ರುತುರಾಜ್ ಗಾಯಕ್ವಾಡ್ CSK ಕ್ಯಾಪ್ಟನ್ – ರಾಜಸ್ಥಾನ್‌ ರಾಯಲ್ಸ್‌ಗೆ ಕುಮಾರ ಸಂಗಕ್ಕಾರ  ಹೆಡ್ ಕೋಚ್

ರುತುರಾಜ್ ಗಾಯಕ್ವಾಡ್ CSK  ಕ್ಯಾಪ್ಟನ್ – ರಾಜಸ್ಥಾನ್‌ ರಾಯಲ್ಸ್‌ಗೆ  ಕುಮಾರ ಸಂಗಕ್ಕಾರ  ಹೆಡ್ ಕೋಚ್

ಸಿಎಸ್‌ಕೆ ತಂಡದ ನಾಯಕ ಯಾರು ಅನ್ನೋ ಪ್ರಶ್ನೆಗೆ ಬ್ರೇಕ್ ಬಿದ್ದಿದೆ.  ರುತುರಾಜ್ ಗಾಯಕ್ವಾಡ್ ಅವರನ್ನೇ ನಾಯಕನನ್ನಾಗಿ ಮುಂದುವರೆಸುವುದಾಗಿ ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿ ತಿಳಿಸಿದೆ. ರಾಜಸ್ಥಾನ್ ರಾಯಲ್ಸ್ ತಂಡದ ನಾಯಕರಾಗಿ ಕಾಣಿಸಿಕೊಂಡಿದ್ದ ಕಾರಣ ಸಂಜು ಸ್ಯಾಮ್ಸನ್ ಅವರಿಗೆ CSK ನಾಯಕತ್ವ ನೀಡಲಿದೆಯಾ ಎಂಬ ಕುತೂಹಲ ಅಭಿಮಾನಿಗಳಲ್ಲಿತ್ತು. ಇದರೊಂದಿಗೆ ಮಹೇಂದ್ರ ಸಿಂಗ್ ಧೋನಿ ಕೊನೆಯ ಬಾರಿ ಸಿಎಸ್​ಕೆ ತಂಡವನ್ನು ಮುನ್ನಡೆಸಲಿದ್ದಾರೆ ಎಂಬ ಮಾತುಗಳು ಕೂಡ ಕೇಳಿ ಬಂದಿದ್ದವು. ಆದರೀಗ ರುತುರಾಜ್ ಗಾಯಕ್ವಾಡ್ ಅವರನ್ನೇ ನಾಯಕನನ್ನಾಗಿ ಮುಂದುವರೆಸುವುದಾಗಿ ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿ ತಿಳಿಸಿದೆ.

ಇದನ್ನೂ ಓದಿ: ಬೆಂಗಳೂರಲ್ಲಿ ಎಲ್ಲೆಂದರಲ್ಲಿ ಕಸ ಸುಟ್ಟರೆ ಒಂದು ಲಕ್ಷ ಫೈನ್.. 5 ವರ್ಷ ಜೈಲು!

