ತೇಜ್ ಚಂಡಮಾರುತ ಪಥ ಬದಲಿಸಿದರೆ ಭಾರತಕ್ಕೆ ಅಪಾಯ – ಐಎಂಡಿ

ನವದೆಹಲಿ: ಆಗ್ನೇಯ ಮತ್ತು ನೈಋತ್ಯ ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತಗೊಂಡಿದೆ. ಪ್ರತಿಕೂಲ ವಾತಾವರಣ ತೀವ್ರಗೊಂಡು ಚಂಡಮಾರುತ ಸೃಷ್ಟಿಯಾಗಿ ತೀವ್ರಗೊಳ್ಳುವ ಸಾಧ್ಯತೆ ಇದೆ. ಒಂದು ವೇಳೆ ಈ ಚಂಡಮಾರುತ ಪಥ ಬದಲಿಸಿದ್ರೆ ಭಾರತದ ಮೇಲೆ ಎಫೆಕ್ಟ್ ಬೀಳಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.
ಹಿಂದೂ ಮಹಾಸಾಗರ ಪ್ರದೇಶದಲ್ಲಿ ಚಂಡಮಾರುತಗಳನ್ನು ಹೆಸರಿಸಲು ಅನುಸರಿಸಿದ ಸೂತ್ರದ ಪ್ರಕಾರ ಇದನ್ನು ”ತೇಜ್” (ವೇಗ) ಎಂದು ಕರೆಯಲಾಗಿದೆ. ಈ ವರ್ಷ ಅರಬ್ಬಿ ಸಮುದ್ರದಲ್ಲಿ ರೂಪುಗೊಂಡ 2ನೇ ಚಂಡಮಾರುತವಾಗಿದೆ. ಸದ್ಯ ಒಮಾನ್ ಮತ್ತು ಪಕ್ಕದ ಯೆಮೆನ್‌ನ ದಕ್ಷಿಣ ಕರಾವಳಿಯ ಕಡೆಗೆ ಇದು ಚಲಿಸುತ್ತದೆ. ಆದರೆ ಭಾರತದ ಗುಜರಾತ್ ಕರಾವಳಿಯಲ್ಲಿ ಸಾಕಷ್ಟು ವಿನಾಶ ಉಂಟು ಮಾಡಿದ ಬಿಪೊರ್‌ಜೊಯ್ ಚಂಡಮಾರುತದ ರೀತಿ ಈ ಚಂಡಮಾರುತ ಕೂಡ ಪಥ ಬದಲಿಸಿ ಸಾಗಬಹುದು. ಆಗ ಇದು ಭಾರತದ ಕರಾವಳಿಗೂ ಅಪಾಯವಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಹೇಳಿದೆ.
ಇದನ್ನೂ ಓದಿ: ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತ – ಮುಂಬೈಗೆ ಅಪ್ಪಳಿಸಲಿದೆ ‘ತೇಜ್’ ಚಂಡಮಾರುತ!
ಆದರೆ ಖಾಸಗಿ ಹವಾಮಾನ ಮುನ್ಸೂಚನೆ ಸಂಸ್ಥೆ ಸ್ಕೈಮೆಟ್ ವೆದರ್, ಹೆಚ್ಚಿನ ಮಾದರಿಗಳು ಚಂಡಮಾರುತವು ಯೆಮೆನ್-ಒಮಾನ್ ಕರಾವಳಿಯತ್ತ ಸಾಗುತ್ತಿದೆ ಎಂದು ಸೂಚಿಸುತ್ತದೆ ಎಂದು ವರದಿಯಾಗಿದೆ.