ತಮಿಳುನಾಡಿನಲ್ಲಿ ಮಾಂಡೌಸ್  ಚಂಡಮಾರುತದ ಅಟ್ಟಹಾಸ: ಕರ್ನಾಟಕದಲ್ಲೂ ಭಾರಿ ಮಳೆ!

ತಮಿಳುನಾಡಿನಲ್ಲಿ ಮಾಂಡೌಸ್  ಚಂಡಮಾರುತದ ಅಟ್ಟಹಾಸ: ಕರ್ನಾಟಕದಲ್ಲೂ ಭಾರಿ ಮಳೆ!

ಚೆನ್ನೈ: ತಮಿಳುನಾಡಿಗೆ ಮಾಂಡೌಸ್ ಚಂಡಮಾರುತ ಅಪ್ಪಳಿಸಿದ್ದು ದೊಡ್ಡ ಕೋಲಾಹಲವನ್ನೇ ಸೃಷ್ಟಿಸಿದೆ. ನಿನ್ನೆ ರಾತ್ರಿ 11.30ರ ವೇಳೆಗೆ ಗಂಟೆಗೆ ಸುಮಾರು 75 ಕಿಲೋ ಮೀಟರ್​ ವೇಗದಲ್ಲಿ ಮಹಾಬಲಿಪುರಂ ಜಿಲ್ಲೆಯನ್ನು ಚಂಡಮಾರುತ ಹಾದು ಹೋಗಿದೆ. ಪರಿಣಾಮ ತಮಿಳುನಾಡಿನ ವಿವಿಧೆಡೆ ರಾತ್ರಿಯಿಡೀ ಭಾರಿ ಮಳೆಯಾಗಿದೆ. ಚೆನ್ನೈ ನಗರದಲ್ಲಿ 115 ಮಿಲಿ ಮೀಟರ್​​ನಷ್ಟು ಮಳೆಯಾಗಿದ್ದು, ಚಂಡಮಾರುತದ ಹೊಡೆತಕ್ಕೆ ಸುಮಾರು 200ಕ್ಕೂ ಹೆಚ್ಚು ಮರಗಳು ಉರುಳಿ ಬಿದ್ದಿದೆ. ನಗರದ ತಗ್ಗು ಪ್ರದೇಶಗಳು ಜಲಾವೃತವಾಗಿದ್ದು, ಮನೆಗಳಿಗೆ ನೀರು ನುಗ್ಗಿ ಜನರು ಪರದಾಡುತ್ತಿದ್ದಾರೆ.  ಚೆನ್ನೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತಾತ್ಕಾಲಿಕವಾಗಿ ವಿಮಾನಗಳ ಸಂಚಾರವನ್ನು ಸ್ಥಗಿತಗೊಳಿಸಲಾಗಿತ್ತು.

ಚಂಡಮಾರುತದಿಂದ ತಮಿಳುನಾಡಿನ ಮಹಾಬಲಿಪುರಂ ಜಿಲ್ಲೆಯಲ್ಲಿ ವ್ಯಾಪಕ ನಷ್ಟ ಸಂಭವಿಸಿದೆ. ಸಮುದ್ರ ತಟದಲ್ಲಿದ್ದ ಮೀನುಗಾರಿಕೆ ಬೋಟ್​ಗಳು ಹಾನಿಯಾಗೊಳಗಾಗಿವೆ. ಸಮುದ್ರಕ್ಕೆ ಮುಖ ಮಾಡಿದ್ದ ಶಾಪ್​ಗಳ ಚಾವಣಿ ಕಿತ್ತುಕೊಂಡು ಹಾರಿ ಹೋಗಿವೆ. ಕಾಂಪೌಂಡ್​ಗಳು ಕುಸಿದುಬಿದ್ದು, ಕಾರುಗಳು ನಜ್ಜುಗುಜ್ಜಾಗಿವೆ.

