ಮಿಚಾಂಗ್ ಚಂಡಮಾರುತ ಎಫೆಕ್ಟ್ – ತಮಿಳುನಾಡಿನಲ್ಲಿ ಮಳೆ ಮುಂದುವರಿಕೆ, ಸತತ ಐದನೇ ದಿನವೂ ಶಾಲಾ-ಕಾಲೇಜುಗಳಿಗೆ ರಜೆ
ಮಿಚಾಂಗ್ ಚಂಡಮಾರುದ ಹೊಡೆತಕ್ಕೆ ಸಿಲುಕಿ ತಮಿಳುನಾಡು ತತ್ತರಿಸಿ ಹೋಗಿದೆ. ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ತಮಿಳುನಾಡಿಗೆ ಚಂಡಮಾರುತ ಅಪ್ಪಳಿಸಿ ಶುಕ್ರವಾರಕ್ಕೆ ಐದು ದಿನಗಳಾಗಿದ್ದು, ಜನಜೀವನ ಇನ್ನೂ ಸಹಜ ಸ್ಥಿತಿಗೆ ಬಂದಿಲ್ಲ. ಹಾನಿಗೊಳಗಾದ ಪ್ರದೇಶಗಳಲ್ಲಿ ಪರಿಹಾರ ಚಟುವಟಿಕೆ ಕಾರ್ಯಗಳನ್ನು ಮಾಡಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ತಮಿಳುನಾಡು ಸರ್ಕಾರ ಸತತ ಐದನೇ ದಿನ ಕೂಡ ಚೆನ್ನೈನ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಿದೆ.
ಇದನ್ನೂ ಓದಿ: ಉಡುಪಿ ಜಿಲ್ಲೆಯಲ್ಲಿ ಕಡಿಮೆ ಮಳೆ – ಅವಧಿಗೂ ಮೊದಲೇ ವಾರಾಹಿ ನದಿ ಬತ್ತಿ ಹೋಗುವ ಆತಂಕ..!
ಚೆನ್ನೈನ ಹಲವಾರು ಭಾಗಗಳು ಮತ್ತು ನೆರೆಯ ಜಿಲ್ಲೆಗಳು ಜಲಾವೃತಗೊಂಡಿದೆ. ಮೂಲಭೂತ ಸರಕುಗಳ ಕೊರತೆಯಿಂದ ಜನರು ಪರದಾಡುವಂತ ಪರಿಸ್ಥಿತಿ ಎದುರಾಗಿದೆ. ನಗರದಲ್ಲಿ ಮಳೆ ಸಂಬಂಧಿತ ಘಟನೆಗಳಲ್ಲಿ 25ಕ್ಕೂ ಅಧಿಕ ಜನರು ಸಾವನ್ನಪ್ಪಿದ್ದು, ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ ತಂಡ ಗುರುವಾರ ತಡರಾತ್ರಿ ರಕ್ಷಣಾ ಕಾರ್ಯಾಚರಣೆ ನಡೆಸಿ ಶುಕ್ರವಾರ (ಡಿ.08) ಬೆಳಗ್ಗೆ ಮತ್ತೊಂದು ಮೃತದೇಹವನ್ನು ಹೊರತೆಗೆದಿದೆ.
ಸದ್ಯ ಪರಿಹಾರ ಚಟುವಟಿಕೆಗಳನ್ನು ತ್ವರಿತಗೊಳಿಸಲಾಗಿದೆ ಮತ್ತು ನಗರದ ವಿವಿಧ ಸ್ಥಳಗಳಲ್ಲಿ ನಿಂತ ನೀರನ್ನು ಪಂಪ್ ಮಾಡುವ ಪ್ರಯತ್ನಗಳು ಭರದಿಂದ ಸಾಗುತ್ತಿವೆ ಎಂದು ಸರ್ಕಾರ ತಿಳಿಸಿದೆ. ಈ ಮಧ್ಯೆ ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಶುಕ್ರವಾರ ಮತ್ತು ಶನಿವಾರ ತಮಿಳುನಾಡು ಮತ್ತು ಕೇರಳದಲ್ಲಿ ಹೆಚ್ಚಿನ ಮಳೆಯಾಗುವ ಮುನ್ಸೂಚನೆಯನ್ನು ನೀಡಿದ್ದು, ಪುದುಚೇರಿಯಲ್ಲಿ ವ್ಯಾಪಕ ಮಳೆ ಸುರಿಯಲಿದೆ ಎಂದು ಹೇಳಿದೆ.
ಮುಂದಿನ 5 ದಿನಗಳಲ್ಲಿ ಕೇರಳ ಮತ್ತು ಮುಂದಿನ 3 ದಿನಗಳಲ್ಲಿ ಮಾಹೆ, ತಮಿಳುನಾಡು, ಪುದುಚೇರಿ ಮತ್ತು ಕಾರೈಕಲ್ ಮತ್ತು ಲಕ್ಷದ್ವೀಪಗಳಲ್ಲಿ ಪ್ರತ್ಯೇಕವಾದ ಗುಡುಗು, ಮಿಂಚು ಸಹಿತ ಹಗುರ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.