2008ರ ಬಳಿಕ ಚೆಪಾಕ್ ನಲ್ಲಿ ಗೆದ್ದೇ ಇಲ್ಲ ಆರ್ ಸಿಬಿ – 2025ರಲ್ಲಿ ಇತಿಹಾಸ ನಿರ್ಮಿಸ್ತಾರಾ?

ಬೆಂಗಳೂರು ವರ್ಸಸ್ ಚೆನ್ನೈ ನಡುವಿನ ಮೆಗಾ ಬ್ಯಾಟಲ್ಗೆ ಕೌಂಟ್ಡೌನ್ ಶುರುವಾಗಿದೆ. ಚೆಪಾಕ್ ಮೈದಾನದಲ್ಲಿ ನಡೆಯಲಿರುವ ಈ ಫೈಟ್ ಎರಡೂ ತಂಡಗಳಿಗೂ ಪ್ರತಿಷ್ಠೆಯಾಗಿದೆ. ಅದ್ರಲ್ಲೂ ಮ್ಯಾಚ್ ನಡೆಯುವಂತಹ ಚೆಪಾಕ್ ಮೈದಾನ ಅಂದ್ರೆ ಸಿಎಸ್ಕೆಗೆ ಅದು ಹೋಂ ಗ್ರೌಂಡ್. ಇಲ್ಲೇನಿದ್ರೂ ಸಿಎಸ್‌ಕೆ ಆಟಗಾರರದ್ದೇ ಪಾರುಪತ್ಯ. 2009ರಿಂದಲೂ ಬೆಂಗಳೂರು ವಿರುದ್ಧ ಈ ಮೈದಾನದಲ್ಲಿ ಡಾಮಿನೇಟ್ ಮಾಡ್ತಾನೇ ಬಂದಿದ್ದಾರೆ.
ಇದನ್ನೂ ಓದಿ : RCB ಸ್ಪಿನ್ ಅಸ್ತ್ರ ಕೃನಾಲ್ ಪಾಂಡ್ಯ – ಚೆನ್ನೈ ಪಡೆಗೆ ಪಾಂಡ್ಯ ಸವಾಲ್
ಚೆಪಾಕ್‌ನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ನಡೆಯಲಿರುವ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ತಂಡವು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಮುಖಾಮುಖಿಯಾಗಲಿವೆ. ವಿಷ್ಯ ಏನಪ್ಪ ಅಂದ್ರೆ 2008 ರ ಐಪಿಎಲ್ ಉದ್ಘಾಟನಾ ಸೀಸನ್ ನಂತರ ಆರ್‌ಸಿಬಿ ಚೆಪಾಕ್ ಮೈದಾನದಲ್ಲಿ ಸಿಎಸ್‌ಕೆ ವಿರುದ್ಧ ಗೆಲ್ಲೋಕೆ ಸಾಧ್ಯವೇ ಆಗಿಲ್ಲ. ಬಟ್ ಈ ವರ್ಷ ಚೆಪಾಕ್ ಮೈದಾನದಲ್ಲಿ ಸಿಎಸ್‌ಕೆ ತಂಡವನ್ನು ಮಣಿಸಿ ಆರ್‍ಸಿಬಿ ಇತಿಹಾಸ ನಿರ್ಮಿಸಲು ರೆಡಿಯಾಗಿದೆ. ಚೆಪಾಕ್ ಮೈದಾನ ಸಿಎಸ್‌ಕೆ ತಂಡದ ಪಾಲಿಗೆ ಭದ್ರಕೋಟೆಯಾಗಿದೆ. ಇದರ ಸ್ಪಿನ್ ಸ್ನೇಹಿ ಪಿಚ್ ಸಿಎಸ್‌ಕೆ ತಂಡದ ಕೈಯಲ್ಲಿದೆ. ರವಿಚಂದ್ರನ್ ಅಶ್ವಿನ್ ಚೆನ್ನೈ ಟೀಮ್ಗೆ ಮರಳಿರೋದು ಸಿಎಸ್‌ಕೆ ತಂಡದ ಬಲ ಹೆಚ್ಚಿಸಿದೆ. ರವೀಂದ್ರ ಜಡೇಜಾ, ಆರ್. ಅಶ್ವಿನ್ ಜೊತೆಗೆ ನೂರ್ ಅಹ್ಮದ್ ಅವರಂತಹ ಸ್ಟಾರ್ ಸ್ಪಿನ್ನರ್ಸ್ ಸಿಎಸ್‌ಕೆ ತಂಡಕ್ಕೆ ಆಧಾರಸ್ತಂಭವಾಗಿದ್ದಾರೆ. ಈ ಮೂವರು ಮುಂಬೈ ಇಂಡಿಯನ್ಸ್ ವಿರುದ್ಧದ ಆರಂಭಿಕ ಪಂದ್ಯದಲ್ಲೂ ಅದ್ಭುತ ಪ್ರದರ್ಶನ ನೀಡಿದ್ದರು. 11 ಓವರ್‌ಗಳಲ್ಲಿ ಕೇವಲ 70 ರನ್‌ಗಳಿಗೆ ಐದು ವಿಕೆಟ್‌ಗಳನ್ನು ಪಡೆಯುವ ಮೂಲಕ ಮುಂಬೈ ತಂಡವನ್ನು ಕಟ್ಟಿ ಹಾಕಿದ್ರು.
