ಮಿಚಾಂಗ್ ಚಂಡಮಾರುತ ಆರ್ಭಟ – ಮಳೆಗೆ ಜನಜೀವನ ತತ್ತರ, ಮೂವರು ಬಲಿ  

ಮಿಚಾಂಗ್ ಚಂಡಮಾರುತ ಆರ್ಭಟ – ಮಳೆಗೆ ಜನಜೀವನ ತತ್ತರ, ಮೂವರು ಬಲಿ  

ಬಂಗಾಳ ಕೊಲ್ಲಿಯಲ್ಲಿ ಮಿಚಾಂಗ್ ಚಂಡಮಾರುತ ಎದ್ದಿದ್ದು ತಮಿಳುನಾಡಿನಲ್ಲಿ ಭಾರಿ ಅವಾಂತರ ಸೃಷ್ಟಿಸಿದೆ. ತಮಿಳುನಾಡಿನ ಹಲವೆಡೆ ಭಾರಿ ಮಳೆ ಸುರಿಯುತ್ತಿದ್ದು, ಇದರಿಂದ ರಾಜಧಾನಿ ಚೆನ್ನೈ ಸೇರಿದಂತೆ ಅನೇಕ ಪ್ರದೇಶಗಳು ರಸ್ತೆಗಳು ಮತ್ತು ಮನೆಗಳು ಜಲಾವೃತವಾಗಿವೆ. ಸೈಕ್ಲೋನ್ ಮತ್ತಷ್ಟು ಉಗ್ರ ಸ್ವರೂಪ ಪಡೆದುಕೊಳ್ಳುವ ಸಾಧ್ಯತೆ ಇರುವುದರಿಂದ ಜಾಗ್ರತೆ ವಹಿಸಲು ಎಚ್ಚರಿಕೆ ನೀಡಲಾಗಿದೆ.

ತಮಿಳುನಾಡಿನಲ್ಲಿ ಭಾರಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಚೆನ್ನೈನ ಕನಥೂರ್ ಪ್ರದೇಶದಲ್ಲಿ ಹೊಸದಾಗಿ ನಿರ್ಮಿಸಿದ್ದ ಕಟ್ಟಡದ ಗೋಡೆ ಕುಸಿದು ಸೋಮವಾರ ಬೆಳಿಗ್ಗೆ ಇಬ್ಬರು ಮೃತಪಟ್ಟಿದ್ದಾರೆ. ಮೃತರು ಜಾರ್ಖಂಡ್ ಮೂಲದವರು ಎನ್ನಲಾಗಿದೆ. ಎನ್‌ಡಿಆರ್‌ಎಫ್ ಮತ್ತು ರಾಜ್ಯ ವಿಪತ್ತು ನಿರ್ವಹಣಾ ತಂಡಗಳು ಸಕ್ರಿಯವಾಗಿದ್ದು, ತಂಬರಮ್ ಪ್ರದೇಶದಲ್ಲಿ ಜಲಾವೃತ ಪ್ರದೇಶಗಳಲ್ಲಿ ಸಿಲುಕಿದ್ದ 15ಕ್ಕೂ ಹೆಚ್ಚು ಜನರನ್ನು ರಕ್ಷಿಸಲಾಗಿದೆ.

ಇದನ್ನೂ ಓದಿ: ಮಗನ ಸಾವಿಗೆ ಸಿಗದ ನ್ಯಾಯ – 7 ಬಾರಿ ಗೆದ್ದಿದ್ದ ಕಾಂಗ್ರೆಸ್‌ ಅಭ್ಯರ್ಥಿ ವಿರುದ್ಧ ಸೇಡು ತೀರಿಸಿಕೊಂಡ ತಂದೆ!

