ಬಾಂಗ್ಲಾದೇಶದ ಕರಾವಳಿ ದಾಟಲಿದೆ ‘ಹಮೂನ್’ ಚಂಡಮಾರುತ – ಈ ರಾಜ್ಯಗಳಲ್ಲಿ ಮಳೆಯಾಗುವ ಸಾಧ್ಯತೆ

ಬಾಂಗ್ಲಾದೇಶದ ಕರಾವಳಿ ದಾಟಲಿದೆ ‘ಹಮೂನ್’ ಚಂಡಮಾರುತ – ಈ ರಾಜ್ಯಗಳಲ್ಲಿ ಮಳೆಯಾಗುವ ಸಾಧ್ಯತೆ

ನವದೆಹಲಿ: ಬಂಗಾಳಕೊಲ್ಲಿಯಲ್ಲಿ ರೂಪುಗೊಂಡಿರುವ ಚಂಡಮಾರುತ ಹಮೂನ್ ತೀವ್ರ ಸ್ವರೂಪ ಪಡೆದುಕೊಂಡಿದೆ. ಬುಧವಾರ ಬಾಂಗ್ಲಾದೇಶದ ಕರಾವಳಿಯನ್ನು ದಾಟಲಿದೆ. ಇದರ ಪರಿಣಾಮ ದೇಶದ ಹಲವು ರಾಜ್ಯಗಳ ಹವಾಮಾನದಲ್ಲಿ ಬದಲಾವಣೆ ಕಂಡುಬರುವ ಸಾಧ್ಯತೆ ಇದೆ ಎಂದು ಹವಮಾನ ಇಲಾಖೆ ತಿಳಿಸಿದೆ.

ಚಂಡಮಾರುತ ಹಮೂನ್ ಬಾಂಗ್ಲಾದೇಶದ ಕರಾವಳಿಯನ್ನು ದಾಟಲಿದ್ದು, ದೇಶದ ಹಲವು ರಾಜ್ಯಗಳ ಹವಾಮಾನದಲ್ಲಿ ಬದಲಾವಣೆ ಕಂಡುಬರುವ ಸಾಧ್ಯತೆ ಇದೆ. ಬೆಳಗಿನ ಜಾವ ಮತ್ತು ಸಂಜೆಯ ವೇಳೆಗೆ ಚಳಿ ಕಡಿಮೆಯಾಗಿದೆ. ಆದರೆ, ಚಂಡಮಾರುತದ ಬಗ್ಗೆ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಇದಲ್ಲದೇ ಹಮೂನ್ ಚಂಡಮಾರುತದ ಬಗ್ಗೆ ಐಎಂಡಿ ಮೀನುಗಾರರಿಗೆ ಎಚ್ಚರಿಕೆ ನೀಡಿದೆ. ತಮಿಳುನಾಡು ಮತ್ತು ಒಡಿಶಾದ ಮೀನುಗಾರರು ಕಡಲತೀರಗಳಿಗೆ ತೆರಳದಂತೆ ಐಎಂಡಿ ಸೂಚಿಸಿದೆ.

ಇದನ್ನೂ ಓದಿ: ಗಾಜಾ ಪಟ್ಟಿ ಮೇಲೆ ಮತ್ತೆ ದಾಳಿ ನಡೆಸಿದ ಇಸ್ರೇಲ್ – 24 ಗಂಟೆಗಳಲ್ಲಿ 700 ಮಂದಿ ಸಾವು

