ಮಿಚಾಂಗ್ ಚಂಡಮಾರುತದ ರೌದ್ರಾವತಾರಕ್ಕೆ ಚೆನ್ನೈ ಜಲಾವೃತ – ಸಾವಿನ ಸಂಖ್ಯೆ 8 ಕ್ಕೆ ಏರಿಕೆ
ಬಂಗಾಳಕೊಲ್ಲಿಯಲ್ಲಿ ಎದ್ದಿರುವ ಮಿಚಾಂಗ್ ಚಂಡಮಾರುತವು ತಮಿಳುನಾಡಿನಲ್ಲಿ ರೌದ್ರಾವತಾರ ತಾಳಿದೆ. ಕ್ಷಣ ಕ್ಷಣಕ್ಕೂ ತೀವ್ರ ಸ್ವರೂಪವನ್ನು ತಾಳುತ್ತಿದೆ. ಚೆನ್ನೈನಲ್ಲಿ ಮಳೆ ಸಂಬಂಧಿ ಅನಾಹುತಗಳಿಂದ ಸಾವನ್ನಪ್ಪಿದವರ ಸಂಖ್ಯೆ ಎಂಟಕ್ಕೆ ಏರಿಕೆಯಾಗಿದೆ ಎಂದು ವರದಿಯಾಗಿದೆ.
ಇದನ್ನೂ ಓದಿ:ಮಿಚಾಂಗ್ ಚಂಡಮಾರುತದ ಅಬ್ಬರಕ್ಕೆ ಚೆನ್ನೈನಲ್ಲಿ ಐವರು ಬಲಿ – ಆಂಧ್ರ ಪ್ರದೇಶದ ಬಾಪಟ್ಲಾಗೆ ಅಪ್ಪಳಿಸಲಿದೆ ಸೈಕ್ಲೋನ್!
ಚೆನ್ನೈನಲ್ಲಿ ಸೈಕ್ಲೋನ್ ಪರಿಣಾಮದಿಂದ ವಿಪರೀತ ಮಳೆ ಸುರಿದು, ರಸ್ತೆಗಳು ನದಿಯಂತಾಗಿವೆ. ಸೋಮವಾರ ವಾಹನಗಳು ಕೊಚ್ಚಿಕೊಂಡು ಹೋಗುವ ವಿಡಿಯೋಗಳು ವೈರಲ್ ಆಗಿವೆ. ಇದರಿಂದಾಗಿ ಮಳೆ ಅಪಾಯವಿರುವ ಪ್ರದೇಶಗಳಲ್ಲಿ ಶೈಕ್ಷಣಿಕ ಸಂಸ್ಥೆಗಳಿಂದ ರಜೆ ಘೋಷಿಸಲಾಗಿದೆ. ಪರಿಸ್ಥಿತಿ ಸುಧಾರಿಸುವವರೆಗೂ ವರ್ಕ್ ಫ್ರಂ ಹೋಂ ಮಾಡುವಂತೆ ಖಾಸಗಿ ಸಂಸ್ಥೆಗಳು ಉದ್ಯೋಗಿಗಳಿಗೆ ಸೂಚಿಸಿದೆ. ಆದರೆ ವಿದ್ಯುತ್ ಪೂರೈಕೆ ಮತ್ತು ಇಂಟರ್ನೆಟ್ ಸಂಪರ್ಕದ ವ್ಯತ್ಯಯದಿಂದ ದೈನಂದಿನ ಕಾರ್ಯಚಟುವಟಿಕೆಗಳಿಗೆ ಮತ್ತಷ್ಟು ತೊಡಕಾಗಿದೆ. ಭಾರಿ ಗಾಳಿಯಿಂದಾಗಿ ಮರಗಳು, ಗೋಡೆಗಳು ಹಾಗೂ ವಿದ್ಯುತ್ ಕಂಬಗಳು ಧರೆಗುರುಳಿವೆ. ಸರ್ಕಾರಿ ಆಸ್ಪತ್ರೆಗಳಿಗೆ ನೀರು ನುಗ್ಗಿದ್ದರಿಂದ ಆರೋಗ್ಯ ಸೇವೆಗಳಿಗೆ ತಾತ್ಕಾಲಿಕ ತಡೆ ಬಿದ್ದಿದೆ. ಮೆಟ್ರೋ ನಿಲ್ದಾಣಗಳಿಗೂ ನೀರು ನುಗ್ಗಿದೆ. ಜಲಾವೃತ ರಸ್ತೆಯಲ್ಲಿ ಮೊಸಳೆಯೊಂದು ಸಾಗುವುದು ವಿಡಿಯೋದಲ್ಲಿ ಸೆರೆಯಾಗಿದೆ.