ಭಾರಿ ಮಳೆಯ ಹಿನ್ನೆಲೆಯಲ್ಲಿ ಚೆನ್ನೈ ಸಾರಿಗೆ ಸಂಸ್ಥೆಯು 2,800 ಬಸ್‌ಗಳ ಪೈಕಿ 600 ಬಸ್‌ಗಳನ್ನು ಮಾತ್ರ ರಸ್ತೆಗಿಳಿಸಿದೆ. ಚಾಲಕರು ಮತ್ತು ನಿರ್ವಾಹಕರಿಗೆ ಕರ್ತವ್ಯಕ್ಕೆ ಹಾಜರಾಗಲು ಕೂಡ ಸಾಧ್ಯವಾಗುತ್ತಿಲ್ಲ. ಕೊಯಂಬೇಡು, ಎಗ್ಮೋರೆ ಮತ್ತು ತಂಬಾರಂನಂತಹ ಪ್ರದೇಶಗಳಿಗೆ ರೈಲು ಹಾಗೂ ಬಸ್‌ಗಳಲ್ಲಿ ಬಂದಿಳಿದ ಪ್ರಯಾಣಿಕರಿಗೆ ಅಲ್ಲಿಂದ ಹೋಗಲು ವಾಹನಗಳಿಲ್ಲದೆ ಪರದಾಡುತ್ತಿದ್ದಾರೆ. ಕೇವಲ 2- 3 ಕಿಮೀ ದೂರದ ಪ್ರಯಾಣಿಕರಿಗೆ ಆಟೋ ರಿಕ್ಷಾ ಚಾಲಕರು ಕನಿಷ್ಠ 500 ರೂ ದರ ಕೇಳುತ್ತಿರುವುದು ಅವರ ಪರದಾಟ ಹೆಚ್ಚಿಸಿದೆ.

ಭಾರಿ ಮಳೆ ಹಾಗೂ ಗಾಳಿ ಕಾರಣದಿಂದ ವಿಮಾನ ಸಂಚಾರ ಕೂಡ ಅಸ್ತವ್ಯಸ್ತವಾಗಿದೆ. ಚೆನ್ನೈ ವಿಮಾನ ನಿಲ್ದಾಣದಿಂದ ಹೊರಡುವ ಹಾಗೂ ಆಗಮಿಸುವ ಅನೇಕ ವಿಮಾನಗಳು ರದ್ದುಗೊಂಡಿವೆ. ಇನ್ನು ಕನಿಷ್ಠ 20 ವಿಮಾನಗಳ ಹಾರಾಟ ವಿಳಂಬಗೊಂಡಿದೆ. ವಿಮಾನ ನಿಲ್ದಾಣಕ್ಕೆ ಆಗಮಿಸುವ ಮುನ್ನ ವಿಮಾನದ ಸ್ಥಿತಿಗತಿ ಪರಿಶೀಲಿಸುವಂತೆ ಪ್ರಯಾಣಿಕರಿಗೆ ವಿಮಾನಯಾನ ಸಂಸ್ಥೆಗಳು ಸಲಹೆ ನೀಡಿವೆ. ಆದರೆ ಏರ್‌ಪೋರ್ಟ್ ಎಂದಿನಂತೆ ಕಾರ್ಯ ನಿರ್ವಹಿಸುತ್ತಿದೆ. ಚೆನ್ನೈನ ಕನಿಷ್ಠ 14 ಸಬ್‌ವೇಗಳು ಮುಚ್ಚಿಹೋಗಿವೆ. ಸಬ್ ಅರ್ಬನ್ ರೈಲುಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ವಿದ್ಯುತ್ ಹಾಗೂ ಇಂಟರ್ನೆಟ್ ಸೇವೆಗಳಲ್ಲಿ ವ್ಯತ್ಯಯ ಉಂಟಾಗಿದೆ. ಮುಂಜಾಗ್ರತಾ ಕ್ರಮವಾಗಿ ವಿದ್ಯುತ್ ಪೂರೈಕೆ ಸ್ಥಗಿತಗೊಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮತ್ತಷ್ಟು ಮಳೆ ಸೂಚನೆ

ಚೆನ್ನೈ, ಕಂಚೀಪುರಂ, ಚೆಂಗಲಪಟ್ಟು, ತಿರುವಳ್ಳೂರ್ ಜಿಲ್ಲೆಗಳಲ್ಲಿ ಗಂಟೆಗೆ 60- 70 ಕಿಮೀ ವೇಗದಲ್ಲಿ ಗಾಳಿ ಬೀಸುತ್ತಿದೆ. ಕಡ್ಡಲೋರ್, ಕಲ್ಲಕುರಿಚಿ ಮತ್ತು ತಿರುಪತ್ತೂರ್ ಜಿಲ್ಲೆಗಳಲ್ಲಿ ವಿಪರೀತ ಮಳೆ ಸಾಧ್ಯತೆ ಇದೆ. ರಾಣಿಪೇಟೆ, ವೆಲ್ಲೂರ್, ತಿರುವಣ್ಣಾಮಲೈ, ವಿಲ್ಲುಪುರಂ ಜಿಲ್ಲೆಗಳಲ್ಲಿ ಮಳೆ ಆರ್ಭಟ ಇನ್ನಷ್ಟು ಜೋರಾಗಿರಲಿದೆ. ಚೆನ್ನೈ, ಕಾಂಚಿಪುರಂ, ಚೆಂಗಲಪಟ್ಟು ಹಾಗೂ ತಿರುವಳ್ಳೂರು ಜಿಲ್ಲೆಗಳ ಹಲವೆಡೆ ಕುಂಭದ್ರೋಣ ಮಳೆಯ ಎಚ್ಚರಿಕೆ ನೀಡಲಾಗಿದೆ.

