗಾರರೂ ಆಡ್ತಿದ್ದಾರೆ. ಆದ್ರೆ ಯಾರಿಂದಲೂ ಸಾಧ್ಯವಾಗದ್ದನ್ನ ಕನ್ನಡಿಗ ದೇವದತ್ ಪಡಿಕ್ಕಲ್ ಸಾಧಿಸಿ ತೋರಿಸಿದ್ದಾರೆ. ಭಾರತ ತಂಡದ ಟಿ-20 ಟೀಂನಲ್ಲಿ ಆಡೋಕೆ ಸಿಕ್ಕಿದ್ದು ಎರಡೇ ಮ್ಯಾಚ್ಗಳು. ಟೆಸ್ಟ್ನಲ್ಲಿ ಆಡಿದ್ದೂ ಎರಡೇ ಪಂದ್ಯ.. ಇನ್ನು ಏಕದಿನ ಪಂದ್ಯಗಳಿಗೆ ಪದಾರ್ಪಣೆ ಮಾಡೋ ಭಾಗ್ಯವೇ ಇನ್ನೂ ಸಿಕ್ಕಿಲ್ಲ. ಆದ್ರೆ ಬಿಸಿಸಿಐನ ಬಾಸ್ಗಳೇ ತಿರುಗಿ ನೋಡುವಂತೆ ಮೈದಾನದಲ್ಲಿ ಘೀಳಿಡ್ತಿರೋ ದೇವದತ್ ಪಡಿಕ್ಕಲ್ ಈಗ ರಿಯರ್ ವಾರಿಯರ್ ಆಗಿ ಬದಲಾಗಿದ್ದಾರೆ.
ವಿಜಯ್ ಹಜಾರೆಯ 4 ಪಂದ್ಯಗಳಲ್ಲಿ 3 ಶತಕ!
2025-26ರ ವಿಜಯ್ ಹಜಾರೆ ಟ್ರೋಫಿ ಟೂರ್ನಿಯಲ್ಲಿ ಕರ್ನಾಟಕ ಪರ ಆಡ್ತಿರೋ ದೇವದತ್ ಪಡಿಕ್ಕಲ್ ಅದ್ಭುತ ಫಾರ್ಮ್ನಲ್ಲಿದ್ದಾರೆ. ತಂಡದ ಪರ ಓಪನರ್ ಆಗಿ ಕಣಕ್ಕಿಳಿಯೋ ಪಡಿಕ್ಕಲ್ ನಾಲ್ಕು ಪಂದ್ಯಗಳ ಪೈಕಿ ಮೂರು ಸೆಂಚುರಿ ಬಾರಿಸಿದ್ದಾರೆ. ಬುಧವಾರ ನಡೆದ ಪುದುಚೇರಿ ವಿರುದ್ಧದ ನಾಲ್ಕನೇ ಪಂದ್ಯದಲ್ಲೂ ಸಾಲಿಡ್ ಪ್ರದರ್ಶನ ನೀಡಿದ್ದಾರೆ. ಈ ಪಂದ್ಯದಲ್ಲಿ 116 ಎಸೆತಗಳನ್ನು ಎದುರಿಸಿದ ಪಡಿಕ್ಕಲ್ 10 ಬೌಂಡರಿ ಮತ್ತು ನಾಲ್ಕು ಸಿಕ್ಸರ್‌ಗಳನ್ನು ಒಳಗೊಂಡಂತೆ 113 ರನ್ ಸಿಡಿಸಿದ್ದಾರೆ. ಇದಕ್ಕೂ ಮುನ್ನ ನಡೆದಿದ್ದ ಪಂದ್ಯಗಳಲ್ಲೂ ರನ್ ಮಳೆ ಸುರಿಸಿದ್ರು.
ಪರಾಕ್ರಮಿ ಪಡಿಕ್ಕಲ್!
