ತೂಕದ ಬಗ್ಗೆ ಮಾತಾಡಿದವರಿಗೆ ಸರ್ಫರಾಜ್ ಖಾನ್ ತಿರುಗೇಟು – ಎರಡು ತಿಂಗಳಲ್ಲಿ 17 ಕೆ.ಜಿ ತೂಕ ಇಳಿಸಿಕೊಂಡ ಕ್ರಿಕೆಟರ್

ತೂಕದ ಬಗ್ಗೆ ಮಾತಾಡಿದವರಿಗೆ ಸರ್ಫರಾಜ್ ಖಾನ್ ತಿರುಗೇಟು – ಎರಡು ತಿಂಗಳಲ್ಲಿ 17 ಕೆ.ಜಿ ತೂಕ ಇಳಿಸಿಕೊಂಡ ಕ್ರಿಕೆಟರ್

ಟೀಮ್ ಇಂಡಿಯಾದಲ್ಲಿ ಸ್ಥಾನ ಗಿಟ್ಟಿಸಿಕೊಳ್ಳಲು ಅದೆಷ್ಟೇ ಸಾಮರ್ಥ್ಯ ತೋರಿದರು ಸರ್ಫರಾಜ್ ಖಾನ್‌ಗೆ ಅದೃಷ್ಟ ಕೂಡಿ ಬಂದಿಲ್ಲ. ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಗೆ ಮುನ್ನ ಇಂಡಿಯಾ ಎ ತಂಡದ ಪರ ಅನಧಿಕೃತ ಟೆಸ್ಟ್‌ನಲ್ಲಿ ಮಿಂಚಿದ್ದರೂ ಸರ್ಫರಾಜ್‌ಗೆ ಇಂಡಿಯಾ ತಂಡದಲ್ಲಿ ಸ್ಥಾನ ಸಿಕ್ಕಿರಲಿಲ್ಲ. ಇದರ ನಡುವೆ ತೂಕದ ಬಗ್ಗೆಯೂ ಟೀಕೆ ಕೇಳಿಬಂದಿತ್ತು. ಇದೀಗ ಟೀಕಾಕಾರರ ಬಾಯಿಮುಚ್ಚಿಸಿದ್ದಾರೆ ಸರ್ಫರಾಜ್ ಖಾನ್.

ಇದನ್ನೂ ಓದಿ:4ನೇ ಟೆಸ್ಟ್‌ನಲ್ಲಿ ರಿಷಭ್ ಕೇವಲ ಬ್ಯಾಟರ್ – ವಿಕೆಟ್ ಕೀಪರ್ ಆಗಿ ಕಾಣಿಸಿಕೊಳ್ತಾರಾ ಕೆ.ಎಲ್ ರಾಹುಲ್?

ಕ್ರಿಕೆಟರ್ ಸರ್ಫರಾಜ್ ಖಾನ್ ಛಲದಂಕ ಮಲ್ಲ ಅನ್ನೋದನ್ನ ಮತ್ತೊಮ್ಮೆ ತೋರಿಸಿಕೊಟ್ಟಿದ್ದಾರೆ. ಹೆಚ್ಚಿನ ತೂಕದ ಕಾರಣಕ್ಕೆ ಟೀಕೆಗೆ ಗುರಿಯಾಗಿದ್ದ ಸರ್ಫರಾಜ್ ಇದೀಗ ಸ್ಲಿಮ್ ಆಗಿದ್ದಾರೆ. ಎರಡು ತಿಂಗಳಲ್ಲಿ ಬರೋಬ್ಬರಿ 17 ಕೆಜಿ ತೂಕ ಇಳಿಸಿಕೊಂಡು ಅಭಿಮಾನಿಗಳಿಗೆ ಶಾಕ್ ನೀಡಿದ್ದಾರೆ. ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಗೆ ಮುನ್ನ ಇಂಡಿಯಾ ಎ ತಂಡದ ಪರ ಅನಧಿಕೃತ ಟೆಸ್ಟ್‌ನಲ್ಲಿ ಸರ್ಫರಾಜ್‌ ಖಾನ್ ಸೆಂಚುರಿ ಸಿಡಿಸಿದ್ದರು. ಹೀಗಿದ್ದರೂ ಕೂಡಾ ತಂಡದಲ್ಲಿ ಸ್ಥಾನ ಸಿಗಲಿಲ್ಲ. ಇದಾದ ನಂತರ ಕಠಿಣ ಫಿಟ್ನೆಸ್ ತರಬೇತಿ ಮತ್ತು ಆಹಾರಕ್ರಮದ ಮೂಲಕ ತೂಕ ಇಳಿಸಿಕೊಂಡು ಅಚ್ಚರಿಗೊಳಿಸಿದ್ದಾರೆ.

