ಈ ಕಾಡಿನ ಒಳಗೆ ಹೋದರೆ ಜೀವಂತ ಬರುವುದೇ ಅನುಮಾನ – ಇದೊಂದು ಸೂಸೈಡ್ ಫಾರೆಸ್ಟ್..!
‘ಅಕಿಗಹರ’ ಎಂಬ ಅಪಾಯವನ್ನೇ ಹೊದ್ದ ಕಾಡಿನ ಕತೆಯಿದು..!

ಈ ಕಾಡಿನ ಒಳಗೆ ಹೋದರೆ ಜೀವಂತ ಬರುವುದೇ ಅನುಮಾನ – ಇದೊಂದು ಸೂಸೈಡ್ ಫಾರೆಸ್ಟ್..!‘ಅಕಿಗಹರ’ ಎಂಬ ಅಪಾಯವನ್ನೇ ಹೊದ್ದ ಕಾಡಿನ ಕತೆಯಿದು..!

ಒಂದು ಕಾಡಿನ ರಣರೋಚಕ ಕತೆಯಿದು. ಆ ಕಾಡಿಗೆ ಬಂದವರಿಗೆ ಬದುಕಬೇಕೆಂಬ ಆಸೆಯೂ ಬರುವುದಿಲ್ಲ.. ಈ ಕಾಡೊಳಗೆ ಕಾಲಿಟ್ಟವರಿಗೆ ಹೆತ್ತವರ, ಆತ್ಮೀಯರ, ಸಂಬಂಧಿಗಳ ನೆನಪು ಬರುವುದೇ ಇಲ್ಲ.. ಈ ಕಾಡಿಗೆ ಕಾಲಿಟ್ಟರೆ ಕಾಣದಂತೆ ಮಾಯವಾಗ್ತಾರೆ.. ಆ ಕಾಡನ್ನ ಅಲ್ಲಿನ ಜನ ಕರೆಯೋದೇ ಸುಸೈಡ್ ಫಾರೆಸ್ಟ್ ಎಂದು. ಹಾಗಂತಾ ಆ ಕಾಡನ್ನು ನೋಡಿದರೆ ಮನಸಿಗೆ ತುಂಬಾ ಹಿತ ಅನಿಸುತ್ತೆ. ಕಾಡೊಳಗೆ ಪ್ರವೇಶಿಸಿದರೆ ಬದುಕುವುದೇ ಬೇಡ ಅನಿಸುತ್ತೆ. ಹೀಗಾಗಿ ಪೃಕೃತಿಯ ವನಸರಿಗೆ ಸೋತು ಹತ್ತಿರ ಹೋದರೆ ಹುಷಾರ್… ಯಾಕೆಂದರೆ ಅದು ವಿಹರಿಸೋ ವನದೇವಿಯ ಮಡಿಲಲ್ಲ.. ಬದುಕಿಗೆ ಚಿರಶಾಂತಿ ಕೊಡೋ ಸಾವಿನ ಒಡಲು… ಭಯಾನಕ ಅನುಭವ ನೀಡೋ ಕರಾಳ ಕಾಡಿರೋದು ಜಪಾನ್ ನಲ್ಲಿ.

ಇದನ್ನೂ ಓದಿ: ಈ ಜಾಗ ಎಷ್ಟು ಸುಂದರವೋ ಅಷ್ಟೇ ಭಯಾನಕ…! “ರೂಪಕುಂಡ” ರಹಸ್ಯವೇನು ಗೊತ್ತಾ…?

