DKD ವಿನ್ನರ್ ಸಿದ್ದೇಗೌಡ್ರು.. ವೈರಲ್ ಪೂಜಾ, ಅನೂಪ್‌ಗೆ ಮೋಸ?

ಜೀ ಕನ್ನಡದಲ್ಲಿ ಪ್ರಸಾರವಾಗ್ತಿರೋ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಶೋ ಈಗ ಅಂತಿಮ ಘಟ್ಟ ತಲುಪಿದೆ. ಈಗಾಗಲೇ ಗ್ರ್ಯಾಂಡ್ ಫಿನಾಲೆ ಶೂಟಿಂಗ್ ಕೂಡ ಮುಕ್ತಾಯ ಆಗಿದ್ದು, ಯಾರು ವಿನ್ನರ್ ಅನ್ನೋದು ಕೂಡ ಲೀಕ್ ಆಗಿದೆ. ಈ ಬೆನ್ನಲ್ಲೇ ವೀಕ್ಷಕರು ಶೋ ವಿರುದ್ದ ಅಸಮಧಾನ ಹೊರ ಹಾಕಿದ್ದಾರೆ. ಈ ಶೋನಲ್ಲಿ ನಿಜವಾದ ಪ್ರತಿಭೆಗಳಿಗೆ ಮೋಸ ಆಗಿದೆ. ಈ ಸ್ಪರ್ಧಿಗಳೇ ವಿನ್ನರ್ ಆಗ್ಬೇಕಿತ್ತು ಅಂತಾ ಹೇಳ್ತಿದ್ದಾರೆ.
ಇದನ್ನೂ ಓದಿ: ಜಾತ್ರೆಗೆ ಹೋದ ಮದುಮಗ ದುರಂತ ಅಂತ್ಯ! – ಪಲ್ಲಕ್ಕಿ ಹೊತ್ತ ಟ್ರ್ಯಾಕ್ಟರ್ ಹರಿದು ಯುವಕ ಸಾವು!
ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಶೋ ಈ ಬಾರಿ ವೀಕ್ಷಕರಿಗೆ ಸಖತ್ ಮನರಂಜನೆ ನೀಡಿದೆ. ಈ ಸೀಸನ್‌ನ ವಿಶೇಷತೆಯೆಂದರೆ ಸೆಲೆಬ್ರಿಟಿ ಮತ್ತು ಡ್ಯಾನ್ಸರ್‌ಗಳು ಜೋಡಿಯಾಗಿ ಸ್ಪರ್ಧೆಯಲ್ಲಿ ಭಾಗವಹಿಸಿದ್ರು. ಕೇವಲ ಡ್ಯಾನ್ಸ್ ಮಾತ್ರವಲ್ಲದೇ, ಪ್ರತಿ ಪರ್ಫಾರ್ಮೆನ್ಸ್‌ನಲ್ಲಿಯೂ ವಿಶಿಷ್ಟ ಥೀಮ್ ಹೇಳುವ ಪ್ರಯತ್ನ ಮಾಡಲಾಗಿತ್ತು. ಶಾಸ್ತ್ರೀಯ ನೃತ್ಯ, ಜಾನಪದ ಸೊಗಡು ಹಾಗೂ ಸಿನಿಮಾ ಹಾಡುಗಳಿಗೆ ಸ್ಪರ್ಧಿಗಳು ಜಬರ್‌ದಸ್ತ್ ಸ್ಟೆಪ್ಸ್ ಹಾಕಿದ್ರು.. ಇನ್ನು ಡಿಕೆಡಿ ಶೋನಲ್ಲಿ ಕರುನಾಡ ಚಕ್ರವರ್ತಿ ಡಾ ಶಿವರಾಜ್ ಕುಮಾರ್ ಈ ಕಾರ್ಯಕ್ರಮದ ಮಹಾಗುರು ಆಗಿದ್ರು. ರಚಿತಾ ರಾಮ್, ಅರ್ಜುನ್ ಜನ್ಯ ಮತ್ತು ವಿಜಯ್ ರಾಘವೇಂದ್ರ ಈ ಶೋಗೆ ಜಡ್ಜ್ ಆಗಿದ್ರು. ಇದೀಗ ಈ ಶೋ ಅಂತಿಮ ಘಟ್ಟ ತಲುಪಿದೆ. ಗ್ರ್ಯಾಂಡ್ ಫಿನಾಲೆ ಕೂಡ ನಡೆದಿದ್ದು, ಇದೇ ಶನಿವಾರ ಹಾಗೂ ಭಾನುವಾರ ಪ್ರಸಾರವಾಗಲಿದೆ. ಆದ್ರೀಗ ವಿನ್ನರ್ ಯಾರು ಅನ್ನೋದು ಲೀಕ್ ಆಗಿದೆ.