ದೇಶೀಯ ಕ್ರಿಕೆಟ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದರೂ, ತೂಕದ ನೆಪ ಹೇಳಿ ಆಯ್ಕೆದಾರರು ಸರ್ಫರಾಜ್‌ರನ್ನು ಪರಿಗಣಿಸಿರಲಿಲ್ಲ ಎಂದು ಹೇಳಲಾಗುತ್ತಿತ್ತು. ಕಳೆದ ವರ್ಷ ಫೆಬ್ರವರಿಯಲ್ಲಿ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಭಾರತದ ಪರ ಸರ್ಫರಾಜ್ ಶತಕ ಬಾರಿಸಿ ಮಿಂಚಿದ್ದರು. ನಂತರ ಕಳೆದ ವರ್ಷ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಗೆ ಭಾರತ ತಂಡದಲ್ಲಿ ಸ್ಥಾನ ಪಡೆದಿದ್ದರೂ ಆಸ್ಟ್ರೇಲಿಯಾದಲ್ಲಿ ಒಂದೇ ಒಂದು ಪಂದ್ಯದಲ್ಲೂ ಸರ್ಫರಾಜ್‌ರನ್ನು ಆಡುವ ಹನ್ನೊಂದರಲ್ಲಿ ಆಡಿಸಿರಲಿಲ್ಲ. ಈಗ ನಡೆಯುತ್ತಿರುವ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಗೂ ಆಯ್ಕೆದಾರರು ಸರ್ಫರಾಜ್‌ರನ್ನು ಪರಿಗಣಿಸಲಿಲ್ಲ. ಸರ್ಫರಾಜ್ ಬದಲಿಗೆ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಕರುಣ್ ನಾಯರ್‌ಗೆ ಆಯ್ಕೆದಾರರು ಅವಕಾಶ ನೀಡಿದ್ದರು. ಆದರೆ ಸರಣಿಯ ಮೊದಲ ಮೂರು ಟೆಸ್ಟ್‌ಗಳಲ್ಲೂ ಕರುಣ್ ಮಿಂಚಲು ಸಾಧ್ಯವಾಗಿಲ್ಲ.

ಸರ್ಫರಾಜ್‌ರನ್ನು ನಿರಂತರವಾಗಿ ಕಡೆಗಣಿಸುವುದರ ವಿರುದ್ಧ ಹರ್ಭಜನ್ ಸಿಂಗ್ ಸೇರಿದಂತೆ ಹಲವು ಮಾಜಿ ಆಟಗಾರರು ಅಸಮಾಧಾನ ವ್ಯಕ್ತಪಡಿಸಿದ್ದರೂ, ಆಟಗಾರನ ಫಿಟ್ನೆಸ್ ದೊಡ್ಡ ಪ್ರಶ್ನಾರ್ಥಕ ಚಿಹ್ನೆಯಾಗಿ ಉಳಿದಿತ್ತು. ಐಪಿಎಲ್‌ನಲ್ಲೂ ಯಾವ ತಂಡದಲ್ಲೂ ಸ್ಥಾನ ಪಡೆಯಲು ಸರ್ಫರಾಜ್‌ಗೆ ಸಾಧ್ಯವಾಗಿರಲಿಲ್ಲ. ಇದೆಲ್ಲದರ ನಂತರ ಹೊಸ ಲುಕ್‌ನಲ್ಲಿ ಬಂದು ಸರ್ಫರಾಜ್ ಅಭಿಮಾನಿಗಳಿಗೆ ಅಚ್ಚರಿ ಮೂಡಿಸಿದ್ದಾರೆ. ಇನ್ನು ಸರ್ಫರಾಜ್ ಖಾನ್ 17 ಕೆಜಿ ತೂಕ ಇಳಿಸಿಕೊಂಡಿರುವ ಬಗ್ಗೆ ಅವರ ತಂದೆ ನೌಶಾದ್ ಖಾನ್ ಮಾತನಾಡಿದ್ದಾರೆ. ನಾವು ಡಯೆಟ್‌ಗೆ ಹೆಚ್ಚಿನ ಒತ್ತು ನೀಡಿದ್ದೇವೆ. ಕಳೆದ ಒಂದೂವರೆ ತಿಂಗಳಿನಿಂದ ಮನೆಯಲ್ಲಿ ರೈಸ್, ರೊಟ್ಟಿಯನ್ನು ತಿಂದಿಲ್ಲ. ನಾವು ಮನೆಯಲ್ಲಿ ಕ್ಯಾರೆಟ್, ಸೌತೆಕಾಯಿ ಸಲಾಡ್, ಹಸಿರು ತರಕಾರಿ ಸಲಾಡ್ ಜತೆಗೆ ಗ್ರಿಲ್ಲಡ್ ಫಿಶ್, ಗ್ರಿಲ್ಲಡ್ ಚಿಕನ್, ಬೇಯಿಸಿದ ಮೊಟ್ಟೆಯನ್ನು ತಿನ್ನುತ್ತಿದ್ದೆವು. ನಾವು ಗ್ರೀನ್ ಟೀ ಹಾಗೂ ಗ್ರೀನ್ ಕಾಫಿ ಕುಡಿಯುತ್ತಿದ್ದೆವು. ಇದರ ಜತೆಗೆ ನಾವು ಅವಕಾಡೋ ತಿನ್ನುತ್ತಿದ್ದೆವು. ಮುಖ್ಯವಾಗಿ ಅನ್ನ ಹಾಗೂ ರೊಟ್ಟಿ ತಿನ್ನುವುದನ್ನು ತ್ಯಜಿಸಿದೆವು. ಇದರ ಜತೆಗೆ ಸಕ್ಕರೆಯನ್ನು ತ್ಯಜಿಸಿದೆವು ಎಂದು ಈ ಹಿಂದೆ ಸರ್ಫರಾಜ್ ತಂದೆ ನೌಶಾದ್ ಹೇಳಿದ್ದರು.

Sulekha