‘ನನ್ನ ಬಿಜೆಪಿಯಿಂದ ಹೊರ ಕಳಿಸಿದ್ದಕ್ಕೆ ಜನ ಕ್ಷೇತ್ರದಿಂದ್ಲೇ ಹೊರ ಕಳಿಸಿದ್ದಾರೆ – ಸಿ.ಟಿ ರವಿ ವಿರುದ್ಧ ಎಂ.ಪಿ ಕುಮಾರಸ್ವಾಮಿ ವ್ಯಂಗ್ಯ!

‘ನನ್ನ ಬಿಜೆಪಿಯಿಂದ ಹೊರ ಕಳಿಸಿದ್ದಕ್ಕೆ ಜನ ಕ್ಷೇತ್ರದಿಂದ್ಲೇ ಹೊರ ಕಳಿಸಿದ್ದಾರೆ – ಸಿ.ಟಿ ರವಿ ವಿರುದ್ಧ ಎಂ.ಪಿ ಕುಮಾರಸ್ವಾಮಿ ವ್ಯಂಗ್ಯ!

ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಮೋಘ ಗೆಲುವು ಸಾಧಿಸಿದ್ದು ಸಿಎಂ ಆಯ್ಕೆ ಕಸರತ್ತು ಜೋರಾಗಿ ನಡೆಯುತ್ತಿದೆ. ಆದರೆ ಆಡಳಿತ ಪಕ್ಷದಲ್ಲಿದ್ದ ಬಿಜೆಪಿ ಹೀನಾಯ ಸೋಲು ಅನುಭವಿಸಿದ್ದು 66 ಕ್ಷೇತ್ರಗಳಿಗೆ ತೃಪ್ತಿ ಪಡಬೇಕಾಗಿದೆ. ಘಟಾನುಘಟಿ ನಾಯಕರೇ ಈ ಬಾರಿ ಸೋತು ಸುಣ್ಣವಾಗಿರೋದು ಅಚ್ಚರಿಗೆ ಕಾರಣವಾಗಿದೆ. ಹಲವು ಜಿಲ್ಲೆಗಳಲ್ಲಿ ಒಂದು ಕ್ಷೇತ್ರದಲ್ಲೂ ‘ಕಮಲ’ ಅರಳಲು ಬಿಡದ ಕಾಂಗ್ರೆಸ್ ಕಲಿಗಳ ರಣೋತ್ಸಾಹ ದುಪ್ಪಟ್ಟಾಗಿದೆ. ಅದರಲ್ಲೂ ಕಾಫಿನಾಡು ಚಿಕ್ಕಮಗಳೂರಿನಲ್ಲಿ ಐದಕ್ಕೆ ಐದು ಕ್ಷೇತ್ರದಲ್ಲೂ ಕೈ ಪಡೆ ಭರ್ಜರಿ ಗೆಲುವು ಸಾಧಿಸಿದ್ದು ಬಿಜೆಪಿಯನ್ನ ಕ್ಲೀನ್ ಸ್ವೀಪ್ ಮಾಡಿದೆ.

ಇದನ್ನೂ ಓದಿ : ಡಿಕೆಶಿ ಹುಟ್ಟುಹಬ್ಬಕ್ಕೆ ಪುತ್ರಿ ಐಶ್ವರ್ಯಾರಿಂದ ಸ್ಪೆಷಲ್ ಗಿಫ್ಟ್ – ಅಭಿಮಾನಿಗಳಿಂದ ಕೇಕ್ ಕತ್ತರಿಸಿ ಸಂಭ್ರಮ!

ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಚಿಕ್ಕಮಗಳೂರು ಕ್ಷೇತ್ರದಲ್ಲಿ ತಮ್ಮ ಆಪ್ತ ತಮ್ಮಯ್ಯ ವಿರುದ್ಧ ಸೋಲು ಅನುಭವಿಸಿದ್ದಾರೆ. ಸಿ.ಟಿ ರವಿ ಸೋಲಿನ ಬಗ್ಗೆ ಮೂಡಿಗೆರೆ ಕ್ಷೇತ್ರದ ಮಾಜಿ ಶಾಸಕ ಎಂ.ಪಿ ಕುಮಾರಸ್ವಾಮಿ ವ್ಯಂಗ್ಯವಾಡಿದ್ದಾರೆ. ಮೂಡಿಗೆರೆ ಕ್ಷೇತ್ರದಲ್ಲಿ ಬಿಜೆಪಿಗೆ ಜೀವ ತುಂಬಿದ್ದೇ ನಾನು. ಸಿಟಿ ರವಿ ನನ್ನನ್ನು ಬಿಜೆಪಿಯಿಂದ ಹೊರ ಕಳಿಸಿದರು. ಆದರೆ, ಸಿಟಿ ರವಿಯನ್ನು ಕ್ಷೇತ್ರದಿಂದಲೇ ಜನ ಹೊರಕಳಿಸಿದ್ದಾರೆ ಎಂದು ಮಾಜಿ ಶಾಸಕ ಎಂಪಿ ಕುಮಾರಸ್ವಾಮಿ ಹೇಳಿದ್ದಾರೆ. ಮೂಡಿಗೆರೆಯಲ್ಲಿ ಮಾತನಾಡಿದ ಎಂಪಿಕೆ, ಚಿಕ್ಕಮಗಳೂರು ಇನ್ಮುಂದೆ ವೀರಶೈವ ಲಿಂಗಾಯತರ ಕ್ಷೇತ್ರ. ಸಿಟಿ ರವಿ ದತ್ತಮಾಲೆ, ಅಹಿತಕರ ಘಟನೆ ಮುಂದಿಟ್ಟು ಪ್ರಚಾರ ನಡೆಸಿದರು. ಇನ್ಮುಂದೆ ಸಿಟಿ ರವಿಯ ಈ ವಿಚಾರಗಳು ಕೆಲಸ ಮಾಡುವುದಿಲ್ಲ. ಮಾಜಿ ಸಿಎಂ ಬಿಎಸ್‌ ಯಡಿಯೂರಪ್ಪ ಮೊಬೈಲ್ ಸ್ವಿಚ್ ಆಫ್ ಮಾಡಲಿಲ್ಲ. ಫೋನ್ ಸ್ವಿಚ್ ಆಫ್ ಮಾಡಿದ್ದಿದ್ದರೆ ಬಿಜೆಪಿಗೆ 50 ಸೀಟ್ ಅಷ್ಟೇ ಬರುತ್ತಿತ್ತು ಎಂದು ಕಿಡಿಕಾರಿದ್ದಾರೆ.

ನನ್ನನ್ನು ಬಿಟ್ಟಿದ್ದಕ್ಕೆ ಚಿಕ್ಕಮಗಳೂರು ಜಿಲ್ಲೆಯ 5 ಕ್ಷೇತ್ರ ಹೋಗುತ್ತೆ ಎಂದು ಜನರೇ ಹೇಳಿದ್ದರು. ಜೆಡಿಎಸ್ ನಲ್ಲಿ ಬೂತ್ ಕಮಿಟಿ, ಪಕ್ಷ ಸಂಘಟನೆ ಇರಲಿಲ್ಲ. ಹಾಗಾಗಿ ನನಗೆ ಸೋಲುಂಟಾಗಿದೆ. ಈಗ ಎಲ್ಲವನ್ನು ಸರಿಮಾಡಿಕೊಂಡು ಜೆಡಿಎಸ್ ಪಕ್ಷವನ್ನು ಚಿಕ್ಕಮಗಳೂರು ಜಿಲ್ಲೆಯಲ್ಲಿ ಸಂಘಟಿಸುವೆ. ಮುಂಬರುವ ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ ಚುನಾವಣೆಯಲ್ಲಿ ಪಕ್ಷ ಗೆಲ್ಲಿಸಲು ಶ್ರಮ ವಹಿಸುವೆ ಎಂದು ಎಂಪಿ ಕುಮಾರಸ್ವಾಮಿ ಹೇಳಿದ್ದಾರೆ.

