ಪಶ್ಚಿಮ ಬಂಗಾಳದಲ್ಲಿ ಮತ್ತೆ ಭುಗಿಲೆದ್ದ ಹಿಂಸಾಚಾರ – ಮತ ಎಣಿಕೆ ವೇಳೆ ಘರ್ಷಣೆ, ಕಚ್ಚಾಬಾಂಬ್‌ ಸ್ಪೋಟ

ಪಶ್ಚಿಮ ಬಂಗಾಳದಲ್ಲಿ ಮತ್ತೆ ಭುಗಿಲೆದ್ದ ಹಿಂಸಾಚಾರ – ಮತ ಎಣಿಕೆ ವೇಳೆ ಘರ್ಷಣೆ, ಕಚ್ಚಾಬಾಂಬ್‌ ಸ್ಪೋಟ

ಕೋಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ಮೂರು ಹಂತದಲ್ಲಿ ಪಂಚಾಯತ್‌ ಚುನಾವಣೆ ನಡೆದಿದೆ. ಮಂಗಳವಾರ ಮತ ಎಣಿಕೆ ಬಿಗಿ ಭದ್ರತೆಯಲ್ಲಿ ನಡೆಯುತ್ತಿದೆ. ಆದರೂ ಮತ ಎಣಿಕೆ ಕೇಂದ್ರಗಳಲ್ಲಿ ಮತ್ತೆ ಘರ್ಷಣೆ ಏರ್ಪಟ್ಟಿದ್ದು, ಪಶ್ಚಿಮ ಬಂಗಾಳದ ಡೈಮಂಡ್ ಹಾರ್ಬರ್‌ನಲ್ಲಿರುವ ಎಣಿಕೆ ಕೇಂದ್ರದ ಹೊರಗೆ ಕಚ್ಚಾಬಾಂಬ್ ಸ್ಫೋಟಗೊಂಡಿರುವುದಾಗಿ ವರದಿಯಾಗಿದೆ.

ಇದನ್ನೂ ಓದಿ: ಪ್ರತಿಕೂಲ ಹವಾಮಾನ – ಸತತ ನಾಲ್ಕನೇ ದಿನವೂ ಅಮರನಾಥ ಯಾತ್ರೆ ಸ್ಥಗಿತ

ಪಶ್ಚಿಮ ಬಂಗಾಳದಲ್ಲಿ ಜಿಲ್ಲಾ ಪರಿಷತ್‌, ಪಂಚಾಯತ್‌ ಸಮಿತಿ ಹಾಗೂ ಗ್ರಾಮ ಪಂಚಾಯತ್‌ ಗಳ 73,887 ಸ್ಥಾನಗಳಿಗೆ ಚುನಾವಣೆ ನಡೆದಿದೆ. ಶನಿವಾರ ಚುನಾವಣೆ ನಡೆಯುತ್ತಿರುವ ವೇಳೆ ಭಾರಿ ಘರ್ಷಣೆ ನಡೆದಿದ್ದು, ಈ ವೇಳೆ 19 ಮಂದಿ ಸಾವನ್ನಪ್ಪಿದ್ದಾರೆ. ಮಂಗಳವಾರ ಮತ ಎಣಿಕೆ ವೇಳೆ ಯಾವುದೇ ಗುಂಪು ಘರ್ಷಣೆ ನಡೆಯಬಾರದೆಂದು ಮುನ್ನೆಚ್ಚರಿಕಾ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಎಲ್ಲಾ ಮತ ಎಣಿಕೆ ಕೇಂದ್ರಗಳಲ್ಲಿ ಸಶಸ್ತ್ರ ರಾಜ್ಯ ಪೊಲೀಸ್‌ ಸಿಬ್ಬಂದಿ ಮತ್ತು ಕೇಂದ್ರ ಪಡೆಯನ್ನು ನಿಯೋಜಿಸಲಾಗಿದೆ. ಭಾರಿ ಭಿಗಿ ಭದ್ರತೆಯ ಮಧ್ಯೆಯೂ ಘರ್ಷಣೆ ನಡೆದಿದೆ. ಹೌರಾ ಮತ ಎಣಿಕೆ ಕೇಂದ್ರದಲ್ಲಿ ಕಾರ್ಯಕರ್ತರು ಜಮಾಯಿಸಿ, ಒಳಗೆ ನುಗ್ಗಲು ಪ್ರಯತ್ನಿಸಿದ್ದಾರೆ. ಈ ವೇಳೆ ಪೊಲೀಸರು ಗುಂಪನ್ನು ಚದುರಿಸಲು ಕಾರ್ಯಕರ್ತರ ಮೇಲೆ ಲಾಠಿ ಚಾರ್ಜ್‌ ನಡೆದಿದೆ.

ಕಳೆದ ತಿಂಗಳ ಆರಂಭದಲ್ಲಿ ಪಂಚಾಯತ್ ಚುನಾವಣೆಯ ದಿನಾಂಕವನ್ನು ಘೋಷಿಸಿದಾಗಿನಿಂದ ಪಶ್ಚಿಮ ಬಂಗಾಳದಾದ್ಯಂತ ಭಾರೀ ಘರ್ಷಣೆ ಉಂಟಾಗಿ ಇಲ್ಲಿಯವರೆಗೆ 33 ಜನರು ಸಾವನ್ನಪ್ಪಿದ್ದಾರೆ. ಮತದಾನ ನಡೆದ ದಿನ ಜುಲೈ 8ರಂದು ಕೂಡಾ 19 ಜನರ ಸಾವಾಗಿದೆ.  3 ಹಂತದ ಪಂಚಾಯತ್ ಚುನಾವಣೆಗೆ 61 ಸಾವಿರಕ್ಕೂ ಅಧಿಕ ಬೂತ್‌ಗಳಲ್ಲಿ ಕಳೆದ ಶುಕ್ರವಾರ ಮತದಾನ ನಡೆದಿದೆ. 80.71% ರಷ್ಟು ಮತದಾನವಾಗಿದ್ದರೂ ಹಲವೆಡೆ ಮತಪೆಟ್ಟಿಗೆಯನ್ನು ಲೂಟಿ ಮಾಡಿ, ಬೆಂಕಿ ಹಚ್ಚಿ ಹಿಂಸಾಚಾರ ನಡೆಸಲಾಗಿದೆ. ಮತದಾನ ದಿನದಂದು ನಡೆದ ಘರ್ಷಣೆ ಎಷ್ಟು ತೀವ್ರವಾಗಿತ್ತೆಂದರೆ ಸುಮಾರು 696 ಬೂತ್‌ಗಳಲ್ಲಿ ಮರುಮತದಾನ ಮಾಡಬೇಕಾಗಿ ಬಂದಿತ್ತು.

suddiyaana