ಬಿಜೆಪಿ ಪ್ರಧಾನ ಕಾರ್ಯದರ್ಶಿ ಸ್ಥಾನದಿಂದ ಸಿ.ಟಿ ರವಿಗೆ ಕೊಕ್ – ಒಲಿಯುತ್ತಾ ರಾಜ್ಯಾಧ್ಯಕ್ಷ ಪಟ್ಟ?
ನವದೆಹಲಿ: ಕರ್ನಾಟಕ ವಿಧಾನಸಭೆ ಚುನಾವಣೆ ಮುಗಿದಿದ್ದು, ಇದೀಗ ಲೋಕಸಭೆ ಚುನಾವಣೆಗೆ ರಾಜಕೀಯ ಪಕ್ಷಗಳು ಸಜ್ಜಾಗುತ್ತಿವೆ. ಈ ಮಧ್ಯೆಯೇ ಭಾರತೀಯ ಜನತಾ ಪಕ್ಷ ತನ್ನ ರಾಷ್ಟ್ರೀಯ ಮಂಡಳಿಯನ್ನು ಪುನರ್ ರಚಿಸಿ ಹೊಸ ಪಟ್ಟಿ ಬಿಡುಗಡೆ ಮಾಡಿದ್ದು, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹುದ್ದೆಯಿಂದ ಸಿ.ಟಿ ರವಿಗೆ ಅವರಿಗೆ ಕೊಕ್ ನೀಡಲಾಗಿದೆ.
ಇದನ್ನೂ ಓದಿ: ಬಿಜೆಪಿ ತೀರ್ಥಹಳ್ಳಿಯ ಹಿಂದೂ ಹೆಣ್ಣುಮಕ್ಕಳ ಬಗ್ಗೆ ಕಾಳಜಿ ತೋರಿಸುತ್ತಿಲ್ಲ ಏಕೆ? – ಕಾಂಗ್ರೆಸ್ ಪ್ರಶ್ನೆ
ಬಿಜೆಪಿ ಬಿಡುಗಡೆ ಮಾಡಿರುವ ಕೇಂದ್ರ ಪದಾಧಿಕಾರಿಗಳ ಹೊಸ ಪಟ್ಟಿಯಲ್ಲಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿದ್ದ ಕರ್ನಾಟಕದ ಸಿ.ಟಿ ರವಿ ಅವರ ಹೆಸರನ್ನು ಕೈ ಬಿಟ್ಟಿದೆ. 13 ನಾಯಕರನ್ನು ರಾಷ್ಟ್ರೀಯ ಉಪಾಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ. ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿಯನ್ನಾಗಿ ಬಿ.ಎಲ್. ಸಂತೋಷ್ ಅವರನ್ನು ಮುಂದುವರೆಸಲಾಗಿದೆ. ತೆಲಂಗಾಣದ ಬಿಜೆಪಿ ಮಾಜಿ ರಾಜ್ಯಾಧ್ಯಕ್ಷ ಬಂಡಿ ಸಂಜಯ್ ಕುಮಾರ್ ಅವರನ್ನು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ ನೇಮಿಸಲಾಗಿದೆ. ಬಂಡಿ ಸಂಜಯ್ ಅವರನ್ನು ಇತ್ತೀಚೆಗೆ ರಾಜ್ಯಾಧ್ಯಕ್ಷ ಸ್ಥಾನದಿಂದ ಕೆಳಕ್ಕಿಳಿಸಲಾಗಿತ್ತು.
ಇತರ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳೆಂದರೆ ಅರುಣ್ ಸಿಂಗ್, ಕೈಲಾಶ್ ವಿಜಯ್ ವರ್ಗೀಯ, ದುಷ್ಯಂತ ಕುಮಾರ್ ಗೌತಮ್, ತರುಣ್ ಚುಗ್, ವಿನೋದ್ ತಾವ್ಡೆ, ಸುನಿಲ್ ಬನ್ಸಲ್, ರಾಧಾಮೋಹನ್ ಅಗರ್ವಾಲ್. ರಾಷ್ಟ್ರೀಯ ಸಹ ಸಂಘಟನಾ ಕಾರ್ಯದರ್ಶಿ ಹುದ್ದೆಯಲ್ಲಿ ಶಿವ ಪ್ರಕಾಶ್ ಅವರನ್ನು ಮುಂದುವರಿಸಲಾಗಿದೆ. ಸಂಘಟನಾ ಕಾರ್ಯದರ್ಶಿಗಳು, ಸಹ ಸಂಘಟನಾ ಕಾರ್ಯದರ್ಶಿಗಳು ಕೊಶಾಧ್ಯಕ್ಷರನ್ನು ನೇಮಕ ಮಾಡಲಾಗಿದೆ.
ಇನ್ನು ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದ ರೇಸ್‍ನಲ್ಲಿ ಸಿ.ಟಿ. ರವಿ ಇದ್ದಾರೆ. ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹುದ್ದೆಯಿಂದ ಕೈ ಬಿಟ್ಟ ಹಿನ್ನೆಲೆ ಸಿಟಿ ರವಿ ಅವರಿಗೆ ಕರ್ನಾಟಕ ರಾಜ್ಯಾಧ್ಯಕ್ಷ ಸ್ಥಾನ ಒಲಿಯುವ ಸಾಧ್ಯತೆ ಇದೆ ಎಂಬ ಮಾತುಗಳು ಕೇಳಿಬಂದಿವೆ. ಕಳೆದ ವಾರವಷ್ಟೆ ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ಅವರನ್ನು ಸಿ.ಟಿ. ರವಿ ಭೇಟಿಯಾಗಿದ್ದರು. ಬಿಎಸ್‍ವೈ ಆಶೀರ್ವಾದ ಪಡೆದು, ರಾಜಕೀಯ ಬೆಳವಣಿಗೆ ಬಗ್ಗೆ ಚರ್ಚೆ ನಡೆಸಿದ್ದರು. ಆದರೆ ಇದು ಸೌಹಾರ್ದಯುತ ಭೇಟಿಯಷ್ಟೆ ಎಂದಿದ್ದರು.