ಐಪಿಎಲ್ 2008ರ ಸೀಸನ್‌ನಲ್ಲಿ ಆರ್‍ಸಿಬಿ ಮತ್ತು ಸಿಎಸ್‌ಕೆ ತಂಡಗಳು ಮೊದಲ ಬಾರಿಗೆ ಚೆಪಾಕ್ ಮೈದಾನದಲ್ಲಿ ಮುಖಾಮುಖಿಯಾಗಿದ್ದವು. ಈ ಮ್ಯಾಚಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಅಂದಿನ ಆರ್‍ಸಿಬಿ ನಾಯಕ ರಾಹುಲ್ ದ್ರಾವಿಡ್ 47 ರನ್ ಬಾರಿಸೋ ಮೂಲಕ ಜವಾಬ್ದಾರಿಯುತ ಆಟವಾಡಿದ್ರು. ಈ ಮೂಲಕ ನಿಗದಿತ 20 ಓವರ್‍ಗಳಲ್ಲಿ 8 ವಿಕೆಟ್ ನಷ್ಟಕ್ಕೆ 126 ರನ್ ಕಲೆ ಹಾಕಿದ್ರು. ಈ ಪಂದ್ಯದಲ್ಲಿ ಸಿಎಸ್‌ಕೆ ಪರ ಆಲ್ಬೀ ಮಾರ್ಕೆಲ್ 4 ವಿಕೆಟ್ ಕಬಳಿಸಿ ಮಿಂಚಿದ್ದರು. ಆರ್‍ಸಿಬಿ ನೀಡಿದ 127 ರನ್‌ಗಳ ಗೆಲುವಿನ ಗುರಿ ಬೆನ್ನಟ್ಟಿದ ಸಿಎಸ್‌ಕೆ ಉತ್ತಮ ಆರಂಭ ಪಡೆಯಿತು. ಆದರೆ ಮಿಡಲ್ ಆರ್ಡರ್ ನಲ್ಲಿ ಆರ್‍ಸಿಬಿ ಬೌಲಿಂಗ್ ನಲ್ಲಿ ಕಂಪ್ಲೀಟ್ ಕಂಟ್ರೋಲ್ ಮಾಡಿತ್ತು. ಸಿಎಸ್‌ಕೆ ತಂಡಕ್ಕೆ ಅನಿಲ್ ಕುಂಬ್ಳೆ ತಮ್ಮ ಸ್ಪಿನ್ ಬೌಲಿಂಗ್ ಮೂಲಕ ಕಡಿವಾಣ ಹಾಕಿದ್ದರು. ಸ್ಟೀಫನ್ ಫ್ಲೆಮಿಂಗ್ 45 ರನ್ ಗಳಿಸಿದ್ದು ಬಿಟ್ಟರೆ, ಬೇರೆ ಯಾವುದೇ ಬ್ಯಾಟರ್ ರನ್ ಗಳಿಸಲಿಲ್ಲ. ಅಂತಿಮವಾಗಿ ಆರ್‍ಸಿಬಿ ಬೌಲರ್‍ಗಳು ಸಿಎಸ್‌ಕೆ ತಂಡವನ್ನು 112 ರನ್‌ಗಳಿಗೆ ಕಟ್ಟಿ ಹಾಕಿದ್ದರು. ಈ ಮೂಲಕ ಮೊದಲ ಬಾರಿಗೆ ಚೆಪಾಕ್ ಮೈದಾನದಲ್ಲಿ ಸಿಎಸ್‌ಕೆ ಎದುರು ಆರ್‍ಸಿಬಿ 14 ರನ್‌ಗಳ ಭರ್ಜರಿ ಗೆಲುವು ಸಾಧಿಸಿತ್ತು. 2008 ರಿಂದ 2024ರವರೆಗೆ ಚೆನ್ನೈನ ಚೆಪಾಕ್ ಮೈದಾನದಲ್ಲಿ ಆರ್ಸಿಬಿ ವರ್ಸಸ್ ಸಿಎಸ್‌ಕೆ ನಡುವೆ ಒಟ್ಟು 9 ಪಂದ್ಯಗಳು ನಡೆದಿವೆ. ಈ ಪೈಕಿ ಆರ್ ಸಿಬಿ ಮೊದಲ ಮ್ಯಾಚ್ ಬಿಟ್ರೆ ಆ ನಂತ್ರ ಗೆದ್ದೇ ಇಲ್ಲ.
ಚೆಪಾಕ್ ಮೈದಾನದ ಹಿಸ್ಟರಿ ಕೆದಕಿದಾಗ ಚೆನ್ನೈ ಟೀಂ ಕಂಪ್ಲೀಟ್ ಡಾಮಿನೇಟ್ ಮಾಡಿರೋದು ಗೊತ್ತಾಗುತ್ತೆ. ಬಟ್ ಈ ವರ್ಷ ಬೆಂಗಳೂರು ಟೀಂ ಕೂಡ ತುಂಬಾ ಸ್ಟ್ರಾಂಗ್ ಆಗಿದೆ. ಹೀಗಾಗಿ ದಶಕದ ಬಳಿಕ ಚೆಪಾಕ್ ಮೈದಾನದಲ್ಲಿ ಇತಿಹಾಸ ಸೃಷ್ಟಿಸಲು ರಜತ್ ಪಾಟಿದಾರ್ ನೇತೃತ್ವದಲ್ಲಿ ಆರ್‍ಸಿಬಿ ತಂತ್ರ ರೂಪಿಸಿದೆ. ಸಿಎಸ್‌ಕೆ ಸ್ಪಿನ್ನರ್ಸ್ ವಿರುದ್ಧ ರಜತ್ ಪಾಟಿದಾರ್ ಮತ್ತು ವಿರಾಟ್ ಕೊಹ್ಲಿ ನೇತೃತ್ವದ ಆರ್‌ಸಿಬಿ ಬ್ಯಾಟಿಂಗ್ ಲೈನ್ ಆಫ್ ಎಚ್ಚರಿಕೆಯಿಂದ ಆಡಿದ್ರೆ ಗೆಲುವು ಬೆಂಗಳೂರು ಪಾಲಾಗಲಿದೆ.