ಚಾಮರಾಜನಗರದಲ್ಲಿ ದಲಿತರಿಗೆ ದೇವಸ್ಥಾನಕ್ಕೆ ನೋ ಎಂಟ್ರಿ – 17 ಜನರ ವಿರುದ್ಧ FIR

ಚಾಮರಾಜನಗರದಲ್ಲಿ ದಲಿತರಿಗೆ ದೇವಸ್ಥಾನಕ್ಕೆ ನೋ ಎಂಟ್ರಿ – 17 ಜನರ ವಿರುದ್ಧ FIR

ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ  ತಾಲೂಕಿನ ವೀರನಪುರ ಗ್ರಾಮದಲ್ಲಿ ದಲಿತರಿಗೆ ದೇವಸ್ಥಾನ ಪ್ರವೇಶಕ್ಕೆ ನಿರ್ಬಂಧ ವಿಧಿಸಿದ್ದಾರೆಯೆಂಬ ಆರೋಪದ ಹಿನ್ನೆಲೆಯಲ್ಲಿ 17 ಜನರ ವಿರುದ್ಧ ಅಟ್ರಾಸಿಟಿ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ಗ್ರಾಮದಲ್ಲಿ ಪರಿಶಿಷ್ಟ ಜನಾಂಗದವರನ್ನು ದೇವಾಲಯ ಪ್ರವೇಶಿಸದಂತೆ ತಡೆಯಲಾಗಿದೆ ಎಂಬ ಆರೋಪ ಹಿನ್ನೆಲೆಯಲ್ಲಿ ಶಾಂತಿ ಸಭೆ ಆಯೋಜಿಸಲಾಗಿತ್ತು. ಸಭೆಯಲ್ಲಿ ಗ್ರಾಮದಲ್ಲಿನ ಎಲ್ಲಾ ಜನಾಂಗದ ಮುಖಂಡರು ಭಾಗಿಯಾಗಿದ್ದರು. ಸಭೆಯಲ್ಲಿ ಶಿವಕುಮಾರ್ ಎಂಬ ಗ್ರಾಮಸ್ಥರು “ದೇವಾಲಯದ ಆಸ್ತಿಯನ್ನು ಹರಾಜು ಹಾಕದೆ ಬರಿ ಲಿಂಗಾಯತ ಸಮಾಜದವರು ಮಾತ್ರ ಉಪಯೋಗಿಸುತ್ತಿದ್ದಾರೆ” ಎಂದು ಹೇಳಿಕೆ ನೀಡಿದ್ದರು.

ಇದನ್ನೂ ಓದಿ: ಕೇರಳದಲ್ಲಿ ಮಳೆಯ ನರ್ತನ – ತುಂಬಿದ ಡ್ಯಾಂ, ಪ್ರವಾಹ ಪರಿಸ್ಥಿತಿ

ಈ ಹೇಳಿಕೆಯ ಬಳಿಕ ಕೆಲವರು ಶಿವಕುಮಾರನಿಗೆ ಜಾತಿ ನಿಂದನೆ ಮಾಡಿ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ದೂರು ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಶಿವಕುಮಾರ್ ನೀಡಿದ ದೂರಿನ ಆಧಾರದಲ್ಲಿ ಗುಂಡ್ಲುಪೇಟೆ ಪೊಲೀಸ್ ಠಾಣೆಯಲ್ಲಿ 17 ಮಂದಿ ವಿರುದ್ಧ ಅಟ್ರಾಸಿಟಿ ಕಾಯ್ದೆಯಡಿ ಎಫ್‌ಐಆರ್ ದಾಖಲಾಗಿದೆ.

ಪ್ರಕರಣ ದಾಖಲಾಗುತ್ತಿದ್ದಂತೆ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿ, ಚಾಮರಾಜನಗರ ಪಟ್ಟಣ ಪೊಲೀಸ್ ಠಾಣೆ ಮುಂದೆ ಪ್ರತಿಭಟನೆ ನಡೆಸಿದರು. ಅವರು ಸುಳ್ಳು ದೂರು ನೀಡಿದ್ದಾರೆ, ಆರೋಪಗಳಲ್ಲಿ ಸತ್ಯಾಂಶವಿಲ್ಲ ಎಂದು ವಾದಿಸಿದರು. ಪ್ರತಿಭಟನಾಕಾರರು ಎಸ್ಪಿ ಕಚೇರಿಗೆ ಮುತ್ತಿಗೆ ಹಾಕುವುದಾಗಿ ಎಚ್ಚರಿಕೆ ನೀಡಿದರು. ಇದೀಗ ಪೊಲೀಸರು ಗ್ರಾಮಸ್ಥರ ಜೊತೆ ಮಾತುಕತೆ ನಡೆಸಿ ಪರಿಸ್ಥಿತಿಯನ್ನು ಶಾಂತಗೊಳಿಸುವ ಪ್ರಯತ್ನ ಮಾಡುತ್ತಿದ್ದಾರೆ.

Kishor KV