ಜಪಾನಿನ ರಾಜಧಾನಿ ಟೋಕಿಯೋದಿಂದ ಸುಮಾರು 160 ಕಿಲೋಮೀಟರ್ ದೂರವಿರುವ ಪ್ಯೂಜಿ ಪರ್ವತದ ತಪ್ಪಲಿನಲ್ಲಿ ಅಕಿಗಹರ ಎಂಬ ದಟ್ಟವಾದ ಕಾಡೊಂದಿದೆ. ಇದನ್ನ ಅಲ್ಲಿನ ಜನ ಜುಕೈ ಕಾಡು ಅಂತಾನೂ ಕರೀತಾರೆ. ಹಾಗಂದ್ರೆ, ವೃಕ್ಷ ಸಾಗರ ಎಂದರ್ಥ. ಯಾಕೆಂದ್ರೆ, ಇದೊಂದು ದಟ್ಟ ಕಾನನ. ಸೂರ್ಯನ ಬೆಳಕು ಕೂಡಾ ನೆಲಕ್ಕೆ ಮುಟ್ಟದಷ್ಟು ದಟ್ಟ ಕಾಡು. ಆದ್ರೆ, ಇಂಥಾ ಸುಂದರ ವನಸಿರಿ ಪ್ರಕೃತಿಪ್ರಿಯರ ತಾಣವಾಗಬೇಕಿತ್ತು. ಆದರೆ ಇದು ಮೃತ್ಯುವನ ಆಗಿದೆ. ಇನ್ನು ಈ ಕಾಡನ್ನ ಯಾರಾದರೂ ಗೊತ್ತಿಲ್ಲದೇ ಪ್ರವೇಶಿಸಿದ್ರೂ ಕೂಡಾ ಕೆಲವೊಂದು ಎಚ್ಚರಿಕೆಯ ಸಂದೇಶವನ್ನ ಓದಿಕೊಳ್ಳಲೇಬೇಕು.. ಇದನ್ನ ಓದಿಯೂ ಕಾಡೊಳಗೆ ಪ್ರವೇಶಿಸಿದ್ರೂ ಕೂಡಾ ಆತ್ಮಹತ್ಯೆಯ ಪ್ರೇರಪಣೆಯಿಂದ ತಪ್ಪಿಸಿಕೊಳ್ಳಲು ಸಾಧ್ಯಾನೇ ಇಲ್ಲ ಅಂತಾರೆ ಅಲ್ಲಿನ ಜನ. ನಿಮ್ಮ ಕುಟುಂಬದ ಬಗ್ಗೆ ಗಮನವಿರಲಿ ಅಂತಾ ಜಪಾನ್ ಸರ್ಕಾರ ಕೂಡಾ ಎಚ್ಚರಿಕಾ ಫಲಕ ಹಾಕಿದೆ. ಜೊತೆಗೆ ಪ್ರತಿಯೊಬ್ಬರೂ ತಮ್ಮ ತಂದೆ ತಾಯಿಯಿಂದ ಕೊಡುಗೆಯಾಗಿ ಬಂದಿರುವ ಬದುಕನ್ನ ಅಂತ್ಯಗೊಳಿಸುವ ಮುನ್ನ ತಮ್ಮ ಕುಟುಂಬ ತಂದೆತಾಯಿ, ಸಹೋದರ ಸಹೋದರಿಯರು, ಮತ್ತು ಮಕ್ಕಳನ್ನ ನೆನಪಿಸಿಕೊಳ್ಳಿ ಅನ್ನೋ ಸಂದೇಶ ಕೂಡಾ ಕಾಡು ಪ್ರವೇಶಿಸುವಾಗಲೇ ಇದೆ. ಆದರೆ, ಸಾಯಲೇ ಬೇಕು ಎಂದು ಬರುವ ಜನ ಈ ಸಂದೇಶದ ಮೇಲೆ ಗಮನ ಹರಿಸೋದೇ ಇಲ್ಲ.