ಬಿಜೆಪಿ ಶಾಸಕರಾಗಿದ್ದ ಎಂಪಿ ಕುಮಾರಸ್ವಾಮಿ ಅವರು ಕೊನೇ ಕ್ಷಣದಲ್ಲಿ ಟಿಕೆಟ್‌ ಸಿಗದ ಕಾರಣ ಜೆಡಿಎಸ್‌ ಸೇರಿ ದಳದಿಂದ ಕಣಕ್ಕಿಳಿದಿದ್ದರು. ಎಂಪಿ ಕುಮಾರಸ್ವಾಮಿಗೆ ಟಿಕೆಟ್‌ ನೀಡಬೇಡಿ ಎಂದು ಬಿಜೆಪಿ ಕಾರ್ಯಕರ್ತರೇ ದೊಡ್ಡ ಮಟ್ಟದಲ್ಲಿ ಪ್ರತಿಭಟನೆ ನಡೆಸಿದ್ದರು. ಈ ಕಾರಣ ಮೂಡಿಗೆರೆ ವಿಧಾನಸಭಾ ಕ್ಷೇತ್ರದಲ್ಲಿ ಹೊಸ ಮುಖ ದೀಪಕ್‌ ದೊಡ್ಡಯ್ಯ ಅವರಿಗೆ ಬಿಜೆಪಿ ಟಿಕೆಟ್‌ ನೀಡಲಾಗಿತ್ತು. ಕಾಂಗ್ರೆಸ್‌ನಿಂದ ಮೋಟಮ್ಮ ಅವರ ಪುತ್ರಿ ನಯನಾ ಮೋಟಮ್ಮ ಅವರು ಕಣಕ್ಕಿಳಿದಿದ್ದರು. ಕೊನೆಗೆ ಇಬ್ಬರ ಜಗಳದಲ್ಲಿ ಮೂರನೇಯವರಿಗೆ ಲಾಭ ಎಂಬಂತೆ ಎಂಪಿ ಕುಮಾರಸ್ವಾಮಿ, ದೀಪಕ್‌ ದೊಡ್ಡಯ್ಯ ಅವರ ನಡುವಿನ ಪೈಪೋಟಿಯಿಂದ ನಯನಾ ಮೋಟಮ್ಮ ಅವರು ನೂತನ ಶಾಸಕಿಯಾಗಿ ಆಯ್ಕೆಯಾಗಿದ್ದಾರೆ. ಇನ್ನು, ಚಿಕ್ಕಮಗಳೂರಿನಲ್ಲಿ ಸಿಟಿ ರವಿ ಅವರನ್ನು ಟಾರ್ಗೆಟ್‌ ಮಾಡಿದ್ದ ಕಾಂಗ್ರೆಸ್‌, ಸಿಟಿ ರವಿ ಆಪ್ತ ಹೆಚ್‌ಡಿ ತಮ್ಮಯ್ಯ ಅವರನ್ನೇ ಕಣಕ್ಕಿಳಿಸಿತ್ತು. ಲಿಂಗಾಯತ ಸಮುದಾಯಕ್ಕೆ ಸೇರಿದ ಹೆಚ್‌ಡಿ ತಮ್ಮಯ್ಯ ಅವರು ಈ ಬಾರಿ ಚಿಕ್ಕಮಗಳೂರಲ್ಲಿ ಗೆಲುವು ಸಾಧಿಸಿದ್ದಾರೆ.

ಅದಲ್ಲದೇ ಚಿಕ್ಕಮಗಳೂರು ಜಿಲ್ಲೆಯ ಐದಕ್ಕೆ ಐದು ಕ್ಷೇತ್ರಗಳನ್ನು ಕಾಂಗ್ರೆಸ್ ವಶಪಡಿಸಿಕೊಂಡಿದೆ. ತರೀಕೆರೆಯಲ್ಲಿ ಸುರೇಶ್‌ ಎದುರು ಜಿ.ಹೆಚ್‌ ಶ್ರೀನಿವಾಸ್‌, ಕಡೂರಲ್ಲಿ ಬೆಳ್ಳಿ ಪ್ರಕಾಶ್‌ ಎದುರು ಕೆ.ಎಸ್‌ ಆನಂದ್‌ ಗೆದ್ದರೆ, ಶೃಂಗೇರಿಯಲ್ಲಿ ಜೀವರಾಜ್‌ ಎದುರು ಟಿ.ಡಿ ರಾಜೇಗೌಡ ಜಯ ಸಾಧಿಸಿದ್ದಾರೆ. ಚಿಕ್ಕಮಗಳೂರಲ್ಲಿ ಹೆಚ್‌.ಡಿ ತಮ್ಮಯ್ಯ, ಮೂಡಿಗೆರೆಯಲ್ಲಿ ನಯನಾ ಮೋಟಮ್ಮ ಗೆಲುವು ಸಾಧಿಸಿದ್ದಾರೆ.

suddiyaana