ಕ್ಷಣ ಕ್ಷಣಕ್ಕೂ ಉಗ್ರ ರೂಪ ತಾಳುತ್ತಿರುವ ಬಿಪರ್ ಜಾಯ್ – ಶಾಲಾ-ಕಾಲೇಜು, ಧಾರ್ಮಿಕ ಕೇಂದ್ರಗಳು ಬಂದ್!
ಬಿಪರ್ ಜಾಯ್ ಚಂಡಮಾರುತ ಕ್ಷಣ ಕ್ಷಣಕ್ಕೂ ಉಗ್ರರೂಪ ತಾಳುತ್ತಿದೆ. ಸೈಕ್ಲೋನ್ ಪರಿಣಾಮದಿಂದಾಗಿ ಕೇರಳ, ಗುಜರಾತ್, ಮಹಾರಾಷ್ಟ್ರ ಹಾಗೂ ಕರ್ನಾಟಕದಲ್ಲಿ ಭಾರೀ ಅವಾಂತರ ಸೃಷ್ಟಿಯಾಗಿದೆ. ಗುಜರಾತ್ ರಾಜ್ಯದಲ್ಲಿ ಹವಾಮಾನ ಇಲಾಖೆ ರೆಡ್ ಅಲರ್ಟ್ ಘೋಷಿಸಿದ್ದು, ಶಾಲಾ, ಕಾಲೇಜುಗಳು, ಕಚೇರಿಗಳು, ಧಾರ್ಮಿಕ ಕೇಂದ್ರಗಳನ್ನು ಇಂದು ಮುಚ್ಚಲಾಗಿದೆ.
ಇದನ್ನೂ ಓದಿ: ತೀವ್ರಸ್ವರೂಪ ಪಡೆದ ಬಿಪರ್‌ಜಾಯ್ ಚಂಡಮಾರುತ – ಕರ್ನಾಟಕದ ಕರಾವಳಿ ಭಾಗಗಳಲ್ಲಿ ಹೈ ವೇವ್ ಅಲರ್ಟ್ ಘೋಷಣೆ
ಬಿಪರ್ ಜಾಯ್ ಚಂಡಮಾರುತ ಗುರುವಾರ ಗುಜರಾತ್ ನ ಕಚ್ ಜಿಲ್ಲೆಯ ಜಕ್ಕೂರ್ ಬಂದರಿನಲ್ಲಿ ನೆಲೆಯಾಗಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ಬಂದರಿಗೆ ಚಂಡಮಾರುತ ಅಪ್ಪಳಿಸುವ ಮೊದಲು ಸೌರಾಷ್ಟ್ರ ಮತ್ತು ಕಚ್ ಮತ್ತು ನೆರೆಯ ಪಾಕಿಸ್ತಾನ ದೇಶದ ತೀರಭಾಗಗಳನ್ನು ಮಾಂಡ್ವಿ ಮತ್ತು ಕರಾಚಿ ಮಧ್ಯೆ ದಾಟಿ ಬರಲಿದೆ ಎಂದು ಕೂಡ ಹೇಳಿದೆ. ಈ ಹಿನ್ನೆಲೆ ಗುಜರಾತ್ ನಲ್ಲಿ ಇಂದು ರೆಡ್ ಅಲರ್ಟ್ ಘೋಷಿಸಲಾಗಿದ್ದು ಭದ್ರತೆ ಮತ್ತು ಆಪತ್ಕಾಲಕ್ಕೆ ಸಹಾಯಕ್ಕೆ ಎನ್ ಡಿಆರ್ ಎಫ್ ಮತ್ತು ಎಸ್ ಡಿಆರ್ ಎಫ್ ಗಳನ್ನು ನಿಯೋಜಿಸಲಾಗಿದೆ.
ಚಂಡಮಾರುತ ತೀವ್ರ ಸ್ವರೂಪ ತಾಳುತ್ತಿರುವುದರಿಂದ ಗುಜರಾತ್ ನ ದ್ವಾರಕಾ ಜಿಲ್ಲೆಯಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ. ಈ ಹಿನ್ನೆಲೆ ಮುಂಜಾಗೃತ ಕ್ರಮವಾಗಿ ಸೆಕ್ಷನ್ 144 ಜಾರಿ ಮಾಡಲಾಗಿದೆ. ಅಲ್ಲದೇ ಶಾಲಾ-ಕಾಲೇಜುಗಳು, ಕಚೇರಿಗಳು, ಧಾರ್ಮಿಕ ಕೇಂದ್ರಗಳನ್ನು ಗುರುವಾರ ಬಂದ್ ಮಾಡಲಾಗಿದೆ. ತೀರದ ಭಾಗಗಳಲ್ಲಿ ತೀವ್ರ ಎಚ್ಚರಿಕೆ ಘೋಷಿಸಲಾಗಿದೆ.
ಗುರುವಾರ ನಸುಕಿನ ಜಾವ ಚಂಡಮಾರುತ ತೀವ್ರಗೊಳ್ಳುತ್ತಿದ್ದಂತೆಯೇ ಉಬ್ಬರವಿಳಿತದ ಅಲೆಗಳು ಗುಜರಾತ್‌ಗೆ ಅಪ್ಪಳಿಸಿವೆ. ಇನ್ನು ಚಂಡಮಾರುತದ ತೀವ್ರತೆಯ ಬಗ್ಗೆ ಹಾಗೂ ಪರಿಸ್ಥಿತಿಯ ಬಗ್ಗೆ ಅಮಿತ್ ಶಾ, ಮನ್ಸುಖ್ ಮಾಂಡವಿಯಾ, ರಾಜನಾಥ್ ಸಿಂಗ್ ಸೇರಿದಂತೆ ಹಲವಾರು ಕೇಂದ್ರ ಸಚಿವರು ಅವಲೋಕನ ಮಾಡುತ್ತಿದ್ದಾರೆ. IMD ಪ್ರಕಾರ ಅತ್ಯಂತ ತೀವ್ರ ಚಂಡಮಾರುತ ಇಂದು ಸಂಜೆಯ ವೇಳೆಗೆ ಸೌರಾಷ್ಟ್ರ ಮತ್ತು ಕಚ್ ಮತ್ತು ಪಕ್ಕದ ಪಾಕಿಸ್ತಾನದ ಕರಾವಳಿ ಮಧ್ಯೆ ಹಾಗೂ ಮಾಂಡ್ವಿ ಮತ್ತು ಕರಾಚಿಯ ಜಖೌ ಬಂದರಿನ ಬಳಿ ದಾಟಲಿದೆ ಎಂದು ಮುನ್ಸೂಚನೆ ನೀಡಿದೆ.