2024 ರಲ್ಲಿ ಸಿಎಸ್​ಕೆ ತಂಡದ ನಾಯಕನಾಗಿ ಆಯ್ಕೆಯಾಗಿದ್ದ ರುತುರಾಜ್ ಕಳೆದ ಸೀಸನ್​ನಲ್ಲಿ ಗಾಯದ ಕಾರಣ ಕಣಕ್ಕಿಳಿದಿರಲಿಲ್ಲ. ಹೀಗಾಗಿ ಧೋನಿ ತಂಡವನ್ನು ಮುನ್ನಡೆಸಿದ್ದರು.ಆದರೆ ಐಪಿಎಲ್ 2026 ರಲ್ಲಿ ಧೋನಿ ನಾಯಕನಾಗಿ ಕಾಣಿಸಿಕೊಳ್ಳುವುದಿಲ್ಲ ಎಂದು ಸಿಎಸ್​ಕೆ ತಿಳಿಸಿದೆ. ಅಷ್ಟೇ ಅಲ್ಲದೆ ಸಂಜು ಸ್ಯಾಮ್ಸನ್ ಅವರಿಗೂ ಕ್ಯಾಪ್ಟನ್ ಪಟ್ಟ ನೀಡಲಾಗುತ್ತಿಲ್ಲ ಎಂಬುದನ್ನು ಸಹ ಖಚಿತಪಡಿಸಿದೆ. ಇದರ ಜೊತೆಗೆ ರುತುರಾಜ್ ಗಾಯಕ್ವಾಡ್ ಅವರೇ ಐಪಿಎಲ್ 2026 ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಮುನ್ನಡೆಸಲಿದ್ದಾರೆ ಎಂದು ಸಿಎಸ್​ಕೆ ಫ್ರಾಂಚೈಸಿಯು ಅಧಿಕೃತವಾಗಿ ತಿಳಿಸಿದೆ. ಇದರೊಂದಿಗೆ 19ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್​ನಲ್ಲಿ ರುತುರಾಜ್ ಗಾಯಕ್ವಾಡ್ ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿಯ ನಾಯಕನಾಗಿ ಕಾಣಿಸಿಕೊಳ್ಳುವುದು ಖಚಿತವಾಗಿದೆ.

ಇನ್ನೂ ರಾಜಸ್ಥಾನ್‌ ರಾಯಲ್ಸ್‌   ತಂಡಕ್ಕೆ ಹೆಡ್‌ ಕೋಚ್‌ ಆಗಿ ಶ್ರೀಲಂಕಾ ದಿಗ್ಗಜ ಕುಮಾರ ಸಂಗಕ್ಕಾರ  ನೇಮಕಗೊಂಡಿದ್ದಾರೆ. ಆ ಮೂಲಕ ಈ ವರ್ಷದ ಆರಂಭದಲ್ಲಿ ಈ ಹುದ್ದೆಯನ್ನು ತೊರೆದಿದ್ದ ರಾಹುಲ್‌ ದ್ರಾವಿಡ್‌ ಅವರ ಸ್ಥಾನವನ್ನು ತುಂಬಿದ್ದಾರೆ. 2021 ರಿಂದ 2024ರ ವರೆಗೆ ಆರ್‌ಆರ್‌ ತಂಡದಲ್ಲಿ ಹೆಡ್‌ ಕೋಚ್‌ ಆಗಿ ಸೇವೆ ಸಲ್ಲಿಸಿದ್ದರು. ತದ ನಂತರ ರಾಹುಲ್‌ ದ್ರಾವಿಡ್‌ ಕೋಚ್‌ ಆಗಿದ್ದರು. ಸಂಗಕ್ಕಾರ ಮಾರ್ಗದರ್ಶನದಲ್ಲಿ ರಾಜಸ್ಥಾನ್‌ ರಾಯಲ್ಸ್‌ ತಂಡ, 2022ರಲ್ಲಿ ಉತ್ತಮ ಪ್ರದರ್ಶನವನ್ನು ತೋರುವ ಮೂಲಕ ಫೈನಲ್‌ಗೆ ಪ್ರವೇಶ ಮಾಡಿತ್ತು. ನಂತರ ಕಳೆದ ಸೀಸನ್‌ನಲ್ಲಿ ದ್ರಾವಿಡ್‌ ಕೋಚಿಂಗ್‌ಗೆ ಬಂದ ಬಳಿಕ ರಾಜಸ್ಥಾನ್‌ ತಂಡದ ಕ್ರಿಕೆಟ್‌ ಡೈರೆಕ್ಟರ್‌ ಆಗಿ ನೇಮಕಗೊಂಡಿದ್ದರು. ಇದೀಗ ಅವರು ಈ ಎರಡೂ ಹುದ್ದೆಗಳಲ್ಲಿ ಮುಂದುವರಿಯಲಿದ್ದಾರೆ.

Kishor KV