ಇನ್ನು ಚಂಡಮಾರುತದ ಎಫೆಕ್ಟ್‌ ಹಲವು ರಾಜ್ಯಗಳಿಗೆ ಇರಲಿದೆ. ಹೀಗಾಗಿ ದೇಶದ ಹಲವು ರಾಜ್ಯಗಳಲ್ಲಿ ಮಳೆಯಾಗುವ ಸಾಧ್ಯತೆ ಇದೆ. ಸೈಕ್ಲೋನಿಕ್ ಚಂಡಮಾರುತದ ಪ್ರಭಾವದಿಂದ ತಮಿಳುನಾಡು ಮತ್ತು ಬಂಗಾಳದಲ್ಲಿ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಇದಲ್ಲದೇ ಇಂದು ಒಡಿಶಾ ಮತ್ತು ಕೇರಳದ ಉತ್ತರ ಕರಾವಳಿಯಲ್ಲಿಯೂ ಮಳೆಯಾಗುವ ಸಾಧ್ಯತೆ ಇದೆ ಎಂದು ಐಎಂಡಿ ತಿಳಿಸಿದೆ.

ಇನ್ನು ದೆಹಲಿ-ಎನ್‌ಸಿಆರ್‌ನಲ್ಲಿ ಮುಂದಿನ ಕೆಲವು ದಿನಗಳ ಕಾಲ ಮಂಜು ಕವಿದ ವಾತಾವರಣ ಇರುತ್ತದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಆದರೆ, ದಿನ ಕಳೆದಂತೆ ರಾಷ್ಟ್ರ ರಾಜಧಾನಿಯಲ್ಲಿ ಹವಾಮಾನ ಸ್ಪಷ್ಟವಾಗಿರುತ್ತದೆ. ಮುಂದಿನ ದಿನಗಳಲ್ಲಿ ದೆಹಲಿಯಲ್ಲಿ ಚಳಿಯ ಪ್ರಭಾವ ಹೆಚ್ಚಾಗಬಹುದು ಎಂದು ಹವಾಮಾನ ಇಲಾಖೆ ತಿಳಿಸಿದೆ.

ಉತ್ತರಾಖಂಡದಲ್ಲಿ ಕೇದಾರನಾಥ-ಬದ್ರಿನಾಥ್ ಸೇರಿದಂತೆ ಪರ್ವತ ಪ್ರದೇಶಗಳಲ್ಲಿ ಹಿಮಪಾತವಾಗುತ್ತಿದ್ದು, ಚಳಿ ಹೆಚ್ಚಿದೆ. ಉತ್ತರಾಖಂಡದಲ್ಲಿ ಮುಂದಿನ ಕೆಲವು ದಿನಗಳ ಕಾಲ ಶುಷ್ಕ ವಾತಾವರಣ ಇರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಇದಲ್ಲದೇ ಪಶ್ಚಿಮ ಹಿಮಾಲಯದಲ್ಲಿ ಲಘು ಮಳೆಯಾಗಲಿದೆ ಎಂದು ಐಎಂಡಿ ಮುನ್ಸೂಚನೆ ನೀಡಿದೆ.

ಹವಾಮಾನ ಇಲಾಖೆಯು ಉತ್ತರಪ್ರದೇಶ-ಬಿಹಾರದ ಹವಾಮಾನದ ಬಗ್ಗೆಯೂ ಎಚ್ಚರಿಕೆ ನೀಡಿದೆ. ಮುಂದಿನ ದಿನಗಳಲ್ಲಿ ಉತ್ತರಪ್ರದೇಶದಲ್ಲಿ ಚಳಿಯ ಪ್ರಮಾಣ ಹೆಚ್ಚಾಗಲಿದ್ದು, ಬೆಳಗ್ಗೆ ಮತ್ತು ಸಂಜೆ ವೇಳೆಗೆ ಸೌಮ್ಯ ಚಳಿ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಬಿಹಾರದಲ್ಲೂ ಇದೇ ಪರಿಸ್ಥಿತಿ ಇರಲಿದೆ ಎಂದು ಐಎಂಡಿ ಹೇಳಿದೆ. ಇಲ್ಲಿ ಸಂಜೆ ಮತ್ತು ಬೆಳಗ್ಗೆ ಚಳಿ ಮತ್ತಷ್ಟು ಹೆಚ್ಚಾಗಲಿದೆ.

Shwetha M