ದಿನಾಂಕ ಎದುರಾಳಿ ರನ್ಸ್
ಡಿ.24 ಜಾರ್ಖಂಡ್ 147 (118)
ಡಿ.26 ಕೇರಳ 124(137)
ಡಿ.29 ತಮಿಳುನಾಡು 22(12)
ಡಿ.31 ಪುದುಚೇರಿ 113(116)
ಹೀಗೆ ದೇವದತ್ ಪಡಿಕ್ಕಲ್ ಅದ್ಭುತ ಫಾರ್ಮ್ನಲ್ಲಿದ್ದು ನಾಲ್ಕು ಪಂದ್ಯಗಳಲ್ಲಿ 3 ಶತಕ ಬಾರಿಸಿದ್ದಾರೆ. ಕರ್ನಾಟಕ ತಂಡ ನಾಲ್ಕು ಪಂದ್ಯಗಳಲ್ಲೂ ಗೆದ್ದು ಅಜೇಯವಾಗಿ ಮುನ್ನುಗ್ತಿದೆ. ಲಿಸ್ಟ್ ಎ ನಲ್ಲಿ ಕಂಟಿನ್ಯೂಯಸ್ ಆಗಿ ರನ್ ಗಳಿಸಿ ತಮ್ಮ ಸಾಮರ್ಥ್ಯ ಸಾಬೀತುಪಡಿಸಿದ್ರೂ ಭಾರತದ ಪರ ಏಕದಿನ ಪಂದ್ಯಗಳಲ್ಲಿ ಅವಕಾಶ ಸಿಗುತ್ತಿಲ್ಲ. ಅಟ್ಲೀಸ್ಟ್ ಮುಂಬರುವ ನ್ಯೂಜಿಲ್ಯಾಂಡ್ ಸರಣಿಗಾದರೂ ಅವಕಾಶ ನೀಡ್ತಾರಾ ನೋಡ್ಬೇಕು.
36 ಇನ್ನಿಂಗ್ಸ್.. 12 ಶತಕ.. 12 ಅರ್ಧಶತಕ ಬಾರಿಸಿದ ಪಡಿಕ್ಕಲ್!
ಇನ್ನು ಲಿಸ್ಟ್ ಎ ಕ್ರಿಕೆಟ್ ನಲ್ಲಿ ಪಡಿಕ್ಕಲ್ ಪ್ರಚಂಡ ಅವತಾರ ನೋಡಿದ್ರೆ ಇಷ್ಟರಲ್ಲಾಗಲೇ ಅವರು ಏಕದಿನ ತಂಡದಲ್ಲಿರಬೇಕಿತ್ತು. ಕರ್ನಾಟಕ ಆಟಗಾರ ಲಿಸ್ಟ್ ಎ ನಲ್ಲಿ ಕೇವಲ 36 ಇನ್ನಿಂಗ್ಸ್‌ಗಳಲ್ಲಿ 12 ಶತಕ ಮತ್ತು 12 ಅರ್ಧಶತಕಗಳನ್ನು ಗಳಿಸಿದ್ದಾರೆ. ಅವರ ಬ್ಯಾಟಿಂಗ್ ಸರಾಸರಿ 82.56, ಒಟ್ಟಾರೆ 50 ಓವರ್ಗಳ ಪಂದ್ಯದಲ್ಲಿ 2477 ರನ್ ಗಳಿಸಿದ್ದಾರೆ. ಹೀಗಿದ್ರೂ ಇನ್ನೂ ಟೀಮ್ ಇಂಡಿಯಾ ಪರ ಒಂದೇ ಒಂದು ಏಕದಿನ ಪಂದ್ಯದಲ್ಲಿ ಆಡಿಲ್ಲ. ಪಡಿಕ್ಕಲ್‌ಗೆ ಎರಡು ಟೆಸ್ಟ್ ಮತ್ತು ಎರಡು ಟಿ20ಐಗಳಲ್ಲಿ ಅವಕಾಶ ನೀಡಿದ್ದಾರೆ ಅಷ್ಟೇ. ಫಾರ್ಮ್ ಇಲ್ಲದ ಕೆಲ ಆಟಗಾರರಿಗೆ ಕಂಟಿನ್ಯುಯಸ್ ಚಾನ್ಸ್ ಕೊಡೋ ಬಿಸಿಸಿಐನ ಬಾಸ್ಗಳು ಪಡಿಕ್ಕಲ್ರಂಥ ಅಪ್ಪಟ ಬಂಗಾರದಂತ ಪ್ಲೇಯರ್ಗಳ ವಿಚಾರದಲ್ಲಿ ಕಣ್ಣಿದ್ದೂ ಕುರುಡರಾಗ್ತಿದ್ದಾರೆ. ಅಟ್ಲೀಸ್ಟ್ ಅವ್ರ ಫಾರ್ಮ್ ನೋಡಿದ ಮೇಲಾದ್ರೂ ಮುಂದಿನ ದಿನಗಳಲ್ಲಿ ಚಾನ್ಸ್ ಕೊಡ್ಬೇಕಿದೆ.

ನೋಡಿರಿ