ಅಂದಹಾಗೆ ಈ ಕಾಡಿನ ಹೆಸರು ಅಕಿಗಹರ ಅರಣ್ಯ. ವಿಶ್ವದಲ್ಲಿ ಅತೀ ಹೆಚ್ಚು ಆತ್ಮಹತ್ಯೆ ನಡೆಯುವ ಎರಡನೇ ಕಾಡು ಇದೇ ಅನ್ನೋ ಕುಖ್ಯಾತಿ ಪಡೆದಿದೆ ಅಕಿಗಹರ ಕಾನನ. ಸುಮಾರು 35 ಚದರ ಕಿಲೋಮೀಟರ್ ವಿಸ್ತೀರ್ಣದ ಮರಗಳ ಸಮುದ್ರ ಎಂದು ಕರೆಸಿಕೊಳ್ಳೋ ಈ ಕಾಡನ್ನ ಪ್ರವೇಶಿಸುವುದು ತುಂಬಾ ಸುಲಭವಂತೆ. ಆದ್ರೆ, ಹೊರಗೆ ಬರುವುದು ತುಂಬಾ ಕಠಿಣವಂತೆ.. ಅಂಥಾ ಚಕ್ರವ್ಯೂಹದಂತಿರೋ ಕಾಡಿದು. ಇಲ್ಲಿಗೆ ಬಂದವರಲ್ಲಿ ಕೆಲವರದ್ದು ಆಕಸ್ಮಿಕ ಸಾವಾದರೆ, ಇನ್ನು ಕೆಲವರು ಸಾಯಲೆಂದೇ ಬರುತ್ತಾರಂತೆ. ಅಷ್ಟಕ್ಕೂ ಇಲ್ಲಿ ಸಾಯಲು ಪ್ರೇರಣೆಯೇ ಇಲ್ಲಿನ ದುಷ್ಟ ಪ್ರೇತಾತ್ಮಗಳು ಅಂತಾರೆ ಇಲ್ಲಿನ ಸ್ಥಳೀಯರು. ಇಲ್ಲಿ ವರ್ಷಕ್ಕೆ ನೂರಾರು ಮೃತದೇಹಗಳು ಸಿಗುತ್ತವೆ. ಇಲ್ಲಿ ಹೋದವರಿಗೆ ಹೆಜ್ಜೆ ಹೆಜ್ಜೆಗೂ ಭಯ ಕಾಡುತ್ತಂತೆ. ಸ್ಥಳೀಯ ಆಡಳಿತ ಇಲ್ಲಿ ಗಸ್ತು ಏರ್ಪಾಡು ಮಾಡಿದ್ರೂ ಕೂಡಾ ಸಾಯಲೆಂದೇ ಬಂದವರು ತಪ್ಪಿಸಿಕೊಂಡು ಬಿಡುತ್ತಾರೆ. ಇನ್ನು ಕೆಲವರು ಕುತುಹೂಲಕ್ಕಾಗಿ ಹೋಗಿ ಬಂದವರು ಇದ್ದಾರೆ. ಅಂಥವರು ಹೇಳೋ ಪ್ರಕಾರ ಈ ಕಾಡಿನೊಳಗೆ ಪ್ರವೇಶಿಸಿದರೆ ನಿರಾಶೆ ಹಾಗೂ ಖಿನ್ನತೆ ಕಾಡುತ್ತಂತೆ.

ಕಾಡು ಸೃಷ್ಟಿಸುತ್ತಿರುವ ಖಿನ್ನತೆಯ ಬಗ್ಗೆ ಆಸಕ್ತಿ ಬೆಳಸಿಕೊಂಡಿರುವ ಭೂಗರ್ಭ ಶಾಸ್ತ್ರಜ್ಞ ಅಜೂಸಾ ಹಯಾನ ವಾರಾಂತ್ಯಗಳಲ್ಲಿ ಕಾಡು ಪ್ರವೇಶಿಸಿ ಅಲ್ಲಿ ಯಾರಾನಾದ್ರೂ ಕಂಡ್ರೆ ಮಾತನಾಡಿಸುತ್ತಾರಂತೆ. ಅವರು ಖಿನ್ನತೆಯಲ್ಲಿದ್ದರೆ ಅವರಿಗೆ ಧೈರ್ಯ ನೀಡುವ ಕೆಲಸ ಮಾಡುತ್ತಿದ್ದಾರೆ. ಕಾಡಿನೊಳಗೆ ಪ್ರತಿವಾರ ಹೋಗುವ ಅಜೂಸಾ ಹಯಾನೋ ಅಲ್ಲಿ ಅನೇಕ ಅಸ್ಥಿಪಂಜರಗಳನ್ನ ನೋಡಿದ್ದಾರಂತೆ. ಅನಾಥವಾಗಿ ಬಿದ್ದಿರೋ ಚಪ್ಪಲಿಗಳು ಸೇರಿದಂತೆ ಇತರ ವಸ್ತುಗಳನ್ನ ಕಂಡು ಪೊಲೀಸರಿಗೆ ಮಾಹಿತಿ ನೀಡುತ್ತಾರಂತೆ. ಈ ಕಾಡಿನಲ್ಲಿ ಮೊಬೈಲ್ ಸೇರಿದಂತೆ ಯಾವುದೇ ಆಧುನಿಕ ಉಪಕರಣ ಕೆಲಸ ಮಾಡುವುದೇ ಇಲ್ಲ. ಇದು ಸಹ ಭಯಹುಟ್ಟಿಸಲು ಕಾರಣವಾಗಿದೆ .