ಚಂಡಮಾರುತ ಮತ್ತು ಮಹಾಮಳೆಯಿಂದ ಹಾನಿಗೊಳಗಾದ ಪ್ರದೇಶಗಳಲ್ಲಿ ರಕ್ಷಣಾ ಕಾರ್ಯ ಭರದಿಂದ ಸಾಗುತ್ತಿದೆ. ತಮಿಳುನಾಡಿನ 10 ಜಿಲ್ಲೆಗಳಲ್ಲಿ ಎನ್​ಡಿಆರ್​​ಎಫ್​​ ತಂಡಗಳು ಕಾರ್ಯಪ್ರವೃತ್ತವಾಗಿವೆ. ಸಂತ್ರಸ್ತರಿಗಾಗಿ ತಮಿಳುನಾಡು ಸರ್ಕಾರ 5,000ಕ್ಕೂ ಹೆಚ್ಚು ಗಂಜಿ ಕೇಂದ್ರಗಳನ್ನು ತೆರೆದಿದೆ. ವಿವಿಧ ಜಿಲ್ಲೆಗಳ ಜನರು ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಗೊಳಿಸಲಾಗುತ್ತಿದೆ.

ಕರ್ನಾಟಕ, ಆಂಧ್ರದಲ್ಲೂ ಮಳೆ :

ತಮಿಳುನಾಡಿನಲ್ಲಿನ ಚಂಡಮಾರುತದ ಎಫೆಕ್ಟ್ ಕರ್ನಾಟಕ ಮತ್ತು ಆಂಧ್ರಪ್ರದೇಶಕ್ಕೂ ತಟ್ಟಿದೆ. ಬೆಂಗಳೂರಿನಲ್ಲಿ ನಿನ್ನೆ ರಾತ್ರಿಯಿಂದಲೇ ಮಳೆ ಸುರಿಯುತ್ತಿದೆ. ನಗರದಲ್ಲಿ ತಾಪಮಾನ 16.8 ಡಿಗ್ರಿ ಸೆಲ್ಸಿಯಸ್​ಗೆ ಕುಸಿದಿದೆ. ಹವಾಮಾನ ಇಲಾಖೆ ವರದಿ ಪ್ರಕಾರ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರ, ರಾಮನಗರ, ಕೊಡಗು, ಹಾಸನ, ಶಿವಮೊಗ್ಗ, ಮೈಸೂರು, ತುಮಕೂರು, ದಾವಣಗೆರೆ ಮತ್ತು ಚಿತ್ರದುರ್ಗ ಜಿಲ್ಲೆಯಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆ. ಡಿಸೆಂಬರ್ 14ರವರೆಗೂ ರಾಜ್ಯದ ವಿವಿಧ ಭಾಗದಲ್ಲಿ ಮಳೆಯಾಗಬಹುದು ಅಂತಾ ಹವಾಮಾನ ಇಲಾಖೆ ಮಾಹಿತಿ ನೀಡಿದೆ.

ಕರ್ನಾಟಕ ಮಾತ್ರವಲ್ಲ ಅತ್ತ ದಕ್ಷಿಣ ಆಂಧ್ರಪ್ರದೇಶದ ವಿವಿಧ ಜಿಲ್ಲೆಗಳಲ್ಲೂ ಭಾರಿ ಮಳೆಯಾಗುತ್ತಿದೆ. ಆಂಧ್ರದ ನಾಯ್ಡುಪೇಟಾದಲ್ಲಿ ಕಳೆದ 24 ಗಂಟೆಯಲ್ಲಿ 281.5 ಮಿಲಿ ಮೀಟರ್ ಮಳೆಯಾಗಿದೆ.  ಮಾಂಡೌಸ್ ಚಂಡಮಾರುತ ತಮಿಳುನಾಡು, ಕರ್ನಾಟಕ ಮತ್ತು ಆಂಧ್ರಪ್ರದೇಶದ ಜನಜೀವನದ ಮೇಲೆ ಪರಿಣಾಮ ಬೀರಿದೆ.

suddiyaana