ಆಂಧ್ರಪ್ರದೇಶದಲ್ಲೂ ಮಳೆಯ ರೌದ್ರ ನರ್ತನ

ಆಂಧ್ರಪ್ರದೇಶದಲ್ಲಿ ಕೂಡ ಮಿಚಾಂಗ್ ಆರ್ಭಟ ತೀವ್ರವಾಗಿದೆ. ಕಳೆದ ಮೂರು ದಿನಗಳಿಂದ ಕರಾವಳಿ ಭಾಗಗಳಲ್ಲಿ ಮಳೆಯಾಗುತ್ತಿದ್ದು, ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ತಿರುಮಲ ಬೆಟ್ಟದಲ್ಲಿ ಶನಿವಾರ ಸಂಜೆಯಿಡೀ ಸಂಪೂರ್ಣ ವಿದ್ಯುತ್ ಕಡಿತ ಉಂಟಾಗಿತ್ತು. ಇದು ತೀರಾ ಅಪರೂಪದ ಸನ್ನಿವೇಶವಾಗಿದೆ. ರಾತ್ರಿ 11 ರಿಂದ ಭಾನುವಾರ ಬೆಳಿಗ್ಗೆ 9 ಗಂಟೆಯವರೆಗೂ ವಿದ್ಯುತ್ ಪೂರೈಕೆ ಇರಲಿಲ್ಲ.

ಇನ್ನು ಆಂಧ್ರದ ನೆಲ್ಲೂರು ಜಿಲ್ಲೆಯಲ್ಲಿ ಬಿರುಗಾಳಿ ಸಹಿತ ಮಳೆ ಬಾಲಕನೊಬ್ಬನನ್ನು ಬಲಿ ಪಡೆದಿದೆ. ಬಿರುಗಾಳಿಯ ತೀವ್ರತೆಗೆ ಗುಡಿಸಲು ಕುಸಿದು ಬಾಲಕ ಬಲಿ ಆಗಿದ್ದಾನೆ. ಸದ್ಯ ನೆಲ್ಲೂರಿಗೆ ಆಗ್ನೇಯ ದಿನನಲ್ಲಿ 440 ಕಿಲೋಮೀಟರ್ ದೂರದಲ್ಲಿ ಚಂಡಮಾರುತ ಕೇಂದ್ರೀಕೃತವಾಗಿದೆ. ವಾಯುವ್ಯ ದಿಕ್ಕಿನತ್ತ ಪಯಣಿಸುತ್ತಿರುವ ಈ ಚಂಡಮಾರುತ ಡಿಸೆಂಬರ್ 5 ರಂದು ನೆಲ್ಲೂರು-ಮಚಲಿಪಟ್ಟಣಂ ನಡುವೆ ತೀರ ದಾಟಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಕರ್ನಾಟಕದಲ್ಲೂ ಹೈ ಅಲರ್ಟ್!

ಚಂಡಮಾರುತ ಎಫೆಕ್ಟ್ ನಿಂದಾಗಿ ರಾಜಧಾನಿಯಲ್ಲಿ ಸೋಮವಾರ ಬೆಳ್ಳಂಬೆಳಗ್ಗೆ ಚುಮುಚುಮು ಚಳಿ ಶುರುವಾಗಿದೆ. ರಾಜ್ಯದಲ್ಲಿ ಇನ್ನೆರಡು ದಿನ ಕರ್ನಾಟಕದಲ್ಲೂ ಭಾರೀ ಮಳೆಯಾಗುವ ಸಾಧ್ಯತೆಗಳಿವೆ ಎಂದು ಹವಾಮಾನ ಇಲಾಖೆ ಎಚ್ಚರಿಕೆಯೊಂದನ್ನು ನೀಡಿದೆ. ಈ ಹಿನ್ನೆಲೆಯಲ್ಲಿ ಹೈ ಅಲರ್ಟ್‌ ಘೋಷಣೆ ಮಾಡಲಾಗಿದೆ.

Shwetha M