ಅಕಿಗಹರದಲ್ಲಿ ಭೀತಿ ಹುಟ್ಟಿಸುತ್ತಿರೋದು ಸಾವಿನ ಬಿಂಬಗಳು. ಮರಗಳ ಮೇಲೆ ನೇತು ಹಾಕಿರೋ ಸಾಲು ಸಾಲು ಗೊಂಬೆಗಳು ಒಂದೊಂದು ನೋವಿನ ಕಥೆ ಹೇಳುತ್ತವೆ. ಇದನ್ನ ನೋಡಿದವರ ಚಿತ್ತ ಒಮ್ಮೆ ಖಿನ್ನತೆಗೆ ಜಾರುವಂತೆ ಮಾಡುತ್ತದೆ. ಇಷ್ಟೆಲ್ಲಾ ಭಯದ ವಾತಾವರಣ ಇದ್ದರೂ ಕೂಡಾ ಈ ಕಾಡಿನಲ್ಲಿ ಏನೆಲ್ಲಾ ನಡೆಯುತ್ತೆ ಅನ್ನೋದನ್ನ ಪರೀಕ್ಷೆಮಾಡಲು ಬರುವವರ ಸಂಖ್ಯೆಯೇನು ಕಡಿಮೆಯಿಲ್ಲ. ಟ್ರಕ್ಕಿಂಗ್ ಗೂ ಕೂಡಾ ಯುವಜನತೆ ಬರ್ತಾನೇ ಇರ್ತಾರೆ. ಹಾಗೆ ಬಂದವರು ಹೊರಹೋಗಲು ದಾರಿ ಸಿಗದೆ ಪ್ರಾಣ ಕಳೆದುಕೊಂಡಿರೋ ಸಂಭವವೂ ಇರಬಹುದು. ಆದ್ರೀಗ ಜಪಾನ್ ಸರ್ಕಾರ ಇಲ್ಲಾಗೋ ಸಾವು ನೋವನ್ನ ತಪ್ಪಿಸಲು ಅನೇಕ ಕ್ರಮಕೈಗೊಂಡಿದೆ. ಆತ್ಮಹತ್ಯೆ ವಿರುದ್ಧ ಜಾಗೃತಿ ಆಂದೋಲನಗಳೂ ನಿರಂತರವಾಗಿ ನಡೆಯುತ್ತಲೇ ಇದೆ.. ಆದ್ರೂ ಕೂಡಾ ಪ್ರತಿವರ್ಷ ಈ ಕಾಡಿನಲ್ಲಾಗೋ ಸಾವಿನ ಸಂಖ್ಯೆ ತಗ್ಗುತ್ತಿಲ್ಲ. ಹೀಗಾಗಿಯೇ ಏನೋ ಇಲ್ಲಿನ ಸ್ಥಳೀಯರು ಈ ಕಾಡನ್ನ ಸುಸೈಡ್ ಫಾರೆಸ್ಟ್ ಅಂತಾ ಕರೀತಾರೆ. ಅಷ್ಟೇ…

suddiyaana