ಹೌದು.. ಡಿಕೆಡಿ ಫಿನಾಲೆಗೆ ಪೂಜಾ ಮತ್ತು ಅನೂಪ್, ಮೋಹಿತ್ ಮತ್ತು ಅನನ್ಯ, ಸಿದ್ದೇಗೌಡ್ರು ಮತ್ತು ದಿಶಲ್, ಹರ್ಷ ಮತ್ತು ನಂದು, ಶಿಕ್ಷಿತ್ ತಾಪಾ ಮತ್ತು ಸಂಜನಾ ಆಯ್ಕೆ ಆಗಿದ್ರು. ಇವರ ಮಧ್ಯೆ ಟಫ್ ಫೈಟ್ ನಡೆಯುತ್ತಿತ್ತು. ಅಂತಿಮವಾಗಿ ಸಿದ್ದೇಗೌಡ್ರು ಮತ್ತು ದಿಶಲ್ ಅಪ್ಪು ಟ್ರೋಫಿ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ. ಸಿದ್ದೇಗೌಡ್ರು ಹಾಗೂ ದಿಶಲ್ ದೇವ ಶ್ರೀ ಗಣೇಶ ಸಾಂಗ್‌ಗೆ ಭರ್ಜರಿ ಪರ್ಫಾಮೆನ್ಸ್ ನೀಡಿದ್ರು. ಅವರ ಡ್ಯಾನ್ಸ್ ನೋಡಿ ಎಲ್ಲರೂ ಕಳೆದುಹೋದ್ರು.. ಜಡ್ಜಸ್ ಕೂಡ ಹಾಡಿಗೊಗಳಿದ್ರು. ಇದೀಗ ಈ ಜೋಡಿಯೇ ಡಿಕೆಡಿ ವಿನ್ನರ್ ಆಗಿದ್ದಾರೆ ಎಂದು ಅನೌನ್ಸ್ ಮಾಡಿರೋ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ. ಆದ್ರೆ ರನ್ನರಪ್ ಯಾರಿಗೆ ಸಿಕ್ಕಿದೆ ಅನ್ನೋದು ಇನ್ನೂ ಗೊತ್ತಾಗಿಲ್ಲ.
ಇನ್ನು ಸಿದ್ದೇಗೌಡ್ರು ಹಾಗೂ ದಿಶಲ್ ವಿನ್ನರ್ ಅಂತ ಗೊತ್ತಾಗ್ತಿದ್ದಂತೆ ವೀಕ್ಷಕರು ಅಸಮಧಾನ ಹೊರ ಹಾಕಿದ್ದಾರೆ. ಗ್ರ್ಯಾಂಡ್ ಫಿನಾಲೆ ಪ್ರಸಾರ ಆಗಲು ಇನ್ನೂ ಟೈಮ್ ಇದೆ. ಇಷ್ಟು ಬೇಗ ವಿನ್ನರ್ ಯಾರು ಅನ್ನೋದನ್ನ ಲೀಕ್ ಮಾಡ್ಬೇಕಿತ್ತಾ? ವಿನ್ನರ್ ಯಾರು ಅಂತ ಗೊತ್ತಾದ ಮೇಲೆ ಶೋ ಯಾಕೆ ನೋಡಬೇಕು ಅಂತ ಕೇಳ್ತಿದ್ದಾರೆ. ಇನ್ನು ಕೆಲವರು ಡಿಕೆಡಿ ಶೋನಲ್ಲಿ ನಿಜವಾದ ಪ್ರತಿಭೆಗಳಿಗೆ ಮೋಸ ಆಗಿದೆ. ಸಿದ್ದೇಗೌಡ್ರು, ದಿಶಲ್ ಬದಲು ಪೂಜಾ ಹಾಗೂ ಅನೂಪ್ ಚೆನ್ನಾಗಿ ಪರ್ಫಾಮ್ ಮಾಡ್ತಿದ್ರು. ಪ್ರತಿ ಸಂಚಿಕೆಯಲ್ಲೂ ಹೊಸ ಹೊಸ ಕಾನ್ಸೆಪ್ಟ್ ಮೂಲಕ ವೇದಿಕೆ ಮೇಲೆ ಮನರಂಜನೆ ನೀಡ್ತಿದ್ರು. ಅವರೇ ಈ ಶೋನ ವಿನ್ ಆಗ್ಬೇಕಿತ್ತು. ನಿಜವಾದ ಪ್ರತಿಭೆಗಳಿಗೆ ಮೋಸ ಆಗಿದೆ ಎಂದು ಕಮೆಂಟ್ ಮಾಡಿದ್ದಾರೆ.

ನೋಡಿರಿ

