ಬಾಲಿವುಡ್ ನಟಿ ವಹೀದಾ ರೆಹಮಾನ್ಗೆ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ!
ಬಾಲಿವುಡ್ ನ ಹೆಸರಾಂತ ಹಿರಿಯ ನಟಿ, ನೃತ್ಯಗಾರ್ತಿ ವಹೀದಾ ರೆಹಮಾನ್ ಅವರಿಗೆ 2023ನೇ ಸಾಲಿನ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿಯನ್ನು ಕೇಂದ್ರ ಸರ್ಕಾರ ಘೋಷಣೆ ಮಾಡಿದೆ.
ವಹೀದಾ ರೆಹಮಾನ್ ಅವರಿಗೆ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಘೋಷಣೆಯಾಗಿರುವ ಬಗ್ಗೆ ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಅನುರಾಗ್ ಠಾಕೂರ್ ಟ್ವೀಟ್ ಮಾಡಿ ಮಾಹಿತಿ ನೀಡಿದ್ದಾರೆ. ಗೈಡ್, ಪ್ಯಾಸಾ, ಕಾಗಜ್ ಕೆ ಫೂಲ್ ಮತ್ತು ಚೌಧ್ವಿನ್ ಕಾ ಚಾಂದ್ ಮುಂತಾದ ಸಿನಿಮಾಗಳಲ್ಲಿ ನಟಿಸಿರುವ ವಾಹಿದ್ ಅವರು ಚಿತ್ರರಂಗದಲ್ಲಿ ತಮ್ಮ ಜೀವಮಾನ ಸಾಧನೆಗಾಗಿ ಈ ಗೌರವಕ್ಕೆ ಪಾತ್ರರಾಗಿದ್ದಾರೆ ಎಂದು ಅನುರಾಗ್ ಠಾಕೂರ್ ಅವರು ತಿಳಿಸಿದ್ದಾರೆ.
ಇದನ್ನೂ ಓದಿ: ಹೆಣ್ಣು ಮಗುವಿಗೆ ಜನ್ಮ ನೀಡಿದ ನಟಿ ಸ್ವರಾ ಭಾಸ್ಕರ್ – ವಿವಾದಕ್ಕೀಡಾಯ್ತು ಮಗಳ ಹೆಸರು!
ವಹೀದಾ ರೆಹಮಾನ್ ಜಿ ಅವರು ಭಾರತೀಯ ಚಿತ್ರರಂಗಕ್ಕೆ ನೀಡಿದ ಅದ್ಭುತ ಕೊಡುಗೆಗಾಗಿ ಈ ವರ್ಷ ಪ್ರತಿಷ್ಠಿತ ದಾದಾಸಾಹೇಬ್ ಫಾಲ್ಕೆ ಜೀವಮಾನ ಸಾಧನೆ ಪ್ರಶಸ್ತಿಯನ್ನು ನೀಡಲಾಗುತ್ತಿದೆ ಎಂದು ಘೋಷಿಸಲು ತುಂಬಾ ಸಂತಸವಾಗುತ್ತಿದೆ ಎಂದು ಟ್ವೀಟ್ ಮಾಡಿ ಅಭಿನಂದಿಸಿದ್ದಾರೆ.
ವಹೀದಾ ಜಿ ಅವರು ಹಿಂದಿ ಸಿನಿಮಾಗಳಲ್ಲಿನ ತಮ್ಮ ಪಾತ್ರಗಳಿಗಾಗಿ ವಿಮರ್ಶಾತ್ಮಕವಾಗಿ ಮೆಚ್ಚುಗೆ ಪಡೆದಿದ್ದಾರೆ. ಅವುಗಳಲ್ಲಿ ಪ್ರಮುಖವಾದವು, ಪ್ಯಾಸಾ, ಕಾಗಜ್ ಕೆ ಫೂಲ್, ಚೌಧವಿ ಕಾ ಚಾಂದ್, ಸಾಹೇಬ್ ಬಿವಿ ಔರ್ ಗುಲಾಮ್, ಗೈಡ್, ಖಾಮೋಶಿ ಮತ್ತು ಹಲವಾರು ಇತರ ಚಿತ್ರಗಳು ಸೇರಿವೆ. 5 ದಶಕಗಳ ಕಾಲದ ಅವರ ವೃತ್ತಿಜೀವನದಲ್ಲಿ ಅವರು ತಮ್ಮ ಪಾತ್ರಗಳನ್ನು ಅತ್ಯಂತ ಕೌಶಲ್ಯದಿಂದ ನಿರ್ವಹಿಸಿದ್ದಾರೆ. ರೇಷ್ಮಾ ಮತ್ತು ಶೇರಾ ಚಿತ್ರದಲ್ಲಿ ಮಹಿಳಾ ಪ್ರಧಾನ ಪಾತ್ರಕ್ಕಾಗಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗೆ ಭಾಜನರಾದ್ದಾರೆ. ಪದ್ಮಶ್ರೀ ಮತ್ತು ಪದ್ಮಭೂಷಣ ಪ್ರಶಸ್ತಿ ಪುರಸ್ಕೃತರಾದ ವಹೀದಾ ಜಿ ಅವರು ತಮ್ಮ ಕಠಿಣ ಪರಿಶ್ರಮದಿಂದ ಅತ್ಯುನ್ನತ ಮಟ್ಟದ ವೃತ್ತಿಪರ ಶ್ರೇಷ್ಠತೆಯನ್ನು ಸಾಧಿಸಬಲ್ಲ ಭಾರತೀಯ ನಾರಿಯ ಸಮರ್ಪಣಾ ಮನೋಭಾವಕ್ಕೆ ಉದಾಹರಣೆಯಾಗಿದ್ದಾರೆ. ಐತಿಹಾಸಿಕ ನಾರಿ ಶಕ್ತಿ ವಂದನ್ ಅಧಿನಿಯಂ ಅನ್ನು ಸಂಸತ್ತು ಅಂಗೀಕರಿಸಿದ ಈ ಸಮಯದಲ್ಲಿ ಸಿನಿಮಾ ನಂತರ ಪರೋಪಕಾರಕ್ಕಾಗಿ ಮತ್ತು ಸಮಾಜದ ಒಳಿತಿಗಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟ ಭಾರತೀಯ ಚಿತ್ರರಂಗದ ಪ್ರಮುಖ ಮಹಿಳೆಯರಲ್ಲಿ ಒಬ್ಬರಾದ ವಹೀದಾ ಜಿ ಅವರಿಗೆ ಈ ಜೀವಮಾನ ಸಾಧನೆ ಪ್ರಶಸ್ತಿಯನ್ನು ನೀಡುತ್ತಿರುವುದು ಸೂಕ್ತವಾದ ಗೌರವವಾಗಿದೆ. ನಾನು ಅವರನ್ನು ಅಭಿನಂದಿಸುತ್ತೇನೆ ಮತ್ತು ನಮ್ಮ ಚಿತ್ರರಂಗದ ಇತಿಹಾಸದ ಒಂದು ಅವಿಭಾಜ್ಯ ಅಂಗವಾಗಿರುವ ಬೆಲೆಕಟ್ಟಲಾದ ಅವರ ಸೇವೆಗೆ ನನ್ನ ನಮನಗಳನ್ನು ಸಲ್ಲಿಸುತ್ತೇನೆ ಎಂದು ಅನುರಾಗ್ ಠಾಕೂರ್ ತಿಳಿಸಿದ್ದಾರೆ.