ಬೆಂಗಳೂರಿನಲ್ಲಿ ಬೆಳ್ಳಂಬೆಳಗ್ಗೆ ಮತ್ತೊಂದು ಅಗ್ನಿ ಅವಘಡ! – ಮನೆಯ ಸಿಲಿಂಡರ್​ ಸ್ಫೋಟ

ಬೆಂಗಳೂರಿನಲ್ಲಿ ಬೆಳ್ಳಂಬೆಳಗ್ಗೆ ಮತ್ತೊಂದು ಅಗ್ನಿ ಅವಘಡ! – ಮನೆಯ ಸಿಲಿಂಡರ್​ ಸ್ಫೋಟ

ಸಿಲಿಕಾನ್‌ ಸಿಟಿ ಬೆಂಗಳೂರಿನಲ್ಲಿ ಅಗ್ನಿ ಅವಘಡ ಮುಂದುವರಿದಿದೆ. ಕೊರಮಂಗಲದ ಅಗ್ನಿ ಅವಘಡ ಮುನ್ನವೇ ಈ ಮತ್ತೊಂದು ಅಗ್ನಿ ದುರಂತ ಸಂಭವಿಸಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆ ಆನೇಕಲ್​ ಬಳಿಯ ಬನ್ನೇರುಘಟ್ಟದ ಸುದರ್ಶನ್​ ಲೇಔಟ್​ನ ಮನೆಯೊಂದರಲ್ಲಿನ ಸಿಲಿಂಡರ್​ ಸ್ಫೋಟಗೊಂಡಿದ್ದು,  ಓರ್ವ ವ್ಯಕ್ತಿ ಗಂಭೀರವಾಗಿ ಗಾಯಗೊಂಡಿದ್ದಾರೆ.

ಶುಕ್ರವಾರ ಮುಂಜಾನೆ ಈ ಅವಘಡ ಸಂಭವಿದೆ. ರಾಜೇಂದ್ರ ಎಂದಿನಂತೆ ಬೆಳಿಗ್ಗೆ 5 ಗಂಟೆಗೆ ಸಿಲಿಂಡರ್ ಆನ್ ಮಾಡಲು ಹೋಗಿದ್ದರು. ಈ ವೇಳೆ ಏಕಾಏಕಿ ಸಿಲಿಂಡರ್ ಸ್ಪೋಟಗೊಂಡಿದೆ. ಸ್ಪೋಟದಿಂದಾಗಿ ರಾಜೆಂದ್ರ ಎಂಬುವವರಿಗೆ ಗಂಭೀರ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಪೋಟ ಸಂಭವಿಸಿದ ಮನೆಯಲ್ಲಿ ರಾಜೇಂದ್ರ ಹಾಗೂ ಮಗಳು ಇದ್ದರು.

ಸ್ಫೋಟದ ತೀವ್ರತೆಗೆ ಅಕ್ಕಪಕ್ಕದ 3-4 ಮನೆಗಳಿಗೂ ಹಾನಿಯಾಗಿದೆ. ಅಕ್ಕಪಕ್ಕ ಮನೆಯ ಬಾಗಿಲು, ಡೋರ್ ಹಾಗೂ ಮನೆಯಲ್ಲಿದ್ದ ವಸ್ತುಗಳೆಲ್ಲ ಛಿದ್ರ ಛಿದ್ರ ಆಗಿವೆ. ಮನೆಯ ಮುಂಭಾಗ ನಿಲ್ಲಿಸಿದ್ದ ಕಾರು ಹಾಗೂ ಬೈಕ್​​ಗಳಿಗೂ ಹಾನಿಯಾಗಿದೆ. ಘಟನಾ ಸ್ಥಳಕ್ಕೆ ಅಗ್ನಿಶಾಮಕ ಠಾಣಾ ಸಿಬ್ಬಂದಿ, ಬನ್ನೇರುಘಟ್ಟ ಪೊಲೀಸರ ಭೇಟಿ ಪರಿಶೀಲನೆ ನಡೆಸಿದ್ದಾರೆ.

ಇದನ್ನೂ ಓದಿ: ದೀಪಾವಳಿ ಹಬ್ಬಕ್ಕೆ ಮಾರ್ಗಸೂಚಿ ಬಿಡುಗಡೆ – ಎಲ್ಲೆಲ್ಲಿ ಪಟಾಕಿ ಮಾರಾಟಕ್ಕೆ ಅವಕಾಶ?

ಅಕ್ಟೋಬರ್ 18 ರಂದು ಬೆಂಗಳೂರು ನಗರದ ಕೊರಮಂಗಲದ ಫೋರಂ ಮಾಲ್ ಮುಂಭಾಗದಲ್ಲಿರುವ ಮಾರುತಿ ಕಾರು ಷೋ ರೂಂನ ನಾಲ್ಕನೇ ಮಹಡಿಯಲ್ಲಿದ್ದ ಮಡ್ ಪೈಪ್ ಹುಕ್ಕಾ ಕೆಫೆನಲ್ಲಿದ್ದ ಕಟ್ಟಡದಲ್ಲಿದ್ದ 8 ರಿಂದ 10 ಸಿಲಿಂಡರ್​ಗಳು ಸ್ಫೋಟಗೊಂಡಿದ್ದವು. ಪ್ರಾಣ ಉಳಿಸಿಕೊಳ್ಳಲು ಪ್ರೇಮ್​ ಎಂಬುವರು ನಾಲ್ಕನೇ ಮಹಡಿಯಿಂದ ಗಿಡದ ಮೇಲೆ ಜಿಗಿದಿದ್ದರು. ಅವರಿಗೆ ಗಾಯಗಳಾಗಿದ್ದು, ನಿಮ್ಹಾನ್ಸ್​ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಪಕ್ಕದ ಕಟ್ಟಡಕ್ಕೂ ಬೆಂಕಿ ಹರಡಿತ್ತು. ಈ ಅವಘಡಕ್ಕೂ ಮುನ್ನ ಅಂದರೆ ಅಕ್ಟೋಬರ್​ 8 ರಂದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಆನೇಕಲ್ ತಾಲೂಕಿನ ಅತ್ತಿಬೆಲೆಯಲ್ಲಿ ಲಾರಿಯಿಂದ ಪಟಾಕಿ ಅನ್​ಲೋಡ್ ಮಾಡುವಾಗ ಆಕಸ್ಮಿಕ ಬೆಂಕಿ ತಗುಲಿ ಪಟಾಕಿ ಅಂಗಡಿ ಹೊತ್ತಿ ಉರಿದಿತ್ತು. ಅವಘಡದಿಂದ 17 ಜನರು ಮೃತಪಟ್ಟಿದ್ದರು. ಅಗ್ನಿ ದುರಂತದಲ್ಲಿ ಕೋಟ್ಯಂತರ ಮೌಲ್ಯದ ಪಟಾಕಿ ಅಗ್ನಿಗಾಹುತಿಯಾಗಿತ್ತು. 1 ಕ್ಯಾಂಟ್ರೋ, 2 ಬೊಲೆರೋ, 7 ಬೈಕ್​ಗಳು ಸಹ ಬೆಂಕಿಗಾಹುತಿ ಆಗಿದ್ದವು. ಮೃತರ ಕುಟುಂಬಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ತಲಾ 5 ಲಕ್ಷ ರೂ. ಪರಿಹಾರ ಘೋಷಿಸಿದ್ದರು.

Shwetha M