ಆಂಧ್ರಪ್ರದೇಶದ ಕರಾವಳಿ ತೀರಗಳಲ್ಲಿ ಸೆಕ್ಷನ್ 144 ಜಾರಿ!
ಆಂಧ್ರಪ್ರದೇಶದ ದಕ್ಷಿಣ ಕರಾವಳಿಯಲ್ಲಿ 1 ರಿಂದ 1.5 ಮೀಟರ್ ಎತ್ತರದವರೆಗಿನ ಪ್ರಬಲ ಅಲೆಗಳು ಅಥವಾ ಬಿರುಗಾಳಿ ಕೆಳಮಟ್ಟದ ಪ್ರದೇಶಗಳಿಗೆ ನುಗ್ಗುವ ಸಾಧ್ಯತೆ ಇದೆ. ಬಾಪಟ್ಲಾ ಮತ್ತು ಕೃಷ್ಣ ಜಿಲ್ಲೆಗಳ ಮೇಲೆ ತೀವ್ರ ಶಕ್ತಿಶಾಲಿ ಬಿರುಗಾಳಿ ಉದ್ಭವಿಸಲಿದೆ. ಗಂಟೆಗೆ ಗರಿಷ್ಠ 90- 100 ಕಿಮೀ ವೇಗದಲ್ಲಿ ತೀವ್ರ ಸ್ವರೂಪದ ಚಂಡಮಾರುತ ಬಿರುಗಾಳಿ ಅಪ್ಪಳಿಸಲಿದೆ ಎನ್ನಲಾಗಿದೆ. ತಿರುಪತಿ, ನೆಲ್ಲೂರ್, ಪ್ರಕಾಸಂ, ಬಾಪಟ್ಲಾ, ಕೃಷ್ಣ, ಪಶ್ಚಿಮ ಗೋದಾವರಿ, ಕೋನಸೀಮಾ ಮತ್ತು ಕಾಕಿನಾಡ ಜಿಲ್ಲೆಗಳಲ್ಲಿ ಕಟ್ಟೆಚ್ಚರ ವಹಿಸುವಂತೆ ಆಂಧ್ರ ಸರ್ಕಾರ ಸೂಚನೆ ನೀಡಿದೆ. ಪುದುಚೆರಿಯಲ್ಲಿ ಸಂಜೆ 6 ಗಂಟೆಯವರೆಗೂ ಕರಾವಳಿ ತೀರಗಳಲ್ಲಿ ಜನರ ಓಡಾಟದ ಮೇಲೆ ನಿರ್ಬಂಧ ವಿಧಿಸಿ ಸೆಕ್ಷನ್ 144 ಜಾರಿಗೊಳಿಸಲಾಗಿದೆ.
ಕರ್ನಾಟಕದಲ್ಲೂ ಹೈಅಲರ್ಟ್ – ಹಲವು ಭಾಗಗಳಲ್ಲಿ ಮಳೆ ಸಾಧ್ಯತೆ
ತಮಿಳುನಾಡಿನಲ್ಲಿ ಭಾರಿ ಅವಾತಂರ ಸೃಷ್ಟಿಸುತ್ತಿರುವ ಮಿಚಾಂಗ್ ಚಂಡಮಾರುತದ ಪ್ರಭಾವ ಕರ್ನಾಟಕದ ಮೇಲೂ ಆಗಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ರಾಜ್ಯದ ಹಲವು ಭಾಗಗಳಲ್ಲಿ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಚಂಡಮಾರುತದ ಪರಿಣಾಮ ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ, ಬಾಗಲಕೋಟೆ, ಬೀದರ್, ಧಾರವಾಡ, ಗದಗ,ಹಾವೇರಿ, ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯಪುರ, ಯಾದಗಿರಿ, ಬಳ್ಳಾರಿ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ, ಕೋಲಾರ, ಮಂಡ್ಯ, ಮೈಸೂರು, ರಾಮನಗರ, ತುಮಕೂರು, ವಿಜಯನಗರ ಜಿಲ್ಲೆಗಳಲ್ಲಿ ಮಳೆಯಾಗಲಿದೆ.
ಬೆಂಗಳೂರಿನಲ್ಲಿ ಮೋಡಕವಿದ ವಾತಾವರಣ
ಬೆಂಗಳೂರಿನಲ್ಲಿ ಮೋಡಕವಿದ ವಾತಾವರಣವಿದ್ದು, ಸಂಜೆ ವೇಳೆಗೆ ಭಾರಿ ಮಳೆಯಾಗುವ ನಿರೀಕ್ಷೆ ಇದೆ. ಎಚ್ಎಎಲ್ನಲ್ಲಿ 24.6 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 19.0 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ, ನಗರದಲ್ಲಿ 24.5 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 20.2 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ, ಕೆಐಎಎಲ್ನಲ್ಲಿ 26.8 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 20.1 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ ದಾಖಲಾಗಿದೆ.