ಅಲೆಗಳ ಅಬ್ಬರ.. ಬಿರುಗಾಳಿ ಆರ್ಭಟ – ಸೈಕ್ಲೋನ್ ಎಫೆಕ್ಟ್ ಗೆ ಕರ್ನಾಟಕದ ಕರಾವಳಿ ತತ್ತರ

ಕರ್ನಾಟಕದ ಕರಾವಳಿ ಜಿಲ್ಲೆಗಳಿಗೂ ಬಿಪರ್ ಜಾಯ್ ಚಂಡಮಾರುತದ ಎಫೆಕ್ಟ್ ತಟ್ಟಿದೆ. ಪರಿಣಾಮ ಉಳ್ಳಾಲ, ಸೋಮೇಶ್ವರ, ಉಚ್ಚಿಲ ಪ್ರದೇಶಗಳಲ್ಲಿ ಅರಬ್ಬೀಸಮುದ್ರ ತೀರದಲ್ಲಿ ಸಮುದ್ರದ ಅಲೆಗಳ ಅಬ್ಬರ ಜೋರಾಗಿದೆ. ಚಂಡಮಾರುತದ ಪ್ರಭಾವದಿಂದ ಗಾತ್ರದ ಅಲೆಗಳು ಏಳುತ್ತಿದ್ದು, ಸಮುದ್ರದ ಅಂಚಿನ ಬಂಡೆಕಲ್ಲುಗಳಿಗೆ ವೇಗದಿಂದ ಬಂದು ಅಪ್ಪಳಿಸುತ್ತಿವೆ. ಉಳ್ಳಾಲದ ಕೋಟೆಪುರ, ಕೋಡಿ, ಮೊಗವೀರಪಟ್ಣ, ಹಿಲೆರಿಯಾ ನಗರ, ಸುಭಾಷನಗರ, ಕೈಕೊ, ಸಮ್ಮರ್ ಸ್ಯಾಂಡ್, ಸೋಮೇಶ್ವರ, ಉಚ್ಚಿಲ, ಬಟ್ಟಪಾಡಿ ಸಮುದ್ರ ತೀರದ ನಿವಾಸಿಗಳಿಗೆ ಸ್ಥಳೀಯಾಡಳಿತ ಎಚ್ಚರಿಕೆಯಿಂದ ಇರುವಂತೆ ಸೂಚನೆ ನೀಡಲಾಗಿದೆ. ಮುಂಜಾಗ್ರತಾ ಕ್ರಮವಾಗಿ ಸ್ಥಳೀಯ ಠಾಣಾ ಪೊಲೀಸರು, ಗೃಹರಕ್ಷಕ ಸಿಬ್ಬಂದಿಯನ್ನು ಸ್ಥಳದಲ್ಲಿ ನಿಯೋಜಿಸಲಾಗಿದೆ.
ಇದನ್ನೂ ಓದಿ : 100 ಭೂಕಂಪಗಳಾದ್ರೂ ಈ ಕಟ್ಟಡಕ್ಕೆ ಏನೂ ಆಗಿಲ್ಲ! – ʼಶೇಕ್ ಟೇಬಲ್ʼ ಬಿಲ್ಡಿಂಗ್ ವಿಶೇಷವೇನು?
ಈಗಾಗಲೇ ಬಿಪರ್ಜಾಯ್ ಚಂಡಮಾರುತ (Biparjoy Cyclone) ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಾಕಷ್ಟ್ಟು ಹಾನಿಯನ್ನುಂಟು ಮಾಡಿದೆ. ಜೋರಾಗಿ ಬೀಸುತ್ತಿರುವ ಗಾಳಿಯಿಂದ ಕಡಲ್ಕೊರೆತ (sea erosion) ಹೆಚ್ಚಾಗಿದೆ. ಮತ್ತು ತೀರಪ್ರದೇಶಲ್ಲಿರುವ ಗಿಡಮರಗಳು ಉರುಳಿ ಬೀಳುತ್ತಿವೆ. ಕಡಲ್ಕೊರೆತ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಈಗಾಗಲೇ ಮಂಗಳೂರಿನವರೇ ಆಗಿರುವ ಸ್ಪೀಕರ್ ಯುಟಿ ಖಾದರ್ (Speaker UT Khader) ಮತ್ತು ದಕ್ಷಿಣ ಕನ್ನಡ ಜಿಲ್ಲೆ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ (Dinesh Gundu Rao) ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ತೀರದಲ್ಲಿದ್ದ ಕೆಲ ಮನೆಗಳು ಸಹ ಕಡಲ್ಕೊರೆತದಿಂದಾಗಿ ಕುಸಿದು ಬಿದ್ದಿದ್ದು ಅವುಗಳಲ್ಲಿ ವಾಸವಾಗಿದ್ದ ಜನ ನೆರವಿಗಾಗಿ ಸರ್ಕಾರಕ್ಕೆ ಮೊರೆಯಿಟ್ಟಿದ್ದಾರೆ.
ಮತ್ತೊಂದೆಡೆ ರಾಜ್ಯದಲ್ಲಿ ಭಾರೀ ಮಳೆಯಾಗುವ ನಿರೀಕ್ಷೆ ಇದೆ. ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಹಾಸನ, ಚಿಕ್ಕಮಗಳೂರು, ಶಿವಮೊಗ್ಗ, ಕೊಡಗಿನಲ್ಲಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಹೀಗಾಗಿ ಮೀನುಗಾರರಿಗೆ ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ ನೀಡಲಾಗಿದೆ.